ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಯುವ ಗೆಜ್ಜೆಗೆ ಹೆಜ್ಜೆಯ ಮೇಳ

ನೃತ್ಯಲೋಕ
Last Updated 10 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮೋಹಕ ಅಭಿನಯ, ಆಕರ್ಷಕ ನೃತ್ಯ ಭಂಗಿಯ ಮೂಲಕ ಕಲಾರಸಿಕರ ಮನಸ್ಸಿನಲ್ಲಿ ನೆಲೆಯೂರಿದವರು ಮಧುಲಿತಾ ಮೊಹಾಪಾತ್ರ. ದೇಶ ವಿದೇಶಗಳ ನೃತ್ಯ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಅವರು ಕಳೆದ ಏಳು ವರ್ಷಗಳಿಂದ ಬೆಂಗಳೂರನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದಾರೆ.

ಮಧುಲಿತಾ ಮೂಲತಃ ಒಡಿಶಾದ ಭವಾನಿಪಟ್ಟಣದವರು. ಟೀವಿ ಪರದೆಯ ಮೇಲೆ ಮಿಂಚುತ್ತಿದ್ದ ಕಲಾವಿದರ ನೃತ್ಯ ಕಣ್ತುಂಬಿಕೊಳ್ಳುತ್ತಾ ತಾನು ಅದೇ ದಾರಿ ಹಿಡಿಯಬೇಕೆಂದು ಚಿಕ್ಕಂದಿನಲ್ಲಿ ಆಸೆ ಪಟ್ಟರು. ಮನೆಯಲ್ಲಿ ವಿರೋಧವಿದ್ದರೂ ಪಟ್ಟು ಬಿಡದೆ ಜನಪದ ನೃತ್ಯವಾದ ಸಂಬಲ್‌ಪುರಿಯನ್ನು ಭೀಮಸೇನ್‌ ಸಾಹು ಎನ್ನುವವರ ಬಳಿ ಕಲಿತರು.

ನೃತ್ಯ ಸಂಗದ ಜೊತೆಜೊತೆಗೆ ಶೈಕ್ಷಣಿಕ ಔನ್ನತ್ಯವನ್ನೂ ಸಾಧಿಸುತ್ತಿದ್ದ ಮಧುಲಿತಾ ಬಿಕಾಂ ಅಭ್ಯಾಸ ಮಾಡುತ್ತಿದ್ದಾಗ ಕೃಷ್ಣ ಚಂದ್ರ ಸಾಹು ಎನ್ನುವವರು ಆಗಷ್ಟೇ ಪ್ರಾರಂಭಿಸಿದ ಒಡಿಶಾ ನೃತ್ಯತರಗತಿಗೆ ಸೇರಿಕೊಂಡರು. ಅಲ್ಲಿಂದ ಪ್ರಾರಂಭವಾದ ಅವರ ಒಡಿಸ್ಸಿ ನೃತ್ಯ ಪಯಣ ಮುಂದೆ ಭುವನೇಶ್ವರದಲ್ಲಿ ಒಡಿಶಾ ಡಾನ್ಸ್‌ ಅಕಾಡೆಮಿಯಲ್ಲಿ ಮುಂದುವರೆಯಿತು. ಅಲ್ಲಿಯೇ 10 ವರ್ಷ ನೃತ್ಯ ಕಲಿತ ಅವರಿಗೆ ಗಂಗಾಧರ ಪ್ರಧಾನ್‌, ಅರುಣಾ ಮೊಹಾಂತಿ ನೃತ್ಯ ಗುರುಗಳು.

ಕಳೆದ 17–18 ವರ್ಷದಿಂದ ಒಡಿಸ್ಸಿ ನೃತ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಮಧುಲಿತಾ ಇಂದಿಗೂ ಅರುಣಾ ಮೊಹಾಂತಿ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ‘ನೃತ್ಯ ಸಮುದ್ರ ಇದ್ದಂತೆ. ಕಲಿತು ಮುಗಿಯಿತು ಎನ್ನುವುದೇ ಇಲ್ಲ. ನೃತ್ಯ ಕಲಿತಷ್ಟೂ ಅದರ ಹರವು ವಿಸ್ತರಿಸುತ್ತದೆ’ ಎನ್ನುತ್ತಾರೆ ಮಧುಲಿತಾ.

ಎಂ.ಕಾಂ. ಹಾಗೂ ಎಂಬಿಎ ವಿದ್ಯಾಭ್ಯಾಸ ಪೂರೈಸಿರುವ ಮಧುಲಿತಾ ಅವರಿಗೆ ಸದ್ಯ ನೃತ್ಯ ಕ್ಷೇತ್ರವೇ ಸರ್ವಸ್ವ. ಅದೇ ಬದುಕು. ದಿನದ ಹೆಚ್ಚಿನ ಸಮಯವನ್ನು ಅವರು ನೃತ್ಯಾಭ್ಯಾಸ, ತರಬೇತಿ ನೀಡುವುದು, ನೃತ್ಯ ಪ್ರದರ್ಶನ ನೀಡುವುದು, ಉತ್ಸವಗಳನ್ನು ಆಯೋಜಿಸುವುದರಲ್ಲಿಯೇ ಕಳೆಯುತ್ತಾರೆ.

‘ನಾನು ಒಡಿಸ್ಸಿ ನೃತ್ಯ ಪ್ರಚಾರಕಿ, ಹೆಚ್ಚೆಚ್ಚು ಜನರು ಈ ನೃತ್ಯದ ಬಗೆಗೆ ತಿಳಿದುಕೊಳ್ಳುವಂತೆ ಮಾಡುವುದೇ ನನ್ನ ಉದ್ದೇಶ’ ಎನ್ನುತ್ತಾರೆ.

‘2009ರಲ್ಲಿ ನಾನು ಬೆಂಗಳೂರಿಗೆ ಬಂದಾಗ ಅನೇಕರಿಗೆ ಶಾಸ್ತ್ರೀಯ ನೃತ್ಯ ಎಂದರೆ ಭರತನಾಟ್ಯ ಎಂದು ಮಾತ್ರ ಗೊತ್ತಿತ್ತು. ಆದರೆ ಇಂದು ಒಡಿಸ್ಸಿ ನೃತ್ಯ ಎಂದರೇನು ಎಂದು ತಿಳಿದಿದೆ, ಅದನ್ನೇ ಕಲಿಯುತ್ತೇವೆ ಎನ್ನುತ್ತಾರೆ. ಪ್ರಾರಂಭದಲ್ಲಿ 2–3 ವಿದ್ಯಾರ್ಥಿಗಳು ನನ್ನ ಬಳಿ ನೃತ್ಯ ಕಲಿಯುತ್ತಿದ್ದರು. ಈಗ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ’ ಎನ್ನುವಾಗ ಮಧುಲಿತಾ ಕಂಗಳು ಹೆಮ್ಮೆಯಿಂದ ಹಿಗ್ಗುತ್ತವೆ.

ಬಾಣಸವಾಡಿ, ಮಲ್ಲೇಶ್ವರ, ಕೋರಮಂಗಲ, ಬನಶಂಕರಿಗಳಲ್ಲಿ ಅವರು ತರಗತಿಗಳನ್ನು ನಡೆಸುತ್ತಾರೆ. 5 ರಿಂದ 50 ವರ್ಷದವರೂ ಇವರ ಬಳಿ ನೃತ್ಯ ಕಲಿಯುತ್ತಿದ್ದಾರೆ.

ನೃತ್ಯ, ಸಂಗೀತ...ಯಾವುದೇ ಕಲೆಯಾದರೂ ಸೈ, ಅದನ್ನು ಅಪ್ಪಿ, ಪ್ರೋತ್ಸಾಹಿಸುವ ಮನಸ್ಥಿತಿ ಬೆಂಗಳೂರಿಗರದು. ಅದೂ ಅಲ್ಲದೆ ನೃತ್ಯಗ್ರಾಮದ ಪ್ರೊತಿಮಾ ಬೇಡಿ ಅವರಿಂದಾಗಿ ಈ ನೆಲದಲ್ಲಿ ಒಡಿಸ್ಸಿ ಕಲೆ ಬೇರುಬಿಟ್ಟಿತ್ತು. ಇದರಿಂದಾಗಿ ಮಧುಲಿತಾ ಪ್ರಯತ್ನದ ಹಾದಿ ಸುಲಭವಾಯಿತಂತೆ.  ತಿಂಗಳಿಗೆ ಕನಿಷ್ಠ 5–6 ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಧುಲಿತಾ ಹಾಗೂ ಅವರ ತಂಡ ಇದುವರೆಗೆ ಸಿಂಗಪುರ, ಮಲೇಷ್ಯಾ, ಅಮೆರಿಕಗಳಲ್ಲಿ ನೃತ್ಯ ಪ್ರದರ್ಶನ ನೀಡಿದೆ.

ನೃತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರಗಳನ್ನೂ ನಡೆಸಿಕೊಟ್ಟಿದ್ದಾರೆ. ಸದ್ಯದಲ್ಲೇ ಲಂಡನ್‌ನಲ್ಲೂ ಅವರು ನೃತ್ಯದ ಕಂಪು ಪಸರಿಸುವ ತಯಾರಿಯಲ್ಲಿದ್ದಾರೆ. ದೇಶ, ವಿದೇಶದಲ್ಲಿ ನಡೆಯುವ ಹೆಚ್ಚಿನ ಎಲ್ಲಾ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಮಧುಲಿತಾ ತಂಡಕ್ಕೆ ಅವಕಾಶ ಇರುತ್ತದೆ.

ಇದೇ ಅವರ ನೃತ್ಯವೈಖರಿಗೆ ಹಿಡಿವ ಕನ್ನಡಿ.  ಪ್ರತಿವರ್ಷ ನಗರದಲ್ಲಿ ನಮನ್‌ ಉತ್ಸವ ಸೇರಿದಂತೆ ಬಗೆಬಗೆಯ ನೃತ್ಯ ಕಾರ್ಯಕ್ರಮ ನಡೆಸುತ್ತಾರೆ. ಹಿರಿಯ ಗುರುಗಳು, ಕಲಾವಿದರನ್ನು ನಮನ್‌ ಉತ್ಸವದ ಮೂಲಕ ಜನರಿಗೆ ಪರಿಚಯಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಒಡಿಸ್ಸಿ ಕಂಪು
ಒಡಿಸ್ಸಿ ನೃತ್ಯಪ್ರಚಾರದ ಕನಸು  ಕಾಣುತ್ತಿರುವ ಮಧುಲಿತಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಒಡಿಸ್ಸಿ ತರಬೇತಿ ನೀಡುತ್ತಿದ್ದಾರೆ. ಆ ಮಕ್ಕಳ ಖುಷಿ, ಅವರಲ್ಲಿನ ಆಸಕ್ತಿ ಕಂಡು ಬೆರಗಾಗುವ ಮಧುಲಿತಾ, ಆ ಮಕ್ಕಳಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದೂ ಬೇಸರಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ಶಿಬಿರಗಳನ್ನೂ ನಡೆಸಿಕೊಡುತ್ತಾರೆ.

ಶಿಕ್ಷಣ ಮುಗಿಸಿ ಕಂಪೆನಿಯೊಂದರಲ್ಲಿ ಕೆಲಸವನ್ನೂ ಮಾಡುತ್ತಿದ್ದ ಮಧುಲಿತಾ ಅವರಿಗೆ ಪೂರ್ಣಪ್ರಮಾಣದಲ್ಲಿ ನೃತ್ಯಕ್ಷೇತ್ರದಲ್ಲಿಯೇ ತೊಡಗಿಕೊಳ್ಳಲು ಬೆಂಬಲ ನೀಡಿದ್ದು ಅವರ ಪತಿ ಇಮ್ರಾನ್‌.  ಸಾಮಾಜಿಕ ಕಾರ್ಯಕರ್ತರಾಗಿರುವ ಅವರೇ ತನ್ನೆಲ್ಲಾ ಸಾಧನೆಗೆ ಬೆನ್ನೆಲುಬು ಎಂದು ಹರ್ಷಿಸುವ ಮಧುಲಿತಾಗೆ ಕರ್ನಾಟಕದ ಮನೆಮನೆಯಲ್ಲೂ ಒಡಿಸ್ಸಿ ಕಂಪು ಪಸರಿಸುವ ಮಹದಾಸೆ ಇದೆ.
ಮಾಹಿತಿಗೆ: 9972530600 

*
ಉತ್ತಮ ಶಿಕ್ಷಣ ಸಿಗದಿದ್ದರೆ ಉತ್ತಮ ಕಲಾವಿದರಾಗಿ ಬೆಳೆಯುವುದೂ ಸಾಧ್ಯವಿಲ್ಲ. ಹೀಗಾಗಿ ಶಿಕ್ಷಣಕ್ಕೇ ಪ್ರಾಧಾನ್ಯ ನೀಡಿ. ಜೊತೆಗೆ ನೃತ್ಯ, ಸಂಗೀತವನ್ನೂ ಕಲಿಯಿರಿ.
-ಮಧುಲಿತಾ ಮೊಹಾಪಾತ್ರ,
ಒಡಿಸ್ಸಿ ನೃತ್ಯ ಕಲಾವಿದೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT