ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿರಲಿ ಚಂದದ ಲಿವಿಂಗ್‌ ರೂಮ್‌

Last Updated 30 ಜುಲೈ 2022, 2:01 IST
ಅಕ್ಷರ ಗಾತ್ರ

ಲಿವಿಂಗ್‌ ರೂಮ್‌ ಅಥವಾ ಹಾಲ್‌ ಚಿಕ್ಕದಿರಲಿ, ದೊಡ್ಡದಿರಲಿಅದು ಮನೆಯ ಹೃದಯಭಾಗ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಸಂತೋಷದಿಂದ ಹರಟೆ ಹೊಡೆಯಲು, ಒಬ್ಬರೇ ಇದ್ದಾಗ ಏಕಾಂತದ ಅಹ್ಲಾದಕರ ಸುಖ ಅನುಭವಿಸಲು ಚೆಂದದ ಲಿವಿಂಗ್ ರೂಮ್‌ ಬೇಕು. ಇಂಥದ್ದೊಂದುಸುಂದರ ಲಿವಿಂಗ್‌ ರೂಮ್‌ ನಿರ್ಮಿಸಿಕೊಳ್ಳಲು ಶ್ರೀಮಂತರೇ ಆಗಬೇಕೆಂದೇನಿಲ್ಲ. ಪುಟ್ಟ ಕೋಣೆಯೇ ಆಗಿದ್ದರೂ ವಾವ್‌ ಎನಿಸುವಂತೆ ವಿನ್ಯಾಸಗೊಳಿಸಬಹುದು. ಅದು ಹೇಗೆ ಅಂತೀರಾ ? ಇಲ್ಲಿದೆ ನೋಡಿ ಟಿಪ್ಸ್‌..

ದೊಡ್ಡ ಸೋಫಾಗಳು ಬೇಡ
ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದರೆ ಲಿವಿಂಗ್ ರೂಮ್‌ ಎಷ್ಟು ದೊಡ್ಡದಿದ್ದರೂ ಕಿರಿದಾಗಿರುವಂತೆ ಭಾಸವಾಗುತ್ತದೆ, ಕಿರಿಕಿರಿ ಎನಿಸುತ್ತದೆ. ಬದಲಾಗಿ ಅತ್ಯಗತ್ಯ ವಸ್ತುಗಳನ್ನು ಮಾತ್ರ ಶಿಸ್ತುಬದ್ಧವಾಗಿ ಜೋಡಿಸಿಟ್ಟರೆ ಚೊಕ್ಕದಾಗಿ, ದೊಡ್ಡದಾಗಿ ಕಾಣುತ್ತದೆ.ಲಭ್ಯವಿರುವ ಜಾಗದ ಅಳತೆಗೆ ತಕ್ಕಂತೆ ಚಿಕ್ಕ ಸೋಫಾ ಸೆಟ್‌, ಪೀಠೋಪಕರಣಗಳನ್ನು ಜೋಡಿಸಿ. ಹೆಚ್ಚು ಜಾಗ ಆಕ್ರಮಿಸುವ ಸೋಫಾ ಬದಲಿಗೆಸೋಫಾ ಕಮ್ ಬೆಡ್, ಮಡಚಬಹುದಾದ ಟೇಬಲ್ ಹೀಗೆ ಬಹುಬಳಕೆಗೆ ಬರುವಂಥವುಗಳನ್ನು ಆಯ್ಕೆ ಮಾಡಿ. ಈಗೀಗ ವಾಲ್‌ಮೌಂಟ್ ಮಂಚ, ಸೋಫಾ ಕೂಡ ಲಭ್ಯವಿದೆ. ಇವೆಲ್ಲ ಜಾಗ ಉಳಿಸುವ ಪೀಠೋಪಕರಣಗಳು.

ಕುಂಡಗಳಲ್ಲಿ ಗಿಡಗಳನ್ನು ನೆಡಿ
ಮನೆಯ ಹಾಲ್‌ನಲ್ಲಿ ಕುಂಡಗಳನಿಟ್ಟು, ಅದರಲ್ಲಿ ಗಿಡಗಳನ್ನು ಬೆಳೆಸಿ. ಇವು ಲಿವಿಂಗ್ ರೂಮ್ ಅಂದಕ್ಕೆ ಮತ್ತಷ್ಟು ಮೆರಗು ನೀಡುತ್ತವೆ. ಮನೆಯೊಳಗಡೆ ಗಿಡಗಳಿದ್ದರೆ ಕೋಣೆಯ ಒಳಗಡೆಯ ಗಾಳಿಯನ್ನೂ ಶುದ್ಧವಾಗಿಡುತ್ತವೆ. ಚಿಕ್ಕ-ಚಿಕ್ಕ ಹೂವಿನ ಗಿಡ, ಮನಿ ಪ್ಲ್ಯಾಂಟ್‌, ಅಲಂಕಾರಿಕ ಗಿಡಗಳನ್ನು ಬೆಳೆಸಬಹುದು.

ಗೋಡೆಗೆ ತಿಳಿ ಬಣ್ಣ
ಲಿವಿಂಗ್‌ ರೂಮ್‌ ಗೋಡೆಗೆ ಗಾಢ ಬಣ್ಣಗಳು ಅಷ್ಟೊಂದು ಸೂಕ್ತ ಎನಿಸುವುದಿಲ್ಲ. ಬೇಬಿ ಪಿಂಕ್‌, ತಿಳಿ ಹಸಿರು, ದಂತ ವರ್ಣ, ಬೇಬಿ ಬ್ಲ್ಯೂ ಬಣ್ಣದ ಪೇಂಟ್‌ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಈ ಬಣ್ಣಗಳಿಂದ ಕೋಣೆಯು ಹೆಚ್ಚು ದೊಡ್ಡದಾಗಿರುವಂತೆ ಭಾಸವಾಗುತ್ತದೆ. ಜೊತೆಗೆ ತಿಳಿ ಬಣ್ಣದ ಪೇಂಟ್‌ ನೈಸರ್ಗಿಕ ಬೆಳಕು ಪ್ರತಿಫಲಿಸುವಂತೆ ಮಾಡುತ್ತದೆ.

ನೈಸರ್ಗಿಕ ಬೆಳಕಿಗೆ ಆದ್ಯತೆ ಇರಲಿ
ಮುಂಜಾನೆ ಸೂರ್ಯನ ಕಿರಣಗಳು ಮೈ ಸೋಕಿದರೆ ಆರೋಗ್ಯಕ್ಕೂ ಒಳ್ಳೆಯದು, ಮನಸ್ಸಿಗೂ ಹಿತ. ಹೀಗಾಗಿ ಮನೆ ಕಟ್ಟುವ ಮೊದಲೇ ಲಿವಿಂಗ್‌ ರೂಮ್‌ನಲ್ಲಿ ದೊಡ್ಡ ದೊಡ್ಡ ಕಿಟಕಿಗಳಿರುವಂತೆ ನೋಡಿಕೊಳ್ಳಿ.

ಬಳಿಕ ವಿನ್ಯಾಸದ ಸಂದರ್ಭದಲ್ಲೂ ಕೋಣೆಗೆ ನೈಸರ್ಗಿಕವಾಗಿ ಬೆಳಕು ಬರುವ ಪ್ರದೇಶಕ್ಕೆ ಅಡ್ಡವಾಗಿ ವಸ್ತುಗಳನ್ನು ಇಡದಂತೆ ಎಚ್ಚರ ವಹಿಸಿ.

ಕನ್ನಡಿಗಳನ್ನು ಬಳಸಿ
ಕೋಣೆಯಲ್ಲಿ ಕನ್ನಡಿ ಅಥವಾ ಪ್ರತಿಫಲಿತ ವಸ್ತುಗಳನ್ನು ಇಡುವುದರಿಂದ ಸ್ಥಳ ದೊಡ್ಡದಾಗಿರುವಂತೆ ಭಾಸವಾಗುತ್ತದೆ. ಅದಕ್ಕಾಗಿ ಫ್ಲೋರ್‌ ಮಿರರ್‌, ವಾಲ್‌ ಮಿರರ್‌, ವಿಂಟೇಜ್‌ ಮಿರರ್‌ ಬಳಸಬಹುದು. ಟೇಬಲ್, ಕಪಾಟು.. ಮುಂತಾದ ಪೀಠೋಪಕರಣಗಳಲ್ಲಿ ಮಿರರ್ ಬಳಕೆ ಮಾಡುವುದು ಉತ್ತಮ.

ಉದ್ದದ ಕರ್ಟನ್‌
ಕೋಣೆಯ ನೆಲದ ಬಣ್ಣ, ಸೋಫಾ ಕಲರ್‌ ಆಧರಿಸಿ ಅದಕ್ಕೆ ಹೊಂದುವ ಕರ್ಟನ್‌ ಬಳಸಿ. ಸಾಮಾನ್ಯವಾಗಿ ಕೋಣೆ ಚಿಕ್ಕದಾಗಿದ್ದರೆ ಗಾಢ ಬಣ್ಣದ ಕರ್ಟನ್‌ ಸೂಕ್ತವೆನಿಸುವುದಿಲ್ಲ. ಜೊತೆಗೆ ಕೋಣೆಯ ಸ್ಥಳವನ್ನೆಲ್ಲಾ ಆಕ್ರಮಿಸಿದಂತೆ ಭಾಸವಾಗುತ್ತದೆ. ಹೀಗಾಗಿ, ಹೆಚ್ಚು ಡಿಸೈನ್‌ಗಳಿರದ, ತಿಳಿ ಬಣ್ಣದ ಕರ್ಟನ್ ಬಳಸಿ. ಕಿಟಕಿಗಿಂತ ಉದ್ದನೆಯ, ನೆಲಕ್ಕೆ ತಾಕುವಂತಿರುವ ಕರ್ಟನ್‌ ಹೆಚ್ಚು ಲುಕ್‌ ನೀಡುತ್ತದೆ.

ಟಿವಿ ಬೇಡ
ಲಿವಿಂಗ್‌ ರೂಮ್‌ ಕುಟುಂಬದವರೊಂದಿಗೆ ಹರಟೆ ಹೊಡೆಯುವ, ಆಟ ಆಡುವ, ನಗುವ, ನಗಿಸುವ ಜಾಗ. ಅಲ್ಲಿ ಟಿವಿ ಇಟ್ಟರೆ ಮನೆಮಂದಿಯ ನಡುವಿನ ಸಂಭಾಷಣೆಗೆ ಕತ್ತರಿ ಬೀಳುತ್ತದೆ. ಹಾಗಾಗಿ ಟಿವಿಯನ್ನು ಲಿವಿಂಗ್‌ ರೂಮ್‌ನಿಂದ ದೂರವಿಡಿ.

ಸ್ಮಾರ್ಟ್‌ ಆಗಿ
ಆಧುನಿಕ ಯುಗದಲ್ಲಿ ಎಲ್ಲವೂ ಸ್ಮಾರ್ಟ್‌ ಆಗುತ್ತಿದೆ. ಅದರಂತೆ ಅಮೆಜಾನ್ ಅಲೆಕ್ಸಾ ಅಥವಾ ಗೂಗಲ್‌ ಬಳಕೆಯೊಂದಿಗೆ ನಿಮ್ಮ ಮನೆಯನ್ನೂ ಸ್ಮಾರ್ಟ್ ಹೋಮ್ ಮಾಡಿ.

ಥೀಮ್‌ ಆಧರಿಸಿ ವಿನ್ಯಾಸಗೊಳಿಸಿ
ಸಾಂಪ್ರದಾಯಿಕ ವಿನ್ಯಾಸಕ್ಕೆ ಬದಲಾಗಿ ಥೀಮ್‌ ಆಧಾರಿತವಾಗಿ ಲಿವಿಂಗ್‌ ರೂಮ್‌ ವಿನ್ಯಾಸಗೊಳಿಸಿ. ಮರದ ಪೀಠೋಪಕರಣ ಹೆಚ್ಚಿರುವಂತೆ ನೋಡಿಕೊಳ್ಳಿ. ಕಮಾನಿನ ಗೋಡೆಗಳು ಮನೆಗೆ ಮತ್ತಷ್ಟು ಮೆರುಗು ನೀಡುತ್ತವೆ. ಪುಸ್ತಕದ ಕಪಾಟುಗಳು ಅಲಂಕಾರವಾಗಿಯೂ ಕಾಣುತ್ತವೆ.

ಅಲಂಕಾರಿಕ ವಸ್ತುಗಳನ್ನಿಡಿ
ಗಡಿಯಾರದಿಂದ ಹಿಡಿದು, ಟೀಪಾಯಿ ಮೇಲಿಡುವ ಫ್ಲವರ್‌ ಪಾಟ್‌, ಸೋಫಾ ಕವರ್, ಗೋಡೆಯಲ್ಲಿ ನೇತು ಹಾಕುವ ಅಲಂಕಾರಿಕ ವಸ್ತುಗಳೆಲ್ಲವೂ ಮನೆಯ ಅಂದವನ್ನು ಹೆಚ್ಚಿಸುತ್ತವೆ. ಹಾಗಂತ ಮಾರುಕಟ್ಟೆಯಲ್ಲಿ ಕಣ್ಣಿಗೆ ಕಾಣುವ ವಸ್ತುಗಳನ್ನೆಲ್ಲಾ ತಂದು ಹಾಕಬೇಡಿ. ಮನೆಯ ಜಾಗ, ಗೋಡೆ ಮತ್ತು ಸೋಫಾದ ಬಣ್ಣ ನೋಡಿಕೊಂಡು ಜೋಡಿಸಿ.ಈ ಬಗ್ಗೆ ಹೆಚ್ಚು ಗೊತ್ತಿಲ್ಲವೆಂದರೆ ಪರಿಣತರನ್ನು ಸಂಪರ್ಕಿಸಿ, ಸಲಹೆ ಪಡೆಯುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT