ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಯ ಹಿಂದಿನ ಸೂತ್ರಧಾರ

Last Updated 15 ಮೇ 2014, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿ ಜೀವನವೆಂದರೆ ಬರಿಯ ಓದಿಗಷ್ಟೇ ಮೀಸಲಾಗಿರಬೇಕು ಎಂಬುದು ಬಹುತೇಕ ಜನರ ಸಿದ್ಧಾಂತ. ಆದರೆ ನಗರದ ಸುರಾನ ಕಾಲೇಜಿನಲ್ಲಿ ಪ್ರಥಮ ವಾಣಿಜ್ಯ ಪದವಿ ವಿದ್ಯಾರ್ಥಿಯಾಗಿರುವ ರಾಕೇಶ್‌ ಜೈನ್‌ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಯೊಂದರ ಮಾಲೀಕ.

ಮಹತ್ವಾಕಾಂಕ್ಷೆ ಮತ್ತು ಅಂದುಕೊಂಡಿದ್ದನ್ನು ಸಾಧಿಸುವ ಛಲವಿದ್ದರೆ ವಿದ್ಯಾರ್ಥಿಗಳೂ ತಮ್ಮ ನೆಚ್ಚಿನ ವೃತ್ತಿ/ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದು ಎನ್ನುವುದು ರಾಕೇಶ್‌ ಅನುಭವದ ಮಾತು. ಸಾರ್ವಜನಿಕ, ಖಾಸಗಿ ಅಥವಾ ಕಾರ್ಪೊರೇಟ್‌ ಸಮಾರಂಭವನ್ನು ನಿಭಾಯಿಸುವುದು, ನಿರ್ವಹಿಸುವುದು ಸುಲಭದ ಮಾತಲ್ಲ.

ಒಂದು ಸಣ್ಣ ಮಾಹಿತಿ ಕಲೆಹಾಕುವಲ್ಲಿ ಸೋತರೂ  ಅದುವೇ ದೊಡ್ಡ ಕೊರತೆಯಾಗಬಹುದು. ಯಾವ ಸಂಗೀತವನ್ನು ಪ್ಲೇ ಮಾಡಬೇಕು ಎಂಬುದೂ ಮುಖ್ಯ ಸಂಗತಿ; ಯಾವ ಅತಿಥಿಗಳ ಸತ್ಕಾರ ಮತ್ತು ಬೇಕು, ಬೇಡಗಳನ್ನು ಯಾರಿಗೆ ವಹಿಸಬೇಕು ಎಂಬಿತ್ಯಾದಿ ಅಂಶಗಳನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕಾದ ಒತ್ತಡ.

ಇವೆಲ್ಲದರಲ್ಲಿಯೂ ರಾಕೇಶ್‌ ಪಳಗಿದ್ದಾರೆ. ‘ನಾನು ಬಗೆ ಬಗೆಯ ಸಮಾರಂಭಗಳನ್ನು ನಡೆಸಿಕೊಟ್ಟಿದ್ದೇನೆ, ಮಧ್ಯಾಹ್ನ ಮತ್ತು ರಾತ್ರಿಯ ಪಾರ್ಟಿಗಳು, ಪೂಲ್‌ ಪಾರ್ಟಿಗಳು, ಹೋಲಿ ಹಬ್ಬದ ಪಾರ್ಟಿಗಳು ಹೀಗೆ ವಿಭಿನ್ನ ಮಾದರಿಯವು. ಪ್ರತಿ ಪಾರ್ಟಿಗೂ ವಿಭಿನ್ನ ಆಯಾಮವಿದೆ, ಚೌಕಟ್ಟು ಇದೆ.


ರೂಪುರೇಷೆಗಳೂ ಒಂದಕ್ಕೊಂದು ವ್ಯತಿರಿಕ್ತವಾಗಿರುತ್ತವೆ. ಆದರೆ ಅವೆಲ್ಲವನ್ನೂ ಹೇಗೆ ಮ್ಯಾನೇಜ್‌ ಮಾಡಬೇಕೆಂದು ಈಗ ನನಗೆ ಕರಗತವಾಗಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು. ‘ವಿಂಗ್ಸ್ ಎಂಟರ್‌ಟೇನ್‌ಮೆಂಟ್‌’ ಎಂಬ ಅವರ ಇವೆಂಟ್ಸ್‌ ಮ್ಯಾನೇಜ್‌ಮೆಂಟ್‌ ಕಂಪೆನಿಗೆ ಈಗಿನ್ನೂ ಸ್ವಂತ ಕಚೇರಿಯಿಲ್ಲ. ವರ್ಷದ ಹಿಂದೆ ಕಾರ್ಯಾರಂಭ ಮಾಡಿದ ‘ವಿಂಗ್ಸ್‌’ ಇದುವರೆಗೂ ಹೇರಳವಾಗಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.

‘ನಾನು ಬೇರೆ ಬೇರೆ ಪಾರ್ಟಿಗಳಿಗೆ ನಿಯಮಿತವಾಗಿ ಹೋಗುತ್ತಿರುತ್ತೇನೆ. ಇವೆಂಟ್ಸ್‌ ಮ್ಯಾನೇಜ್‌ಮೆಂಟ್‌ ಮಾಡುವವರ ಬಗ್ಗೆ ನನಗಿದ್ದ ಕುತೂಹಲವನ್ನು ಗಮನಿಸಿ ಒಮ್ಮೆ ನನ್ನ ಸ್ನೇಹಿತ ಅವನಿಗೆ ಕಾರ್ಯಕ್ರಮಗಳ ಆಯೋಜನೆಯಲ್ಲಿ ಸಹಕರಿಸುವಂತೆ ಹೇಳಿದ.

ಹಾಗೆ ಅವರೊಂದಿಗೆ ಕೆಲಸ ಮಾಡುತ್ತಾ ಆ ಕ್ಷೇತ್ರದ ಎಲ್ಲಾ ಸೂಕ್ಷ್ಮಗಳನ್ನು ಅರಿತುಕೊಂಡೆ’ ಎಂದು ಆರಂಭದ ದಿನಗಳನ್ನು ಸ್ಮರಿಸಿಕೊಳ್ಳುವ ರಾಕೇಶ್‌ಗೆ ಒಂದೊಂದೂ ಕಾರ್ಯಕ್ರಮ ಕಲಿಕೆಯ ಮೆಟ್ಟಿಲಾಯಿತಂತೆ. ಜತೆಗೆ ತಮ್ಮದೇ ಆದ ಒಂದು ದೊಡ್ಡ ತಂಡವೊಂದನ್ನು ಹೊಂದಲು ಸಾಧ್ಯವಾಯಿತಂತೆ.

ವಿಂಗ್ಸ್‌ ಎಂಟರ್‌ಟೇನ್‌ಮೆಂಟ್‌ಗೆ ರಾಕೇಶ್‌ ಒಬ್ಬರೇ ಮಾಲೀಕರು. ಆದರೆ ಅವರು ಆಯೋಜಿಸುವ ಕಾರ್ಯಕ್ರಮಗಳಿಗೆ ನೆರವಾಗುವ ಒಂದು ತಂಡವೇ ಅವರೊಂದಿಗಿದೆ. ಅವರು ಕಾರ್ಯಕ್ರಮದ ಪ್ರಚಾರ ಮತ್ತು ಮಾರುಕಟ್ಟೆ ವಿಭಾಗವನ್ನು ನಿಭಾಯಿಸುತ್ತಾರೆ.

‘ಯಾವುದೇ ಕಾರ್ಯಕ್ರಮದ ಆಯೋಜನೆ ಬಗ್ಗೆ ಆಫರ್‌ ಬಂದಾಗ ಸ್ಥಳಾವಕಾಶದ ಬಗ್ಗೆ ಮೊದಲು ತಿಳಿದುಕೊಳ್ಳುತ್ತೇನೆ. ನಂತರ ಬಜೆಟ್‌ ಹಾಗೂ ವಸ್ತು/ಸಾಮಗ್ರಿಗಳ ಬಗ್ಗೆ ಹೇಳುತ್ತಾರೆ. ಅಗತ್ಯವಿದ್ದರೆ ಡಿಜೆಯನ್ನೂ ಒದಗಿಸಿಕೊಡುತ್ತೇನೆ. ಉಳಿದಂತೆ ತಿಂಡಿ ತೀರ್ಥ, ಲೈಟಿಂಗ್‌, ಸೌಂಡ್‌ ಸಿಸ್ಟಮ್‌ ಇತ್ಯಾದಿಯನ್ನು ನಾನೇ ವ್ಯವಸ್ಥೆ ಮಾಡಬೇಕಾಗುತ್ತದೆ.

ನಾನು ನನ್ನ ಇವೆಂಟ್‌ಗಳ ಬಗ್ಗೆ ಪ್ರಚಾರ ಮಾಡುವ ರೀತಿಯೂ ಭಿನ್ನವಾಗಿದೆ. ಫೇಸ್‌ಬುಕ್‌ನಲ್ಲಿ ಮಾಹಿತಿ ಹರಿಯಬಿಡುತ್ತೇನೆ. ಆಸಕ್ತರು ನನ್ನನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುತ್ತಾರೆ. ಸುರಾನ, ಜೈನ್‌ ಹಾಗೂ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಕರಪತ್ರ, ಭಿತ್ತಿಪತ್ರಗಳನ್ನು ಹಾಕುತ್ತೇನೆ.

ಕೆಲವು ಕಾಲೇಜುಗಳಲ್ಲಿ ನನ್ನ ಬಳಗದವರಿರುವ ಕಾರಣ ಪೋಸ್ಟರ್‌/ಕರಪತ್ರದಲ್ಲಿ ನೀಡಿರುವ ನನ್ನ ಸಂಪರ್ಕ ಸಂಖ್ಯೆಯನ್ನು ಬಳಸಿ ವಿದ್ಯಾರ್ಥಿಗಳು ಬರುತ್ತಾರೆ. ಪ್ರತಿ ಇವೆಂಟ್‌ನ ಕೊನೆಯಲ್ಲಿ ಓರೆಕೋರೆಗಳ ಬಗ್ಗೆ ಪ್ರಾಯೋಜಕರ ಅಭಿಪ್ರಾಯ ಸಂಗ್ರಹಿಸುತ್ತೇನೆ. ಕೊರತೆಯನ್ನು ಸರಿಪಡಿಸಿಕೊಳ್ಳುವಲ್ಲಿ ಇದರಿಂದ ನನಗೆ ಬಹಳ ಸಹಕಾರಿಯಾಗಿದೆ’ ಎಂದು ತಮ್ಮ ಅನುಭವಗಳನ್ನು ರಾಕೇಶ್‌ ವಿವರಿಸುತ್ತಾರೆ.

ಮೊದಲಾ ಸಲಾ...
ಮೊದಲ ಇವೆಂಟ್‌ಗೆ ಜನರೇ ಬರಲಿಲ್ಲ. ಇದರಿಂದಾಗಿ ನಾನು ಹಣ ಕಳೆದುಕೊಳ್ಳಬೇಕಾಯಿತು. ಕಾರ್ಯಕ್ರಮದ ತಯಾರಿಯಲ್ಲಿ ಮಾರ್ಕೆಟಿಂಗ್‌ನ ಅವಶ್ಯಕತೆಯೇನು ಎಂಬ ಪಾಠ ಕಲಿತೆ. ಅಷ್ಟೇ ಅಲ್ಲ, ಒಂದು ಕಾರ್ಯಕ್ರಮ ಆಯೋಜಿಸಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕು ಎಂಬುದನ್ನೂ ಅರ್ಥಮಾಡಿಕೊಂಡೆ’ ಎಂದು ಮೊದಲ ಅನುಭವವನ್ನು ಬಿಚ್ಚಿಡುತ್ತಾರೆ.

ಈ ಕ್ಷೇತ್ರದಲ್ಲಿ ಪಳಗಿದ ಇವೆಂಟ್‌ ಮ್ಯಾನೇಜರ್‌ಗಳೊಂದಿಗೆ ನಿರಂತರ ಸಂಪರ್ಕವಿರಬೇಕಾದದ್ದೂ ಅತ್ಯಗತ್ಯ. ಯಾವ ಇವೆಂಟ್‌ ಹೇಗೆ ಮಾಡಬಹುದು, ಪೂರ್ವ ತಯಾರಿಗಳ ಬಗ್ಗೆ ಅವರಿಂದ ಟಿಪ್ಸ್‌ ಪಡೆದುಕೊಳ್ಳುವುದು ಯಶಸ್ಸಿನ ದೃಷ್ಟಿಯಿಂದ ಅತ್ಯವಶ್ಯವೆನ್ನುವುದು ರಾಕೇಶ್‌ ಅನುಭವದ ಮಾತು.

ಡಿಜೆ ಆಗಿ...
ಮೊದಲ ಅನುಭವದ ಕಹಿ ಮರೆಯುವಷ್ಟರಲ್ಲಿ ಮತ್ತೊಂದು ಇವೆಂಟ್‌ನಲ್ಲಿ ಹೊಸ ಸವಾಲು ಎದುರಾಯಿತು. ಆಹ್ವಾನಿಸಿದ್ದ ಡಿಜೆ ಎರಡು ಗಂಟೆ ತಡವಾಗಿ ಆಗಮಿಸಿದರು. ಆ ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ಬೋರ್‌ ಹೊಡೆಯದಂತೆ ಮತ್ತು ನಿರ್ಗಮಿಸದಂತೆ ಸಭಾಂಗಣದಲ್ಲಿ ಎಂಗೇಜ್‌ ಮಾಡಿಟ್ಟುಕೊಳ್ಳುವುದು ನಿಜಕ್ಕೂ ಸವಾಲಾಗಿತ್ತು.

ನನಗೆ ಡಿಸ್ಕ್‌ ಜಾಕಿ (ಡಿಜೆ) ವೃತ್ತಿ ಬಗ್ಗೆ ಸ್ವಲ್ಪ ಜ್ಞಾನವಿತ್ತು. ಹೀಗಾಗಿ ನನ್ನ ಸ್ನೇಹಿತ ಮತ್ತು ನಾನು ಡಿಜೆಯಂತೆ ಕೆಲಸ ಮಾಡಿ ಹೇಗೋ ಮ್ಯಾನೇಜ್‌ ಮಾಡಿದೆವು. ಡಿಜೆ ಬಂದ ಮೇಲೆಯೇ ನಾವು ನಿರಾಳವಾದದ್ದು’ ಎಂದು ನಿಟ್ಟುಸಿರು ಬಿಡುತ್ತಾರೆ.

ಟೀಂ ವರ್ಕ್‌ ಹಾಗೂ ಕಠಿಣ ಪರಿಶ್ರಮವಿದ್ದಾಗ ಯಾವುದೇ ಕಾರ್ಯಕ್ರಮ ಯಶಸ್ಸು ಕಾಣಲು ಸಾಧ್ಯ ಎಂಬ ಸತ್ಯವನ್ನು ರಾಕೇಶ್‌ ಅರಿತುಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT