ಗುರುವಾರ , ಜುಲೈ 7, 2022
23 °C

ಬಡ ರೋಗಿಗಳ ಚಿಕಿತ್ಸೆ ವೆಚ್ಚ ಭರಿಸಲು ಸೈಕ್ಲಿಂಗ್‌ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೈಕ್ಲಿಂಗ್‌ ಅಭ್ಯಾಸ ಆರೋಗ್ಯಕಾರಿ ಹಾಗೂ ಪರಿಸರಸ್ನೇಹಿ. ನಗರದ ಸೀತಾ ಭತೇಜಾ ಆಸ್ಪತ್ರೆಯ ವೈದ್ಯ ಅರವಿಂದ್‌ ಭತೇಜಾ ತಮ್ಮ ಸೈಕ್ಲಿಂಗ್‌ ಹವ್ಯಾಸವನ್ನು ಬಡರೋಗಿಗಳ ಕ್ಲೀಷ್ಟ ಮತ್ತು ದುಬಾರಿ ಶಸ್ತ್ರಚಿಕಿತ್ಸೆ ನೆರವಿಗಾಗಿ ಬಳಸಿಕೊಂಡಿದ್ದಾರೆ.

2014ರಿಂದ ಸೈಕ್ಲಿಂಗ್‌ ರೇಸ್‌ ಮೂಲಕ ದೇಣಿಗೆ ಸಂಗ್ರಹಿಸಿ ಅದನ್ನು ಬಡರೋಗಿಗಳ ಬೆನ್ನುಹುರಿ ಹಾಗೂ ಕುತ್ತಿಗೆ ಶಸ್ತ್ರಚಿಕಿತ್ಸೆಗಳ ವೆಚ್ಚಕ್ಕೆ ಬಳಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ನಗರದ ವೃತ್ತಿಪರ ಸೈಕ್ಲಿಂಗ್‌ ಪಟು ದೀಪಾಂಕರ್‌ ಪೌಲ್‌ ಕೈಜೋಡಿಸಿದ್ದಾರೆ. 

ಬಡರೋಗಿಗಳಿಗೆ ನೆರವು ನೀಡಲು ಭತೇಜಾ ಆಸ್ಪತ್ರೆಯು ‘ಗಿವಿಂಗ್‌ ಬ್ಯಾಕ್‌’ ಎಂಬ ಅಭಿಯಾನ ಆರಂಭಿಸಿದೆ. 2014ರಿಂದ ಇಲ್ಲಿಯವರೆಗೂ ಈ ಯೋಜನೆ ಅಡಿ ಕಡಿಮೆ ವೆಚ್ಚದಲ್ಲಿ 210ಕ್ಕೂ ಹೆಚ್ಚು ಬೆನ್ನುಹುರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸೈಕ್ಲಿಂಗ್‌ ರೇಸ್‌ ಮೂಲಕ ಸೀತಾ ಭತೇಜಾ ಟ್ರಸ್ಟ್‌ ಮೂಲಕ ಸಹಾಯನಿಧಿ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿಯವರೆಗೂ ₹25 ಲಕ್ಷಕ್ಕೂ ಹೆಚ್ಚು
ಹಣ ಸಂಗ್ರಹವಾಗಿದೆ.

ದೀಪಾಂಕರ್‌ ನ. 27ರಂದು ಸೈಕಲ್‌ನಲ್ಲಿ 22 ಬಾರಿ ನಂದಿ ಬೆಟ್ಟ ಹತ್ತಿ, ಇಳಿದಿದ್ದರು. ಇದು ಮೌಂಟ್‌ ಎವರೆಸ್ಟ್‌ ಏರಿದ ಶ್ರಮಕ್ಕೆ ಸರಿ. ಈ ಅಭಿಯಾನದಲ್ಲಿ ಅವರು ಒಟ್ಟು ₹1.5 ಲಕ್ಷ ನಿಧಿ ಸಂಗ್ರಹಿಸಿದ್ದರು. ಡಿ.8ರಿಂದ 15ರವರೆಗೆ ನೀಲಗಿರಿ ಬೆಟ್ಟಗಳಲ್ಲಿ ಸೈಕಲ್‌ನಲ್ಲೇ 850 ಕಿ. ಮೀ. ದೂರ ಸಂಚರಿಸಿ ಸಾರ್ವಜನಿಕರಿಂದ 5ಲಕ್ಷ ಫಂಡ್‌ ಸಂಗ್ರಹಿಸಿದ್ದಾರೆ. ಹಣವನ್ನು ಆಸ್ಪತ್ರೆಗೆ ನೀಡಲಿದ್ದಾರೆ. 

‘ನಾನು ಬೆನ್ನುನೋವಿಗೆ ಭತೇಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ. ಆಸ್ಪತ್ರೆಯ ‘ಗಿವಿಂಗ್‌ ಬ್ಯಾಕ್‌’ ಕಾರ್ಯಕ್ಕೆ ಸಹಾಯ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ಸೈಕ್ಲಿಂಗ್‌ ಉದ್ದೇಶದ ಪ್ರಚಾರ ಮಾಡಿದೆ’ ಎಂದು ದೀಪಾಂಕರ್‌ ಪೌಲ್‌ ತಿಳಿಸಿದರು. 

‘ಕುತ್ತಿಗೆ ಹಾಗೂ ಬೆನ್ನುಹುರಿ ಸರ್ಜರಿ ತುಂಬಾ ದುಬಾರಿ. ಶಸ್ತ್ರಚಿಕಿತ್ಸೆಗೆ ಕನಿಷ್ಟ ₹25 ಸಾವಿರದಿಂದ ₹10 ಲಕ್ಷದವರೆಗೂ ಖರ್ಚಾಗುತ್ತದೆ. ಬಡವರಿಗೆ ಕಡಿಮೆ ಖರ್ಚಿನಲ್ಲಿ ಸರ್ಜರಿ ಮಾಡುತ್ತೇವೆ. ರೋಗಿಗಳಿಗೆ ಎಷ್ಟು ವೆಚ್ಚ ಭರಿಸಲು ಸಾಧ್ಯವಾಗುತ್ತದೆ ಎಂದು ನೋಡಿಕೊಂಡು, ಉಳಿದ ಖರ್ಚುನ್ನು ಟ್ರಸ್ಟ್‌ ನೋಡಿಕೊಳ್ಳುತ್ತದೆ. ರೋಗಿಗಳು ಬಿಪಿಎಲ್‌ ರೇಷನ್‌ ಕಾರ್ಡ್‌ ಹಾಗೂ ಆದಾಯ ಪ್ರಮಾಣ ಪತ್ರ ಒದಗಿಸಬೇಕು’ ಎಂದು ಡಾ. ಅರವಿಂದ್‌ ಭತೇಜಾ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು