ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೆಬ್ರುವರಿಯೊಳಗೆ ತೆರವು ಕಾರ್ಯ ಪೂರ್ಣ’

Last Updated 20 ಡಿಸೆಂಬರ್ 2016, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕಾಲುವೆ ಮೇಲೆ ನಿರ್ಮಾಣವಾದ ಇನ್ನೂ 885 ಸ್ವತ್ತುಗಳ ತೆರವು ಕಾರ್ಯ ಬಾಕಿಯಿದ್ದು, ಫೆಬ್ರುವರಿ ಅಂತ್ಯದೊಳಗೆ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ರಾಜಕಾಲುವೆ) ಸಿದ್ದೇಗೌಡ ಮಾಹಿತಿ ನೀಡಿದರು.

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಕಾಂಗ್ರೆಸ್‌ನ ಎಂ.ಕೆ. ಗುಣಶೇಖರ್‌ ಅವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

‘ನೀರಿನ ಹರಿವಿಗೆ ಅಡಚಣೆ ಉಂಟುಮಾಡಿ ಪ್ರವಾಹಕ್ಕೆ ಕಾರಣವಾಗುತ್ತಿರುವ ಪ್ರದೇಶಗಳಲ್ಲಿ ಆದ್ಯತೆ ಮೇಲೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಳಿಕ ಮಿಕ್ಕ ಪ್ರದೇಶಗಳತ್ತ ಗಮನ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ನೀಡಿರುವ ₹ 800 ಕೋಟಿ ವಿಶೇಷ ಅನುದಾನದಲ್ಲಿ 150 ಕಿ.ಮೀ. ಉದ್ದದ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತದೆ. ಈ ಉದ್ದೇಶಕ್ಕಾಗಿ ಎಂಟು ಪ್ಯಾಕೇಜ್‌ ಮಾಡಿ ಗುತ್ತಿಗೆ ನೀಡಲಾಗುತ್ತಿದೆ. ನಗರದ ಎಲ್ಲ ವಿಧದ ರಾಜಕಾಲುವೆ ಜಾಲವನ್ನು ಸದೃಢಗೊಳಿಸಲು ಇನ್ನೂ ₹ 4,000 ಕೋಟಿ ಅಗತ್ಯವಿದೆ’ ಎಂದು ವಿವರಿಸಿದರು.

ಬಿಜೆಪಿಯ ಉಮೇಶ್‌ ಶೆಟ್ಟಿ, ‘ರಾಜಕಾಲುವೆ ನಿರ್ಮಾಣಕ್ಕೆ ಎಂಟು ಪ್ಯಾಕೇಜ್‌ ಮಾಡುವ ಬದಲು ಹಲವು ಪ್ಯಾಕೇಜ್‌ಗಳನ್ನಾಗಿ ಮಾಡಿ ಕೊಡಬೇಕಿತ್ತು. ಇದರಿಂದ ಕಾಮಗಾರಿ ಬೇಗ ಮುಗಿಯಲು ಅನುಕೂಲ ಆಗುತ್ತಿತ್ತು’ ಎಂದು ವಾದಿಸಿದರು.

‘ರಾಜಕಾಲುವೆಗಳ ಸ್ವರೂಪ ನೋಡಿಕೊಂಡೇ ಎಂಟು ಪ್ಯಾಕೇಜ್‌ ಮಾಡಲಾಗಿದೆ’ ಎಂದ ಮುಖ್ಯ ಎಂಜಿನಿಯರ್‌ ಅವರು, ‘ತೆರವು ಕಾರ್ಯಾಚರಣೆ ನಡೆಸಲಾಗಿದ್ದ ಅವನಿ ಶೃಂಗೇರಿನಗರದಲ್ಲಿ ಈಗಾಗಲೇ ಕಾಂಕ್ರೀಟ್‌ ಕಾಲುವೆ ನಿರ್ಮಾಣ ಮಾಡಲಾಗಿದೆ. ಮಿಕ್ಕ ಕಡೆಗಳಲ್ಲೂ ಕಾಲುವೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ’ ಎಂದು ತಿಳಿಸಿದರು.

‘ಅವನಿ ಶೃಂಗೇರಿನಗರದಲ್ಲಿ ರಾಜಕಾಲುವೆ ನಿರ್ಮಾಣ ಪೂರ್ಣಗೊಂಡಿಲ್ಲ. ಅಲ್ಲದೆ, ಮುಖ್ಯ ಎಂಜಿನಿಯರ್‌ ಅವರು ಮೊಬೈಲ್‌ ಸಂಪರ್ಕಕ್ಕೆ ಯಾವಾಗಲೂ ಲಭ್ಯರಾಗಲ್ಲ’ ಎಂದು ಬಿಜೆಪಿ ಸದಸ್ಯರು ಆಕ್ಷೇಪ ಎತ್ತಿದರು.

‘ರಾಜಕಾಲುವೆ ಒತ್ತುವರಿ ತೆರವು ಹಾಗೂ ಕಾಲುವೆ ಮರು ನಿರ್ಮಾಣದಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ಆಡಳಿತ ಪಕ್ಷದ ಭಾಗವಾಗಿದ್ದರಿಂದ ಹೆಚ್ಚಿನ ವಿಶ್ಲೇಷಣೆ ಮಾಡುವ ಸ್ಥಿತಿಯಲ್ಲಿ ನಾನಿಲ್ಲ’ ಎಂದು ಗುಣಶೇಖರ್‌ ಹೇಳಿದರು.

ಗುತ್ತಿಗೆದಾರರ ಬಾಕಿ ಪಾವತಿ

ಗುತ್ತಿಗೆದಾರರಿಗೆ 2015ರ ಮಾರ್ಚ್‌ವರೆಗೆ ₹ 229 ಕೋಟಿ ಬಾಕಿ ನೀಡಬೇಕಿದೆ. ಡಿಸೆಂಬರ್‌ನಲ್ಲಿ ಪ್ರತಿವಾರ ₹ 15 ಕೋಟಿ, ಜನವರಿಯಲ್ಲಿ ₹ 20 ಕೋಟಿ ಹಾಗೂ ಫೆಬ್ರುವರಿಯಲ್ಲಿ ಪ್ರತಿ ವಾರ ₹ 25 ಕೋಟಿಯಂತೆ ಪಾವತಿಸಿ, ಬಾಕಿ ತೀರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್‌ 20ರ ವೇಳೆಗೆ ಈ ವರ್ಷ ₹ 102 ಕೋಟಿ ಅಧಿಕ ತೆರಿಗೆ ಸಂಗ್ರಹವಾಗಿದೆ ಎಂದು ಹೇಳಿದರು.

ನಕ್ಷೆ ಮಂಜೂರು ಮಾಡಲ್ಲ

‘ರಾಷ್ಟ್ರೀಯ ಹಸಿರು ಪೀಠದ (ಎನ್‌ಜಿಟಿ) ಆದೇಶವನ್ನು ಪಾಲನೆ ಮಾಡಲೇಬೇಕಾಗಿರುವ ಕಾರಣ ಕೆರೆ, ರಾಜಕಾಲುವೆ ಸಂರಕ್ಷಿತ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನಕ್ಷೆ ಮಂಜೂರು ಮಾಡುತ್ತಿಲ್ಲ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

‘ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಕೋರಿ, ರಾಜ್ಯ ಸರ್ಕಾರದ ಮೂಲಕ ಮನವಿ ಸಲ್ಲಿಸಲಾಗಿದೆ. ಆದೇಶದ ಅನುಷ್ಠಾನದಲ್ಲಿ ಹಲವು ಗೊಂದಲಗಳಿದ್ದು, ಸವಾಲನ್ನೂ ಎದುರಿಸಬೇಕಿದೆ. ಆದರೆ, ಖಾತೆ ಬದಲಾವಣೆಗೆ ಸದ್ಯದ ಸನ್ನಿವೇಶದಲ್ಲಿ ಯಾವುದೇ ತೊಂದರೆ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT