ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ದಂಡದ ಭೀತಿ ಉಲ್ಲಂಘನೆಗೆ ಅಂಕುಶ

Last Updated 26 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಸಂಚಾರ ನಿಯಮ ಉಲ್ಲಂಘನೆಗೆ ಪರಿಷ್ಕೃತ ದಂಡ ಜಾರಿಯಾದಕೆಲವು ದಿನಗಳಲ್ಲಿಯೇ ನಗರದ ಟ್ರಾಫಿಕ್‌ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳು ಗೋಚರಿಸುತ್ತಿವೆ. ಹೊಸ ನಿಯಮ ಜಾರಿಯಾದ ಕೆಲವೇ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಬಿದ್ದಿದ್ದು, ಸಂಚಾರ ವ್ಯವಸ್ಥೆ ನಿಧಾನವಾಗಿ ಸುಧಾರಿಸುತ್ತಿದೆ.

ದುಬಾರಿ ದಂಡದಿಂದ ತಪ್ಪಿಸಿಕೊಳ್ಳಲು ಸವಾರರು ಕಟ್ಟುನಿಟ್ಟಾಗಿ ಸಂಚಾರ ನಿಯಮ ಪಾಲಿಸುತ್ತಿರುವ ಅಂಶ ಟ್ರಾಫಿಕ್‌ ಪೊಲೀಸರ ಗಮನಕ್ಕೆ ಬಂದಿದೆ.ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲುಗಡೆ, ಸೇಫ್ಟಿ ಬೆಲ್ಟ್ ಧರಿಸದಿರುವುದು, ಹೆಲ್ಮೆಟ್‌ ರಹಿತ ಚಾಲನೆ ಹತೋಟಿಗೆ ಬಂದಿವೆ.ಸಿಗ್ನಲ್‌ ಜಂಪ್‌, ಫುಟ್‌ಪಾತ್ ಮೇಲೆ ಚಾಲನೆ, ಒನ್‌ ವೇಯಲ್ಲಿ ನುಗ್ಗುವ ಪ್ರವೃತ್ತಿ ಕಡಿಮೆಯಾಗುತ್ತಿದೆಎನ್ನುತ್ತಾರೆ ಶಿವಾಜಿನಗರ ಟ್ರಾಫಿಕ್‌ ಪೊಲೀಸ್‌ ಅಧಿಕಾರಿ ಸಲೀಮ್‌ ನದಾಫ್‌.

2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಅನ್ವಯಹೊಸ ನಿಯಮ ಜಾರಿಯಾದ ನಂತರ ಉಲ್ಲಂಘನೆ ಪ್ರಕರಣ ಇಳಿಮುಖವಾಗುತ್ತಿದ್ದರೂ ವಸೂಲಿ ಮಾಡಿದದಂಡದ ಮೊತ್ತ ಹೆಚ್ಚಾಗಿದೆ. 15–20 ದಿನದಲ್ಲಿ ದಂಡದ ರೂಪದಲ್ಲಿ ವಸೂಲಿ ಮಾಡಿದ ಮೊತ್ತ ಕೋಟಿ ರೂಪಾಯಿ ಗಡಿ ಸಮೀಪಿಸಿದರೆ, ದಾಖಲಿಸಿಕೊಂಡ ಪ್ರಕರಣಗಳ ಸಂಖ್ಯೆ 13 ಸಾವಿರ ಗಡಿ ತಲುಪಿದೆಯಂತೆ.

ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಸವಾರರು ದುಬಾರಿ ದಂಡ ತೆರಲು ಸಾಧ್ಯವಾಗದೇ ಪರದಾಡುವ ದೃಶ್ಯಗಳು ಸಾಮಾನ್ಯವಾಗಿವೆ. ಮೊದಲಾದರೆ ನೂರು ಅಥವಾ ಎರಡು ನೂರು ರೂಪಾಯಿ ದಂಡ ತೆರುತ್ತಿದ್ದ ಸವಾರರು ದುಬಾರಿ ದಂಡದ ಸಹವಾಸ ಬೇಡ ಎಂದು ರಸ್ತೆಯಲ್ಲಿ ಸಂಯಮದಿಂದ ವರ್ತಿಸುತ್ತಿದ್ದಾರೆ ಎನ್ನುವುದು ಪೊಲೀಸರ ಅನುಭವದ ಮಾತು.

‘ಗೊತ್ತಿಲ್ಲದೆ ಒನ್‌ವೇನಲ್ಲಿ ಹೋಗಿ ಸಿಕ್ಕಿ ಹಾಕಿಕೊಂಡರೆ ಸಾವಿರ ರೂಪಾಯಿ ದಂಡ ತೆರಬೇಕು. ಜೇಬಿನಲ್ಲಿ ಅಷ್ಟೊಂದು ಹಣ ಇರುವುದಿಲ್ಲ. ಸ್ಥಳದಲ್ಲಿಯೇ ಹಣ ಪಾವತಿಸುವಂತೆ ಪೊಲೀಸರು ಹೇಳುತ್ತಾರೆ.ಅಲ್ಲಿ ಒನ್‌ವೇ ಬೋರ್ಡ್‌ ಇಲ್ಲ ಎಂದು ವಾದಕ್ಕಿಳಿದರೆ ಹಳೆಯ ಪ್ರಕರಣಗಳ ಪಟ್ಟಿಯನ್ನು ಕಣ್ಮುಂದೆ ಹಿಡಿಯುತ್ತಾರೆ' ಎನ್ನುವುದು ದ್ವಿಚಕ್ರ ವಾಹನ ಸವಾರರ ಅಳಲು.

‘ಪೊಲೀಸರ ಕಣ್ತಪ್ಪಿಸುವುದು ಸಾಧ್ಯವಿಲ್ಲ’

ಹೊಸ ದಂಡದ ನಿಯಮ ಜಾರಿಯಾದ ನಂತರ ಪ್ರಮುಖ ರಸ್ತೆಗಳಲ್ಲಿ ಮಾತ್ರವಲ್ಲ, ಸಣ್ಣಪುಟ್ಟ ಗಲ್ಲಿ, ಕಿರಿದಾದ ರಸ್ತೆಗಳಲ್ಲಿಯೂ ಪೊಲೀಸರು ನಿಂತಿರುತ್ತಾರೆ. ಅವರ ಕಣ್ತಪ್ಪಿಸುವುದು ಸಾಧ್ಯವೇ ಇಲ್ಲ.

ಒನ್‌ ವೇಗಳಲ್ಲಿ ನುಗ್ಗುವುದು, ಹೆಲ್ಮೆಟ್‌ ಮತ್ತು ಲೈಸನ್ಸ್‌ ಇಲ್ಲದವರು ಇಂಥ ಅಡ್ಡಮಾರ್ಗ ಬಳಸುವುದು ಸಾಮಾನ್ಯ. ಅದಕ್ಕೂ ಅಂಕುಶ ಹಾಕಲಾಗಿದೆ. ಪೊಲೀಸರ ಕಣ್ತಪ್ಪಿಸುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ಮಲ್ಲೇಶ್ವರ ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ ಚನ್ನಕೃಷ್ಣಪ್ಪ.

‘ಮೊದಲಾದರೆ ಸಂಚಾರ ದಟ್ಟನೆ ರಸ್ತೆ, ನೋ ಪಾರ್ಕಿಂಗ್‌ ಸೇರಿದಂತೆ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಲಾಗುತ್ತಿತ್ತು. ಈಗ ಆ ಪ್ರವೃತ್ತಿ ಕಡಿಮೆಯಾಗುತ್ತಿದೆ. ಬಹುಶಃ ಇದು ದೊಡ್ಡ ಮೊತ್ತದ ದಂಡದ ಮಹಿಮೆ’ ಎನ್ನುವುದು ಅವರ ಅಭಿಪ್ರಾಯ.

ಪರಿಷ್ಕರಣೆಯಾಗದ ಸಾಧನ

ಪರಿಷ್ಕೃತ ದಂಡ ಜುಲೈ ಮಧ್ಯ ಭಾಗದಿಂದಲೇ ಜಾರಿಗೆ ಬಂದಿದೆ. ದಂಡ ಪಾವತಿಸಿದ ನಂತರ ಸವಾರರಿಗೆ ರಶೀದಿ ನೀಡಲುಪಿಡಿಎ ಯಂತ್ರಗಳು ಪರಿಷ್ಕರಣೆಯಾಗಿರಲಿಲ್ಲ. ಹೀಗಾಗಿ ಪೊಲೀಸರು ಹಳೆಯ ದಂಡದ ಮೊತ್ತ ವಸೂಲು ಮಾಡುತ್ತಿದ್ದರು.

ಸಂಚಾರ ಪೊಲೀಸರಿಗೆ ನೀಡಲಾದ 625 ಪಿಡಿಎ ಯಂತ್ರಗಳಲ್ಲಿ ಹೊಸ ದಂಡದ ಮೊತ್ತ ಅಳವಡಿಸಲಾಗಿದೆ. ಯಶವಂತಪುರ ಮತ್ತು ಮಲ್ಲೇಶ್ವರ ವಿಭಾಗದ ಸಂಚಾರ ಪೊಲೀಸರಿಗೆ ನೀಡಿದ ಪಿಡಿಎ ಯಂತ್ರಗಳು ಇನ್ನೂ ಅಪ್‌ಡೇಟ್‌ ಆಗಿಲ್ಲ. ಹೀಗಾಗಿ ಹಳೆಯ ದಂಡ ವಸೂಲಿ ಮಾಡುತ್ತಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರು ‘ಮೆಟ್ರೊ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT