ಬುಧವಾರ, ಜನವರಿ 29, 2020
23 °C

ಪ್ರೇಮಕ್ಕೊಂದು ಭಾವ ಕೊಠಡಿ!

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

Prajavani

ಪ್ರೇಮವೊಂದು ಭಾವ, ಎಂದು ಅಷ್ಟಕ್ಕೆ ಸೀಮಿತವಾದರೆ ಅದು ಸಿನಿಕತನವಾಗಬಹುದೇನೋ.. ಭಾವಕ್ಕೊಂದು ಪುಳಕ, ಪಯಣ ಇವುಗಳ ಹರವಿಗೆ ದೈಹಿಕ ಕಾಮನೆಗಳಿವೆ. ಅದು ನೈಸರ್ಗಿಕ ಮತ್ತು ವೈಯಕ್ತಿಕ ವಿಚಾರ ಎಂಬ ನಿಲುವಿನಿಂದ ಆರಂಭವಾಗಿರುವುದೇ ಹೋಟೆಲ್‌ ಕೊಠಡಿಗಳನ್ನು ಬುಕ್‌ ಮಾಡುವ ‘ಸ್ಟೇ ಅಂಕಲ್’ ಸ್ಟಾರ್ಟ್‌ಅಪ್.

ಅವಿವಾಹಿತರು ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಬೇಕೆಂದರೆ ಅದೆಷ್ಟು ತೊಡಕುಗಳು. ಇವುಗಳನ್ನೆಲ್ಲಾ ದಾಟಿ ಸುಲಭವಾಗಿ ‘ಸ್ಟೇ ಅಂಕಲ್’ನಲ್ಲಿ ರೂಂ ಬುಕ್‌ ಮಾಡಿಕೊಳ್ಳಬಹುದು. ಕಾನೂನಾತ್ಮಕವಾಗಿ ವಯಸ್ಕರಿಬ್ಬರು ಏಕಾಂತ ಕಳೆಯಲು ಯಾವುದೇ ಮುಜುಗರ ಪಡಬೇಕಾಗಿಲ್ಲ ಎಂಬುದೇ ಈ ಸ್ಟಾರ್ಟ್‌ಅಪ್‌ನ ಉದ್ದೇಶ.

2016, ದೆಹಲಿಯಲ್ಲಿ ಮೊದಲು ಆರಂಭವಾದ ಈ ಸ್ಟಾರ್ಟ್‌ಅಪ್‌, ಇಂದು ನಮ್ಮ ಬೆಂಗಳೂರು ಸೇರಿ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ವೃತ್ತಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆದ ಸಂಚಿತ್ ಸೇಟ್ ಅವರಿಗೆ ಸುತ್ತಾಟ ಇಷ್ಟದ ಹವ್ಯಾಸ. ಕೆಲಸ ಬಿಟ್ಟು ಪ್ರವಾಸ– ಸುತ್ತಾಟಕ್ಕಾಗಿ ಒಂದು ಸ್ಟಾರ್ಟ್‌ಅಪ್ ಮಾಡಬೇಕೆಂದು ಯೋಚಿಸಿ, ಯುವಕರು ಪ್ರವಾಸ ಮಾಡುವ ಸಂದರ್ಭದಲ್ಲಿ ಯಾವೆಲ್ಲ ತೊಡಕುಗಳನ್ನು ಅನುಭವಿಸುತ್ತಾರೆ ಎಂಬ ಬಗ್ಗೆ ಗೆಳೆಯರೊಂದಿಗೆ ಪಟ್ಟಿಮಾಡಿ, ಸ್ಟಾರ್ಟ್‌ ಅಪ್ ಕಾರ್ಯ ರೂಪಕ್ಕೆ ತರಲು ಸಜ್ಜಾದರು. ಈ ಪಟ್ಟಿಯಲ್ಲಿ ಮುಖ್ಯವಾಗಿ ಅವರ ಗಮನಕ್ಕೆ ಬಂದ ವಿಚಾರ ಅವಿವಾಹಿತರಿಗೆ ಹೋಟೆಲ್ ರೂಂಗಳು ಸಿಗದಿರುವುದು, ಕಡಿಮೆ ಅವಧಿಗೆ ಉಳಿದುಕೊಂಡರೂ ಒಂದು ದಿನದ ನಿಗದಿತ ಹಣ ನೀಡಬೇಕಾದದ್ದು. ಈ ತೊಡಕು ಎಂದುಕೊಂಡ ವಿಚಾರಗಳನ್ನೇ ಇಟ್ಟುಕೊಂಡು ಅವಿವಾಹಿತರಿಗೆ ಹೋಟೆಲ್ ರೂಂಗಳನ್ನು ಬುಕ್‌ ಮಾಡುವ ಸ್ಟಾರ್ಟ್‌ಅಪ್ ಅನ್ನು ಆರಂಭಿಸಲು ತಮ್ಮ ಬಾಲ್ಯದ ಗೆಳೆಯ ನಂದ್ ಸಿಂಗ್ ಜತೆ ಸಜ್ಜಾದರು.

ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ಬ್ಲೇಜ್ ಅರಿಜಾನೋವ್, ಸ್ಟೇ ಅಂಕಲ್ ಸ್ಟಾರ್ಟ್‌ಅಪ್‌ಗೆ ಬೇಕಾದ ತಾಂತ್ರಿಕ ನೆರವು ನೀಡಲು ತಮ್ಮ ಹುಟ್ಟೂರು ಬಿಟ್ಟು ಇಲ್ಲೇ ಉಳಿದುಕೊಂಡಿದ್ದಾರೆ. ಮುಂದೆ ಈ ಸ್ಟಾರ್ಟ್‌ಅಪ್‌ಗೆ ಜೊತೆಯಾದವರು ವನಿತಾ, ಪ್ರವೀಣ್, ದೀಕ್ಷಿ, ಸೃಷ್ಟಿ, ರಾಕಿ, ಅರ್ಪಿತ್.

‘ಹೋಟೆಲ್ ರೂಂ ಬುಕ್ ಮಾಡುವ ಅವಿವಾಹಿತರ ಮೇಲಿನ ಅನಗತ್ಯ ಪರಿಶೀಲನೆ, ಮುಜುಗುರ ಉಂಟುಮಾಡುವ ಪರಿಸ್ಥಿತಿ ‘ಸ್ಟೇ ಅಂಕಲ್’ ನಲ್ಲಿ ಇಲ್ಲ. ವಯಸ್ಕರಾಗಿದ್ದು, ಸೂಕ್ತ ಗುರುತಿನ ಚೀಟಿ ಇದ್ದರೆ ಸಾಕು ಸುಲಭವಾಗಿ ‘ಸ್ಟೇ ಅಂಕಲ್‌’ನಲ್ಲಿ ರೂಂ ಬುಕ್‌ ಮಾಡಬಹುದು’ ಎನ್ನುತ್ತಾರೆ ‘ಸ್ಟೇ ಅಂಕಲ್‌’ ಸಂಸ್ಥಾಪಕರಾದ ಸಂಚಿತ್.

ಸ್ಟೇ ಅಂಕಲ್ ಆರಂಭವಾದ ಕೆಲ ತಿಂಗಳು ವಿಪರೀತ ನಷ್ಟ ಅನುಭವಿಸಿದ್ದಾರೆ. ನಂತರದಲ್ಲಿ ಯುವ ಮನ್ನಣೆ ಪಡೆದ ಸ್ಟೇ ಅಂಕಲ್ ದೇಶದಾದ್ಯಂತ ಜನಪ್ರಿಯ. 

‘ಸ್ಟೇ ಅಂಕಲ್‌’ ಮತ್ತೊಂದು ವಿಶೇಷವೆಂದರೆ ಇದಕ್ಕೆ ಯಾವುದೇ ಕಚೇರಿ ಇಲ್ಲ. ಲ್ಯಾಪ್‌ಟಾಪ್‌ ಜೊತೆಗಿದ್ದರೆ ಸಾಕು ತಾವಿದ್ದಲ್ಲೇ ಕಚೇರಿ ಎನ್ನುತ್ತಾರೆ ಸಂಚಿತ್.

ಸಲಿಂಗಿಗಳ ಸ್ನೇಹಿ: ‘ಸ್ಟೇ ಅಂಕಲ್‌’ನಲ್ಲಿ ಸಲಿಂಗಿಗಳು ರೂಂ ಬುಕ್‌ ಮಾಡಿಕೊಳ್ಳಬಹುದು.

#StayUncleArmy ಎಂಬ ಆನ್‌ಲೈನ್ ಸೇನೆ

ಹುಡುಗ–ಹುಡುಗಿ ಒಟ್ಟಿಗೆ ಕೂತು ನಗುತ್ತಾ ಮಾತನಾಡುವಂತಿಲ್ಲ. ಪ್ರೇಮಿಗಳು ಸಂಧಿಸುವ ಕಾಲಕ್ಕೆ ನೈತಿಕ ಪೊಲೀಸ್‌ಗಿರಿಯ ಛಾಯೆ ಇದ್ದದ್ದೇ. ಹಾದಿಹೋಕರ ಬಿರುಗಣ್ಣ ಬಿಸುಪಿಗೆ ಸಿಕ್ಕವರೆ. ಆತ್ಮೀಯರೊಂದಿಗೆ ರಸಮಯ ಕ್ಷಣಗಳ ಕಳೆಯಲು ಸಾಂಪ್ರದಾಯಿಕ ಚೌಕಟ್ಟಿನ ನಮ್ಮ ಈ ನೆಲದಲ್ಲಿ ಮುಕ್ತವಾದ ವಾತಾವರಣವಿಲ್ಲ. ‘ಸ್ಟೇ ಅಂಕಲ್’ ಆರಂಭವಾದ ನಂತರ ಇದು ಕೇವಲ ಹೋಟೆಲ್ ರೂಂ ಬುಕ್‌ ಮಾಡಲು ಸೀಮಿತವಾಗಿಲ್ಲ. ಪ್ರೇಮಿಗಳಿಗೆ ಇದೊಂದು ನೈತಿಕ ಶಕ್ತಿಯಾಗಿದೆ.

#StayUncleArmy ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ‘ಸ್ಟೇ ಅಂಕಲ್’ ಆಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಆರಂಭಿಸಿದ್ದಾರೆ. ಪ್ರೇಮಿಗಳು ಸಾರ್ವಜನಿಕರಿಂದ ಎದುರಿಸುವ ಸಮಸ್ಯೆಗಳನ್ನು #StayUncleArmy ಹ್ಯಾಶ್‌ ಟ್ಯಾಗ್‌ ಮೂಲಕ ಚರ್ಚಿಸುತ್ತಿದ್ದಾರೆ. ‘ಸ್ಟೇ ಅಂಕಲ್’ನಿಂದಾಗಿ ಹೇಗೆ ಅವರು ಗೌರವಾನ್ವಿತವಾಗಿ ಹೋಟೆಲ್‌ ರೂಂ ಬುಕ್‌ ಮಾಡಿಕೊಳ್ಳಬಹುದು ಎಂಬುದನ್ನು ಬರೆದುಕೊಂಡಿದ್ದಾರೆ.

ಈ ಹ್ಯಾಶ್‌ ಟ್ಯಾಗ್‌ನೊಂದಿಗೆ ತಮ್ಮ ನಗರಗಳಲ್ಲಿ ಇರುವ ಯುವ ಸ್ನೇಹಿ ಹೋಟೆಲ್, ರೆಸ್ಟೊರೆಂಟ್‌ ಬಗ್ಗೆಯೂ ಮಾಹಿತಿಯನ್ನು ನೀಡಿದ್ದಾರೆ.

ಬಬಲ್ ಬಾತ್ ಮತ್ತು ಲವ್ ಕಿಟ್

ಒಣ ಆದರ್ಶಗಳನ್ನು ಇಟ್ಟುಕೊಂಡ ಕಾಂತ್ರಿಕಾರಿ ‘ಸ್ಟೇ ಅಂಕಲ್’ ಎಂದುಕೊಂಡರೆ ತಪ್ಪಾಗುತ್ತದೆ. ಈ ವೆಬ್‌ಸೈಟ್‌ನಿಂದ ಬುಕ್‌ ಮಾಡಿದರೆ ಜೋಡಿಗೆ ಬಬಲ್‌ ಬಾತ್‌ಟಬ್ ಸ್ನಾನ, ಲವ್‌ ಕಿಟ್‌ ಉಡುಗೊರೆಯ ಪಡೆಯಬಹುದು.

ಬಬಲ್‌ ಬಾತ್‌ ರೂಂಗಳನ್ನು ಆಯ್ಕೆ ಮಾಡಿಕೊಂಡರೆ ಸ್ನಾನದ ತೊಟ್ಟಿಯಲ್ಲಿ ಕೂತು ಶಾಂಪೇನ್ ಕುಡಿಯುತ್ತಾ ಸ್ಟ್ರಾಬೆರಿ ತಿನ್ನಬಹುದು. ಜತೆಗೊಂದು ರಸಮಯ ಹಿನ್ನೆಲೆ ಸಂಗೀತ, ಒಳಗಿನ ಮೋಹಕ್ಕೆ ಮತ್ತಷ್ಟು ಅಮಲು ನೀಡುತ್ತದೆ.

ಲವ್ ಕಿಟ್ ರೂಂಗಳನ್ನು ಆಯ್ಕೆ ಮಾಡಿಕೊಂಡರೆ ಸುರಕ್ಷಿತ ಪ್ರೇಮಪಯಣಕ್ಕೆ ಬೇಕಾದ ಕಾಂಡೋಮ್, ಲ್ಯೂಬ್ರಿಕೆಂಟ್, ಇಂಟಿಮೇಟ್‌ ವಾಶ್‌, ಸಿಹಿ ಮಿಠಾಯಿ ನಿಮ್ಮದಾಗುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು