ಬುಧವಾರ, ಜೂನ್ 29, 2022
21 °C

ಹಾಯಿದೋಣಿ | ಬಣ್ಣದ ಮೇರೆ ಮೀರಿ...

ನಿವೇದಿತಾ ರಾಜನ್ Updated:

ಅಕ್ಷರ ಗಾತ್ರ : | |

Prajavani

ಎಳವೆಯಿಂದ ಯೌವ್ವನದ ತನಕ ಎದುರಿಸಿದ ಅಪಹಾಸ್ಯಗಳು ಒಂದೆರಡಲ್ಲ. ನಾನು ಮಾಡಿದ ತಪ್ಪೇನು? ಕಡುಗಪ್ಪು ವರ್ಣ. ಎಂಟನೇ ವಯಸ್ಸಿನಲ್ಲಿ ನನ್ನ ಚರ್ಮದ ಬಣ್ಣದ ಕಾರಣಕ್ಕೆ ಶಾಲಾ ನೃತ್ಯ ತಂಡದ ಕೊನೆಯ ಸಾಲಿನಲ್ಲಿ ಜಾಗ ನಿಗದಿ ಮಾಡಲಾಗಿತ್ತು. ಆಕರ್ಷಕವಲ್ಲ ಎಂಬ ನೆಪ ಹೇಳಿ 10ನೇ ವಯಸ್ಸಿನಲ್ಲಿ ನಾಟಕದ ವೇದಿಕೆ ಹತ್ತಲು ನಿರಾಕರಿಸಲಾಗಿತ್ತು. 14ರ ಹೊಸ್ತಿಲಲ್ಲಿ ರೂಪದರ್ಶಿಯಾಗುವ ಕನಸು ಬಿಚ್ಚಿಟ್ಟಾಗ ಗೆಳತಿಯರು ಲೇವಡಿ ಮಾಡಿದ್ದರು. ನನ್ನ ಬಣ್ಣ ಹಾಗೂ ನೀಳಕಾಯವೇ ಆತ್ಮಸ್ಥೈರ್ಯ ಉಡುಗಿಸಿದ್ದವು. 

ನೀಲಿ ಜೀನ್ಸ್, ಸ್ಲೀವ್‌ಲೆಸ್ ಟಾಪ್ ಧರಿಸಿದ್ದಕ್ಕಾಗಿ ಬೆಂಗಳೂರಿನ ಕಾಲೇಜು ಪ್ರಾಧ್ಯಾಪಕರು ಎಲ್ಲರೆದುರು ಅವಹೇಳನ ಮಾಡಿದರು. ಕಾಲೇಜು ಪ್ರವೇಶದ ಮೊದಲ ದಿನವೇ ಹೀಗಾಗಿತ್ತು. ಡ್ರೆಸ್‌ಕೋಡ್‌ನ ಅರಿವು ನನಗಾಗ ಇರಲಿಲ್ಲ. ಆ ಘಟನೆ ಇನ್ನೂ ಕಾಡುತ್ತಿದೆ. ನನ್ನ ಬಟ್ಟೆ, ನೋಟ, ಬಣ್ಣ, ನಡೆಯುವ ಶೈಲಿ ಎಲ್ಲವೂ ಹಾಸ್ಯಕ್ಕೆ ಆಹಾರ ಒದಗಿಸುತ್ತಿದ್ದವು. ಬ್ಲ್ಯಾಕಿ, ಡಾರ್ಕಿ ರೀತಿಯ ಅಡ್ಡ ಹೆಸರುಗಳು ನನಗೆ ತಳಕು ಹಾಕಿಕೊಂಡವು. ಲ್ಯಾಬ್‌ನಲ್ಲಿ ಕೂಡಿಹಾಕಲಾಯಿತು. ಕೆಟ್ಟ ಅರ್ಥದ ಸಂದೇಶಗಳು ಬರತೊಡಗಿದವು. 

ಈ ದಿನಗಳಲ್ಲಿ ನಾನು ಗೊಂದಲಗಳ ಗೂಡಾಗಿದ್ದೆ. ನನ್ನೆಲ್ಲ ಕನಸುಗಳನ್ನು ಬೆನ್ನತ್ತುವಂತೆ ಪ್ರೇರೇಪಿಸಿದ್ದು ಪೋಷಕರು ಮಾತ್ರ. ಆದರೆ ಹೊರ ಜಗತ್ತು ಮಾತ್ರ ನನ್ನನ್ನು ಮೂದಲಿಸಿ, ಭವಿಷ್ಯವೇ ಇಲ್ಲ ಎಂಬಂತೆ ಬಿಂಬಿಸುತ್ತಿತ್ತು. ಚರ್ಮದ ಕಾಂತಿ ಹೆಚ್ಚಿಸುವ ಪರ್ಯಾಯ ಮಾರ್ಗಗಳನ್ನು ಪ್ರಯತ್ನಿಸಲಿಲ್ಲ. ಆದಷ್ಟೂ ಒಂಟಿಯಾಗಲು ಬಯಸತೊಡಗಿದೆ. ಅದು ನನ್ನನ್ನು ಖಿನ್ನತೆಗೆ ದೂಡಿತು. ಈ ಸಮಯದಲ್ಲಿ ಅಕ್ಕಂದಿರು ನನ್ನ ಬೆನ್ನಿಗಿದ್ದರು. ನನ್ನ ಬಗ್ಗೆ ಜಗತ್ತು ಏನು ಮಾತನಾಡುತ್ತಿದೆ ಎಂಬುದನ್ನು ಯೋಚಿಸುವುದರಲ್ಲೇ ಸಮಯ ವ್ಯರ್ಥವಾಗುತ್ತಿದೆ ಎಂಬುದನ್ನು ಮನಗಂಡೆ. ಕಾಲೇಜಿನಿಂದ ಮೂರು ತಿಂಗಳು ಬಿಡುವು ಪಡೆದೆ. ನನ್ನಿಷ್ಟದ ಹೇರ್‌ಕಟ್ ಮಾಡಿಸಿಕೊಂಡೆ. ಹೊಸತನ ಕಂಡೆ. ರೂಪದರ್ಶಿಯಾಗುವ ನನ್ನ ಬಾಲ್ಯದ ಕನಸು ಮತ್ತೆ ಚಿಗುರೊಡೆಯಲು ಶುರುವಾಗಿದ್ದು ಇಲ್ಲಿಂದ. ಕೆಲವು ಅವಕಾಶಗಳು ಸಿಕ್ಕವು. ಅನಪೇಕ್ಷಿತ ಟೀಕೆಗಳ ನಡುವೆಯೂ ಭದ್ರವಾಗಿ ನೆಲೆಯೂರಲು ಕಲಿತೆ. 

ಕೊಯಮತ್ತೂರಿನಲ್ಲಿ ನಡೆದ ಬೈಕ್‌ವೊಂದರ ಬಿಡುಗಡೆ ಸಮಾರಂಭದಲ್ಲಿ ಮತ್ತೆ ಬಣ್ಣದ ಕಾರ
ಣಕ್ಕೆ ತಿರಸ್ಕಾರಕ್ಕೆ ಒಳಗಾದೆ. ಆಯ್ಕೆ ಮಾಡಿದ ಬಳಿಕ ಈ ರೀತಿ ಮಾಡಿದ್ದು ನನಗೆ ಕೋಪ ಬರಿಸಿತು. ಆಗ ಸಮಯ ರಾತ್ರಿ 12.30. ಅಲ್ಲಿಂದ ತಕ್ಷಣ ಹೊರಡಲು ನನಗೆ ಸೂಚಿಸ ಲಾಯಿತು. ನನಗಾದ ಅನ್ಯಾಯದ ವಿರುದ್ಧ ಹೋರಾಡಲು ನಿರ್ಧರಿಸಿದೆ. ದಾವೆ ಹೂಡಿ, ಸಾಮಾಜಿಕ ತಾಣಗಳಲ್ಲಿ ಅನ್ಯಾ ಯದ ಕತೆಯನ್ನು ಬಿಚ್ಚಿಡುತ್ತೇನೆ ಎಂದು ಸಂಘಟಕರನ್ನು ಹೆದರಿಸಿದಾಗ ಅವರು ಭೀತಿಗೆ ಒಳಗಾದರು. ಬರಬೇಕಿದ್ದ ಹಣವನ್ನೆಲ್ಲ ಕೊಟ್ಟರು. ಆ ಅವಕಾ ಶದಿಂದ ವಂಚಿತಳಾದರೂ ನನ್ನ ಹಾದಿ ಸರಿಯಾಗಿಯೇ ಇತ್ತು.  

ಕಾಂತಿ ಹೆಚ್ಚಿಸುವ ಸಾಧನಗಳ ಬಳಕೆ ಅಥವಾ ಚಿತ್ರಗಳನ್ನು ಫೋಟೊಶಾಪ್ ಮಾಡುವುದನ್ನು ನಾನು ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಶುರು ಮಾಡಿದೆ. ಮೈಕಾಂತಿ ಹಾಗೂ ಅದರ ಬಗೆಗಿನ ಗೀಳು ಭಾರತೀಯರ ಮನಸ್ಸಿನಲ್ಲಿ ತುಂಬಿಕೊಂಡಿದೆ. ಇದನ್ನು ಪ್ರಶ್ನಿಸುವ ಯತ್ನದಲ್ಲಿ ಗೆದ್ದ ಸಮಾಧಾನವಿದೆ. ಎಲ್ಲ ರೀತಿಯ ಲೈಂಗಿಕ, ವರ್ಣಭೇದದ ಅವಹೇ ಳನಗಳ ವಿರುದ್ಧ ದನಿ ಎತ್ತುವುದೇ ಅವುಗಳನ್ನು ಮೀರುವುದಕ್ಕೆ ಇರುವ ದಾರಿ.

**

‘ಬೀಯಿಂಗ್‌ ಯು’ ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಂಪನಿ ಜನಸಾಮಾನ್ಯರು, ಅದರಲ್ಲೂ ಮಹಿಳೆ ಯರ ಯಶೋಗಾಥೆಗಳನ್ನು ಕಟ್ಟಿಕೊಡುತ್ತದೆ. ‘ಪ್ರಜಾವಾಣಿ’ಗಾಗಿ ಹಾಯಿದೋಣಿಯ ಈ ಕಥೆಗಳನ್ನು ‘ಬೀಯಿಂಗ್ ಯು’ ಕಟ್ಟಿಕೊಡುತ್ತಿದೆ...

ಇಮೇಲ್‌: beingyou17@gmail.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.