ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಕಾಮಕ್ಕೆ ಮಕ್ಕಳ ಅಂಕುಶ!

Last Updated 16 ಅಕ್ಟೋಬರ್ 2019, 10:28 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಂ.ಎಸ್‌. ರಾಮಯ್ಯ ಆಸ್ಪತ್ರೆಯ ಯುರಾಲಜಿ ವಿಭಾಗಕ್ಕೆ ಕಿಡ್ನಿ ಸಮಸ್ಯೆ ಇರುವ ರೋಗಿಗಳು ಬರುವುದು ಸಾಮಾನ್ಯ. ಕೆಲವು ದಿನಗಳ ಹಿಂದೆ ಮೂತ್ರ ಕಟ್ಟಿಕೊಂಡ ಸಮಸ್ಯೆ ಹೊತ್ತು ಆಸ್ಪತ್ರೆಗೆ ಬಂದಿದ್ದ ವೃದ್ಧ ರೋಗಿಯ ಅಪರೂಪದ ಕತೆ ಕೇಳಿ ಆಸ್ಪತ್ರೆಯ ವೈದ್ಯರೇ ಅಶ್ಚರ್ಯ ಚಕಿತರಾಗಿದ್ದಾರೆ. ಇಂತಹ ಪ್ರಕರಣ ಅವರಿಗೂ ಅಪರೂಪವೇ!

ಈ ಕುತೂಹಲಕಾರಿಯಾಗಿ ವೈದ್ಯಕೀಯ ಪ್ರಕರಣವನ್ನು ಯಥಾವತ್ತಾಗಿ ಇಲ್ಲಿ ಕಟ್ಟಿ ಕೊಡಲಾಗಿದೆ...

ನಾಲ್ಕೈದು ತಿಂಗಳ ಹಿಂದೆ ಸುಮಾರು 60 ವರ್ಷದ ವೃದ್ಧರೊಬ್ಬರನ್ನು ಕುಟುಂಬದ ಸದಸ್ಯರು ಆಸ್ಪತ್ರೆಗೆ ಕರೆತಂದಿದ್ದರು. ರೋಗಿಗೆ ಏನಾಗಿದೆ ಎಂದು ಹೇಳಲು ಅವರೆಲ್ಲರಿಗೂ ಮುಜುಗರ. ವೃದ್ಧನನ್ನುಪರೀಕ್ಷಿಸಿದ ವೈದ್ಯರಿಗೆ ದಿಗ್ಭ್ರಮೆ!ರೋಗಿಯ ಗುಪ್ತಾಂಗಕ್ಕೆ ಕಬ್ಬಿಣದ ನಟ್‌, ಪ್ಲಾಸ್ಟಿಕ್‌ ಬಾಟಲ್‌ನ ನೆಕ್‌ ಹಾಕಲಾಗಿತ್ತು. ಇದರಿಂದಾಗಿ ಸೂಕ್ಷ್ಮ ಜಾಗ ಬಾತುಕೊಂಡು ಕೀವು ಸೋರುತ್ತಿತ್ತು. ಆ ಭಾಗದ ಚರ್ಮ ಕಿತ್ತು ಹೋಗಿತ್ತು. ಅದನ್ನು ಕಂಡು ವೈದ್ಯರು ದಂಗಾದರು. ನಡೆದ ಘಟನೆಯನ್ನು ವೃದ್ಧನ ಮಗ ಮುಜುಗರದಿಂದಲೇ ವೈದ್ಯರ ಮುಂದೆ ಬಿಚ್ಚಿಟ್ಟ.

ಹೆಂಡತಿ ದೇಹಾಂತದ ನಂತರ ಏಕಾಂಗಿ: ಅದಾಗಲೇ ಮೊಮ್ಮಕ್ಕಳನ್ನು ಕಂಡಿರುವ ವೃದ್ಧನ ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಬಳಿಯೊಂದರ ಹಳ್ಳಿ. ಆತನ ಹೆಂಡತಿ ಮೃತರಾಗಿ ಐದಾರು ವರ್ಷವಾಗಿದೆ. ಆತನ ಮಕ್ಕಳು ತಮ್ಮ ಸಂಸಾರ ಜಂಜಾಟದಲ್ಲಿ ಮುಳುಗಿದ್ದರು. ವೃದ್ಧನಿಗೆ ಏಕಾಂತ ಕಾಡತೊಡಗಿತ್ತು. ಮನೋ ಕಾಮನೆಗಳನ್ನು ಹತ್ತಿಕ್ಕಿಕೊಳ್ಳಲು ಆಗದೆ ಪರಿತಪಿಸುತ್ತಿದ್ದ. ಹೊಲಕ್ಕೆ ಕೆಲಸಕ್ಕೆ ಬಂದಿದ್ದ ಮಹಿಳೆಯರ ಮುಂದೆ ಆತನ ವಿಕೃತಿ ಹೊರಬಂತು. ಅಪ್ಪನ ಅಸಭ್ಯ ವರ್ತನೆ ಮಕ್ಕಳನ್ನು ತಲುಪಿತು.ಆತನ ಕುಚೇಷ್ಟೆಗಳು ಇಲ್ಲಿಗೆ ನಿಲ್ಲಲಿಲ್ಲ. ಯುವತಿಯರ ಕೈ ಹಿಡಿದು ಎಳೆದ. ಇದು ಗ್ರಾಮದಲ್ಲಿ ರಂಪಾಟಕ್ಕೆ ಕಾರಣವಾಯಿತು. ದೂರು ಹೆಚ್ಚಾದವು. ಮೊಮ್ಮಕ್ಕಳಿರುವ ವಯಸ್ಸಿನಲ್ಲಿ ಇದೆಲ್ಲಾ ಬೇಕಾ ಎಂದು ಮಕ್ಕಳು ಗದರಿದರು. ಅದನ್ನು ಆತ ಕಿವಿಗೆ ಹಾಕಿಕೊಳ್ಳಲಿಲ್ಲ. ವರ್ತನೆಯೂ ಸುಧಾರಿಸಲಿಲ್ಲ.

ಪೈಪ್‌ ತೊಡಸಿದರು: ಇದರಿಂದ ಬೇಸತ್ತ ಮಕ್ಕಳು ನೀರಿನ ಪೈಪ್‌ ಕಟ್‌ ಮಾಡಿ ಬಲವಂತದಿಂದ ಅಪ್ಪನ ಗುಪ್ತಾಂಗಕ್ಕೆ ಹಾಕಿದರು. ಐದಾರು ದಿನದಲ್ಲಿಯೇ ಅದನ್ನು ಆತ ಸುಲಭವಾಗಿ ತೆಗೆದು ಹಾಕಿ ಮತ್ತೆ ಕಪಿಚೇಷ್ಟೆ ಶುರು ಮಾಡಿದ.ಕೊನೆಗೆ ಮಕ್ಕಳು ಜೆಸಿಬಿಯ ಲೋಹದ ನಟ್‌ ಮತ್ತು ಪ್ಲಾಸ್ಟಿಕ್‌ ಬಾಟಲ್‌ನ ನೆಕ್‌ ಕಟ್‌ ಮಾಡಿ ಅಪ್ಪನ ಗುಪ್ತಾಂಗಕ್ಕೆ ಸಿಕ್ಕಿಸಿದರು. ಅಷ್ಟಕ್ಕೆ ವೃದ್ಧ ತಣ್ಣಗಾದ. ಸದ್ಯ ಕಿರಿಕಿರಿ ತಪ್ಪಿತಲ್ಲ ಎಂದು ಮನೆಯವರೂ ಸುಮ್ಮನಾದರು.ಆಗಲೇ ಶುರುವಾಯಿತು ಮತ್ತೊಂದು ಹೊಸ ಸಮಸ್ಯೆ!

ನಟ್‌ ಮತ್ತು ಪ್ಲಾಸ್ಟಿಕ್‌ ರಿಂಗ್‌ ತೆಗೆಯಲು ಹಲವು ಬಾರಿ ಯತ್ನ ನಡೆಸಿದ ವೃದ್ಧ ಸಾಧ್ಯವಾಗದೆ ತೆಪ್ಪಗಾದ. 10–15 ದಿನಗಳಾಗುತ್ತಲೇ ಆತನ ಸೂಕ್ಷ್ಮಭಾಗ ಬಾತುಕೊಂಡಿತು. ಮೂತ್ರ ಕಟ್ಟಿಕೊಂಡು ಒದ್ದಾಡ ತೊಡಗಿದ. ಮಕ್ಕಳು ಆತನನ್ನು ಬೆಂಗಳೂರಿನ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ಕರೆತಂದರು. ಅದಕ್ಕೂ ಮುನ್ನ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ಹಲವಾರು ಆಸ್ಪತ್ರೆಗಳಿಗೆ ಎಡತಾಕಿದ್ದರು. ಅಷ್ಟರಲ್ಲಾಗಲೇ ಒಂದು ತಿಂಗಳು ಕಳೆದಿತ್ತು.

ಸುತಾರಾಂ ಒಪ್ಪದ ವೃದ್ಧ: ಸೋಂಕು ತಗುಲಿದ್ದ ಗುಪ್ತಾಂಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕುವುದೊಂದೇ ಏಕೈಕ ಮಾರ್ಗ ಎಂದು ಎಲ್ಲ ವೈದ್ಯರು ಕೈಚೆಲ್ಲಿದ್ದರು. ರಾಮಯ್ಯ ಆಸ್ಪತ್ರೆಯ ಯುರೋಲಾಜಿ ವಿಭಾಗದ ವೈದ್ಯರ ಅಭಿಪ್ರಾಯ ಕೂಡ ಇದೇ ಆಗಿತ್ತು. ಮಕ್ಕಳು ಮತ್ತು ಸೊಸೆಯಂದಿರು ಮರುಮಾತಿಲ್ಲದೆ ಸಮ್ಮತಿಸಿದರು. ಆದರೆ, ರೋಗಿ ಮಾತ್ರ ಇದಕ್ಕೆ ಸುತಾರಾಂ ಒಪ್ಪಲಿಲ್ಲ!

ಕಬ್ಬಿಣ ಕತ್ತರಿಸುವ ಯಂತ್ರದಿಂದ ಶಸ್ತ್ರಚಿಕಿತ್ಸೆ: ರಾಮಯ್ಯ ಆಸ್ಪತ್ರೆಯ ಯುರಾಲಜಿ, ಅಂಡ್ರಾಲಜಿ ಮತ್ತು ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ವೈದ್ಯರು ಮೊದಲು ಸೋಂಕು ಕಡಿಮೆ ಮಾಡುವ ಚಿಕಿತ್ಸೆ ಆರಂಭಿಸಿದರು. ಸೋಂಕು ಹತೋಟಿಗೆ ಬಂದಿತು.ಇಂತಹ ಅಪರೂಪದ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ನಟ್‌ ತೆಗೆಯಲು ಯಾವುದೇ ವೈದ್ಯಕೀಯ ಸಲಕರಣೆ ಇಲ್ಲ. ಎಲ್ಲ ಸಾಧ್ಯತೆ ಬಾಗಿಲು ಮುಚ್ಚಿದಾಗ ವೈದ್ಯರು ಆಸ್ಪತ್ರೆಯ ಕಟ್ಟಡ ನಿರ್ವಹಣಾ ವಿಭಾಗದಿಂದ ಕಬ್ಬಿಣ ಕತ್ತರಿಸುವ ಯಂತ್ರವನ್ನು ಆಪರೇಷನ್‌ ಥೇಯಟರ್‌ಗೆ ತರಿಸಿದರು. ರೋಗಿಯ ಪ್ರಜ್ಞೆ ತಪ್ಪಿಸಿ ಯಂತ್ರದಿಂದ ನಟ್‌ ಮತ್ತು ಪ್ಲಾಸ್ಟಿಕ್‌ ರಿಂಗ್ ಕತ್ತರಿಸಿ ತೆಗೆದರು. ಸುಮಾರು 45 ನಿಮಿಷಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು.

ಗ್ಯಾಂಗ್ರಿನ್‌ ಅಪಾಯ ಕಾದಿತ್ತು

ಹರಿತವಾದ ಯಂತ್ರದಿಂದ ಸೂಕ್ಷ್ಮವಾದ ಭಾಗದಲ್ಲಿ ಸಿಲುಕಿದ್ದ ನಟ್‌ ಕತ್ತರಿಸುವುದು ಸವಾಲಿನ ಕೆಲಸವಾಗಿತ್ತು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಾದಿತ್ತು. ನಟ್‌ ಮತ್ತು ಪ್ಲಾಸ್ಟಿಕ್‌ ರಿಂಗ್‌ ಹಾಗೆ ಬಿಟ್ಟಿದ್ದರೆ ಸ್ವಲ್ಪ ದಿನದಲ್ಲೇ ಗ್ಯಾಂಗ್ರಿನ್‌ ಆಗುವ ಸಾಧ್ಯತೆ ಇತ್ತು. ಒಂದು ವೇಳೆ ಗ್ಯಾಂಗ್ರಿನ್‌ ಆಗಿದ್ದರೆ ಜನನಾಂಗವನ್ನು ಕತ್ತರಿಸಿ ತೆಗೆಯಬೇಕಾಗುತ್ತಿತ್ತು ಎನ್ನುತ್ತಾರೆ ಯುರಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪುವ್ವಾಡ ಸಂದೀಪ್‌.

‘ಇದೊಂದು ಅಪರೂಪದ ಪ್ರಕರಣ.ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗಿಯ ಸ್ಥಿತಿಯ ಮೇಲೆ ಚಿಕಿತ್ಸೆ ಅವಲಂಭಿಸಿರುತ್ತದೆ. 15 ವರ್ಷಗಳ ಹಿಂದೆ ಇಂಥದೊಂದು ಪ್ರಕರಣ ಆಸ್ಪತ್ರೆಗೆ ಬಂದಿತ್ತು. ವೈದ್ಯಕೀಯ ನಿಯತಕಾಲಿಕೆ, ಪತ್ರಿಕೆಗಳಲ್ಲಿ ಇದುವರೆಗೂ ಇಂತಹ ನೂರು ಪ್ರಕರಣ ಕೂಡ ವರದಿಯಾಗಿಲ್ಲ. ವಿದೇಶಗಳಲ್ಲಿ ಕಾಮತೃಷೆ ತಣಿಸಿಕೊಳ್ಳಲು ಮಹಿಳೆಯರು ಮತ್ತು ಪುರುಷರು ತಮ್ಮ ಗುಪ್ತಾಂಗಗಳಿಗೆ ರಿಂಗ್‌ ಹಾಕಿಕೊಳ್ಳುವ ರೂಢಿ ಇದೆ. ಇತ್ತೀಚೆಗೆ ಇದು ಫ್ಯಾಷನ್‌ ಕೂಡ ಆಗಿದೆ. ಆದರೆ, ಈ ಪ್ರಕರಣ ವಿಭಿನ್ನ. ಇಲ್ಲಿ ಮಕ್ಕಳು, ಅಪ್ಪನ ಕಾಮಾಸಕ್ತಿಗೆ ಅಂಕುಶ ಹಾಕಲು ಜನನಾಂಗಕ್ಕೆ ನಟ್‌ ಮತ್ತು ರಿಂಗ್‌ ಹಾಕಿದ್ದಾರೆ’ ಎಂದರು.

'ನಟ್‌ ಹಾಕಿದ ಐದಾರು ತಾಸಿನಲ್ಲಿ ಅದನ್ನು ಹೊರ ತೆಗೆಯಬೇಕಿತ್ತು. ಇಲ್ಲದಿದ್ದರೆ ಬಾವು ಬರುತ್ತದೆ. ಮೂತ್ರ ಮಾಡಲು ಆಗುವುದಿಲ್ಲ. ಗಾಯವಾಗಿ ಸೋಂಕು ತಗಲುತ್ತದೆ. ರಕ್ತ, ಕೀವು ಸೋರಲು ಆರಂಭವಾಗುತ್ತದೆ. ಇದು ಗ್ಯಾಂಗ್ರಿನ್‌ಗೆ ಕಾರಣವಾಗುತ್ತದೆ. ಗುಪ್ತಾಂಗ ತೆಗೆದು ಹಾಕಿದರೆ ಮೂತ್ರ ಮಾಡುವುದು ಕಷ್ಟವಾಗುತ್ತದೆ'ಎಂದರು ಪುವ್ವಾಡ ಸಂದೀಪ್‌.

ಶಸ್ತ್ರಚಿಕಿತ್ಸೆ ನಡೆಸಿದ ರಾಮಯ್ಯ ಆಸ್ಪತ್ರೆಯ ಯುರೋಲಜಿ ಮತ್ತು ಅಂಡ್ರಾಲಜಿ ವಿಭಾಗದ ಮುಖ್ಯಸ್ಥ ಡಾ.ಡಿ.ರಮೇಶ್‌, ಡಾ.ಪ್ರಸಾದ್‌ ಮೈಲಾರಪ್ಪ, ಡಾ.ಮಾನಸ, ಪ್ಲಾಸ್ಟಿಕ್‌ ಸರ್ಜನ್‌ ಡಾ.ಶಾಂತಕುಮಾರ್‌ ಮತ್ತು ಸಿಎಂಒ ಡಾ. ಗೋಪಾಲಪ್ಪ ಅವರ ತಂಡದಲ್ಲಿ ಡಾ. ಸಂದೀಪ್‌ ಕೂಡ ಒಬ್ಬರು.

ರಾಮಯ್ಯ ಆಸ್ಪತ್ರೆಯಲ್ಲಿಇತ್ತೀಚೆಗೆ ಶಸ್ತ್ರಚಿಕಿತ್ಸೆ ಮೂಲಕ ವಿಶ್ವದ ದೊಡ್ಡ ಕಿಡ್ನಿ (31X13 ಸೆಂಟಿ ಮೀಟರ್‌) ಹೊರತೆಗೆಯುವ ಮೂಲಕ ಡಾ.ಸಂದೀಪ್ ಮತ್ತು ವೈದ್ಯರು ಗಮನ ಸೆಳೆದಿದ್ದರು. ಈ ಸಾಧನೆ ಗಿನ್ನಿಸ್‌ ದಾಖಲೆ ಪುಸ್ತಕ ಸೇರುವ
ನಿರೀಕ್ಷೆ ಇದೆ.

ವರ್ತನೆ ಮರುಕಳಿಸುವ ಸಾಧ್ಯತೆ

ಯಲಹಂಕದಲ್ಲಿರುವಮನೋರೋಗ ತಜ್ಞೆ ಡಾ.ವಿನುತಾ ಆರ್‌. ಅವರ ಬಳಿ ಚಿಕಿತ್ಸೆ ಪಡೆಯುವಂತೆ ರೋಗಿಗೆ ವೈದ್ಯರು ಶಿಫಾರಸು ಮಾಡಿದ್ದರು. ಅದರಂತೆ ರೋಗಿಯನ್ನು ಮಕ್ಕಳು ಮನೋವೈದ್ಯರ ಬಳಿ ಕರೆದೊಯ್ದಿದ್ದರು.

ಸಮಾಲೋಚನೆಯ ವೇಳೆ ರೋಗಿಯು ಮನಬಿಚ್ಚಿ ಮಾತನಾಡಲಿಲ್ಲ. ಹಲವು ಸಿಟ್ಟಿಂಗ್‌ಗಳಲ್ಲಿ ಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಲಾಗಿತ್ತು ಎನ್ನುತ್ತಾರೆ ವೈದ್ಯರು. ಈ ವಯಸ್ಸಿನಲ್ಲೇ ಮನುಷ್ಯನಿಗೆ ಮಾನಸಿಕವಾಗಿ ಸಂಗಾತಿಯ ಅಗತ್ಯ ಹೆಚ್ಚಾಗಿರುತ್ತದೆ. ಸಂಗಾತಿ ಇಲ್ಲದ ಕಾರಣ ಏಕಾಂಗಿತನ ಆತನನ್ನು ಕಾಡುತ್ತಿದೆ. ಇದೊಂದು ಮಾನಸಿಕ ಸಮಸ್ಯೆ. ಸರಿಪಡಿಸಬಹುದು. ಹಾಗೆ ಬಿಟ್ಟರೆ ಈ ವರ್ತನೆ ಮತ್ತೆ ಮರುಕಳಿಸುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಮನೋರೋಗ ತಜ್ಞರು.

ರೋಗಿಗೆ ಮುಜುಗರ

ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ನಂತರ ಹಲವು ಬಾರಿ ರೋಗಿ ಚೆಕಪ್‌ಗೆ ಬರುತ್ತಿದ್ದ. ಇತ್ತೀಚೆಗೆ ಹಲವು ತಿಂಗಳಿಂದ ಬಂದಿಲ್ಲ. ಬಹುಶಃ ಮುಜುಗರದಿಂದ ಆಸ್ಪತ್ರೆಗೆ ಬರಲು ಹಿಂಜರಿಯುತ್ತಿರಬಹುದು ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.

‘ಚಿಕಿತ್ಸೆ ನಂತರ ರೋಗಿಯ ಜತೆ ಆಪ್ತ ಸಮಾಲೋಚನೆ ನಡೆಸಲಾಗಿದೆ. ಮಹಿಳೆಯರ ಜತೆ ಗೌರವದಿಂದ ವರ್ತಿಸುವಂತೆ ತಿಳಿ ಹೇಳಲಾಗಿದೆ. ಕಾಮೋದ್ರೇಕಕ್ಕೆ ಕಡಿವಾಣ ಹಾಕಲು ಮಾತ್ರೆಗಳನ್ನೂ ನೀಡಲಾಗಿದೆ. ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುವಂತೆಯೂ ಸಲಹೆ ನೀಡಲಾಗಿತ್ತು. ಕೆಲವು ದಿನಗಳಿಂದ ಆತ ಆಸ್ಪತ್ರೆಗೆ ಬಂದಿಲ್ಲ. ಆರು ತಿಂಗಳಿಂದ ವರ್ತನೆ ಮರುಕಳಿಸಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ’ ಎನ್ನುತ್ತಾರೆ ವೈದ್ಯರು.

ಸಂಪರ್ಕ: ಡಾ.ಸಂದೀಪ್‌–9900099001 dr.sandeep001@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT