ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಿಗಳ ಹತ್ಯೆಗೆ ಸಂಚು ರೂಪಿಸಿದ್ದ ಎಲ್‌ಇಟಿ

Last Updated 19 ಮಾರ್ಚ್ 2017, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ನೆಲೆಸಿ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳ ಹತ್ಯೆಗೆ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯು ಸಂಚು ರೂಪಿಸಿತ್ತು’ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮೇಲೆ ನಡೆದಿದ್ದ ಉಗ್ರರ ದಾಳಿ ಪ್ರಕರಣ ಸಂಬಂಧ  ಕರ್ನಾಟಕ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್‌) ಪೊಲೀಸರು  ವಶಕ್ಕೆ ಪಡೆದಿರುವ ಶಂಕಿತ ಹಬೀಬ್‌ ಮಿಯಾ (34), ಈ ವಿಷಯ ಬಾಯ್ಬಿಟ್ಟಿದ್ದಾನೆ.

‘ಸ್ನೇಹಿತನೊಬ್ಬನ  ಮೂಲಕ 2002ರಲ್ಲಿ ಸಂಘಟನೆ ಸೇರಿಕೊಂಡಿದ್ದೆ. ತ್ರಿಪುರ, ಬಿಹಾರ, ಗುಜರಾತ್‌ನಲ್ಲಿ ತರಬೇತಿ ಪಡೆದಿದ್ದೆ. ಎ.ಕೆ–56 ಬಂದೂಕು ಬಳಕೆ, ಬಾಂಬ್‌ ತಯಾರಿಕೆ ಹಾಗೂ  ಆತ್ಮಾಹುತಿ ಬಾಂಬ್‌ ಬಗ್ಗೆ ಅಲ್ಲಿಯೇ ತರಬೇತಿ ಪಡೆದಿದ್ದೆ. ತರಬೇತಿ ವೇಳೆಯೇ ಎಲ್‌ಇಟಿ ಮುಖ್ಯಸ್ಥರು, ದೇಶದ ವಿಜ್ಞಾನಿಗಳ ಹತ್ಯೆ ಮಾಡುವ ಬಗ್ಗೆ  ಸಂಚು ರೂಪಿಸಿದ್ದರು’

‘ದೇಶದ ಹಲವೆಡೆ ನೆಲೆಸಿದ್ದ ಆಯ್ದ ವಿಜ್ಞಾನಿಗಳ ವಾಸಸ್ಥಾನ ಹಾಗೂ ಕಚೇರಿಗಳ ಮಾಹಿತಿ ಸಂಗ್ರಹಿಸಿದ್ದೆವು. ಅವರ ಚಲನವಲನಗಳ ಬಗ್ಗೆ ನಿಗಾವಹಿಸಿ  ಹತ್ಯೆ ಮಾಡುವುದು ನಮ್ಮ ಉದ್ದೇಶವಾಗಿತ್ತು’ ಎಂದು ಹಬೀಬ್‌ ಹೇಳಿಕೊಂಡಿದ್ದಾನೆ.

ಐಐಎಸ್‌ಸಿ ಬಳಿಯೇ ಸುತ್ತಾಟ: ‘2005ರ ಡಿ. 28ರಂದು ಐಐಎಸ್‌ಸಿಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ವಿಜ್ಞಾನಿಗಳು ಬರುತ್ತಾರೆ ಎಂಬ ಮಾಹಿತಿ ಇತ್ತು. ಹೀಗಾಗಿ ಎ.ಕೆ.56 ಬಂದೂಕು ಬಳಸುವಲ್ಲಿ ಪರಿಣಿತನಾಗಿದ್ದ ನೂರುಲ್ಲಾ ಖಾನ್‌ ಅಲಿಯಾಸ್‌ ಶಬಾವುದ್ದೀನ್‌ ನೇತೃತ್ವದ ತಂಡವು ಬೆಂಗಳೂರಿಗೆ ಬಂದಿತ್ತು. ಆ ತಂಡ ಹಲವು ದಿನಗಳವರೆಗೆ  ಐಐಎಸ್‌ಸಿ ಸುತ್ತ ಓಡಾಡಿ ಮಾಹಿತಿ ಕಲೆಹಾಕಿತ್ತು’ ಎಂದು ಶಂಕಿತ ಹೇಳಿರುವುದಾಗಿ ಎಟಿಎಸ್‌ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಾಳಿ  ಮುಗಿದ ಬಳಿಕ ತಂಡವು ಅಲ್ಲಿಂದ ತಪ್ಪಿಸಿಕೊಂಡು ಬಿಹಾರಕ್ಕೆ ಬಂದಿತ್ತು. ತಂಡದ ಸದಸ್ಯರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದ್ದೆ. ಅಷ್ಟರಲ್ಲಿ ಕರ್ನಾಟಕ ಪೊಲೀಸರು ಅವರನ್ನು ಬಂಧಿಸಿದರು’ ಎಂದು ಶಂಕಿತ ತಿಳಿಸಿದ್ದಾನೆ.

ಸ್ನೇಹಿತರನ್ನು ಕಳೆದುಕೊಂಡ: ‘ಹಬೀಬ್‌ನ ಸ್ನೇಹಿತರಲ್ಲಿ ಹಲವರು ಜೈಲಿನಲ್ಲಿದ್ದಾರೆ. ಕೆಲವರು ತೀರಿಕೊಂಡಿದ್ದಾರೆ. ಒಂಟಿಯಾಗಿದ್ದ ಆತ ಅಗರ್ತಲಾ ಬಳಿಯ ಜ್ಞಾನೇಂದ್ರನಗರದಲ್ಲಿ ನೆಲೆಸಿದ್ದ. ಎಲ್‌ಇಟಿಯ ಸಾರಿಗೆ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ’ ಎಂದು ಎಟಿಎಸ್‌ ಅಧಿಕಾರಿ ತಿಳಿಸಿದರು.

ಜೀವಾವಧಿ ಶಿಕ್ಷೆ ವಿಧಿಸಿದ್ದ ಹೈಕೋರ್ಟ್‌: ಉಗ್ರರ ದಾಳಿ ವೇಳೆ ಗಣಿತದ ನಿವೃತ್ತ ಪ್ರಾಧ್ಯಾಪಕ ಮುನೀಷ್‌ಚಂದ್ರ ಪುರಿ ಎಂಬುವರ ಹತ್ಯೆಯಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು, ಚಿಂತಾಮಣಿಯ ನೂರುಲ್ಲಾ ಖಾನ್‌ ಎಂಬಾತನನ್ನು ಬಿಹಾರದಲ್ಲಿ ಬಂಧಿಸಿದ್ದರು.

ಆತ ನೀಡಿದ್ದ ಮಾಹಿತಿಯಂತೆ ಆಂಧ್ರಪ್ರದೇಶದ ನೆಲಗೊಂಡದ ಮೊಹಮ್ಮದ್‌ ರೆಹಮಾನ್‌ ಅಲಿಯಾಸ್‌ ಉಮೇಶ್‌, ಬೆಂಗಳೂರು ಲಕ್ಕಸಂದ್ರದ ಅಫ್ಜರ್‌ ಪಾಷಾ ಅಲಿಯಾಸ್‌ ಬಷೀರುದ್ದೀನ್‌, ಚಿಂತಾಮಣಿಯ ನಜೀಮುದ್ದೀನ್‌ ಅಲಿಯಾಸ್‌ ಮುನ್ನಾ ಹಾಗೂ ಕೋಲಾರ ಜಿಲ್ಲೆಯ ಮುಳಬಾಗಿಲಿನ ಮೊಹಮ್ಮದ್‌ ಇರ್ಫಾನ್‌ ಎಂಬುವರನ್ನು ಬಂಧಿಸಲಾಗಿತ್ತು. ಇವರಿಗೆ ಸ್ಥಳೀಯ ನ್ಯಾಯಾಲಯವು ಏಳು ವರ್ಷಗಳ ಶಿಕ್ಷೆ ವಿಧಿಸಿತ್ತು. ಆದರೆ, ಹೈಕೋರ್ಟ್‌ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು.

ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಬಾದಾಮಿ ತಾಲ್ಲೂಕಿನ ಗುಳೇದಗುಡ್ಡದ ಮೆಹಬೂಬ್‌ ಇಬ್ರಾಹಿಂ ಸಾಬ್‌, 7 ವರ್ಷ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾನೆ. ಮತ್ತೊಬ್ಬ  ಆರೋಪಿ ಚಾಂದ್‌ ಪಾಷಾ ಎಂಬಾತ ಆರೋಪಮುಕ್ತನಾಗಿದ್ದಾನೆ.

ಬಾಡಿ ವಾರಂಟ್‌ ಪಡೆದು ವಶಕ್ಕೆ
‘ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಂಕಿತನನ್ನು ಗುಜರಾತ್‌ ಪೊಲೀಸರು ಮಾರ್ಚ್‌್ 13ರಂದು ಬಂಧಿಸಿದ್ದರು. ಆ ಬಗ್ಗೆ ಮಾಹಿತಿ ಸಿಕ್ಕ ಬಳಿಕ ನ್ಯಾಯಾಲಯದಿಂದ ‘ಬಾಡಿ ವಾರಂಟ್‌’ ಪಡೆದುಕೊಂಡಿದ್ದೆವು. ಗುಜರಾತ್‌ಗೆ ಹೋಗಿ ಆರೋಪಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಬಂದಿದ್ದೇವೆ’ ಎಂದು ಎಟಿಎಸ್‌ ಅಧಿಕಾರಿ ಹೇಳಿದರು.

‘ಎಲ್‌ಇಟಿ ವಿರುದ್ಧ ಗುಜರಾತ್‌ನಲ್ಲಿ 200 ಪ್ರಕರಣಗಳಿವೆ. ಹೀಗಾಗಿಯೇ ಆ ಸಂಘಟನೆಯ ಸದಸ್ಯರ ಚಲನವಲನಗಳ ಮೇಲೆ ಕೇಂದ್ರ ಗುಪ್ತಚರ ವಿಭಾಗ ಹಾಗೂ ಕೌಂಟರ್‌ ಇಂಟೆಲಿಜೆನ್ಸ್‌ ವಿಭಾಗದ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಅವರ ಮಾಹಿತಿಯಿಂದಲೇ ಗುಜರಾತ್‌ ಪೊಲೀಸರು, ಶಂಕಿತನನ್ನು ಬಂಧಿಸಿದ್ದರು’ ಎಂದು ತಿಳಿಸಿದರು.

10 ದಿನ ಪೊಲೀಸರ ವಶಕ್ಕೆ
ಹಬೀಬ್‌ ಮಿಯಾನನ್ನು (34)  ಕರ್ನಾಟಕ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್‌) ಪೊಲೀಸರು, ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಭಾನುವಾರ ಬೆಳಿಗ್ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ  ನ್ಯಾಯಾಧೀಶರು, ಆರೋಪಿಯನ್ನು 10 ದಿನಗಳವರೆಗೆ (ಮಾರ್ಚ್‌ 28ರವರೆಗೆ) ಪೊಲೀಸರ ವಶಕ್ಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT