ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿಳಿಯಲು ಒಲ್ಲೆನ್ನುವ ಬೆಂಗಳೂರಿಗರು

ರಿಯಾಲಿಟಿ ಚೆಕ್‌
Last Updated 15 ಜುಲೈ 2018, 19:30 IST
ಅಕ್ಷರ ಗಾತ್ರ

ಪಾದಚಾರಿಗಳು ಸುಲಭವಾಗಿ ರಸ್ತೆ ದಾಟಲು ಅನುಕೂಲವಾಗಲಿ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವೆಡೆ ಸ್ಕೈವಾಕ್‌ಗಳನ್ನು ನಿರ್ಮಿಸಲಾಗಿದೆ. ಕೆಲ ವರ್ಷಗಳಿಂದೀಚೆಗೆ ಅತ್ಯಾಧುನಿಕ ಸ್ಕೈವಾಕ್‌ಗಳ ನಿರ್ಮಾಣವೂ ಆಗಿದೆ. ಲಿಫ್ಟ್‌, ಎಸ್ಕಲೇಟರ್‌ಗಳ ಸೌಲಭ್ಯವೂ ಇವೆ. ಇಷ್ಟಿದ್ದರೂ ಸ್ಕೈವಾಕ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಳಸುತ್ತಿಲ್ಲ!

ಸ್ಕೈವಾಕ್‌ ಬಳಕೆಗಿಂತ ಅದರಡಿಯಲ್ಲಿ ರಸ್ತೆ ದಾಟುವವರೇ ಹೆಚ್ಚು. ನಗರದ ಕಸ್ತೂರಬಾ ರಸ್ತೆ, ಪಾಲಿಕೆ ಕಚೇರಿ ಬಳಿ, ಕೆ.ಜಿ ರಸ್ತೆಯ ಕಂದಾಯ ಭವನದ ಮುಂಭಾಗವಿರುವ ಹಾಗೂ ಮಹಾರಾಣಿ ಕಾಲೇಜು ಬಳಿ ಇರುವ ಸ್ಕೈವಾಕ್‌ಗಳೂ ಹೇಗೆ ಕಾರ್ಯ ನಿರ್ವಹಿಸುತ್ತಿವೆ? ಅವುಗಳನ್ನು ಬಳಕೆ ಕುರಿತು ‘ಮೆಟ್ರೊ’ ರಿಯಾಲಿಟಿ ಚೆಕ್‌ ನಡೆಸಿದ ವೇಳೆ ಕಂಡು ಬಂದ ಅಂಶಗಳ ಮಾಹಿತಿ ಇಲ್ಲಿದೆ.

ಕಸ್ತೂರಬಾ ರಸ್ತೆಯ ಸ್ಕೈವಾಕ್‌
ಈ ರಸ್ತೆಯ ಎರಡೂ ಬದಿಯಲ್ಲಿನ ಬಸ್‌ ನಿಲ್ದಾಣಗಳಿಗೆ ಕೂಗಳತೆ ದೂರದಲ್ಲಿಯೇ ಸ್ಕೈವಾಕ್‌ ಇದೆ. ಇದರಲ್ಲಿ ಎರಡೂ ಕಡೆ ಲಿಫ್ಟ್‌ ಸೌಲಭ್ಯವೂ ಇದೆ. ಜನರೇಟರ್‌, ಸಿ.ಸಿ.ಟಿ.ವಿ. ಕ್ಯಾಮೆರಾಗಳೂ ಇವೆ. ನಿರ್ವಹಣೆಯೂ ಉತ್ತಮವಾಗಿದೆ. ಆದರೆ ಜನರ ಬಳಕೆ ಪ್ರಮಾಣ ಮಾತ್ರ ಕಡಿಮೆ. ರಸ್ತೆಯ ಒಂದು ಬದಿಯಲ್ಲಿ ವೆಂಕಟಪ್ಪ ಆರ್ಟ್‌ ಗ್ಯಾಲರಿ, ಮ್ಯೂಸಿಯಂ, ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯ, ಕಬ್ಬನ್‌ ಉದ್ಯಾನ ಇದೆ. ಇನ್ನೊಂದು ಬದಿಯಲ್ಲಿ ಮರ್ಸಿಡೀಸ್‌ ಬೆಂಜ್‌ನ ಮಳಿಗೆ, ಖಾಸಗಿ ಬ್ಯಾಂಕ್‌, ದೇವಸ್ಥಾನ ಇದೆ. ರಸ್ತೆಯಲ್ಲಿ ಎರಡೂ ಬದಿಯಲ್ಲಿ ವಾಹನ ಸಂಚಾರವೂ ಹೆಚ್ಚಿದೆ. ಆದರೆ ರಸ್ತೆ ದಾಟಲು ಸ್ಕೈವಾಕ್‌ ಬದಲಿಗೆ ರಸ್ತೆಯನ್ನೇ ಬಳಸುತ್ತಿದ್ದಾರೆ.

ಬೆಳಿಗ್ಗೆ 11.25ರಿಂದ 11.40ರವರೆಗೆ (15 ನಿಮಿಷ) ಸ್ಕೈವಾಕ್‌ ಬಳಸಿದವರ ಸಂಖ್ಯೆ ಕೇವಲ 10. ಅವರಲ್ಲಿ ಮೂವರು ಮಾತ್ರ ಲಿಫ್ಟ್‌ ಬಳಸಿದವರು (ಇವರಲ್ಲಿ ಒಬ್ಬರು ಹಿರಿಯ ನಾಗರಿಕರು). ಈ ಅವಧಿಯಲ್ಲಿ ರಸ್ತೆಯ ಡಿವೈಡರ್‌ ದಾಟಿ, ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋದವರ ಸಂಖ್ಯೆ 30ಕ್ಕೂ ಹೆಚ್ಚಿತ್ತು. ಇವರಲ್ಲಿ ಕಾಲೇಜು ವಿದ್ಯಾರ್ಥಿನಿಯರೇ ಹೆಚ್ಚಿದ್ದರು. ಸ್ಕೈವಾಕ್‌ ಬಳಿಯ ಡಿವೈಡರ್‌ನ ಎತ್ತರವನ್ನು ಇನ್ನಷ್ಟು ಏರಿಸಿದ್ದರೂ ಜನರು ಮತ್ತಷ್ಟು ಮುಂದಕ್ಕೆ ಹೋಗಿ ರಸ್ತೆ ದಾಟುತ್ತಿದ್ದದ್ದು ಕಂಡು ಬಂದಿತು.

‘ಇಲ್ಲಿ ಲಿಫ್ಟ್‌ ಸೌಲಭ್ಯ ಇರುವುದು ಹಲವರಿಗೆ ಗೊತ್ತಿಲ್ಲ. ನಾನೂ ಕೂಡ ಎಲ್ಲಿಂದ ರಸ್ತೆ ದಾಟುವುದು ಎಂದು ಯೋಚಿಸುತ್ತಿದ್ದಾಗ, ಆಟೊ ಚಾಲಕ ಸ್ಕೈವಾಕ್‌ನಲ್ಲಿ ಲಿಫ್ಟ್‌ ಇದೆ ಎಂದು ಹೇಳಿದ. ಸ್ಕೈವಾಕ್‌ ಬಳಸುವ ಕುರಿತು ಮತ್ತು ಇಲ್ಲಿ ಲಿಫ್ಟ್‌ ಇರುವ ಕುರಿತು ಜನ ಜಾಗೃತಿ ಮೂಡಿಸಬೇಕಿದೆ’ ಎನ್ನುತ್ತಾರೆ ಬನಶಂಕರಿ 6ನೇ ಹಂತದ ನಿವಾಸಿ ಹಾಗೂ ಸ್ಕೈವಾಕ್ ಬಳಸಿದ ಹಿರಿಯ ನಾಗರಿಕ ಜಯರಾಮ್‌.

ಪಾಲಿಕೆ ಕಚೇರಿ ಬಳಿಯ ಸ್ಕೈವಾಕ್‌
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ, ಯುನಿಟಿ ಬಿಲ್ಡಿಂಗ್‌, ಎಲ್‌ಐಸಿ ಕಚೇರಿಗೆ ಸಮೀಪದಲ್ಲಿ ಅತ್ಯಾಧುನಿಕ ಸ್ಕೈವಾಕ್‌ ಇದೆ. ಸಮೀಪದಲ್ಲಿ ಹಲವು ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಸಿಗ್ನಲ್‌ಗೆ ಸಮೀಪವೇ ಸ್ಕೈವಾಕ್‌ ನಿರ್ಮಿಸಲಾಗಿದೆ.

ಇಲ್ಲಿ ಬೆಳಿಗ್ಗೆ 11.50ರಿಂದ 12.05 ಗಂಟೆಯವರಗೆ ಸ್ಕೈವಾಕ್‌ ಬಳಸಿದವರ ಸಂಖ್ಯೆ 25 (ಇದರಲ್ಲಿ ಲಿಫ್ಟ್‌ ಬಳಸಿದವರು ಆರು ಮಂದಿ). ಇದರ ಕೆಳಗೆ ಮತ್ತು ಅಕ್ಕ ಪಕ್ಕ ನೂರಾರು ಜನರು ರಸ್ತೆ ದಾಟಿದರು.

‘ಈ ಸ್ಕೈವಾಕ್‌ ನಿರ್ಮಾಣವಾಗಿ ವರ್ಷವಾಗಿದೆ. ಮೊದಲು ಇದನ್ನು ಬಳಸುವವರ ಸಂಖ್ಯೆ ಕಡಿಮೆಯಿತ್ತು. ಆದರೆ ಇತ್ತೀಚೆಗೆ ಹೆಚ್ಚಾಗಿದೆ. ಬೆಳಿಗ್ಗೆ ಶಾಲಾ, ಕಾಲೇಜು ಆರಂಭವಾಗುವ ಸಮಯ, ಕಚೇರಿಗಳು ತೆರೆಯುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸ್ಕೈವಾಕ್‌ ಬಳಸುತ್ತಾರೆ. ನಂತರ 1.30ರಿಂದ ರಾತ್ರಿ 8 ಗಂಟೆಯವರೆಗೆ ಜನರು ಇದನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ’ ಎನ್ನುತ್ತಾರೆ ಸ್ಕೈವಾಕ್‌ನ ಭದ್ರತಾ ಸಿಬ್ಬಂದಿ ಸೈಯದ್‌ ಯೂಸಫ್‌.

‘ಸ್ಕೈವಾಕ್‌ ಕೆಳಗೆ ಸಿಗ್ನಲ್‌ ದೀಪಗಳಿವೆ. ಅವಸರದಲ್ಲಿ ಹೋಗುವವರು ಅಲ್ಲಿಯೇ ದಾಟುತ್ತಾರೆ. ಸಾರ್ವಜನಿಕರು ಸ್ಕೈವಾಕ್‌ ಬಳಸುವಂತೆ ಇಲ್ಲಿನ ಪೊಲೀಸ್ ಸಿಬ್ಬಂದಿ ಸೂಚಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದನ್ನು ಬಳಸುತ್ತಾರೆ’ ಎನ್ನುತ್ತಾರೆ ಅವರು.

ಕಂದಾಯ ಭವನ ಬಳಿ ಸ್ಕೈವಾಕ್‌
ಕೆ.ಜಿ. ರಸ್ತೆಯಲ್ಲಿರುವ ಸ್ಕೈವಾಕ್‌ ಬಳಿ ಕಂದಾಯ ಭವನ, ಕಾವೇರಿ ಭವನ, ಜಲಮಂಡಳಿ ಭವನ, ಶಿಕ್ಷಕರ ಸದನ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಡಿಡಿಪಿಐ ಕಚೇರಿ, ಕೇಂದ್ರೀಕೃತ ದಾಖಲಾತಿ ಘಟಕದ ಕಚೇರಿ ಇದೆ. ವಿವಿಧ ಕೆಲಸ ಕಾರ್ಯಗಳಿಗೆ ನಿತ್ಯ ಸಹಸ್ರಾರು ಜನರು ಈ ಕಚೇರಿಗಳಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸ್ಕೈವಾಕ್‌ ಅನ್ನು ಹೆಚ್ಚಿನ ಜನ ಬಳಸುತ್ತಿದ್ದಾರೆ.ಆದರೆ ಇಲ್ಲಿ ಶುಚಿತ್ವಕ್ಕೆ ಅಷ್ಟು ಒತ್ತು ನೀಡಿಲ್ಲ. ಎರಡು ಲಿಫ್ಟ್‌ಗಳಲ್ಲಿ ಒಂದು ಕೆಟ್ಟಿದೆ. ಜನರೇಟರ್‌ ಇದೆ, ಆದರೆ ಅದೂ ಕೆಟ್ಟಿದೆ. ಮಧ್ಯಾಹ್ನ 12.15ರಿಂದ 12.30 ಗಂಟೆಯೊಳಗೆ 55 ಜನ ಸ್ಕೈವಾಕ್‌ ಬಳಸಿದರು. ಇದನ್ನು ಬಳಸದೇ ರಸ್ತೆ ದಾಟಿದವರ ಸಂಖ್ಯೆ ಕೇವಲ 12 ಆಗಿತ್ತು.

ದಾವಣಗೆರೆಯ ಮೂವರು ಅಂಧರು ಸಹ ಇಲ್ಲಿ ರಸ್ತೆ ದಾಟಲು ಸ್ಕೈವಾಕ್‌ ಬಳಸಿದರು. ಇವರಲ್ಲಿ ಇಬ್ಬರು (ಪತಿ–ಪತ್ನಿ) ಪೂರ್ಣ ಪ್ರಮಾಣದ ಅಂಧರು. ಇನ್ನೊಬ್ಬರು ಭಾಗಷಃ ಅಂಧರು. ಒಂದು ಲಿಫ್ಟ್‌ ಕೆಟ್ಟಿದ್ದರಿಂದ ಮೂವರು ನಡೆದುಕೊಂಡೇ ಮೆಟ್ಟಿಲು ಹತ್ತಿ, ಮತ್ತೊಂದು ಕಡೆ ಲಿಫ್ಟ್‌ ಮೂಲಕ ಕೆಳಕ್ಕೆ ಇಳಿದರು.

‘ನಮ್ಮಂಥ ಅಂಧರು ಸುಗಮವಾಗಿ ರಸ್ತೆ ದಾಟಲು ಅನುಕೂಲಕರವಾಗಿದೆ. ಲಿಫ್ಟ್‌ ಬೇಗ ದುರಸ್ತಿ ಮಾಡಿಸಬೇಕು’ ಎಂದು ಒತ್ತಾಯಿಸುತ್ತಾರೆ ನಾಗರಾಜ್‌.

ಜನರೇಟರ್‌ ಕೆಟ್ಟುಹೋಗಿ ಕೆಲ ತಿಂಗಳೇ ಆಗಿದೆ. ಲಿಫ್ಟ್‌ ರಿಪೇರಿ ಕುರಿತು ಏಜೆನ್ಸಿಯವರಿಗೆ ಕರೆ ಮಾಡಿದ್ದು, ಶೀಘ್ರದಲ್ಲಿಯೇ ಅದು ಸಿದ್ಧವಾಗುತ್ತದೆ ಎನ್ನುತ್ತಾರೆ ಇಲ್ಲಿನ ಭದ್ರತಾ ಸಿಬ್ಬಂದಿ ರಫಿಕ್‌ ಅಹಮದ್‌.

ಮಹಾರಾಣಿ ಕಾಲೇಜು ಬಳಿ
ಇಲ್ಲಿಯ ಸ್ಕೈವಾಕ್‌ ಅಷ್ಟಾಗಿ ಬಳಕೆಯಾಗುತ್ತಿಲ್ಲ. ವಾಹನ ಸಂಚಾರದ ನಡುವೆಯೇ ಹರಸಾಹಸಪಟ್ಟು ವಿದ್ಯಾರ್ಥಿನಿಯರು ರಸ್ತೆ ದಾಟುತ್ತಾರೆ. ಇಲ್ಲಿನ ಸ್ಕೈವಾಕ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ. ಆದರೆ ಲಿಫ್ಟ್‌ ಇಲ್ಲ. ಭದ್ರತಾ ಸಿಬ್ಬಂದಿಯೂ ಇಲ್ಲ. ಶುಚಿತ್ವದ ಕೊರತೆಯಿದೆ.

ಮಧ್ಯಾಹ್ನ 12.50ರಿಂದ 1.05 ಗಂಟೆ ಅವಧಿಯಲ್ಲಿ ಇಲ್ಲಿನ ಸ್ಕೈವಾಕ್‌ ಬಳಸಿದವರ ಸಂಖ್ಯೆ ಕೇವಲ 6. ರಸ್ತೆ ದಾಟಿದ ನಾಗರಾಜ್‌ ಅವರು, ‘ನನಗೆ ಕಾಲು ನೋವಿದೆ. ಇಲ್ಲಿನ ಸ್ಕೈವಾಕ್‌ನಲ್ಲಿ ಲಿಫ್ಟ್‌ ಇದ್ದರೆ ಆ ಮೂಲಕವೇ ಹೋಗುತ್ತಿದ್ದೆ’ ಎಂದು ಪ್ರತಿಕ್ರಿಯಿಸಿದರು. ಮಾನ್ಯತಾ ಟೆಕ್‌ ಪಾರ್ಕ್‌, ಕೋರಮಂಗಲದ ಫೋರಂ ಮಾಲ್‌ (ಎರಡರಲ್ಲೂ ಎಸ್ಕಲೇಟರ್‌ಗಳ ಸೌಲಭ್ಯ ಇದೆ), ಬಳ್ಳಾರಿ ರಸ್ತೆಯ ಕೆಂಪಾಪುರ ಜಂಕ್ಷನ್‌, ಬೆಳ್ಳಂದೂರಿನ ಸ್ಕೈವಾಕ್‌ಗಳನ್ನು ಹೆಚ್ಚು ಬಳಸುತ್ತಾರೆ.

‘ಅನಿವಾರ್ಯವಾಗಬೇಕು’
ಯಾಕಪ್ಪ ಸ್ಕೈವಾಕ್ ಹತ್ತಿ ಇಳಿಯೋದು ಎಂಬ ಸೋಮಾರಿತನ ಪಾದಚಾರಿಗಳಲ್ಲಿದೆ. ಸಾಮಾನ್ಯವಾಗಿ ರಸ್ತೆ ದಾಟಲು ಸುಲಭದ ಮಾರ್ಗವನ್ನೇ ಪಾದಚಾರಿಗಳು ಆಯ್ದುಕೊಳ್ಳುತ್ತಾರೆ. ಕೆಲವೇ ಸೆಕೆಂಡ್‌ಗಳಲ್ಲಿ ರಸ್ತೆ ದಾಟುವ ಧಾವಂತದಲ್ಲಿರುವವರೂ ಹೆಚ್ಚಿದ್ದಾರೆ. ಅವರು ಎಷ್ಟೇ ವಾಹನಗಳು ಸಂಚರಿಸುತ್ತಿದ್ದರೂ ಲೆಕ್ಕಿಸದೇ ಮುನ್ನುಗ್ಗುತ್ತಾರೆ. ಇನ್ನೂ ಕೆಲವರು ಟ್ರಾಫಿಕ್ ಜಾಮ್ ಆದಾಗ ಮತ್ತು ತುರ್ತಾಗಿ ಹೋಗಬೇಕಿದ್ದಾಗ ರಸ್ತೆ ದಾಟುತ್ತಾರೆ. ಇಂತಹ ಸಂದರ್ಭದಲ್ಲಿ ಅಪಘಾತ ಉಂಟಾಗುವ ಸಾಧ್ಯತೆ ಇರುತ್ತದೆ. ಅನಿವಾರ್ಯ ನಿರ್ಮಾಣವಾದಾಗ ಸಾರ್ವಜನಿಕರು ತಾನಾಗಿಯೇ ಸ್ಕೈವಾಕ್ ಬಳಸುತ್ತಾರೆ ಎಂಬುದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.

ಅಪಾಯಕ್ಕೆ ಆಹ್ವಾನ
ಕೆಂಪೇಗೌಡ ರಸ್ತೆಯ ಸಂತೋಷ್ ಚಿತ್ರಮಂದಿರ ಬಳಿ ಇರುವ ಸ್ಕೈವಾಕ್‌ ಪಾದಚಾರಿಗಳ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇಲ್ಲಿನ ಒಂದು ಬದಿಯ ಕಂಬಿಗೆ ಹೊಂದಿಕೊಂಡಂತೆ ತುಂಡಾದ ವಿದ್ಯುತ್ ವೈರ್‌ಗಳನ್ನು ಜೋಡಿಸಿ ಟೇಪ್ ಸುತ್ತಲಾಗಿದೆ. ಒಂದು ವೇಳೆ ಬಿಸಿಲು, ಮಳೆಗೆ ಆ ಟೇಪ್ ಸಡಿಲಗೊಂಡು ಬಿಚ್ಚಿಕೊಂಡರೆ ಸ್ಕೈವಾಕ್‌ಗೆ ವಿದ್ಯುತ್ ಹರಿದು ಗಂಡಾಂತರ ಎದುರಾಗುವ ಸಾಧ್ಯತೆ ಇದೆ.

ಪಿಪಿಪಿಯಡಿ ಯೋಜನೆ
ಸ್ಕೈವಾಕ್‌ಗಳನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) ನಿರ್ಮಿಸಲಾಗಿದೆ. ಇವುಗಳಿಗೆ ಸರ್ಕಾರ ಅಥವಾ ಬಿಬಿಎಂಪಿ ಅನುದಾನ ನೀಡಿಲ್ಲ. ಸಾರ್ವಜನಿಕರ ಬೇಡಿಕೆ ಆಧರಿಸಿ ಸ್ಕೈವಾಕ್ ನಿರ್ಮಾಣಕ್ಕೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗುತ್ತದೆ. ಇದರ ನಿರ್ಮಾಣಕ್ಕೆ ಪೂರ್ಣ ಬಂಡವಾಳವನ್ನು ಗುತ್ತಿಗೆದಾರರೇ ಭರಿಸುತ್ತಾರೆ ಎಂದು ಮಾಹಿತಿ ನೀಡುತ್ತಾರೆ ಬಿಬಿಎಂಪಿಯ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್.

ಜಾಗದ ಮೌಲ್ಯ ಆಧರಿಸಿ ವಾರ್ಷಿಕವಾಗಿ ಇಂತಿಷ್ಟು ಹಣವನ್ನು ಪಾಲಿಕೆಗೆ ಪಾವತಿಸುವ ಷರತ್ತನ್ನು ವಿಧಿಸಿ ಸುಮಾರು 30 ವರ್ಷಗಳವರೆಗೆ ಗುತ್ತಿಗೆ ನೀಡಲಾಗುತ್ತದೆ. ಸ್ಕೈವಾಕ್‌ಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಅವಕಾಶ ನೀಡಲಾಗುತ್ತದೆ. ಆದರೆ, ಜಾಹೀರಾತು ಅಳವಡಿಸಲು ಪ್ರತಿ ಚದರ ಅಡಿಗೆ ಇಂತಿಷ್ಟು ಶುಲ್ಕ ಪಾವತಿಸಬೇಕಾಗುತ್ತದೆ.ಗುತ್ತಿಗೆ ಪಡೆದಷ್ಟು ಅವಧಿಯವರೆಗೆ ಸ್ಕೈವಾಕ್‌ಗಳ ನಿರ್ವಹಣೆಯ ಜವಾಬ್ದಾರಿ ಗುತ್ತಿಗೆದಾರರದ್ದೇ ಆಗಿರುತ್ತದೆ ಎಂದು ಅವರು ಹೇಳುತ್ತಾರೆ.

ಕಾರಣಗಳೇನು?
* ಪಾದಚಾರಿಗಳಲ್ಲಿನ ಸೋಮಾರಿತನ
* ಆಧುನಿಕ ಸೌಲಭ್ಯಗಳಿರುವ ಕುರಿತು ಮಾಹಿತಿ ಕೊರತೆ
* ವಿದ್ಯುತ್‌ ಕಡಿತಗೊಂಡರೆ ಎಂಬ ಆತಂಕ
* ಹತ್ತಿಳಿಯಲು ಹೆಚ್ಚು ಸಮಯ ಬೇಕೆಂಬ ನಂಬಿಕೆ
* ಜನರಲ್ಲಿ ಜಾಗೃತಿ ಕೊರತೆ ಇರುವುದು
* ಅವೈಜ್ಞಾನಿಕ ಸ್ಥಳಗಳಲ್ಲಿ ಸ್ಕೈವಾಕ್‌ ನಿರ್ಮಾಣ

*
ಪಾದಚಾರಿಗಳು ಸ್ಕೈವಾಕ್‌ಗಳ ಬಳಕೆ ಮಾಡುವಂತೆ ಪ್ರೋತ್ಸಾಹಿಸಲು ಬಿಬಿಎಂಪಿ ಯಾವುದೇ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಸುರಕ್ಷಿತವಾಗಿ ರಸ್ತೆ ದಾಟಲು ಸಾರ್ವಜನಿಕರೇ ಸಮೀಪದ ಸ್ಕೈವಾಕ್‌ಗಳನ್ನು ಬಳಸಬೇಕು
–ಶ್ರೀನಿವಾಸ್, ಕಾರ್ಯಪಾಲಕ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT