ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ಕಡುಬೇಸಿಗೆಯಲ್ಲಿ ಗುಲ್ಮೊಹರ್ ಅರಳಿ ಬಿರಿದ ನಡುಹಗಲೊಂದು ದಿನ ಸುಜಾನ್ ಸಿಂಗ್ ಪಾರ್ಕ್ನಲ್ಲಿರುವ ದೆಹಲಿಯ ಹಿರಿಯ ಕನ್ನಡತಿ ಸಾವಿತ್ರಿ ಶಾಸ್ತ್ರಿ ಮನೆಯಲ್ಲಿ ಕೂತು ಹರಟುತ್ತಿದ್ದಾಗ ಪಂಡಿತ ನೆಹರೂ ಕುಟುಂಬದೊಂದಿಗಿನ ಒಡನಾಟ ನೆನಪಿಸಿಕೊಂಡಿದ್ದರು. ಇಂದಿರಾ ಗಾಂಧಿ ಅವರು ಯೂತ್ ಕಾಂಗ್ರೆಸ್ಸಿನ ಸದಸ್ಯೆಯಾಗಿದ್ದಾಗ, ಶ್ರೀಮತಿ ಕೆ.ಸಿ. ರೆಡ್ಡಿ, ಅರುಣಾ ಅಸಿಫ್ ಅಲಿಯವರೊಡನೆ ತಾವೂ ಸಮಾಜಸೇವೆಯಲ್ಲಿ ಸವೆಸಿದ ದಿನಗಳನ್ನು ಮೆಲುಕು ಹಾಕಿದ್ದರು.

ಉತ್ತರ ಭಾರತದಲ್ಲಿಯೇ ಬೇರುಬಿಟ್ಟು ಹಬ್ಬಿದ ದಿವಂಗತ ಗೋಪಾಲಶಾಸ್ತ್ರಿ ಅವರ ಕುಟುಂಬಕ್ಕೆ ಎರಡು ಶತಮಾನಗಳ ಅಪೂರ್ವ ಚರಿತ್ರೆಯಿದೆ. ಅಪ್ಪಟ ಕನ್ನಡಿಗರು. 1946ರಲ್ಲಿ ಶಾಸ್ತ್ರಿಯವರನ್ನು ಮದುವೆಯಾಗಿ ಕೋಲಾರದಿಂದ ಉತ್ತರ ಭಾರತಕ್ಕೆ ಬಂದು ಇಲ್ಲಿಯೇ ನೆಲೆಸಿಹೋದ ಸಾವಿತ್ರಿ ಶಾಸ್ತ್ರಿ ಸ್ವಾತಂತ್ರ್ಯದ ಸೂರ್ಯನೊಂದಿಗೆ ದೇಶ ಹೋಳಾಗಿ ಬೀದಿಗಳಲ್ಲಿ ರಕ್ತದ ಹೊಳೆ ಹರಿದಿದ್ದನ್ನು ಕಣ್ಣಾರೆ ಕಂಡವರು. ಸ್ವತಂತ್ರ ಭಾರತದ ಆಗುಹೋಗುಗಳು ಅವರ ಮನೆಯಂಗಳದ ವಿದ್ಯಮಾನಗಳು. ಸ್ವಾತಂತ್ರ್ಯ ದೊರಕುವವರೆಗೂ ನಿಸ್ವಾರ್ಥವಾಗಿ ಒಗ್ಗಟ್ಟಾಗಿದ್ದ ಜನರು ಒಡೆದು ಸ್ವಾರ್ಥಿಗಳೂ, ಕ್ಷುದ್ರರೂ ಆಗತೊಡಗಿದ ಬದಲಾದ ಭಾರತದ ಜೀವಂತ ಸಾಕ್ಷಿ ಇವರು!

ಗಯಾದಲ್ಲಿದ್ದ ಗೋಪಾಲ ಶಾಸ್ತ್ರಿ ಅವರಿಗೆ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂರೊಡನೆ ಗಾಢ ಮೈತ್ರಿ ಇತ್ತು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿ ಬಿಹಾರದ ಹಜಾರಿಬಾಗ್ ಜೈಲಿಗೂ ಹೋದ ತರುಣ ಗೋಪಾಲ ಶಾಸ್ತ್ರಿ ಅವರನ್ನು ನೆಹರೂ ಅವರೇ ದೆಹಲಿಗೆ ಕರೆಸಿಕೊಂಡಿದ್ದರಂತೆ. ನಾವು ಕುಳಿತ ವಿಶಾಲವಾದ ಹಜಾರದಲ್ಲಿ ಒಂದು ಕಾಲಕ್ಕೆ ಸಿ. ರಾಜಗೋಪಾಲಾಚಾರಿ,
ಡಾ. ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣರಂಥ ಉದಾತ್ತ ಚಿಂತನೆಯ ಅಪ್ರತಿಮ ರಾಷ್ಟ್ರ ನಾಯಕರು ಕುಳಿತು ಚರ್ಚಿಸುತ್ತಿದ್ದರೆಂದು ಕೇಳಿಯೇ ರೋಮಾಂಚನಗೊಂಡಿದ್ದೆ.

ಇದೆಲ್ಲ ಏಕೆ ನೆನಪಾಗುತ್ತಿದೆಯೆಂದರೆ ಪಂಡಿತ್ ನೆಹರೂ ಹದಿನೇಳು ವರ್ಷಗಳ ಕಾಲ ವಾಸಿಸಿದ್ದ ತೀನ್ಮೂರ್ತಿ ಭವನ್, ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ (NMML) ಮೇಲೆ ಆಳುವ ಪ್ರಭುತ್ವದ ಕಣ್ಣುಬಿದ್ದಿದೆ. ಎನ್ಎಂಎಂಎಲ್ನ ನಿರ್ದೇಶಕ ಶಕ್ತಿ ಸಿನ್ಹಾ ಅವರು ತೀನ್ಮೂರ್ತಿ ಸಂಕೀರ್ಣವನ್ನು ದೇಶದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲು ನೀಲನಕ್ಷೆ ಸಿದ್ಧಪಡಿಸಿದ್ದಾರೆ.

ಅದಕ್ಕೆ ತಗಲುವ ವೆಚ್ಚವೂ ಮಾನ್ಯವಾಗಿದೆ. ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿರುವ ಪ್ರಧಾನಮಂತ್ರಿಯ ಎಲ್ಲಾ ದಾಖಲೆಗಳನ್ನು ಹಿಂತಿರುಗಿಸಲು ಸೋನಿಯಾ ಗಾಂಧಿಯವರನ್ನು ಒತ್ತಾಯಿಸಲಾಗುತ್ತಿದೆ.

ಅಷ್ಟಕ್ಕೂ ನೆಹರೂ ಮೇಲೆ ಯಾಕಿಷ್ಟು ದ್ವೇಷ? ರಾಜಸ್ಥಾನದಲ್ಲಿ ಶಾಲಾ ಪಠ್ಯಪುಸ್ತಕದ ಇತಿಹಾಸದ ಪುಟಗಳಿಂದಲೂ ಜವಾಹರಲಾಲ್ ನೆಹರೂ ಅವರ ಹೆಸರನ್ನು ಅಳಿಸಲಾಗಿದೆ. ದೇಶದ ಮೊದಲ ಪ್ರಧಾನಿ ಯಾರು ಎಂಬುದರ ಬಗ್ಗೆ ಪುಸ್ತಕದಲ್ಲಿ ಯಾವುದೇ ಉಲ್ಲೇಖವಿಲ್ಲವಂತೆ. ಅವರ ಕೊಡುಗೆಯನ್ನು ಮರೆಮಾಚಿ, ಇತಿಹಾಸವನ್ನು ತಿರುಚಿ ಸುಳ್ಳು ವದಂತಿಗಳನ್ನು ಹಬ್ಬಿಸಿ ಮಸಿ ಬಳಿಯುವ ಹೇಯಕೃತ್ಯವನ್ನು ಸಂಘಪರಿವಾರ ಮಾಡುತ್ತಲೇ ಇದೆ. ಜನಮಾನಸದಲ್ಲಿ ನೆಹರೂ ಒಬ್ಬ ಹೆಣ್ಣುಬಾಕ, ಸ್ವಾರ್ಥಿ ಎಂದೆಲ್ಲ ಕೀಳಾಗಿ ಚಿತ್ರಿಸಿ ನೆಹರೂ ಪರಂಪರೆಯನ್ನು ಅಳಿಸಿಹಾಕುವುದೇ ಅದರ ಗುರಿಯಾಗಿದೆ.

‘ಭಾರತಕ್ಕೆ ಅಪಾಯವಿರುವುದು ಕಮ್ಯುನಿಸಂನಿಂದ ಅಲ್ಲ, ಬಲಪಂಥೀಯ ಕೋಮುವಾದದಿಂದ’ ಎಂದಿದ್ದ ನೆಹರೂ ಅವರು ಗಾಂಧಿ ಹತ್ಯೆಯ ನಂತರ ಗೃಹಸಚಿವ ಪಟೇಲರ ಸಲಹೆಯಂತೆ ಆರೆಸ್ಸೆಸ್ಸನ್ನು ನಿಷೇಧಿಸಿದ್ದರು. ವಿಜ್ಞಾನ ತಂತ್ರಜ್ಞಾನ, ಪೊಲಿಟಿಕಲ್ ಫಿಲಾಸಫಿ, ದೂರದೃಷ್ಟಿಯಿಂದಾಗಿ ನೆಹರೂ ‘ಆಧುನಿಕ ಭಾರತದ ನಿರ್ಮಾತೃ’ ಎಂದು ಗೌರವಿಸಲ್ಪಡುತ್ತಾರೆ. 1950ರಲ್ಲಿ ಹಿಂದೂ ಕಾನೂನು ಸುಧಾರಣೆಯನ್ನು ಜಾರಿಗೆ ತಂದ, ಕೋಮುವಾದವನ್ನು ತೀವ್ರವಾಗಿ ವಿರೋಧಿಸುತ್ತಿದ್ದ ನೆಹರೂ ಬಗ್ಗೆ ಸಂಘಪರಿವಾರಕ್ಕೆ ಮೈಯೆಲ್ಲ ನಂಜು! ಫ್ಯಾಸಿಸ್ಟ್ ಶಕ್ತಿಗಳು ಈಗ ನೆಹರೂ ಸ್ಮಾರಕದ ಮೇಲೆ ಮುಗಿಬಿದ್ದಿವೆ.

ಆಗಸ್ಟ್ ತಿಂಗಳಲ್ಲಿ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದರು. ಐತಿಹಾಸಿಕ ಆಸ್ತಿಯಾಗಿರುವ ತೀನ್ಮೂರ್ತಿ ಕಾಂಪ್ಲೆಕ್ಸ್ನ ಸ್ವರೂಪವನ್ನು ಯಾವ ಕಾರಣಕ್ಕೂ ಬದಲಿಸದೇ ಅದರ ಪಾಡಿಗೆ ಅದನ್ನು ಬಿಟ್ಟುಬಿಡುವಂತೆ ನಿವೇದಿಸಿಕೊಂಡಿದ್ದರು.

ಭಾರತ ಇತಿಹಾಸದ ಸಂಶೋಧನಾ ಕೇಂದ್ರವಾಗಿ ಎನ್ಎಂಎಂಎಲ್ ಶೈಕ್ಷಣಿಕ ಸಂಶೋಧಕರಿಗೆ ಸಂಶೋಧನಾ ಫೆಲೋಶಿಪ್ ಫಂಡ್ ಮತ್ತು ವಿದ್ಯಾರ್ಥಿವೇತನವನ್ನು ನೀಡುತ್ತದೆ. ಹಲವಾರು ವಾರ್ಷಿಕ ಉಪನ್ಯಾಸಗಳನ್ನು ನಡೆಸಲಾಗಿದೆ ಮತ್ತು ಸ್ಮಾರಕ ಕಾರ್ಯಗಳನ್ನು ಆಯೋಜಿಸಲಾಗುತ್ತಿದೆ. ಅನೇಕ ಸಂಶೋಧಕರು ಬರೆದ ಚರಿತ್ರೆ ಹಾಗೂ ಸಂಗ್ರಹಿಸಿದ ಸಂಶೋಧನಾ ವಸ್ತುಗಳನ್ನು ಇಲ್ಲಿ ಇಡಲಾಗಿದೆ. ಕೆಲ ವರ್ಷಗಳ ಹಿಂದೆ ನಡೆದ ಒಂದು ವಿಚಾರ ಸಂಕಿರಣಕ್ಕೆ ಬಂದಿದ್ದ ಪ್ರೊ.ರಹಮತ್ ತರೀಕೆರೆ ಅವರ ಮಾತುಗಳನ್ನು ನಾನೂ ಆ ಭವ್ಯ ಸೆಮಿನಾರ್ ಹಾಲಿನಲ್ಲಿ ಕೂತು ಆಲಿಸಿದ್ದೇನೆ.

ಒಮ್ಮೆ ಪಂಡಿತ ನೆಹರೂ ಅವರ ಹುಟ್ಟುಹಬ್ಬದಂದು ಶಾಸ್ತ್ರಿ ದಂಪತಿ ಮಕ್ಕಳೊಂದಿಗೆ ನೆಹರೂಗಾಗಿ ಕಮಲದ ಹೂವನ್ನು ತೆಗೆದುಕೊಂಡು ಹೋಗಿದ್ದರಂತೆ. ಅವರನ್ನು ಪ್ರೀತಿಯಿಂದ ಬರಮಾಡಿಕೊಂಡ ನೆಹರೂ, ವಿಜಯಲಕ್ಷ್ಮೀ ಅವರಿಗೆ– ‘ಹೂವು ಎಷ್ಟು ಚೆಂದವಿದೆ ನೋಡು... ನೀರಲ್ಲಿ ಹಾಕಿಡು’ ಅಂತ ಕೊಟ್ಟರಂತೆ. ವಿಜಯಲಕ್ಷ್ಮಿ ಪಂಡಿತ್ ಅಣ್ಣನ ಆಜ್ಞೆಯಂತೆ ತಕ್ಷಣವೇ ಹೂದಾನಿ ತಂದು ಕಮಲದ ಹೂವನ್ನು ಸಿಂಗರಿಸಿಟ್ಟರಂತೆ!

ಬೇಸಿಗೆಗೆ ನೆಹರೂ ವರಾಂಡದಲ್ಲೇ ಮಲಗುತ್ತಿದ್ದರು. ಈಗಿನ ಪಾಲಿಕಾ ಬಜಾರ್ ಇದ್ದ ಜಾಗೆಯಲ್ಲಿ ಅವರ ‘ಭಾರತ ಸೇವಕ ಸಮಾಜ’ದ ಕಚೇರಿಯಿರುತ್ತಿತ್ತು. ಅಲ್ಲಿಗೆ ಕಾಲುನಡಿಗೆಯಲ್ಲಿಯೇ ಬಂದು ಹೋಗುತ್ತಿದ್ದರಂತೆ. ಗುಲ್ಜಾರಿ ಲಾಲ್ ನಂದಾ ಅವರು ಭಾರತ ಸೇವಕ ಸಮಾಜದ ಅಧ್ಯಕ್ಷರಾಗಿದ್ದರು ಆಗ. ಹೀಗೆ ಆಗಿನ ಜನನಾಯಕರಿಗೆ ಯಾವ ಭದ್ರತಾ ಸಿಬ್ಬಂದಿಯ ಅಗತ್ಯವಿದ್ದಿಲ್ಲ. ‘ಜನ ಲಕ್ಷಾಧೀಶರಿದ್ದರು, ಈಗಿನಂತೆ ಕೋಟ್ಯಧೀಶರಿದ್ದಿಲ್ಲ, ನೀತಿವಂತರಾಗಿದ್ದರು, ಕರ್ತವ್ಯನಿಷ್ಠರಾಗಿದ್ದರು, ಈಗಿನಂತೆ ಭ್ರಷ್ಟರಾಗಿರಲಿಲ್ಲ’ ಎಂದು ಆಕ್ರೋಶದಿಂದ ನುಡಿದಿದ್ದರು ಸಾವಿತ್ರಿ ಶಾಸ್ತ್ರಿ.

ತೀನ್ಮೂರ್ತಿ ಭವನದ ಎದುರು ಬ್ರಿಟಿಷ್ ಕೃತಿಕಾರ ಲಿಯೊನಾರ್ಡ್ ಜೆನ್ನಿಂಗ್ಸ್ ಎಂಬ ಶಿಲ್ಪಿ ನಿರ್ಮಿಸಿದ ಸ್ಮಾರಕ
ಮೂರ್ತಿಗಳಿವೆ. ಅಂದಿನ ಮೂರು ಸಂಸ್ಥಾನಗಳಾದ ಜೋಧಪುರ್, ಹೈದರಾಬಾದ್ ಮತ್ತು ಮೈಸೂರಿನಿಂದ ಈ ಯೋಧರನ್ನು ಬ್ರಿಟಿಷ್ ಇಂಡಿಯಾ ಸೇನೆ ತನ್ನ ಪರವಾಗಿ ಮೊದಲನೇ ಮಹಾಯುದ್ಧದಲ್ಲಿ ಹೋರಾಡಲು ಕಳಿಸಿತ್ತು. ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಲೈಬ್ರರಿ ಸಂಕೀರ್ಣದಲ್ಲಿ ಎಲ್ಲಾ ಮಾಜಿ ಪ್ರಧಾನಿಗಳ ವಸ್ತು ವಿವರಗಳನ್ನು ಸೇರಿಸುವ ಕಲ್ಪನೆಯನ್ನು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕರಣ್ ಸಿಂಗ್ ಮತ್ತು ಜೈರಾಮ್ ರಮೇಶ್, ಇತಿಹಾಸಕಾರ ನಯನ್ಜೋತ್ ಲಹಿರಿ ಮತ್ತು ಅರ್ಥಶಾಸ್ತ್ರಜ್ಞ ನಿತಿನ್ ದೇಸಾಯಿ ತೀವ್ರವಾಗಿ ಖಂಡಿಸಿದ್ದಾರೆ.

ವೈಜ್ಞಾನಿಕ ಚಿಂತನೆ ಹಾಗೂ ವೈಚಾರಿಕ ಮನೋಭಾವವನ್ನು ಭಾರತೀಯರು ಬೆಳೆಸಿಕೊಳ್ಳಲು ಆಗ್ರಹಿಸುತ್ತಿದ್ದ ಮಹಾನ್ ಚಿಂತಕ ನೆಹರೂ ಬರೀ ಕಾಂಗ್ರೆಸ್ಸಿನ ಆಸ್ತಿಯಲ್ಲ. ದೇಶದ ಆಸ್ತಿ. ರಾಷ್ಟ್ರೀಯತೆ ಮತ್ತು ಬಹುತ್ವದ ಅನನ್ಯತೆಯೇ ಭಾರತದ ಜೀವಾಳ. ಈ ಕನಸನ್ನು ಬಿತ್ತಿ ಬೆಳೆದ ಎಲ್ಲ ರಾಷ್ಟ್ರನಾಯಕರೂ ನೆಹರೂ ಯುಗದಕಳ್ಳುಬಳ್ಳಿಗಳೇ!

ನನಗೆ ಎಷ್ಟೆಲ್ಲ ಕಥೆ ಹೇಳುತ್ತಿದ್ದ ಸಾವಿತ್ರಿ ಶಾಸ್ತ್ರಿ ಇವತ್ತು ಮರೆವಿನ ರೋಗಕ್ಕೆ ಬಲಿಯಾಗಿ ಮಗುವಿನಂತಾಗಿದ್ದಾರೆ. ಇತ್ತೀಚೆಗೆ ಆಸ್ಪತ್ರೆಯ ಐಸಿಯುವಿನಲ್ಲಿದ್ದ ಅವರನ್ನು ವೈದ್ಯರು ಕೈಸೋತು ಮನೆಗೆ ಕಳಿಸಿದ್ದಾರೆ. ಈಗ ಅವರಿಗೆ ಹೇಗೆ ಹೇಳಲಿ ಇಂದಿನ ನೆಹರೂ ಮನೆಯ ಕಥೆಯನ್ನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.