ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಜಗಿಯುವುದರಿಂದಲೂ ಬರುವುದೇ ಕ್ಯಾನ್ಸರ್...?

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಏಷ್ಯಾದ ಹಲವು ದೇಶಗಳ ಸಂಸ್ಕೃತಿಯಲ್ಲಿ, ಅಡಿಕೆಗೆ ತನ್ನದೇ ಆದ ಮಹತ್ವವಿದೆ; ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಅಡಿಕೆಯನ್ನು ಬಳಸಲಾಗುತ್ತದೆ. ಆದರೆ, ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ಅಡಿಕೆಯು ತನ್ನ ಮೋಡಿಯನ್ನು ಕಳೆದುಕೊಂಡಿದೆ.

ಊಟದ ನಂತರ ವೀಳ್ಯದ ಎಲೆ, ಅಡಿಕೆ, ಸುಣ್ಣವನ್ನು ಬೆರೆಸಿ ಸವಿಯುವ ಸಂಪ್ರದಾಯ ಏಷ್ಯಾದ ಹಲವು ಸಂಸ್ಕೃತಿಗಳಲ್ಲಿ ಅಡಕವಾಗಿದೆ. ಅಜೀರ್ಣ ಹಾಗೂ ನಿರ್ಬಲತೆಯನ್ನು ಗುಣಪಡಿಸಲು ಇದರ ಬಳಕೆಯನ್ನು ಮಾಡಲಾಗುತ್ತಿದೆ; ಮನಸ್ಸನ್ನು ಹಾಗೂ ಮೆದುಳನ್ನು ಉತ್ತೇಜಿಸುವ ಗುಣಕ್ಕಾಗಿ ಇದನ್ನು, ಉಷ್ಣವಲಯದ ಸುಮಾರು 700 ಮಿಲಿಯನ್ ಜನ ಈಗಲೂ ಸೇವಿಸುತ್ತಾರೆ.

ಅಡಿಕೆಯೊಳಗೆ ಅಡಕವಾಗಿರುವ ಹಲವು ರಾಸಾಯನಿಕ ಸಂಯುಕ್ತಗಳು ಕ್ಯಾನ್ಸರ್‌ಕಾರಕಗಳೆಂದೂ, ಅಡಿಕೆ ಜಗಿಯುವುದರಿಂದ ಬಾಯಿಯ ಕ್ಯಾನ್ಸರ್ ಉಂಟಾಗುತ್ತದೆ ಎಂದೂ ಹಲವು ಸಂಶೋಧನೆ  ಸೂಚಿಸಿವೆ.

ಈಗ ಹೊಸ ಅಧ್ಯಯನವೊಂದು, ಇದರ ಹಿಂದಿರಬಹುದಾದ ವಿವರವಾದ ರಾಸಾಯನಿಕ ಪ್ರಕ್ರಿಯೆಯನ್ನು ಕಂಡುಕೊಂಡಿದ್ದು, ಅಡಿಕೆ ಜಗಿಯುವುದರಿಂದ ಕ್ಯಾನ್ಸರ್‌ಗೆ ಮುಂಚಿತವಾದ ಅನಾರೋಗ್ಯ ಪರಿಸ್ಥಿತಿಯೊಂದು ಉಂಟಾಗುತ್ತದೆಯೆಂದೂ, ಅದೇ ಮುಂದುವರಿದು ಕ್ಯಾನ್ಸರ್ ಆಗಿ ಮಾರ್ಪಾಡಾಗಬಹುದು ಎಂದೂ ಸೂಚಿಸಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ‘ಆಣ್ವಿಕ ಸಂತಾನೋತ್ಪತ್ತಿ, ಅಭಿವೃದ್ಧಿ ಮತ್ತು ಅನುವಂಶಿಕತೆಯ ಶಾಸ್ತ್ರ’ ಇಲಾಖೆಯ ವಿಜ್ಞಾನಿಗಳು ಹಾಗೂ ಡಿ.ಎ.ಪಾಂಡು ಸ್ಮಾರಕ ಆರ್.ವಿ ದಂತವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ‘ಓರಲ್ ಮ್ಯಾಕ್ಸಿಲೊಫೇಸಿಯಲ್ ಸರ್ಜರಿ’ ಇಲಾಖೆ ವೈದ್ಯರ ಸಹಯೋಗದಲ್ಲಿ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಅಡಿಕೆಯು, ಕ್ಯಾನ್ಸರ್‌ಗೆ ಮುಂಚಿನ ರೋಗಸ್ಥಿತಿಯನ್ನು (ಫೈಬ್ರೋಸಿಸ್– ತಂತೂತಕವೃದ್ಧಿ) ಉಂಟುಮಾಡುತ್ತದೆ.

ಸಾಮಾನ್ಯವಾಗಿ, ಈ ರೋಗಸ್ಥಿತಿ, ಕೊಲಾಜೆನ್, ಫೈಬ್ರೋನೆಕ್ಟಿನ್ ಮುಂತಾದ  ಹೆಚ್ಚುವರಿ ಜೀವಕೋಶೀಯ ಪ್ರೊಟೀನುಗಳ ಹೆಚ್ಚಿನ ಶೇಖರಣೆಯಿಂದ ಉಂಟಾಗುತ್ತದೆ.ಹಿಂದಿನ ಅಧ್ಯಯನಗಳ ವರದಿಯ ಪ್ರಕಾರ, ಅಡಿಕೆ ಅಗಿಯುವುದರಿಂದ, ಬಾಯಿಯ ಅಂಗಾಂಶಗಳಲ್ಲಿನ ‘ಟ್ರಾನ್ಸ್‌ಫಾರ್ಮಿಂಗ್ ಗ್ರೋಥ್ ಫ್ಯಾಕ್ಟರ್ ಬೀಟಾ’ ಎಂಬ ‘ಸಂಕೇತ ನೀಡುವ ಪ್ರಮುಖ ಕ್ರಮಾವಳಿಯ ಹಾದಿ’ ಯೊಂದು ಸಕ್ರಿಯಗೊಳ್ಳುತ್ತದೆ. ಇದರ ಫಲಿತಾಂಶವಾಗಿ ‘ಬಾಯಿಯ ಉಪಲೋಳೆಯ ತಂತೂತಕವೃದ್ಧಿ’ಯು ಉಂಟಾಗುತ್ತದೆ.

ಆದಾಗ್ಯೂ, ಈ ಕೋಶಗಳ ಒಳಗೆ ಇದು ಹೇಗೆ ಸಂಭವಿಸುತ್ತದೆ ಎಂಬುದರ ಬಗ್ಗೆ ಇಲ್ಲಿಯವರೆಗೂ ನಿಖರ ಮಾಹಿತಿ ಇರಲಿಲ್ಲ. ಅಡಿಕೆ ಅಗಿಯುವುದರಿಂದ ಎಪಿಥೀಲಿಯಲ್ ಜೀವಕೋಶಗಳಲ್ಲಿ ಅಥವಾ ಬಾಯಿಯ ಹೊರಪದರದ ಜೀವಕೋಶಗಳಲ್ಲಿ, ಸಂಕೇತ ನೀಡುವ ಹಾದಿಯು ಹೇಗೆ ಸಕ್ರಿಯಗೊಳ್ಳುತ್ತದೆ ಎಂಬುದನ್ನು ಈ ಅಧ್ಯಯನವು ತೋರಿಸುತ್ತದೆ.

‘ಟ್ರಾನ್ಸ್ಫಾರ್ಮಿಂಗ್ ಗ್ರೋಥ್ ಫ್ಯಾಕ್ಟರ್ ಬೀಟಾ’ ಎಂಬುದು ಬೆಳವಣಿಗೆಗೆ ಕಾರಣವಾಗುವ ಒಂದು ಜೀವರಾಸಾಯನಿಕ ಅಂಶವಾಗಿದ್ದು, ವಿವಿಧ ಸಂದರ್ಭಗಳಲ್ಲಿ ಅನೇಕ ರೀತಿಯ ಜೀವಕೋಶಗಳು ಇದನ್ನು ಸ್ರವಿಸುತ್ತವೆ. ಈ ಅಂಶವು ಜೀವಕೋಶದ ಬೆಳವಣಿಗೆ, ಜೀವಕೋಶಗಳ ಪ್ರತ್ಯೇಕತೆ, ಪ್ರತಿರಕ್ಷಕ ವ್ಯವಸ್ಥೆ, ಗಾಯ ಗುಣವಾಗುವ ಪ್ರಕ್ರಿಯೆಯಂತಹ ಹಲವು ಶಾರೀರಿಕ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆದಾಗ್ಯೂ, ಈ ಅಂಶದ ಅಭಿವ್ಯಕ್ತಿಯಲ್ಲಿ ಸ್ವಲ್ಪವೇ ಅಸಮತೋಲನವಾದರೂ, ರೋಗಲಕ್ಷಣದ ಹುಟ್ಟಿಗೆ ಕಾರಣವಾಗುತ್ತದೆ; ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ, ವಿವಿಧ ಅಂಗಗಳಲ್ಲಿ ಉಂಟಾಗುವ ಫೈಬ್ರೋಸಿಸ್.

ಇದೇ ಮುಂದುವರೆದು ಕ್ಯಾನ್ಸರ್ ಆಗಿ ಪರಿವರ್ತನೆ ಹೊಂದುವಲ್ಲಿ ಈ ಅಂಶದ ಕೈವಾಡವಿದೆ ಎಂಬುದಕ್ಕೆ ಅಗಾಧ ಸಾಕ್ಷ್ಯಗಳಿವೆ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ‘ಆಣ್ವಿಕ ಸಂತಾನೋತ್ಪತ್ತಿ, ಅಭಿವೃದ್ಧಿ ಮತ್ತು ಅನುವಂಶಿಕತೆಯ ಶಾಸ್ತ್ರ’ ಇಲಾಖೆಯ ಪ್ರೊ. ಪತೂರು ಕೊಂಡಯ್ಯ.

ಎರಡು ರೀತಿಯ ಎಪಿಥೀಲಿಯಲ್ ಜೀವಕೋಶಗಳಲ್ಲಿ, ‘ಟ್ರಾನ್ಸ್‌ಫಾರ್ಮಿಂಗ್ ಗ್ರೋಥ್ ಫ್ಯಾಕ್ಟರ್ ಬೀಟಾ’ದ ಪ್ರತಿಕ್ರಿಯಾಸರಣಿಯನ್ನು ಸಕ್ರಿಯಗೊಳಿಸಲು ಕಾರಣವಾಗಿರುವ ಕಾರ್ಯವಿಧಾನದ ಬಗ್ಗೆ, ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಈಗಾಗಲೇ ತಿಳಿದಿರುವಂತೆ, ಫೈಬ್ರೊಬ್ಲಾಸ್ಟ್ ಜೀವಕೋಶಗಳ ಸಕ್ರಿಯಗೊಳ್ಳುವಿಕೆಯೇ, ಫೈಬ್ರೋಸಿಸ್ ಉಂಟಾಗಲು ಕಾರಣ.

ಫೈಬ್ರೋಬ್ಲಾಸ್ಟ್‌ಗಳ  ಸಕ್ರಿಯಗೊಳಿಸುವಿಕೆಯು ಅವುಗಳ ಕ್ರಿಯಾತ್ಮಕತೆಯಲ್ಲಿ ಬದಲಾವಣೆ ತರುವ ಮುಖ್ಯ ಪ್ರಕ್ರಿಯೆಯಾಗಿದೆ. ಈ ಬದಲಾವಣೆಯನ್ನು ತರಲು ಬೇಕಾದ ನಿಖರವಾದ ಕಾರ್ಯವಿಧಾನಗಳು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲವಾದರೂ, ‘ಟ್ರಾನ್ಸ್‌ಫಾರ್ಮಿಂಗ್ ಗ್ರೋಥ್ ಫ್ಯಾಕ್ಟರ್ ಬೀಟಾ’ದಂತಹ  ಹಲವಾರು ಅಂಶಗಳ ಕೈವಾಡವಿರುವುದು ಕಂಡುಬಂದಿದೆ.

ಇಂತಹ ಬದಲಾವಣೆಯ ಫಲಿತಾಂಶವಾಗಿ, ಕೊಲಾಜೆನ್, ಫೈಬ್ರೋನೆಕ್ಟಿನ್‌ನಂಥ ತಂತೂತಕವೃದ್ಧಿಗೆ ಸಂಬಂಧಿಸಿದ ಅಣುಗಳ ಹೆಚ್ಚುವರಿ ಉತ್ಪಾದನೆ ಮತ್ತು ಸ್ರವಿಸುವಿಕೆ
ಉಂಟಾಗುತ್ತದೆ ಎನ್ನುತ್ತಾರೆ ಪ್ರೊ. ಕೊಂಡಯ್ಯ.

ಎಪಿಥೀಲಿಯಲ್ ಜೀವಕೋಶಗಳು ಸ್ರವಿಸುವ ‘ಟ್ರಾನ್ಸ್‌ಫಾರ್ಮಿಂಗ್ ಗ್ರೋಥ್ ಫ್ಯಾಕ್ಟರ್ ಬೀಟಾ’ ಎಂಬ ಅಂಶವು, ಫೈಬ್ರೊಬ್ಲಾಸ್ಟ್‌ಗಳನ್ನು ಚುರುಕುಗೊಳಿಸಲು ಬೇಕಾದ ಪ್ರಮುಖ ಅಂಶವೆಂದು ಪರಿಗಣಿಸಬಹುದು ಎಂದು ಇದರ ಆಧಾರದ ಮೇಲೆ ಸಂಶೋಧಕರು ಊಹಿಸುತ್ತಾರೆ.

ಇಲ್ಲಿ ಸಂಶೋಧಕರು ಗಮನಿಸಿರುವ ಕುತೂಹಲಕಾರಿ ಅಂಶವೆಂದರೆ, ಎಪಿಥೀಲಿಯಲ್ ಜೀವಕೋಶಗಳನ್ನು ಅಡಿಕೆಗೆ ಒಡ್ಡಿದ ಎರಡು ಗಂಟೆಗಳ ಒಳಗೇ, ‘ಟ್ರಾನ್ಸ್‌ಫಾರ್ಮಿಂಗ್ ಗ್ರೋಥ್ ಫ್ಯಾಕ್ಟರ್ ಬೀಟಾ 2’ ಪ್ರೋಟೀನ್  ಉಪಸ್ಥಿತಿ ಕಂಡುಬಂದಿದೆ.

‘ಟ್ರಾನ್ಸ್‌ಫಾರ್ಮಿಂಗ್ ಗ್ರೋಥ್ ಫ್ಯಾಕ್ಟರ್ ಬೀಟಾ 2' ಪ್ರತಿಕ್ರಿಯಾ ಸರಣಿಯನ್ನು ಸಕ್ರಿಯಗೊಳಿಸುವ ಅಣುಗಳ ಗುಂಪೇ, ಬಾಯಿಯ ‘ಉಪಲೋಳೆಯ ತಂತೂತಕವೃದ್ಧಿ’ಯ ಹುಟ್ಟಿನ ಹಿಂದೆ ಇರುವುದನ್ನು ಇದೇ ಮೊದಲ ಬಾರಿಗೆ ಈ ಸಂಶೋಧಕರು ತೋರಿಸಿಕೊಟ್ಟಿದ್ದಾರೆ.

‘ನಾವು ಜೀವಕೋಶದ ಸಾಲುಗಳ ಮೇಲೆ, ಅಡಿಕೆಯ ಪರಿಣಾಮವನ್ನು, ವಂಶವಾಹಿ ಅಭಿವ್ಯಕ್ತಿ, ಸಂಕೇತ ಪ್ರತಿಕ್ರಿಯಾಸರಣಿಯ ಸಕ್ರಿಯಗೊಳಿಸುವಿಕೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಅಭ್ಯಸಿಸಿದೆವು. ಈ ಫಲಿತಾಂಶಗಳಲ್ಲಿ ಕೆಲವನ್ನು ರೋಗಪೂರಿತ ಅಂಗಾಂಶಗಳಿಗೆ ಹೋಲಿಸಿದಾಗ, ತುಲನಾತ್ಮಕವಾಗಿ ಕಂಡುಬಂದಿವೆ. ಹಾಗಾಗಿ, ಬಹಿರ್ಗಣನೆಗೆ ಇವು ಉತ್ತಮ ಕಾರಣಗಳಾಗಿವೆ ಎಂಬುದು ನಮ್ಮ ಅಭಿಪ್ರಾಯ’ ಎಂದು  ಅಧ್ಯಯನದ ಫಲಿತಾಂಶಗಳ ಬಗ್ಗೆ ಪ್ರೊ. ಕೊಂಡಯ್ಯ ವಿವರಿಸುತ್ತಾರೆ.

ಅಡಿಕೆ ಜಗಿಯುವುದರಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನರನ್ನು ಎಚ್ಚರಿಸಲು ಏನು ಮಾಡಬಹುದು ಎಂಬುದು, ಈಗ ನಮ್ಮ ಮುಂದಿರುವ ಒಂದು ಮುಖ್ಯ ಪ್ರಶ್ನೆಯಾಗಿದೆ. ‘ಇದು ಸಾರ್ವಜನಿಕ ಆರೋಗ್ಯ ಸಮಸ್ಯೆ. ಅಡಿಕೆ ಅಥವಾ ಗುಟ್ಕಾದ ಕೆಟ್ಟ ಪರಿಣಾಮಗಳ ಕಾರಣದಿಂದ, ಇದನ್ನು ಕೆಲವು ರಾಜ್ಯಗಳಲ್ಲಿ ಈಗಾಗಲೇ ನಿಷೇಧಿಸಲಾಗಿದೆ. ಈ ಉತ್ಪನ್ನಗಳ ವಿತರಣೆ ಮತ್ತು ಇವುಗಳ ಜಾಹೀರಾತುಗಳಿಗೆ, ಸರ್ಕಾರವು ಒಂದು ನೀತಿಯ ಚೌಕಟ್ಟನ್ನು ರಚಿಸಬೇಕು. ಹೆಚ್ಚಿನ ಸಾರ್ವಜನಿಕ ಅರಿವನ್ನು ಪ್ರತಿಪಾದಿಸಬೇಕು’ ಎಂದು ಪ್ರೊ. ಕೊಂಡಯ್ಯ ಶಿಫಾರಸು ಮಾಡುತ್ತಾರೆ.

ವಿಜ್ಞಾನವು, ಸಾಂಸ್ಕೃತಿಕ ಜಾಗೃತಿಯೊಂದಿಗೆ ಜೊತೆಜೊತೆಯಾಗಿ ಕಾರ್ಯ ನಿರ್ವಹಿಸಿದರೆ, ಜೀವನಶೈಲಿ ಆಧಾರಿತ ಅನೇಕ ಮಾರಣಾಂತಿಕ ರೋಗಗಳಿಗೆ, ನಿರೀಕ್ಷಿತ ಸಮಯಕ್ಕಿಂತಲೂ ಬೇಗ ಪರಿಹಾರ ಕಂಡುಕೊಳ್ಳಬಹುದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

     –  ಗುಬ್ಬಿ ಲ್ಯಾಬ್ಸ್‌
(ಸಂಶೋಧನಾ ಚಟುವಟಿಕೆಗಳ
ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT