ಶನಿವಾರ, ಜೂನ್ 19, 2021
21 °C

ಸೃಷ್ಟಿಕರ್ತನ ಕುಶಲತೆಯ ಪಳೆಯುಳಿಕೆ ‘ಯೋಗ್ಯಕರ್ತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೃಷ್ಟಿಕರ್ತನ ಕುಶಲತೆಯ ಪಳೆಯುಳಿಕೆ ‘ಯೋಗ್ಯಕರ್ತ’

ಜಯಶ್ರೀ ಭಟ್, ಸಿಂಗಪುರ

 

ಇಂಡೋನೇಷ್ಯಾದ ಜಾವಾ ದ್ವೀಪದ ಪ್ರಮುಖ ನಗರಗಲ್ಲೊಂದು ಯೋಗ್ಯಕರ್ತ. ಇದನ್ನು ಜೋಗ್ ಜಕಾರ್ತ ಅಥವಾ ಜೊಗ್ ಜಾ ಅಂತಲೂ ಕರೆಯುತ್ತಾರೆ. ಈ ಸ್ಥಳ ವಿದೇಶಿ ಪ್ರವಾಸಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರೂ ಭಾರತೀಯ ಪ್ರವಾಸಿಗರ ಸಂಖ್ಯೆ ಇಲ್ಲಿ ಕಮ್ಮಿ ಎಂದೇ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ಈ ಸ್ಥಳದ ಬಗ್ಗೆ ನಮ್ಮ ಜನಕ್ಕೆ ಹೆಚ್ಚು ತಿಳಿದಿಲ್ಲದಿರುವುದು.

 

ಯೋಗ್ಯಕರ್ತದ ವಿಮಾನನಿಲ್ದಾಣ ನಾವಿದ್ದ ಹೋಟೆಲ್ ತುಂಬಾ ದೂರದಲ್ಲೇನೂ ಇರಲಿಲ್ಲವಾದ್ದರಿಂದ ಇಂಡಿಯನ್ ರೆಸ್ಟೊರೆಂಟ್ ಹುಡುಕಿಕೊಂಡು ಊಟಕ್ಕೆ ಹೋಗಲು ತಡವಾಗಲಿಲ್ಲ. ‘ಶೆರಟನ್ ಮುಷ್ಟಿಕ’ ಹೋಟೆಲ್ಲಿನಲ್ಲಿರುವ ‘ಗಣೇಶ ಏಕ್ ಸಂಸ್ಕೃತಿ’ ಹೆಸರು ಕೇಳುತ್ತಿದ್ದಂತೆ ಖುಷಿಯೆನಿಸಿ ಅಲ್ಲಿಗೇ ಹೊರಟೆವು. ನಾವೆಣಿಸಿದ್ದಕ್ಕಿಂತಲೂ ರುಚಿಯಾಗಿದ್ದ ಊಟ ನಮ್ಮನ್ನು ಅಲ್ಲಿರುವಷ್ಟು ದಿನವೂ ಇನ್ನೆಲ್ಲೂ ಹೋಗದಂತೆ ಕಟ್ಟಿಹಾಕಿತು.

 

ಇಲ್ಲಿನ ಎಲ್ಲಾ ಪ್ರಸಿದ್ಧ ಪ್ರವಾಸಿ ತಾಣಗಳಿಗೂ ಹೋಗಿಬರಲು ಕೆಲವು ಗಂಟೆಗಳೇ ಬೇಕಾಗುತ್ತದೆಯಾದರೂ ಹೋಟೆಲ್‌ನವರು ಟ್ಯಾಕ್ಸಿ ವ್ಯವಸ್ಥೆ ಮಾಡಿಕೊಡುತ್ತಾರೆ. ನಮ್ಮ ಹೋಟೆಲ್‌ನಲ್ಲಿ ಕೊಟ್ಟ ನಮ್ಮ ‘ಬೇಳೆ ಹೋಳಿಗೆ’ಯನ್ನು ನೆನಪಿಸುವ ಇಲ್ಲಿನ ಪ್ರಸಿದ್ಧ ಲೋಕಲ್ ಸಿಹಿ ತಿಂಡಿ ‘ಬಕ್ ಪಿಯ’ ತಿಂದ ಮೇಲೆ ನಾವೂ ಹೋಳಿಗೆಗೆ ಈ ಹೊಸ ಟ್ವಿಸ್ಟ್ ಕೊಡಬಹುದಲ್ಲ ಎನಿಸಿತು. ಪುಟ್ಟ ಹೆಜ್ಜೆಯಿಡುತ್ತಾ ಚುರುಕಾಗಿ ಓಡಾಡುವ ನಗುಮೊಗದ ಹೋಟೆಲ್‌ ಹುಡುಗಿಯರು ನಮಗಾಗಲೇ ಹೃದಯಕ್ಕೆ ಹತ್ತಿರವಾದಂತೆನಿಸುತ್ತಿದ್ದರು.‘ಪ್ರಂ ಬನನ್’ ಎಂಬುದು ಇಲ್ಲಿನ ಒಂದು ದೇವಾಲಯವಲ್ಲ, ಹಲವು ದೇವಾಲಯಗಳ ಸಮುಚ್ಚಯ. ಅದೂ ನಮ್ಮ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರದ್ದು. ಬಹುಶಃ ಪರಬ್ರಹ್ಮನ್ ಎಂಬುದರ ಅಪಭ್ರಂಶ ಪ್ರಂ ಬನನ್ ಎಂದಾಗಿರಬಹುದು. ಒಂಬತ್ತನೇ ಶತಮಾನದ ಈ ಬೃಹತ್ ಹಿಂದೂ ದೇವಾಲಯವನ್ನು ‘ಚಂಡಿ ಪ್ರಂ ಬನನ್’ ಎನ್ನುತ್ತಾರೆ ಇಲ್ಲಿನವರು. ಇಲ್ಲಿ ದೊರಕಿರುವ ಶಾಸನಗಳ ಪ್ರಕಾರ, ಶಿವನಿಗಾಗಿ ಮೊಟ್ಟಮೊದಲು ಮಂದಿರ ನಿರ್ಮಾಣಕಾರ್ಯ ಕೈಗೊಂಡಿದ್ದು ಹಿಂದೂ ಸಂಜಯ ವಂಶದ ದೊರೆಯಾದ ರಕಯಿ ಪಿಕಟನ್ ಎಂಬುವವನು. 

 

ಅವನ ಕಾಲಾನಂತರ ಬಂದ ದೊರೆ ಲೋಕಪಾಲ ಹಾಗೂ ಬಲಿತುಂಗ ಮಹಾ ಶಂಭು ಎಂಬುವವರು ಇದನ್ನು ವಿಸ್ತರಿಸಿ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಬೌದ್ಧರ  ಶೈಲೇಂದ್ರ ವಂಶದ ದೊರೆಗಳ ಪ್ರಾಬಲ್ಯ ಬೊರೋ ಬುದುರ್‌ನಲ್ಲಿ ಹೆಚ್ಚಾಗಿರುವುದನ್ನು ತಗ್ಗಿಸಿ ಹಿಂದೂ ಪ್ರಾಬಲ್ಯವನ್ನು ಮೆರೆಯುವುದು ಈ ಬೃಹತ್ ದೇವಾಲಯಗಳ ನಿರ್ಮಾಣದ ಉದ್ದೇಶವಿದ್ದಿರಬೇಕು. ಅನೇಕ ಬೌದ್ಧರು ಹಿಂದೂ ಧರ್ಮಕ್ಕೆ ಮರಳುವುದರೊಂದಿಗೆ ಅದರ ಸಾಫಲ್ಯವನ್ನೂ ಕಾಣುವಂತಾಯಿತು. ಜಾವಾದಲ್ಲೇ ಅತ್ಯಂತ ಉನ್ನತವಾದ ಕಟ್ಟಡ ಇದಾಗಿದ್ದು, ಗೋಪುರ 154 ಅಡಿ ಎತ್ತರವಿದೆ. 

 

ಮೆರಾಪಿ ಪರ್ವತದಲ್ಲಿ ಎದ್ದ ಭಯಂಕರ ಜ್ವಾಲಾಮುಖಿ, 16ನೇ ಶತಮಾನದ ಘೋರವಾದ ಭೂಕಂಪ ಮೊದಲಾದ ಆಪತ್ತಿನಿಂದ ತತ್ತರಿಸಿದ ಇಲ್ಲಿನ ಜನ ಬೇರೆ ಬೇರೆ ಕಡೆಗೆ ವಲಸೆ ಹೋಗಲಾರಂಭಿಸಿದರು. ಇದರಿಂದ ಜನನಿಬಿಡವಾಗಿ ಹೋಮ ಹವನ ಅರ್ಚನೆಗಳಿಂದ ಕಂಗೊಳಿಸುತ್ತಿದ್ದ ಈ ಜಾಗ ಕಾಡುಮರಗಳಿಂದ ಸುತ್ತುವರೆದು ನಿರ್ಜನ ಪ್ರದೇಶವಾಯಿತು. ನಂತರ ಹದಿನಾಲ್ಕನೇ ಶತಮಾನದಲ್ಲಿ ಇಸ್ಲಾಂ ಪ್ರಭಾವಕ್ಕೊಳಗಾದ ಈ ಪ್ರದೇಶದಿಂದ ಅಳಿದುಳಿದ ಹಿಂದೂಗಳೂ ತಮ್ಮ ಧರ್ಮವನ್ನು ಉಳಿಸಿಕೊಳ್ಳಲು ಬಾಲಿಗೆ ಪಲಾಯನ ಮಾಡುವ ಪರಿಸ್ಥಿತಿ ಉಂಟಾಯಿತು. 

 

ಆದರೂ ಜಾವನೀಸ್ ಜನರ ಜನಪದ ಕತೆಗಳಲ್ಲಿ ಜೀವಂತವಾಗಿದ್ದ ಈ ದೇವಾಲಯಗಳನ್ನು ಪತ್ತೆಹಚ್ಚಿ ಅದರ ಇತಿಹಾಸವನ್ನು ಬಯಲು ಮಾಡಿದ ಕೀರ್ತಿ ಬ್ರಿಟಿಶ್ ಅಧಿಕಾರಿ ಕಾಲಿನ್ ಮೆಕೆಂಜಿಗೆ ಸಲ್ಲಬೇಕು. ಅಷ್ಟರಲ್ಲಾಗಲೇ ಪಾಳುಬಿದ್ದ ದೇವಾಲಯದ ಕಲ್ಲುಗಳನ್ನು ಸ್ಥಳೀಯರು ಕಟ್ಟಡಗಳ ಅಡಿಪಾಯಕ್ಕೆ ಬಳಸಿದ್ದರೆ ಇಲ್ಲಿಯೇ ಬೀಡು ಬಿಟ್ಟಿದ್ದ ಡಚ್ ಜನರು ತಮ್ಮ ಮನೆಯ ಅಲಂಕಾರಕ್ಕೆ ಸಣ್ಣ ಪುಟ್ಟ ವಿಗ್ರಹಗಳನ್ನು ಹೊತ್ತೊಯ್ದಿದ್ದರು. 

 

1880ರಲ್ಲೇ ಸರ್ವೆ ಮಾಡಿ ಸಂರಕ್ಷಣೆಯ ಕೆಲಸ ಶುರುಮಾಡಿದ್ದರೂ ಅದು ಕುಂಟುತ್ತಾ ಸಾಗಿ ಲೆಕ್ಕವಿಲ್ಲದಷ್ಟು ಲೂಟಿಯನ್ನು ಕಂಡಿತ್ತು. ಕೊನೆಗೂ 1953ರಲ್ಲಿ ಸ್ವಾತಂತ್ರ್ಯಾನಂತರ ಅಧ್ಯಕ್ಷ ಸುಕರ್ಣೋರಿಂದ ಶಿವಾಲಯ ಉದ್ಘಾಟನೆಗೊಂಡಿತು.

 

ಇಷ್ಟೆಲ್ಲಾ ಹೇಳಿದ ಮೇಲೆ ‘ನೋಡಲಿಲ್ಲೇನು ಉಳಿದೀತು ಮಣ್ಣು’ ಎಂದು ನೀವಂದುಕೊಂಡಿರಬಹುದು. ಆದರೆ ಅಬ್ಬಬ್ಬಾ.., ನೋಡಿ ನೋಡಿ, ಹತ್ತಿ ಇಳಿದು, ಒಳಹೊಕ್ಕು ಹೊರಬಂದು ನಾವಂತೂ ಸುಸ್ತಾಗಿ ಹೋದೆವು. ಅದ್ಯಾವ ದೈತ್ಯಶಕ್ತಿ ಅಂತಹ ಮಜಬೂತಾದ ಕಲ್ಲುಗಳನ್ನು ಹೊತ್ತು ತಂದು ಅಲ್ಲಿಟ್ಟಿರಬಹುದು? ಅದ್ಯಾವ ಯಕ್ಷಿ ಆ ಕಲ್ಲುಗಳನ್ನು ಕೊರೆದು ಚಿತ್ರ ಬಿಡಿಸಿರಬಹುದು? ಅದ್ಯಾವ ವಿಶ್ವಕರ್ಮ ಅವತರಿಸಿ ಬಂದು ಕಣ್ತಣಿಯುವಂಥ ಬೃಹತ್ ಗೋಪುರವನ್ನೊಳಗೊಂಡ ದೇವಾಲಯ ನಿರ್ಮಿಸಿ ಹೋಗಿರಬೇಕು? ಎಲ್ಲಕ್ಕಿಂತ ಹೆಚ್ಚಾಗಿ ಬೆಂಕಿಯುಗುಳುವ ಜ್ವಾಲೆ, ನಡುಗುವ ಭೂಮಿ – ಈ ಎಲ್ಲವುಗಳಿಂದ ಅದ್ಯಾವ ಶಕ್ತಿ ಅದನ್ನು ಕಾಪಾಡಿರಬಹುದು?

 

ಅಲ್ಲಿನ ಲೋಕಲ್ ಗೈಡ್ ಬಾಯಲ್ಲಿ ರಾಮಾಯಣ, ಮಹಾಭಾರತ ಕತೆಗಳನ್ನು ಕೇಳುವಾಗ ವಿಚಿತ್ರವೆನಿಸಿತು. ಗೋಡೆಯ ಮೇಲೆ ಕಾಣುವ ಆನೆ ತುಳಿದರೂ ಏಳಲಾರದ ಕುಂಭಕರ್ಣನ ನಿದ್ದೆ, ಶರಶಯ್ಯೆಯಲ್ಲಿ ಒರಗಿರುವ ಭೀಷ್ಮ... ಎಲ್ಲರೂ ಅದೆಷ್ಟು ಪರಿಚಿತರು ಎಂಬ ಭಾವ.

 

ಒಂದು ದೇವಾಲಯ ನೋಡಿ ಸುಸ್ತಾದ ನಾವು ವಿಶ್ವವಿಖ್ಯಾತ ‘ಬೋರೋ ಬುದುರ್’ ನೋಡಲು ಮರುದಿನ ಪ್ರಯಾಸದಿಂದ ಹೊರಟೆವು. ಬೆಳಿಗ್ಗೆ ಮೂರಕ್ಕೇ ಹೊರಟರೆ ಅಲ್ಲಿನ ಸೂರ್ಯೋದಯ ರಮಣೀಯವಾಗಿರುತ್ತಾದರೂ ಏಳಲು ನಮಗೆ ಆಗಬೇಕಲ್ಲ. ಹಾಗಾಗಿ ಸೂರ್ಯ ನೆತ್ತಿ ಸುಡುವಷ್ಟರಲ್ಲಿ ಬುದ್ಧನ ಜಾತಕ ಕತೆಗಳಿಂದ ಸುತ್ತುವರೆದ ಮೂರು ಅಂತಸ್ತುಗಳಿರುವ ಬೃಹತ್ ಸ್ತೂಪವನ್ನು ‘ಉಸ್ಸಪ್ಪಾ’ ಎನ್ನುತ್ತಾ ಹತ್ತತೊಡಗಿದೆವು. ಮೊದಲ ಸುತ್ತು ಕಾಮಧಾತು, ಎರಡನೆಯದು ರೂಪಧಾತು ಹಾಗೂ ಕೊನೆಯದು ಅರೂಪಧಾತು ಎಂದು ಕರೆಯಲ್ಪಡುತ್ತದೆ. 

 

ಜಗತ್ತಿನಲ್ಲಿಯೇ ಅತಿ ಹೆಚ್ಚು ಬುದ್ಧನ ಕುರಿತಾದ ಶಿಲ್ಪ, ಕೆತ್ತನೆಗಳಿರುವ ಸ್ತೂಪ ಇದು. ಇಂತಹ ಅದ್ಭುತ ವಾಸ್ತುಶಿಲ್ಪದ ಅಸ್ತಿತ್ವ ಸ್ಥಳೀಯರಿಗೆ ಗೊತ್ತೇ ಇರಲಿಲ್ಲ ಎಂದರೆ ಆಶ್ಚರ್ಯವೆನಿಸುತ್ತದಲ್ಲವೇ? ಮೌಂಟ್ ಮೆರಾಪಿಯಲ್ಲೆದ್ದ ಜ್ವಾಲಾಮುಖಿ ಎಬ್ಬಿಸಿದ ಬೂದಿಗೆ ಈ ಸ್ತೂಪ ಸಂಪೂರ್ಣವಾಗಿ ಮುಚ್ಚಿ ಹೋಗಿತ್ತು. ಸರ್ ಸ್ಟ್ಯಾಂಫರ್ಡ್ ರಾಫೆಲ್ಸ್ ಎಂಬ ಆಂಗ್ಲ ಅಧಿಕಾರಿ ಸ್ಥಳೀಯರ ಸಹಾಯದಿಂದ ಇದನ್ನು ಪತ್ತೆಹಚ್ಚಿದಾಗ ಜಗತ್ತು ದಿಗ್ಮೂಢವಾಗಿತ್ತು.

 

ಅಲ್ಲಿಂದಿಲ್ಲಿಗೂ ಇಲ್ಲಿ ಸಂರಕ್ಷಣಾ ಕಾರ್ಯ ಸಾಗಿಬಂದು ಇಂಡೋನೇಷ್ಯಾ ಸರ್ಕಾರ ಹಾಗೂ ಯುನೆಸ್ಕೋ ಇದರ ಉಸ್ತುವಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿವೆ. ಕೊನೆಯ ಅಂತಸ್ತಿನಲ್ಲಿ ಗಂಟೆಯಾಕಾರದ ಶಿಲ್ಪಗಳ ಮಧ್ಯೆ ಯೋಗಮುದ್ರೆಯಲ್ಲಿ ಕುಳಿತ ಬುದ್ಧನ ಪ್ರತಿಮೆಗಳು ಎಷ್ಟು ಸುಂದರವಾಗಿವೆಯೋ ಸುತ್ತಲೂ ಕಾಣುವ ನಿಸರ್ಗ ಕೂಡ ಅದನ್ನು ಮತ್ತಷ್ಟು ಸುಂದರವಾಗಿಸಲು ಹೊರಟಂತೆನಿಸುತ್ತದೆ.

 

ಮೌಂಟ್ ಮೆರಾಪಿ ಹಾಗೂ ಅದು ಉಗುಳುವ ಅಗ್ನಿಜ್ವಾಲೆ, ಅದರ ಆಟಾಟೋಪಗಳನ್ನೆಲ್ಲ ಈಗಾಗಲೇ ನೋಡಿ ಕೇಳಿ ಪರಿಚಿತರಾದ ನಾವು – ಮಾರನೇ ದಿನ ನೇರವಾಗಿ ಅಲ್ಲಿಗೇ ಹೊರಟೆವು. ನಮ್ಮನ್ನು ಕೂರಿಸಿಕೊಂಡು ರಸ್ತೆಗಳೇ ಇಲ್ಲದ ಕಾಡುಮೇಡುಗಳಲ್ಲಿ ಗಡ ಗಡ ಸದ್ದು ಮಾಡುತ್ತಾ ಲೋಕಲ್‌ ಜೀಪು ಹೊರಟಿತು. ಎರಡು ದಿನ ದೇವಸ್ಥಾನ, ಸ್ತೂಪ ಎಂದು ಸುತ್ತಾಡಿದ ಸುಸ್ತು ಏನೇನೂ ಅಲ್ಲವೆನಿಸಿ ತುಕ್ಕುಹಿಡಿದ ನಮ್ಮ ಕೀಲುಗಳೆಲ್ಲ ಕಿರ್‌ಗುಟ್ಟಿದವು.

 

ಕೊನೆಗೂ ಮೆರಾಪಿ ಎಂಬ ಆ ರಕ್ಕಸನ ಎದುರಲ್ಲಿ ನಿಂತಾಗ ಕಂಡದ್ದೇನು? ದೂರದಲ್ಲಿ ಆಕಾಶವನ್ನು ಸೇರುತ್ತಿದ್ದ ಸಣ್ಣ ಹೊಗೆ ಹಾಗೂ ಎದುರಲ್ಲಿ ಬಿದ್ದುಕೊಂಡ ಬೃಹತ್ ಕ್ವಾರಿ. ಆಳದಲ್ಲೆಲ್ಲಾ ಲಾರಿಗಳಲ್ಲಿ ಸುಡುಮಣ್ಣನ್ನು ಹೊತ್ತೊಯ್ಯಲು ನಿಂತ ಕೆಲವೇ ಕೆಲವು ಮಂದಿ. ನಾವೂ ಕೆಳಗಿಳಿದು ಜ್ವಾಲಾಮುಖಿ ಸುಟ್ಟ ಮಣ್ಣಲ್ಲಿ ಕಲ್ಲನ್ನು ಆಯ್ದುಕೊಳ್ಳಲು ಹೊರಟಾಗಷ್ಟೇ ತಿಳಿಯಿತು – ಅದಿನ್ನೂ ಬಿಸಿ ಬಿಸಿಯಾಗಿದೆಯೆಂದು.

 

ಜಗತ್ತಿನಲ್ಲೇ ಅತೀ ದೀರ್ಘಕಾಲದಿಂದ ಜಾಗೃತವಾಗಿರುವ ಜ್ವಾಲಾಮುಖಿ ಇದು. ಅಂತೂ ಇಂತೂ ಬಿಸಿ ಕಲ್ಲನ್ನೇ ಕಾಗದದ ಪೊಟ್ಟಣದಲ್ಲಿ ಸುತ್ತಿಕೊಂಡು ಮತ್ತೆ ಕೀಲು ಸಡಿಲಮಾಡುವ ಜೀಪ್ ಹತ್ತಿ ವಾಪಸ್ಸಾದೆವು.

 

ಕೊನೆಯ ದಿನ ಇದುವರೆಗೂ ಅನುಭವಿಸಿದ ಮೈಕೈ ನೋವು ಶಮನ ಮಾಡುವಂತಿತ್ತು ಮೂರುತಾಸಿನ ವೈಟ್ ವಾಟರ್ ರಾಫ್ಟಿಂಗ್. ಇಲೋ ರಿವರ್‌ನಲ್ಲಿ 12.5 ಕಿ.ಮೀ. ಉದ್ದದ ರಾಫ್ಟಿಂಗ್ ಸೊಗಸಾಗಿತ್ತು. ನೀರನ ರಭಸ ಹೆಚ್ಚಾಗಿಲ್ಲದ ಈ ತಾಣ, ನೀರಿಗೆ ಹೆದರುವ ನನ್ನಂತಹವರೂ ಹೋಗಬಹುದಾದಂತಹ ಜಾಗ. ಹಾಯಾಗಿ ಮೈಗೆ ಸೋಕುವ ನೀರನ್ನು ಮನಸ್ಸಿನಾಳಕ್ಕೂ ಬಿಟ್ಟುಕೊಳ್ಳುತ್ತಾ ಮರೆಯಲಾರದ ಯೋಗ್ಯಕರ್ತ ಟೂರಿನ ಮೆಲುಕು ಹಾಕಿಕೊಂಡೆ. 

ಮಾಲಿಯೋ ಬೋರೋ ಮಾರ್ಕೆಟ್‌ನಲ್ಲಿ ಸುತ್ತಾಡಿ ಇಲ್ಲಿನ ಪ್ರಸಿದ್ಧ ಬಾಟಿಕ್ ಬಟ್ಟೆಗಳನ್ನು, ಕರಕುಶಲ ವಸ್ತುಗಳನ್ನು ಕೊಳ್ಳುವಾಗ ಅತ್ಯಂತ ಕಡಿಮೆ ಮೌಲ್ಯದ  ಇಂಡೊನೇಷ್ಯನ್‌ ರುಪಯ್ಯಾ  ಎಣಿಸಿ ಸುಸ್ತಾಗಿ ಹೋಗುತ್ತದೆ. 

 

ಇಸ್ಲಾಮಿಕ್ ಮೂಲಭೂತವಾದಿಗಳು ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಈ ಹೊತ್ತಿನಲ್ಲಿ ಕೂಡಾ ಅತ್ಯಧಿಕ ಜನಸಂಖ್ಯೆಯ ಇಸ್ಲಾಮಿಕ್ ಜನರ ದೇಶವಾದ ಇಂಡೋನೇಷ್ಯಾದಲ್ಲಿ ಪ್ರವಾಸಿಗರು ಅಡ್ಡಾಡಲು ಯಾವ ಭಯವೂ ಇಲ್ಲ. ಸಿಂಗಪುರಕ್ಕೆ ಪ್ರವಾಸ ಹೊರಡುವಾಗ ನೆರೆಯ ಯೋಗ್ಯಕರ್ತವನ್ನೂ ಪಟ್ಟಿಯಲ್ಲಿ ಸೇರಿಸಿಕೊಂಡು ಬಿಡಿ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.