ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿ ಸಲಗ, ಮದ ಏರದಿದ್ದರೆ ವಿಶ್ವಕ್ಕೆ ಕೆಡುಕಿಲ್ಲ

Last Updated 9 ನವೆಂಬರ್ 2016, 20:15 IST
ಅಕ್ಷರ ಗಾತ್ರ

ಜಗತ್ತಿನ ಕುತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಂತೂ ಮುಗಿದಿದೆ. ಫಲಿತಾಂಶದ ಬಗ್ಗೆ ಅಮೆರಿಕನ್ನರು ವಿವಿಧ ರೀತಿಪ್ರತಿಕ್ರಿಯಿಸುತ್ತಿದ್ದಾರೆ. ಟ್ರಂಪ್ ಬೆಂಬಲಿಗರಲ್ಲಿ ಹರ್ಷವಿದೆ, ಹಿಲರಿ ಕ್ಲಿಂಟನ್ ಪರ ಇದ್ದವರು ಕಳೆಗುಂದಿದ್ದಾರೆ. ಪತ್ರಕರ್ತರ, ರಾಜಕೀಯ ಪಂಡಿತರ ಧ್ವನಿ ಮೆತ್ತಗಾಗಿದೆ. ಅಮೆರಿಕದ ಬುದ್ದಿಜೀವಿಗಳು ಸರ್ವಾಧಿಕಾರ, ನಿರಂಕುಶ ಪ್ರಭುತ್ವ ಎಂದೆಲ್ಲಾ ಆತಂಕಗೊಂಡಿದ್ದಾರೆ. ಆದರೆ ಮತದಾರರ ದೊಡ್ಡ ವರ್ಗವೊಂದು ತಡರಾತ್ರಿ ಕುತೂಹಲದಿಂದ ಫಲಿತಾಂಶ ವೀಕ್ಷಿಸಿ, ಎಂದಿನಂತೆ ನಿದ್ದೆ ತೆಗೆದು, ಮುಂಜಾನೆ ತಮ್ಮ ತಮ್ಮ ಕೆಲಸಗಳಲ್ಲಿ ನಿರತವಾಗಿದೆ. ಬಹುಶಃ ಟ್ರಂಪ್ ಗೆಲುವಿಗೆ ಕಾರಣವಾಗಿದ್ದೂ ಇದೇ ವರ್ಗ.

ಬಿಡಿ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಎಂದರೆ ಅದು ಕೇವಲ ಅಧ್ಯಕ್ಷರನ್ನು ಆರಿಸುವ ಪ್ರಕ್ರಿಯೆಯಲ್ಲ. ಒಂದು ರಾಷ್ಟ್ರವಾಗಿ ತನ್ನ ಧ್ಯೇಯವೇನು, ಗುರಿಯೇನು, ಆ ನಿಟ್ಟಿನಲ್ಲಿ ರಾಷ್ಟ್ರ ಸಾಗುತ್ತಿದೆಯೇ, ಇಲ್ಲವಾದರೆ ಸರಿದಾರಿಗೆ ತರುವ ಬಗೆ ಹೇಗೆ ಎಂಬ ವಿಷಯಗಳನ್ನು ಮಥಿಸುವ ರಾಷ್ಟ್ರೀಯ ವೇದಿಕೆ. ಆದರೆ ಈ ಪ್ರಕ್ರಿಯೆ, ಪ್ರಸಕ್ತ ಚುನಾವಣೆಯಲ್ಲಿ ಕೊಂಚ ಹಾದಿ ತಪ್ಪಿದ್ದಂತೂ ನಿಜ. ಚುನಾವಣಾ ಪ್ರಕ್ರಿಯೆಯಲ್ಲಿ ಬಳಕೆಯಾದ ವೈಯಕ್ತಿಕ ನೆಲೆಯ ಟೀಕೆ, ಅಸಭ್ಯ, ಅಶ್ಲೀಲ ಮಾತುಗಳು ಅಮೆರಿಕದ ಅಧ್ಯಕ್ಷೀಯ ಚುನಾವಣೆಗಿದ್ದ ಗಾಂಭೀರ್ಯವನ್ನು ಮುಕ್ಕುಮಾಡಿದ್ದವು. ಚುನಾವಣೆ ಮುಗಿದರೆ ಸಾಕು ಎಂಬ ಭಾವನೆಯನ್ನು ಜನರಲ್ಲೂ ಹುಟ್ಟುಹಾಕಿತ್ತು.

ಟ್ರಂಪ್ ಅವರ ಅಚ್ಚರಿಯ ಗೆಲುವಿಗೆ ಕಾರಣ ಹುಡುಕಹೊರಟರೆ, ಹಲವು ಸಂಗತಿಗಳು ಗೋಚರಿಸುತ್ತವೆ. ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರು ಎರಡನೆ ಅವಧಿಗೆ ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಿದಾಗ, ಆ ಚುನಾವಣೆಯ ಫಲಿತಾಂಶ ಮೊದಲ ಅವಧಿಯ ಆಡಳಿತಕ್ಕೆ ಜನರ ತೀರ್ಪು ಎಂದು ಪರಿಗಣಿಸಲಾಗುತ್ತದೆ. ಆದರೆ ಹೊಸ ಅಭ್ಯರ್ಥಿಗಳು ಕಣಕ್ಕಿಳಿದಾಗ, ಹಿಂದಿನ ಅಧ್ಯಕ್ಷರು ಏನು ಮಾಡಿದ್ದರು ಎನ್ನುವುದು ಮುಖ್ಯವಾಗುತ್ತದೆ. ಕೆಲವೊಮ್ಮೆ ಅಭ್ಯರ್ಥಿಗಳು, ಹಿಂದಿನ ಅಧ್ಯಕ್ಷರಿಂದ ಪೂರ್ತಿ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಒಂದೊಮ್ಮೆ ನಿಕಟಪೂರ್ವ ಅಧ್ಯಕ್ಷರ ಜನಮನ್ನಣಾ ಕ್ರಮಾಂಕ ಹೆಚ್ಚಿದ್ದರೆ ಅವರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ.

ಈ ಹಿಂದೆ 2000ರ ಚುನಾವಣೆಯಲ್ಲಿ ಅಲ್ ಗೋರ್ ‘ನಾವು ಹೊಸ ಅಧ್ಯಕ್ಷರನ್ನು ಆರಿಸುವ ಪ್ರಕ್ರಿಯೆಯಲ್ಲಿದ್ದೇವೆ ಎನ್ನುವುದು ನೆನಪಿರಲಿ. ನಾನು ಸ್ವಂತ ವ್ಯಕ್ತಿತ್ವ ಹೊಂದಿದ್ದೇನೆ’ ಎನ್ನುವ ಮೂಲಕ ತಮ್ಮ ಸ್ಪರ್ಧೆಯನ್ನು ಬಿಲ್ ಕ್ಲಿಂಟನ್ ಅವರ ಮೂರನೇ ಅವಧಿ ಎಂದು ಪರಿಗಣಿಸಬೇಡಿ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದರು. 2008ರಲ್ಲಿ ಜಾನ್ ಮೆಕೇನ್, ಜಾರ್ಜ್ ಬುಷ್ ಅವರೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಟ್ಟಿರಲಿಲ್ಲ. ಆದರೆ ಈ ಬಾರಿ ಹಿಲರಿ, ಬರಾಕ್ ಒಬಾಮ ಅವರೊಂದಿಗೆ ಹೆಚ್ಚೇ ಗುರುತಿಸಿಕೊಂಡರು. ಹಿಲರಿ ಗೆದ್ದರೆ ಅದು ಒಬಾಮ ಅವರ ಮೂರನೆಯ ಅವಧಿ ಎಂದು ಪರಿಗಣಿಸಬೇಕೆ ಎಂಬ ಪ್ರಶ್ನೆಯೂ ಎದ್ದಿತ್ತು. ಹಾಗಾಗಿ ಒಬಾಮ ಆಡಳಿತವನ್ನೂ ಚುನಾವಣಾ ಫಲಿತಾಂಶ ತಕ್ಕಡಿಯಲ್ಲಿ ಹಾಕಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣಾ ಇತಿಹಾಸ ಗಮನಿಸಿದರೆ, 3ನೇ ಅವಧಿಗೆ ಪಕ್ಷವೊಂದು ಅಧಿಕಾರ ಹಿಡಿದದ್ದು ವಿರಳ. ಕಾರಣ, ಅಧಿಕಾರದಲ್ಲಿರುವ ಪಕ್ಷಕ್ಕೆ ತೊಡಕಾಗುವ ಸಂಗತಿಗಳು ಹಲವು ಇರುತ್ತವೆ. ದೇಶದ ಆರ್ಥಿಕತೆ ಕುಸಿಯುತ್ತಿದ್ದರೆ, ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದರೆ, ಯೋಜನೆಗಳು ವೈಫಲ್ಯ ಕಂಡಿದ್ದರೆ ಅವು ಆಡಳಿತ ಪಕ್ಷಕ್ಕೆ ಮಾರಕವಾಗುತ್ತವೆ. 1980ರಲ್ಲಿ ಜಿಮ್ಮಿ ಕಾರ್ಟರ್ ಅವರ ಪುನರಾಯ್ಕೆಗೆ ಆರ್ಥಿಕ ಕುಸಿತ, ಹೆಚ್ಚುತ್ತಿದ್ದ ನಿರುದ್ಯೋಗ ಅಡ್ಡ ಬಂದಿದ್ದವು. ಹೊಸ ಭರವಸೆ ಭಿತ್ತಿ ರೇಗನ್ ಆಯ್ಕೆಯಾಗಿದ್ದರು. ನಂತರದ ಚುನಾವಣೆಗಳಲ್ಲೂ ಆರ್ಥಿಕತೆ, ನಿರುದ್ಯೋಗ, ಭ್ರಷ್ಟಾಚಾರ, ಧಾರ್ಮಿಕ ನಿಲುವುಗಳು ಮುಖ್ಯ ಸಂಗತಿಗಳಾದವು. 2001ರ 9/11 ಘಟನೆಯ ನಂತರ ಭಯೋತ್ಪಾದನೆ, ದೇಶದ ಭದ್ರತೆಯ ಪ್ರಶ್ನೆ ಚುನಾವಣಾ ವಿಷಯವಾಗಿ ಸೇರ್ಪಡೆಯಾಯಿತು. ಬುಷ್ ಅದನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. 2008ರಲ್ಲಿ ಆರ್ಥಿಕ ಕುಸಿತ, ಆಫ್ರಿಕನ್ ಅಮೆರಿಕನ್ ಎನ್ನುವ ಅಂಶಗಳು ಒಬಾಮ ನೆರವಿಗೆ ಬಂದವು.

ಈ ಚುನಾವಣೆಯಲ್ಲಿ ಮುಖ್ಯ ಎನಿಸಿದ ವಿಷಯಗಳು, ಆರ್ಥಿಕತೆ, ಆಡಳಿತದ ಭ್ರಷ್ಟಾಚಾರ, ವಲಸೆ ನೀತಿ, ಭಯೋತ್ಪಾದನೆ, ಒಬಾಮ ಆಡಳಿತದ ಯೋಜನೆಗಳು ಮತ್ತು ಅಭ್ಯರ್ಥಿಗಳ ವಿಶ್ವಾಸಾರ್ಹತೆ ಹಾಗೂ ನಡವಳಿಕೆ. ಚುನಾವಣೋತ್ತರ ಸಮೀಕ್ಷೆಗಳು ಮತದಾರ ಯಾವುದಕ್ಕೆ ಎಷ್ಟು ಮನ್ನಣೆ ನೀಡಿದ್ದಾನೆ ಎಂಬುದನ್ನು ಹೇಳಿವೆ. ಅವುಗಳ ಪ್ರಕಾರ ಅಮೆರಿಕ ಸರಿದಾರಿಯಲ್ಲಿ ಸಾಗುತ್ತಿಲ್ಲ ಎಂದವರು ಶೇಕಡ 91ರಷ್ಟು ಮಂದಿ, ಉಳಿದಂತೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಬಗ್ಗೆ ಶೇಕಡ 77ರಷ್ಟು ಜನ ಕಳವಳ ವ್ಯಕ್ತ ಪಡಿಸಿದ್ದರೆ, ಆರ್ಥಿಕ ಹಿಂಜರಿತ, ನಿರುದ್ಯೋಗ ಶೇಕಡ 57ರಷ್ಟು ಮತದಾರರ ಮೇಲೆ ಪರಿಣಾಮ ಬೀರಿದೆ. ಬದಲಾವಣೆ ಬೇಕು ಎಂದವರೇ ಬಹುತೇಕರಿದ್ದಾರೆ.

ಡೊನಾಲ್ಡ್ ಟ್ರಂಪ್ ಈ ವಿಷಯಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಆಡಳಿತದ ಭ್ರಷ್ಟಾಚಾರದ ಬಗ್ಗೆ ಪ್ರತಿ ಸಾರ್ವಜನಿಕ ಸಭೆಯಲ್ಲೂ ಮಾತನಾಡಿದರು. ‘Drain the swamp’ ಎನ್ನುವ ಘೋಷಣೆ ಮೋಡಿ ಮಾಡಿತು. ಜೊತೆಗೆ ಕಳೆದ 8 ವರ್ಷಗಳ ಒಬಾಮ ಆಡಳಿತ, ಪಾರದರ್ಶಕವಾಗಿಲ್ಲ ಎಂಬ ಅಭಿಪ್ರಾಯವಿದೆ. ಅದು ಹಿಲರಿ ಅವರಿಗೆ ದುಬಾರಿ ಎನಿಸಿತು. ಮಿಗಿಲಾಗಿ, ಸವಕಲುಗೊಂಡ ಆರ್ಥಿಕತೆ ಮತ್ತು ವಲಸೆ ನೀತಿಯ ಬಗ್ಗೆ ಟ್ರಂಪ್ ತಳೆದ ಕಠಿಣ ನಿಲುವು ಅವರಿಗೆ ಹೆಚ್ಚು ಮತಗಳನ್ನು ತಂದುಕೊಟ್ಟವು.

ಅಮೆರಿಕದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಹಲವು ಉದ್ದಿಮೆಗಳು ದಿವಾಳಿ ಅಂಚಿನಲ್ಲಿವೆ, ಸಾಕಷ್ಟು ಕೈಗಾರಿಕೆಗಳು ಈಗಾಗಲೇ ಬಾಗಿಲು ಮುಚ್ಚಿವೆ, ಉದ್ಯೋಗ ನಷ್ಟದಿಂದಾಗಿ ಜನ ಇತರ ರಾಜ್ಯಗಳತ್ತ ನಡೆಯುತ್ತಿದ್ದಾರೆ. ಅದನ್ನು ಅಮೆರಿಕದ ಕಿಲುಬು ಪಟ್ಟಿ (Rust Belt) ಎಂದು ಕರೆಯಲಾಗುತ್ತದೆ. ಓಹಿಯೊ, ಮಿಷಿಗನ್, ಪೆನ್ಸಿಲ್ವೇನಿಯಾ, ವಿಸ್ಕಾಂಸ್ಸಿನ್, ಇಂಡಿಯಾನಾ ರಾಜ್ಯಗಳು ಆ ಪಟ್ಟಿಯಲ್ಲಿ ಬರುತ್ತವೆ.

ಇವು ‘ಸ್ವಿಂಗ್ ಸ್ಟೇಟ್ಸ್’ಗಳು ಕೂಡ ಹೌದು. ಈ ರಾಜ್ಯಗಳು ಈ ಬಾರಿ ಟ್ರಂಪ್  ಭರವಸೆಗೆ ಮಣಿದಿವೆ. ಯಶಸ್ವಿ ಉದ್ಯಮಿ ಎಂಬ ಹಣೆಪಟ್ಟಿ ಕೆಲಸ ಮಾಡಿದಂತೆ ಕಾಣುತ್ತಿದೆ. ಇನ್ನು, ಉದ್ಯೋಗ ಅವಕಾಶ ಹೆಚ್ಚಿರುವ, ಆಗ್ನೇಯ ಮತ್ತು ನೈರುತ್ಯ ಭಾಗದ ರಾಜ್ಯಗಳಾದ ಅಲಬಾಮ, ಜಾರ್ಜಿಯಾ, ಆರಿಜೋನ, ಫ್ಲಾರಿಡಾಗಳನ್ನು ಕಿರಣ ಪಟ್ಟಿ (Sun Belt) ಎನ್ನಲಾಗುತ್ತದೆ. ಈ ಭಾಗವೂ ಟ್ರಂಪ್ ಅವರನ್ನು ಬಿಟ್ಟುಕೊಟ್ಟಿಲ್ಲ.

ಜೊತೆಗೆ, ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸುವ ಬಗ್ಗೆ ಟ್ರಂಪ್ ಮೊದಲು ಮಾತನಾಡಿದಾಗ, ಮಾಧ್ಯಮಗಳು ಹರಿಹಾಯ್ದಿದ್ದವು. ಆದರೆ ಟ್ರಂಪ್ ತಮ್ಮ ನಿಲುವನ್ನು ಬಿಟ್ಟುಕೊಡಲಿಲ್ಲ. ಪ್ರತಿ ಭಾಷಣದಲ್ಲೂ ಅದನ್ನು ಉಲ್ಲೇಖಿಸಿದರು. ಗಡಿಯಲ್ಲಿ ತಡೆಗೋಡೆ ನಿರ್ಮಿಸುತ್ತೇವೆ ಮತ್ತು ಮೆಕ್ಸಿಕೋ ಅದಕ್ಕೆ ಹಣ ತೆರಲಿದೆ ಎನ್ನುವ ಟ್ರಂಪ್ ಮಾತು, ಅವರಿಗೆ ವರವಾಗಿ ಪರಿಣಮಿಸಿದೆ. ಅಕ್ರಮ ವಲಸಿಗರು ಕೇವಲ ಉದ್ಯೋಗವನ್ನಷ್ಟೇ ಕಿತ್ತುಕೊಳ್ಳುತ್ತಿಲ್ಲ ಬದಲಿಗೆ ಮಾದಕ ವಸ್ತುಗಳನ್ನು ದೇಶದೊಳಗೆ ತಂದು, ಅಮೆರಿಕದ ಹೊಸಪೀಳಿಗೆಯನ್ನು ಹಾದಿತಪ್ಪಿಸುತ್ತಿದ್ದಾರೆ ಎಂಬ ಆಕ್ರೋಶ, ಹಿರಿಯ ಪೀಳಿಗೆಯಲ್ಲಿತ್ತು ಅದು ಮತವಾಗಿ ಬದಲಾಗಿದೆ.

ಮುಖ್ಯವಾಗಿ ಟ್ರಂಪ್ ಮತಗಳ ಧ್ರುವೀಕರಣಕ್ಕೆ ಮುಂದಾದರು. ನವೆಂಬರ್ 2015ರ ಪ್ಯಾರಿಸ್ ದಾಳಿಯನ್ನು ಉಲ್ಲೇಖಿಸಿ, ಇಸ್ಲಾಮಿಕ್ ಭಯೋತ್ಪಾದನೆಯ ಬಗ್ಗೆ ಮಾತನಾಡಿದ್ದ ಟ್ರಂಪ್, ‘ಮುಸ್ಲಿಮರ ಕೆಲವು ಪ್ರಾರ್ಥನಾ ಮಂದಿರಗಳನ್ನು ಮುಚ್ಚಬೇಕಾದ, ಉಳಿದವುಗಳ ಬಗ್ಗೆ ತೀವ್ರ ನಿಗಾ ಇಡಬೇಕಾದ ಅವಶ್ಯಕತೆ ಇದೆ. ಅಮೆರಿಕದಲ್ಲಿರುವ ಎಲ್ಲ ಮುಸಲ್ಮಾನರ ವಿವರಗಳನ್ನು ದಾಖಲಿಸಿಡುವ ಬಗ್ಗೆ ಯೋಚಿಸಬೇಕು, ಓಲೈಕೆಯ ಮಾತು ಬಿಟ್ಟು, ಇಸ್ಲಾಮಿಕ್ ಉಗ್ರವಾದದ ಬಗ್ಗೆ ಕಠಿಣ ನಿಲುವು ತಳೆಯಬೇಕು’ ಎಂದಿದ್ದರು. ಈ ಮಾತು ವಿವಾದಕ್ಕೆ ಕಾರಣವಾಗಿತ್ತು. ಆದರೆ ಸಂಪ್ರದಾಯವಾದಿ ಕ್ರಿಶ್ಚಿಯನ್ನರು ಸಾರಾಸಗಟಾಗಿ ಟ್ರಂಪ್ ಬೆನ್ನಿಗೆ ನಿಂತರು. ಜೊತೆಗೆ, ಸುಪ್ರಿಂ ಕೋರ್ಟ್ ನ್ಯಾಯಾಧೀಶರ ನೇಮಕದ ವಿಷಯದಲ್ಲಿ ಧರ್ಮರಾಜಕಾರಣ ಕೆಲಸ ಮಾಡಿತು.

ಅಮೆರಿಕ ಸಂವಿಧಾನದ ಎರಡನೇ ಪರಿಚ್ಛೇದ, ಬಂದೂಕು ಹೊಂದುವ ಹಕ್ಕನ್ನು ಅಮೆರಿಕದ ಪ್ರಜೆಗಳಿಗೆ ಕಾಯ್ದಿರಿಸಿದೆ. ಹಿಲರಿ ಅಧ್ಯಕ್ಷರಾದರೆ ತಮಗೆ ಬೇಕಾದವರನ್ನು ಸುಪ್ರಿಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸುತ್ತಾರೆ. ನಂತರ ಎರಡನೇ ಪರಿಚ್ಛೇದವನ್ನು ಮಾರ್ಪಡಿಸುವ ಸಾಧ್ಯತೆಯೂ ಇದೆ ಎನ್ನುವುದನ್ನು ಟ್ರಂಪ್ ಹೇಳುತ್ತಾ ಬಂದರು. ತಮ್ಮ ಪ್ರಚಾರ ತಂಡದ ನಿರ್ವಾಹಕರನ್ನಾಗಿ, ಪ್ರೊಟೆಸ್ಟಂಟ್ ಚರ್ಚ್‌ಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸ್ಟೀಫನ್ ಬೆನಾನ್ ಅವರನ್ನು ನೇಮಿಸಿ, ತಾವು ಸಂಪ್ರದಾಯವಾದಿ ಶ್ವೇತ ವರ್ಣಿಯರ ಪರ ಎಂಬುದನ್ನು ತೋರಿಸಿದರು. ಅದೇ ಕಾರಣಕ್ಕೆ ‘ಲಿಂಕನ್ ಅವರ ಪಕ್ಷ, ಇಂದು ಬಿಳಿಯರ ಪಕ್ಷವಾಗಿ ಬದಲಾಗಿದೆ’ ಎಂದು ‘ಲಾಸ್ ಏಂಜಲಿಸ್ ಟೈಮ್ಸ್’ ಬರೆದಿತ್ತು. ಈ ಅಂಶಗಳು ಟ್ರಂಪ್ ಪರ ಗುಪ್ತ ಮತದಾರ ಬಳಗವನ್ನು ಸೃಷ್ಟಿಸಿತು.

ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಂಪ್ರದಾಯವಾದಿ ಕ್ರಿಶ್ಚಿಯನ್ ಮತದಾರರು ಟ್ರಂಪ್ ಪರ ಠಸ್ಸೆ ಒತ್ತಿದ್ದಾರೆ.
ಈ ಎಲ್ಲ ಅಂಶಗಳ ಜೊತೆ, ತಾವೊಬ್ಬ ಗಟ್ಟಿಗ, ಕಠಿಣ ನಿಲುವು ತಳೆಯಬಲ್ಲ ವ್ಯಕ್ತಿ ಎಂಬುದನ್ನು ಟ್ರಂಪ್ ನಿರೂಪಿಸುತ್ತಾ ಬಂದರು. ಮಧ್ಯಮ ವರ್ಗದ ಜನರಿಗೆ ಹೊರೆಯಾಗಿರುವ ‘ಒಬಾಮಾ ಕೇರ್’ ಯೋಜನೆಯನ್ನು ಕಿತ್ತೆಸೆದು, ಹೊಸ ಯೋಜನೆ ತರುವ ಭರವಸೆ ನೀಡಿದರು. ಚುನಾವಣಾ ಪ್ರಚಾರಕ್ಕೆ, ಆಂದೋಲನದ ರೂಪಕೊಟ್ಟು ಯಶಸ್ವಿಯಾದರು.

ಹಿಲರಿ ಅವರಿಗೆ ತೊಡಕಾದ ಸಂಗತಿಗಳನ್ನು ನೋಡುವುದಾದರೆ, ಹಿಲರಿ ಹೆಚ್ಚು ಸುಳ್ಳು ಹೇಳುತ್ತಾರೆ, ಭ್ರಷ್ಟ ರಾಜಕಾರಣಿ ಎನ್ನುವ ಆರೋಪಗಳಿದ್ದವು, ವಿಶ್ವಾಸಾರ್ಹತೆಯ ಬಗ್ಗೆಯೇ ಪ್ರಶ್ನೆ ಇತ್ತು. ಹಾಗಾಗಿ ಪ್ರಾಥಮಿಕ ಹಂತದ ಚುನಾವಣೆಯಲ್ಲೂ ಸ್ಯಾಂಡರ್ಸ್ ಪರ ಯುವ ಸಮೂಹ ನಿಂತಿತ್ತು. ಆದರೆ ‘ಯಹೂದಿ’ ಮೂಲ ಸ್ಯಾಂಡರ್ಸ್ ಅವರಿಗೆ ತೊಡಕಾಯಿತು. ಜೊತೆಗೆ ಮಿಂಚಂಚೆ ಪ್ರಕರಣ ಹಿಲರಿ ಅವರನ್ನು ನಂಬುವುದು ಹೇಗೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿತು. ಆದರೆ ಹಿಲರಿ ಅವರ ಪರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಲಿದ್ದಾರೆ. ಹಿಸ್ಪಾನಿಕ್ ಮತ್ತು ಆಫ್ರಿಕನ್ ಅಮೆರಿಕನ್ ಸಮುದಾಯ ಒಬಾಮ ಅವರನ್ನು ಬೆಂಬಲಿಸಿದಂತೆ, ಹಿಲರಿ ಅವರನ್ನೂ ಬೆಂಬಲಿಸಲಿದೆ ಎಂಬ ನಿರೀಕ್ಷೆ ಇತ್ತು. ಆ ನಿರೀಕ್ಷೆಯೂ ಹುಸಿಯಾಯಿತು. ಹಾಗೆ ನೋಡಿದರೆ, ಹಿಲರಿ ಪಾಳಯದಲ್ಲಿ ಸೋಲುವ ಸೂಚನೆ ಎರಡು ವಾರಗಳ ಹಿಂದೆಯೇ ಕಾಣಿಸಿಕೊಂಡಿತ್ತು. ಹಾಗಾಗಿ, ಒಬಾಮ ಮತ್ತು ಮಿಷೆಲ್ ಒಬಾಮ, ಪೂರ್ವ ನಿಗದಿಯಾಗಿದ್ದಕ್ಕಿಂತ ಹೆಚ್ಚು ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಳ್ಳಬೇಕಾಯಿತು.

ಉಳಿದಂತೆ, ‘ಸ್ವಿಂಗ್ ಸ್ಟೇಟ್ಸ್’ ಗಳಾದ, ಓಹಿಯೊ ಮತ್ತು ಪೆನ್ಸಿಲ್ವೇನಿಯಾಗಳಲ್ಲಿ, ಬಿಲ್ ಕ್ಲಿಂಟನ್ ಅವಧಿಯಲ್ಲಿ ಜಾರಿಗೆ ಬಂದ ಮುಕ್ತ ವಾಣಿಜ್ಯ ಒಪ್ಪಂದದಿಂದಾಗಿ, ವಿಶ್ವ ವಾಣಿಜ್ಯ ಸಂಸ್ಥೆ (WTO) ಅಸ್ತಿತ್ವಕ್ಕೆ ಬಂದ ತರುವಾಯ ಬಹುತೇಕ ನೌಕರಿಗಳು ಪರದೇಶಗಳ ಪಾಲಾಗಿವೆ ಎಂಬ ಆಕ್ರೋಶ ಇದೆ. ಅದು ಹಿಲರಿ ಅವರಿಗೆ ಮಾರಕವಾದಂತೆ ಕಾಣುತ್ತಿದೆ. ಜೊತೆಗೆ, ಕಾರ್ಪೊರೇಟ್ ಸಂಸ್ಥೆಗಳೊಂದಿಗಿರುವ ಸಖ್ಯ, ಹಣ ನೀಡಿದರೆ ಮಾತ್ರ ಭಾಷಣ ಮಾಡುತ್ತಾರೆ ಎಂಬ ಆರೋಪ, ಮುಕ್ತ ಮಾರುಕಟ್ಟೆ, ಸೋಷಿಯಲ್ ಸೆಕ್ಯುರಿಟಿ ನೀತಿ ಮಾರ್ಪಾಡುಗಳ ಬಗ್ಗೆ ತಳೆದ ಅಸ್ಪಷ್ಟ ನಿಲುವು, ಭಯೋತ್ಪಾದನೆಯ ಬಗ್ಗೆ ತೋರದ ಕಾಠಿಣ್ಯ ಹಿಲರಿ ಅವರಿಗೆ ಮುಳುವಾಗಿದೆ.

ಅದು ಬಿಡಿ, ‘If there is a constant to the American campaign story, it is that media can't predict the future very well.' ಎನ್ನುವ ಮಾತಿದೆ. ಮಾಧ್ಯಮಗಳು ಸುದ್ದಿಯನ್ನಷ್ಟೇ ನೀಡಬಲ್ಲವು. ನಿರ್ಣಯ ಏನಿದ್ದರೂ ಮತದಾರರದ್ದೇ. ಇಲ್ಲವಾದರೆ ಈ ಹಿಂದೆ ಟ್ರೂಮನ್ ಸೋಲು ಖಚಿತ ಎಂದು ಸುದ್ದಿ ಬರೆದು ಮಾಧ್ಯಮಗಳು ಪೇಚಿಗೆ ಸಿಲುಕುತ್ತಿರಲಿಲ್ಲ. ಡೊನಾಲ್ಡ್ ಟ್ರಂಪ್ ವಿಷಯದಲ್ಲೂ ಅದೇ ಆಗಿದೆ. ಅವರು ಸ್ಪರ್ಧೆಗೆ ಧುಮುಕಿದಾಗ, ಟ್ರಂಪ್ ಹೆಚ್ಚು ದಿನ ಕಣದಲ್ಲಿ ಉಳಿಯಲಾರರು ಎಂದೇ ಮಾಧ್ಯಮಗಳು ಬರೆದಿದ್ದವು. ಇದೀಗ ಶ್ವೇತ ಭವನದವರೆಗೂ ಟ್ರಂಪ್ ನಡೆದಿದ್ದಾರೆ. ಹಾಗಾಗಿ, ಪ್ರಸಕ್ತ ಚುನಾವಣೆಯನ್ನು ಟ್ರಂಪ್ ಅವರ ಗೆಲುವು ಎಂದಷ್ಟೇ ಅಲ್ಲ, ಪಕ್ಷಪಾತಿ ಧೋರಣೆ ತಳೆದ ಮಾಧ್ಯಮಗಳ, ರಾಜಕೀಯ ಪಂಡಿತರ ಸೋಲು ಎಂದೂ ವ್ಯಾಖ್ಯಾನ ಮಾಡಬೇಕಿದೆ.

ಒಟ್ಟಿನಲ್ಲಿ, ಈ ಫಲಿತಾಂಶದ ಮೂಲಕ ಅಮೆರಿಕನ್ನರು, ಮಹಿಳಾ ಅಧ್ಯಕ್ಷರನ್ನು ಚುನಾಯಿಸಿ ಇತಿಹಾಸ ಬರೆಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಹೊಸ ಮುಖಕ್ಕೆ ಆದ್ಯತೆ ನೀಡಿದ್ದಾರೆ. ಜನಪ್ರಿಯ ಮತಗಳನ್ನು ನೋಡಿದರೆ, ಹಿಲರಿ ಮತ್ತು ಟ್ರಂಪ್ ಅವರ ನಡುವೆ ಹೆಚ್ಚು ಅಂತರವಿಲ್ಲ. ಹಾಗಾಗಿ ರೂಪಿಸಿದ ತಂತ್ರಗಳಷ್ಟೇ ಇಲ್ಲಿ ಗೆದ್ದಿವೆ. ಕಾಂಗ್ರೆಸ್ಸಿನ ಮೇಲ್ಮನೆ ಮತ್ತು ಕೆಳಮನೆಗಳಲ್ಲೂ ರಿಪಬ್ಲಿಕನ್ ಪಕ್ಷ ಬಹುಮತ ಪಡೆದಿರುವುದರಿಂದ, ಟ್ರಂಪ್ ಅವರಿಗೆ ಮತ್ತಷ್ಟು ಶಕ್ತಿ ಬಂದಂತೆ ಆಗಿದೆ.

ಭಯೋತ್ಪಾದನೆ, ವಲಸೆ, ಹೊರಗುತ್ತಿಗೆ ಬಗ್ಗೆ ಕಠಿಣ ಮಾತುಗಳನ್ನು ಟ್ರಂಪ್ ಅವರು ಆಡಿರುವುದರಿಂದ, ಅಮೆರಿಕದ ವಿದೇಶಾಂಗ ನೀತಿಯಲ್ಲಿ ಸಾಕಷ್ಟು ಬದಲಾವಣೆ ಆಗುವ ಸೂಚನೆ ಇದೆ. ಅಮೆರಿಕದಲ್ಲಿರುವ ಭಾರತೀಯರ ಕೆಲಸಕ್ಕೆ, ಹೊರಗುತ್ತಿಗೆಯ ಮೂಲಕ ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳಿಗೆ ಸಂಚಕಾರ ಬರಲಾರದು. ಭಾರತದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯನ್ನು ಜಾಗತಿಕ ಸನ್ನಿವೇಶ ಸೃಷ್ಟಿಸಿರುವುದರಿಂದ ಅದು ಅಬಾಧಿತ.

ಒಂದಂತೂ ನಿಜ, ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರವನ್ನು ಜಾಣ್ಮೆಯಿಂದ ಮುನ್ನಡೆಸಿದಂತೆ, ಅಧ್ಯಕ್ಷರಾದ ಬಳಿಕ ದೇಶವನ್ನು ಮುನ್ನಡೆಸಿದರೆ, ಅಮೆರಿಕಕ್ಕೆ ಯಾವುದೇ ಸಮಸ್ಯೆ ಬರುವುದಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ತನ್ನ ಪಕ್ಷದವರೇ ಬೆಂಬಲ ಸೂಚಿಸದಿದ್ದಾಗಲೂ, ಒಂಟಿ ಸಲಗದಂತೆ ಶ್ವೇತಭವನದತ್ತ ನಡೆದ ಟ್ರಂಪ್, ನಾಲ್ಕು ವರ್ಷಗಳ ಕಾಲ ಮದಗಜದಂತೆ ವರ್ತಿಸದಿದ್ದರೆ, ಜಗತ್ತಿನ ಇತರ ರಾಷ್ಟ್ರಗಳಿಗೆ ಕೆಡುಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT