ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಪ್ ಸಂತೆಯಲ್ಲಿ ಗಂಧದ ಪರಿಮಳ

Last Updated 29 ಜುಲೈ 2011, 19:30 IST
ಅಕ್ಷರ ಗಾತ್ರ

ಆ ದೊಡ್ಡ ಹಾಲ್‌ನ ಒಳ ಹೊಕ್ಕರೆ ಸಾಕು. ಶ್ರಿಗಂಧದ ಪರಿಮಳ ಮೂಗಿಗೆ ಸೋಕುತ್ತದೆ. ಸುತ್ತಲೂ ಓರಣವಾಗಿ ಪೇರಿಸಿಟ್ಟ ಸೋಪುಗಳು. ಬಂಗಾರದ ಬಣ್ಣ, ಕ್ರೀಮ್, ಹಸಿರು, ಕಂದು, ಶ್ರಿಗಂಧ ಹೀಗೆ ಅನೇಕ ಬಣ್ಣಗಳಿಂದ ಆಕರ್ಷಿಸುವ ಸೋಪುಗಳು ನಿಮ್ಮನ್ನು ಸ್ವಾಗತಿಸುತ್ತವೆ. ವಿವಿಧ ಆಕಾರಗಳಲ್ಲಿ, ವಿಧವಿಧ ವಿನ್ಯಾಸಗಳಲ್ಲಿ, ವಿವಿಧ ಸುವಾಸನೆಗಳಲ್ಲಿ ರಂಗು ರಂಗಿನ ಪ್ಯಾಕ್‌ಗಳಲ್ಲಿ ಕಂಗೊಳಿಸುತ್ತವೆ.

ಉಡುಗೊರೆ ನೀಡುವ ಸಲುವಾಗಿಯೇ `ಗಿಫ್ಟ್ ಪ್ಯಾಕ್~ಗಳಲ್ಲಿ ಬಗೆಬಗೆ ಬಣ್ಣದ ಸೋಪುಗಳು. ಅವುಗಳನ್ನು ಒಳಗೊಂಡಿರುವ ಪ್ಲಾಸ್ಟಿಕ್ ಬಾಕ್ಸ್‌ಗಳು ಸೋಪಿನ ಉಪಯೋಗದ ನಂತರವೂ ಸಂಗ್ರಹಿಸಲು ಯೋಗ್ಯ!  ಇವುಗಳಲ್ಲದೆ ಬೇಬಿ ಸೋಪ್, ಬೇಬಿ ಟಾಲ್ಕಂ ಬಿಡಿಯಾಗಿಯೂ ದೊರಕುವುದರೊಂದಿಗೆ `ಗಿಫ್ಟ್ ಪ್ಯಾಕ್~ಗಳಲ್ಲೂ ಲಭ್ಯ! ಜತೆಗೆ ಡಿಟರ್ಜೆಂಟ್ಸ್, ಸುಗಂಧ ದ್ರವ್ಯ, ಹ್ಯಾಂಡ್ ವಾಷ್, ಕೊಠಡಿ ಸುಗಂಧ ಹೀಗೆ ಏನೆಲ್ಲ ಇವೆ.

 ಇವುಗಳೊಂದಿಗೆ ನಿತ್ಯೋಪಯೋಗಿ ಅಗರಬತ್ತಿಗಳು, ವಿಶೇಷ ಅಗರಬತ್ತಿಗಳು, ಧೂಪ್, ಕ್ಲೀನಾಲ್ ದ್ರವ ಎಲ್ಲವೂ ಒಂದೇ ಸೂರಿನಡಿ ಕಾಣ ಸಿಗುತ್ತವೆ.

ಹಾಗೆಂದು ಇವು ಬೇರೆ ಬೇರೆ ಸಂಸ್ಥೆಗಳು ಮಾರಾಟಕ್ಕಿಟ್ಟಿರುವ ಉತ್ಪನ್ನಗಳಲ್ಲ. ಮೈಸೂರು ಶ್ರೀಗಂಧದ ಸಾಬೂನಿಗೆ ಹೆಸರಾದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜಂಟ್ಸ್ ಕೆಂಗೇರಿ ಉಪನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆಸುತ್ತಿರುವ `ಸೋಪ್ ಸಂತೆ~ಯಲ್ಲಿ ಕಣ್ಣಿಗೆ ಬೀಳುವ ಉತ್ಪನ್ನಗಳು.

`1916 ರಲ್ಲಿ ಆರಂಭವಾದ ಈ ಸಂಸ್ಥೆ ಇದೀಗ ಶತಮಾನದತ್ತ ಅಡಿ ಇಡುತ್ತಿದೆ. ಅದರ ನೆನಪಿಗಾಗಿ ಸಿರಿವಂತ ಸಾಂಪ್ರದಾಯಿಕ ಗ್ರಾಹಕರಿಗೆ `ಮೈಸೂರು ಸ್ಯಾಂಡಲ್ ಮಿಲೇನಿಯಂ~ ಎಂಬ ಹೊಸ ಅಂತಾರಾಷ್ಟ್ರೀಯ ಗುಣ ಮಟ್ಟದ ಉತ್ಪನ್ನವನ್ನು ಬಿಡುಗಡೆ ಮಾಡಲಾಗುತ್ತದೆ.

ಈಗ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ 1500 ರೂಪಾಯಿ ಬೆಲೆಬಾಳುವ ವಿದೇಶೀ ಸೋಪುಗಳನ್ನು ಬಳಸಲಾಗುತ್ತಿದೆ. ಅದರ ಜಾಗದಲ್ಲಿ ನಮ್ಮದೇ ಆದ ದೇಸೀ ಸೋಪುಗಳನ್ನು ಪರಿಚಯಿಸುವ ಪ್ರಯತ್ನ ನಡೆದಿದೆ~ ಎನ್ನುತ್ತಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಲದೇವಕೃಷ್ಣ.

ಸೋಪ್ ಸಂತೆಯಲ್ಲಿ ಕೊಂಡರೆ ದರದಲ್ಲಿ ಕೊಂಚ ರಿಯಾಯ್ತಿಯೂ ಉಂಟು.  ಈ ಸಂತೆ ಜುಲೈ 31ಕ್ಕೆ ಮುಕ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT