ಶನಿವಾರ, ಆಗಸ್ಟ್ 8, 2020
24 °C
ಕ್ಯಾನ್ಸರ್‌ ಜೀವಕೋಶಗಳನ್ನು ನಿಖರವಾಗಿ ನಾಶಪಡಿಸುವ ಆಧುನಿಕ ಯಂತ್ರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಳವಡಿಕೆ

ವಿಕಿರಣ ಚಿಕಿತ್ಸೆಗೆ ಲೀನಿಯರ್‌ ಆಕ್ಸಿಲರೇಟರ್‌ ಯಂತ್ರ

ಎನ್‌. ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ವಿಕಿರಣ ಚಿಕಿತ್ಸೆಗೆ ಲೀನಿಯರ್‌ ಆಕ್ಸಿಲರೇಟರ್‌ ಯಂತ್ರ

ಬೆಂಗಳೂರು: ಕ್ಯಾನ್ಸರ್‌ ರೋಗಿಗಳ ಹಾನಿಯಾದ ಭಾಗಕಷ್ಟೇ ವಿಕಿರಣವನ್ನು ಹಾಯಿಸುವ ಹಾಗೂ ಕ್ಯಾನ್ಸರ್‌ ಜೀವಕೋಶಗಳನ್ನು ನಿಖರವಾಗಿ ನಾಶಪಡಿಸುವ ‘ಲೀನಿಯರ್‌ ಆಕ್ಸಿಲರೇಟರ್‌’ ಯಂತ್ರಗಳ  ಖರೀದಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಮುಂದಾಗಿದೆ.

‘ಲೀನಿಯರ್‌ ಆಕ್ಸಿಲರೇಟರ್‌’ ಯಂತ್ರಗಳ (ವಿಕಿರಣವನ್ನು ಒದಗಿಸಲು ಬಳಸುವ ಯಂತ್ರ) ಅಳವಡಿಕೆಗೆಂದೇ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.

‘ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ₹120 ಕೋಟಿ ಅನುದಾನದಲ್ಲಿ ನಾಲ್ಕು ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಒಂದು ಯಂತ್ರಕ್ಕೆ ₹17 ಕೋಟಿ ವೆಚ್ಚವಾಗಲಿದೆ. ಈ ಯಂತ್ರಗಳನ್ನು ಅಮೆರಿಕದ ‘ಎಲೆಕ್ಟಾ’ ಕಂಪೆನಿ ಉತ್ಪಾದಿಸಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಕೆ.ಬಿ. ಲಿಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಿದ್ವಾಯಿ ಸಂಸ್ಥೆಯಲ್ಲಿ ಪ್ರತಿದಿನ 350–400 ರೋಗಿಗಳಿಗೆ ವಿಕಿರಣ ಚಿಕಿತ್ಸೆ (ರೇಡಿಯೊಥೆರಪಿ) ನೀಡಲಾಗುತ್ತಿದೆ. ಆದರೆ, ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ವಿಕಿರಣ ಚಿಕಿತ್ಸೆ ಮಾಡಿಸಿಕೊಳ್ಳಲು 3–4 ನಾಲ್ಕು ವಾರಗಳವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ತ್ವರಿತಗತಿಯಲ್ಲಿ ಚಿಕಿತ್ಸೆ  ನೀಡುವ ಉದ್ದೇಶದಿಂದ ಅತ್ಯಾಧುನಿಕ ಯಂತ್ರಗಳನ್ನು ಖರೀದಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಸುರಕ್ಷತಾ ಕ್ರಮಗಳು ಅಗತ್ಯ: ‘ಲೀನಿಯರ್‌ ಆಕ್ಸಿಲರೇಟರ್‌ ಯಂತ್ರಗಳನ್ನು ಪ್ರತ್ಯೇಕ  ಕೊಠಡಿಗಳಲ್ಲೇ ಅಳವಡಿಸಬೇಕು. ವಿಕಿರಣ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವಿಕಿರಣಗಳು ಹೊರಗೆ ಹೋಗದಂತೆ ತಡೆಗಟ್ಟಬೇಕು. ಇದಕ್ಕಾಗಿ ಎರಡು ಮೀಟರ್‌ ದಪ್ಪವಿರುವ ಗೋಡೆಗಳನ್ನು ನಿರ್ಮಿಸಲಾಗುತ್ತದೆ.  ಜತೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕಟ್ಟಡ ನಿರ್ಮಾಣ, ಯಂತ್ರಗಳ ಅಳವಡಿಕೆಯ ಮೇಲುಸ್ತುವಾರಿಯನ್ನು ಎಲೆಕ್ಟಾ ಕಂಪೆನಿಯವರೇ ನೋಡಿಕೊಳ್ಳಲಿದ್ದಾರೆ’ ಎಂದು ಸಂಸ್ಥೆಯ ರೇಡಿಯೇಷನ್‌ ಆಂಕಾಲಜಿಸ್ಟ್‌ ಡಾ.ಜಗನ್ನಾಥ್‌ ತಿಳಿಸಿದರು.

‘ಕಟ್ಟಡ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದ ಬಳಿಕವಷ್ಟೇ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಈಗ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಐದಾರು ತಿಂಗಳಲ್ಲಿ ಮುಗಿಯಲಿದೆ. ಈ ವೇಳೆಗಾಗಲೇ ಯಂತ್ರಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತದೆ’ ಎಂದು ಹೇಳಿದರು.

ಮತ್ತೊಂದು ಯಂತ್ರ  ಖರೀದಿ: ‘ಸಂಸ್ಥೆಯಲ್ಲಿ ಈಗಾಗಲೇ ಎರಡು ಲೀನಿಯರ್‌ ಆಕ್ಸಿಲರೇಟರ್‌ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವು ಹಳೆಯದಾಗಿವೆ. ಅಲ್ಲದೆ, ಆಸ್ಪತ್ರೆಗೆ ರೋಗಿಗಳ ಬೇಡಿಕೆಗೆ ಅನುಗುಣವಾಗಿ ವಿಕಿರಣ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದಕ್ಕಿಂತ ಸುಧಾರಿತ ಯಂತ್ರವೊಂದನ್ನು ಈಗಾಗಲೇ ಅಳವಡಿಸಲಾಗಿದೆ. ಇದಕ್ಕೆ ₹5.5 ಕೋಟಿ ವೆಚ್ಚವಾಗಿದ್ದು, ಕಿದ್ವಾಯಿ ಸಂಸ್ಥೆಯೇ ಭರಿಸಿದೆ. ಇದು ತಿಂಗಳೊಳಗೆ ಕಾರ್ಯಾರಂಭ ಮಾಡಲಿದೆ’ ಎಂದು ಡಾ.ಜಗನ್ನಾಥ್‌ ಹೇಳಿದರು.

ಎಚ್‌ಡಿಆರ್‌, ಸಿ.ಟಿ ಸ್ಕ್ಯಾನ್‌ ಯಂತ್ರಗಳ ಖರೀದಿ

‘ಲೀನಿಯರ್‌ ಆಕ್ಸಿಲರೇಟರ್‌ ಯಂತ್ರಗಳ ಜತೆಗೆ ತಲಾ ಎರಡು ಎಚ್‌ಡಿಆರ್‌ (ಹೈ-ಡೋಸ್‌ ರೇಡಿಯೊಥೆರಪಿ) ಹಾಗೂ ಸಿ.ಟಿ. ಸ್ಕ್ಯಾನ್‌ ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಎಚ್‌ಡಿಆರ್‌ ಯಂತ್ರದ ಮೂಲಕ ಬ್ರಾಕಿಥೆರಪಿ ನೀಡಬಹುದು. ಎಚ್‌ಡಿಆರ್‌ ಯಂತ್ರವೊಂದಕ್ಕೆ ₹3 ಕೋಟಿ ಹಾಗೂ ಸಿ.ಟಿ. ಸ್ಕ್ಯಾನ್‌ ಯಂತ್ರವೊಂದಕ್ಕೆ ₹3–4 ಕೋಟಿ ವೆಚ್ಚವಾಗಲಿದೆ’ ಎಂದು ಡಾ.ಜಗನ್ನಾಥ್‌ ತಿಳಿಸಿದರು.

‘ಬ್ರಾಕಿಥೆರಪಿಯಲ್ಲಿ ವಿಕಿರಣಶೀಲ ವಸ್ತುಗಳನ್ನು ರೋಗಿಯ ದೇಹಕ್ಕೆ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತದೆ. ಉದಾಹರಣೆಗೆ ಅನ್ನನಾಳ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ರೋಗಿಗೆ ವಿಕಿರಣಚಿಕಿತ್ಸೆ ನೀಡಲಾಗಿರುತ್ತದೆ. ಆದರೂ ಕೆಲ ಕ್ಯಾನ್ಸರ್‌ ಜೀವಕೋಶಗಳು ಉಳಿದುಕೊಂಡಿರುತ್ತವೆ. ಈ ವೇಳೆ ರೋಗಿಯ ಬಾಯಿಗೆ ಕೊಳವೆ ಹಾಕಿ ಹಾನಿಯಾದ ಭಾಗಕ್ಕೆ ನೇರವಾಗಿ ವಿಕಿರಣಗಳನ್ನು ಹಾಯಿಸಿ ಚಿಕಿತ್ಸೆ ನೀಡಲಾಗುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.