ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೆ ಬೀಸಿ ಮೀನು ಹಿಡಿದಾರು ನೋಡಣ್ಣ

Last Updated 7 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಜಕ್ಕೂರು ಕೆರೆ ಸುಮಾರು160 ಎಕರೆಯದಾಗಿದ್ದು19ಚದರ ಕಿಲೋಮೀಟರ್ ಜಲ ಶೇಖರಣೆಯ ವ್ಯಾಪ್ತಿ ಇದ್ದಿತ್ತಾದರೂ, ನಗರ ಬೆಳೆದಂತೆ ಅದು ಕಡಿಮೆಯಾಗುತ್ತಾ ಸಾಗಿತ್ತು. ಹದಿನೆಂಟು ವರ್ಷದ ಹಿಂದಷ್ಟೇ ಚರಂಡಿ ನೀರು, ಮಳೆಯ ಕೊಳಕುನೀರು ಬಂದು ಸೇರಿ ನೀರಿನ ಗುಣ ಮಟ್ಟ ಕೆಟ್ಟುಹೋಗಿತ್ತು.

ಎಚ್ಚೆತ್ತ ಸ್ಥಳೀಯ ನಾಗರಿಕರು ಮತ್ತು ಜಲಮಂಡಳಿ-ನಗರಾಭಿವೃದ್ಧಿಯ ಅಧಿಕಾರಿಗಳೂ ಸೇರಿ ಒಳಹರಿವಿನ ನೀರಿನಿಂದ ಮಲಿನವನ್ನು ಕಡಿತಗೊಳಿಸಲು ಕೃತಕವಾದ ಹಸಿ ಮಣ್ಣಿನ ನೆಲದಮೇಲೆ ಆ ಎಲ್ಲ ನೀರನ್ನೂ ಇಂಗಿಸಿ ಹರಿಯಬಿಟ್ಟು, ವೈಶಿಷ್ಟ್ಯಪೂರ್ಣ ನಿಯಂತ್ರಣ ತರುವಲ್ಲಿ ಹೆಚ್ಹಿನಮಟ್ಟಿಗೆಯಶಸ್ಸು ಕಂಡಿದ್ದಾರೆಂಬುದು ಹರ್ಷದ ಸಂಗತಿ!. ಆ ಪ್ರಯೋಗದಿಂದ ಶೇಖರಣೆಯಾದ ಬಹು ದೊಡ್ಡ ಜಲಸಂಪನ್ಮೂಲದಿಂದ ಸುತ್ತಲ ಪ್ರದೇಶದ ಅಂತರ್ಜಲದ ಸಾಂದ್ರತೆಯೂ ಹೆಚ್ಚಿದೆ.

ಅವನತಿಯ ಅಂಚಿಗೆ ಜಾರಿದ್ದ ಜಕ್ಕೂರು ಕೆರೆಯು ಮಾದರಿ ನೀರಿನ ತಾಣವಾಗಿ ಕಂಡುಬರುತ್ತಿದೆ. ಉತ್ತಮ ಗುಣಮಟ್ಟದ ಮೀನಿನ ಕೃಷಿಯೂ ಫಲಪ್ರದವಾಗುತ್ತಿದೆ. ಈ ಕಸುಬಿನಲ್ಲೇ ತೊಡಗಿರುವ ಹಲವರು ಅಲ್ಲೇ ತಮ್ಮ ಬದುಕಿಗಾಗಿ ಕಾಯಕವನ್ನೂ ಕಂಡುಕೊಂಡಿದ್ದಾರೆ.

ಅಂತಹ ಮೀನುಗಾರರಿಬ್ಬರ ಮುಂಜಾನೆಯ ದಿನಚರಿಯನ್ನು ಕ್ಯಾಮೆರಾದಲ್ಲಿ ಇತ್ತೀಚೆಗೆ ಸೆರೆಹಿಡಿದಿರುವವರು, ಉತ್ತರಹಳ್ಳಿಯ ಪೂರ್ಣಪ್ರಜ್ಞ ಬಡಾವಣೆಯ ವಾಸಿ, ಭರತ್. ಎಂ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಚಿಕ್ಕಂದಿನಿಂದಲೂ ಲ್ಯಾಂಡ್ ಸ್ಕೇಪ್, ಆರ್ಕಿಟೆಕ್ಚರ್ ಛಾಯಾಗ್ರಹಣದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಅವರು, ಇಲ್ಲಿ ಬಳಸಿರುವ ಕ್ಯಾಮೆರಾ,ಕೆನಾನ್ 1300 ಡಿ, ಜೊತೆಗೆ135 ಎಂ.ಎಂ. ಜೂಂ ಲೆನ್ಸ್. ಅಪರ್ಚರ್ 8,ಶಟರ್ ವೇಗ1/ 640 ಸೆಕೆಂಡ್,ಐ.ಎಸ್.ಒ.100 ಫ್ಲಾಶ್, ಟ್ರೈಪಾಡ್ ಬಳಸಿಲ್ಲ.

ಈ ಚಿತ್ರದೊಂದಿಗೆ ಅನುಸಂಧಾನ ಮಾಡುವಾಗ, ಕೆಲವು ತಾಂತ್ರಿಕ ಮತ್ತು ಕಲಾತ್ಮಕ ಅಂಶಗಳನ್ನು ಈ ಕೆಳಗಿನಂತೆ ಗಮನಿಸಬಹುದು:

ಮುಂಜಾನೆಯ ಸೂರ್ಯನ ಬೆಳಕು ಮೀನುಗಾರರನ್ನು ಹಾಗೂ ತೆಪ್ಪವನ್ನೂ ಬೆಳಗಿಸಿದೆ. ಆ ಓರೆಯಾದ ಬೆಳಕಿನ ದೆಸೆಯಿಂದ ಸಣ್ಣ ಅಲೆಗಳ ನೀರಿನ ಮೇಲ್ಮೈ ಮತ್ತು ಹಿನ್ನೆಲೆಯ ಹಸಿರು ಪ್ರದೇಶ ಉತ್ತಮವಾದ ಟೆಕ್ಸ್‌ಚರ್‌ನ ಮಾಟವನ್ನು ಹೊಮ್ಮಿಸಿಕೊಂಡು ನವಿರಾದ ವರ್ಣ ಛಾಯಾಂತರದಿಂದ ದೃಶ್ಯವನ್ನು ಸುಂದರವಾಗಿಸಿದೆ.ಅಂತೆಯೇ ಕಾಂತಿ ಭೇದವೈರುಧ್ಯದ ಛಾಯೆ ( ಕಾಂಟ್ರಾಸ್ಟ್) ಹದಗೊಂಡಿದೆ. ಇಬ್ಬರ ಮುಖದಲ್ಲೂ ಆಶಾದಾಯಕ ಸಂತಸ ಮೂಡಿರುವಂತೆ ಭಾಸವಾಗುತ್ತದೆ. ಆ ಸನ್ನಿವೇಶವನ್ನು ಎಲ್ಲೂ ವ್ಯತ್ಯಾಸವಾಗದಂತೆ ಸೆರೆಹಿಡಿಯುವಲ್ಲಿ, ಕ್ಯಾಮೆರಾದ ಕಂಟ್ರೋಲ್ ಸರಿಯಾಗಿದೆ.

ನೀಲಿಮಿಶ್ರಿತ ತಿಳಿಹಸಿರು ವರ್ಣ ಸಾಮರಸ್ಯವು, ಕೆರೆಯ ನೀರಿನ ಅಗಾದತೆಯನ್ನು ಶಾಂತಗೊಳಿಸುತ್ತ ಅವರೀರ್ವರ ಕ್ಲಿಷ್ಟಕರ ಬದುಕಿನ ನೋಟವನ್ನೂ ಮಧುರ ಗೊಳಿಸಿದೆ. ಇದೇ ದೃಶ್ಯವನ್ನು ಮಧ್ಯಾನ್ಹದ ಸುಡು ಬಿಸಿಲಲ್ಲಿ ಸೆರೆಹಿಡಿದಿದ್ದರೆ, ನೀರಿನ ಮೇಲ್ಮೆ ಬಿಳಿಚಿಕೊಂಡು, ತೆಪ್ಪ ಮತ್ತು ಆ ಈ ಇಬ್ಬರ ಭಾಗಗಳ ನೋಟವು ಕಡು-ಗಾಢವಾಗಿ ಕಾಣುವಂತಾಗಿ, ಅವರ ಬದುಕಿನ ಬವಣೆಯನ್ನು ಕಾರ್ಪಣ್ಯವೆಂಬಂತೆ ಬಿಂಬಿಸಿ ಬಿಡಬಹುದಿತ್ತು.

ಕಲಾತ್ಮಕವಾಗಿ,ಮುಖ್ಯವಸ್ತುವಾದಆ ಇಬ್ಬರುಚಟುವಟಿಕೆ ಮತ್ತು ತೆಪ್ಪದ ಭಾಗವುಚೌಕಟ್ಟಿನಬಲಭಾಗದಲ್ಲಿದ್ದು, ಸಂಚಲನಕ್ಕೆ ಬೇಕಾಗುವಸಾಕಷ್ಟು ರಿಲೀಫ್ ಅವರ ಎದುರು ಇರುವುದು, ಉತ್ತಮವಾದ ಅಂಶ.

ನೀರ-ಪಕ್ಷಿಯೊಂದುತುಸು ದೂರದಲ್ಲಿ ಸ್ವಚ್ಛಂದವಾಗಿ ನೀರಿನಮೇಲೆ ಸಂಚರಿಸುತ್ತಿರುವುದು, ನಡುಗಡ್ಡೆಯಂತೆ ಕೆರೆಯ ಮದ್ಯದಲ್ಲಿ ಗಿಡ- ಮರಗಳ ತಾಣ ಕಾಣಿಸುತ್ತಿರುವುದು, ಸ್ವಚ್ಛ ನೀರಿನ ಯಾವುದೋ ಸುಂದರವಾದ ವಿಹಾರ ಸ್ಥಳವಿದು ಎಂಬ ಭಾವನೆಯನ್ನು ನೋಡುಗನ ಮನದಲ್ಲಿಸ್ಪಂದಿಸಬಹುದಾದ ಕಲಾತ್ಮಕ ಅಂಶಈ ಚಿತ್ರದಲ್ಲಿದೆ.

ಒಮ್ಮೆ ನೋಡಿದ ಚಿತ್ರವೊಂದು, ಮತ್ತೆ ಮತ್ತೆ ನೋಡುಗನ ಕಣ್ಣುಗಳನ್ನು ಸೆಳೆಯುವಂತಹ ಗುಣ ಹೊಂದಿದ್ದರೆ, ಅದು ಒಂದು ಬರಿದೇ ಫೋಟೊವಷ್ಟೇ ಆಗಿರದೆ,ಜೀವಂತಿಕೆಯ ಭಾವಸ್ಪಂದನೆಗೂ ಅವಕಾಶವನ್ನುಂಟು ಮಾಡಬಹುದು ಎಂದು ಹೇಳಬಹುದು.

ಏನೋ ಒಂದು ಕತೆ ಹೇಳುತ್ತಾ ಪುನಹ ನೋಡುಗನ ಗಮನ ಸೆಳೆಯುವಂತಾಗುವ ಗುಣವನ್ನು ಅದು ಹೊಂದಿರುತ್ತದೆ. ಅಗ, ಅದು ಕಲಾತ್ಮಕವೂ ಎನಿಸಬಲ್ಲುದು. ಈ ಚಿತ್ರದಲ್ಲಿ ಆ ಅಂಶವನ್ನು ಮನಗಾಣಬಹುದಾದ್ದರಿಂದ, ಛಾಯಾಗ್ರಾಹಕ ಭರತ್ ಅಭಿನಂದನಾರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT