ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಬೆಳಕು ಹುಡುಕಿ...

Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

–ಭರತ್ ಮತ್ತು ಶಾಲನ್‌ ಸವೂರ್‌

**

ಒಂದು ಊರಿನಲ್ಲಿ ಒಬ್ಬ ಎಲೆಕ್ಟ್ರೀಷಿಯನ್ ಇದ್ದ. ಅವನು ಯಾವುದೇ ಸ್ವಾರ್ಥವಿಲ್ಲದೇ, ತನ್ನ ಕೆಲಸವನ್ನು ನಿಯತ್ತಿನಿಂದ ಮಾಡುತ್ತಿದ್ದ. ಒಂದು ದಿನ ಅವನ ಊರಿನಲ್ಲಿ ಕರೆಂಟ್ ಇಲ್ಲದೇ ಊರಿಗೆ ಊರೇ ಕತ್ತಲಾಯಿತು. ಎಲೆಕ್ಟ್ರೀಷಿಯನ್‌ ಮಧ್ಯರಾತ್ರಿಯವರೆಗೆ ದಣಿವಿಲ್ಲದೇ ರಿಪೇರಿಗೆ ಶ್ರಮಿಸಿದ. ಸರಿಯಾಗಿ ಮಧ್ಯರಾತ್ರಿ 12 ಗಂಟೆ 6ನಿಮಿಷಕ್ಕೆ ಕರೆಂಟ್ ಬಂತು. ಕತ್ತಲೆಯಿಂದ ಕೂಡಿದ್ದ ಅವನ ಊರಿಗೆ ಹಾಲು ಚೆಲ್ಲಿದಂತೆ ಬೆಳಕು ಹರಿಯಿತು. ಇದನ್ನು ನೋಡಿದ ಅವನ ಮನಸ್ಸು ಸಂತಸದಿಂದ ಕುಣಿದಾಡಿತು. ಏನನ್ನೋ ಸಾಧಿಸಿದ ಹೆಮ್ಮೆ ಅವನ ಮನಸ್ಸಿನಲ್ಲಿ ಮನೆ ಮಾಡಿತು. ಈ ಸಂತೋಷವನ್ನು ಅನುಭವಿಸುತ್ತಿದ್ದಾಗ ಮತ್ತೆ ಗಾಢ ಕತ್ತಲೆ ಆವರಿಸುತ್ತದೆ. ಆಯ್ಯೋ! ಮತ್ತೆ ಪವರ್ ಕಟ್‌. ಎಲೆಕ್ಟ್ರೀಷಿಯನ್‌ ಮನಸ್ಸು ಗಾಳಿ ತೆಗೆದ ಬಲೂನ್‌ನಂತಾಗಿ ಆತ ತಲೆ ಮೇಲೆ ಕೈ ಹೊತ್ತು ಕುಳಿತ.

ನಾನು ಅಷ್ಟೆಲ್ಲಾ ಶ್ರಮ ಪಟ್ಟಿದ್ದಕ್ಕೆ ಏನು ಫಲ ಸಿಕ್ಕಿತ್ತು? ಮತ್ತೆ ಅದೇ ಕತ್ತಲು‘ – ಹೀಗೆ ಯೋಚಿಸಿದವನ ಮನಸ್ಸಿನಲ್ಲಿ ಕಹಿ ಅನುಭವ ತುಂಬಿಕೊಂಡಿತು. ‘ನಾನು ರಾತ್ರಿಯೆಲ್ಲಾ ಶ್ರಮಪಟ್ಟು ಕರೆಂಟ್ ಬರಿಸಿದೆ. ಆದರೆ ಈಗ ಮತ್ತೆ ಕರೆಂಟ್ ಕೈ ಕೊಟ್ಟಿದೆ. ನನ್ನ ಶ್ರಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗಿದೆ, ನಾನು ಇನ್ನೂ ಏಕೆ ಇಲ್ಲಿಯೇ ಇರಬೇಕು, ಮನೆಗೆ ಹೋಗಿ ಮಲಗಬಾರದೇಕೆ?’ ಎಂದು ಯೋಚಿಸಿದ.

ಹೀಗೆ ಕೆಲವು ನಿಮಿಷಗಳ ಕಾಲ ಆತ ಏನು ಮಾಡಲಾಗದ ಸ್ಥಿತಿಯಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾನೆ. ಒಮ್ಮೆಲೆ ಅವನ ಮನದಲ್ಲಿ ಆಶ್ಚರ್ಯಕರ ನಿರ್ಧಾರವೊಂದು ಹುಟ್ಟಿಕೊಳ್ಳುತ್ತದೆ. ಒಂದು ಆಶಾಕಿರಣದ ಬೆಳಕು ಮನಸ್ಸಿನ ಮೂಲೆಯಲ್ಲಿ ಗಿಡದಂತೆ ಬೆಳೆಯುತ್ತದೆ. ‘ಆಗಿದ್ದು ಆಗಲಿ, ನಾನು ಮತ್ತೆ ಪ್ರಯ್ನತಿಸುತ್ತೇನೆ, ಮತ್ತೆ ಮೊದಲಿನಿಂದ ಕೆಲಸ ಆರಂಭಿಸುತ್ತೇನೆ. ಸಾವಿರ ಬಾರಿ ಇದೇ ಪುನರಾರ್ವತನೆಯಾದರೂ ನಾನು ನಿಲ್ಲಿಸುವುದಿಲ್ಲ, ನನ್ನ ಊರಿಗೆ ಬೆಳಕು ಹರಿಸುವ ತನಕ ನಾನು ನನ್ನ ಪ್ರಯತ್ನವನ್ನು ನಿಲ್ಲಿಸುವುದಿಲ್ಲ’ ಎಂದು ಪಣತೊಟ್ಟು ಮತ್ತೆ ಹೊಸ ಹುಮ್ಮಸ್ಸಿನೊಂದಿಗೆ ಕೆಲಸ ಆರಂಭಿಸುತ್ತಾನೆ.

ಇಂತಹ ಘಟನೆಗಳು ನಮ್ಮ ಜೀವನದಲ್ಲಿಯೂ ಜರುಗಿರಬಹುದು. ಎಷ್ಟೋ ಬಾರಿ ನಾವು ಸೋತೇ ಹೋಗಿದ್ದೇವೆ. ನಮ್ಮ ಮುಂದೆ ಇರುವುದೆಲ್ಲವೂ ಶೂನ್ಯ – ಎನ್ನಿಸಿದಾಗಲೂ ಎಲ್ಲೋ ಒಂದು ಆಶಾಭಾವ ಮನದಲ್ಲಿ ಮೂಡಿ ನಮ್ಮ ನಿರ್ಧಾರವನ್ನು ಬದಲಾಯಿಸಿರಬಹುದು.

ಪ್ರತಿಯೊಬ್ಬರ ಮನಸ್ಸಿನಲ್ಲೂ ಸೋಲಿನ ಹಿಂದೆ ಒಂದು ಗೆಲುವಿನ ದಾರಿ ಹುಟ್ಟಿಕೊಳ್ಳುತ್ತದೆ. ಆದರೆ ಆ ದಾರಿಯನ್ನು ಗುರುತಿಸಿ ಅದರಲ್ಲಿ ಸಾಗುವುದು ನಮ್ಮ ಕೈಯಲ್ಲೇ ಇದೆ. ಮನಸ್ಸಿನಲ್ಲಿ ಹುಟ್ಟಿದ ಆಶಾಕಿರಣದ ಬೆಳಕನ್ನು ಗುರುತಿಸುವ ಮನೋಭಾವ ನಮ್ಮದಾಗಬೇಕು. ಸೋತು ಹೋಗಿದ್ದೇವೆ ಎಂದು ಕೈ ಕಟ್ಟಿ ಕೂರುವ ಬದಲು ಮತ್ತೆ ಮತ್ತೆ ಪ್ರಯ್ನತಿಸಬೇಕು. ನಮ್ಮ ಮನಸ್ಸಿನಲ್ಲಿ ಕಾಣಿಸಿಕೊಂಡ ಗೆಲುವಿನ ಬೆಳಕನ್ನು ಮೊದಲು ನಾವೇ ಗುರುತಿಸಿ, ನಂತರ ಆ ಬೆಳಕಿನ ಪ್ರಖರತೆಯನ್ನು ಹೊರ ಜಗತ್ತಿಗೆ ತೋರಿಸಬೇಕು.

‘ಏನೇ ಬಂದರೂ ನಾನು ಎದುರಿಸುತ್ತೇನೆ, ಎಷ್ಟೇ ಬಾರಿ ಸೋತರೂ ಮತ್ತೆ ನಾನು ಹೊಸತಾಗಿ ಆರಂಭಿಸುತ್ತೇನೆ. ಅದೇ ಕೆಲಸದಲ್ಲಿ ಮತ್ತೆಮತ್ತೆ ಸೋಲುತ್ತಿದ್ದರೆ ಹತ್ತು ಸಾವಿರ ಬಾರಿಯಾದರೂ ನಾನು ಅದನ್ನೇ ಪುನಃ ಮಾಡುತ್ತೇನೆ. ನಾನು ಗೆಲ್ಲುವವರೆಗೂ ಅದ್ಯಾವುದೇ ಶಕ್ತಿ ನನ್ನನ್ನು ತಡೆದರೂ ನಾನು ಗೆದ್ದು ತೋರಿಸುತ್ತೇನೆ’ ಎಂಬ ದೃಢ ನಿರ್ಧಾರ ನಮ್ಮ ಮನಸ್ಸಿನಲ್ಲಿರಬೇಕು. ಎರಡೂ ಕೈಯನ್ನು ಉಜ್ಜಿ, ಅದನ್ನು ಮುಖಕ್ಕೆ ಹಿಡಿಯುವ ಮೂಲಕ ಆ ಬಿಸಿಯ ಶಾಖವನ್ನು ಅನುಭವಿಸಬೇಕು. ಆ ಶಾಖ ದೇಹದೊಳಗಿನ ಆತ್ಮಬಲ ಎಂಬುದನ್ನು ತಿಳಿಯಬೇಕು.

ನಾವು ಏನೇ ಮಾಡಿದರೂ ಅದು ನಮಗಾಗಿ ಮತ್ತು ನಮ್ಮ ಸುತ್ತಲಿನ ಪ್ರಪಂಚಕ್ಕಾಗಿ. ನಮ್ಮ ಜೀವನವನ್ನು ಮತ್ತು ನಮ್ಮ ಪ್ರಪಂಚವನ್ನು ನೋಡಿ– ಅದು ಇರುವುದು ನಮಗಾಗಿ. ಜೀವನ ಹಾಗೂ ಪ್ರಪಂಚ ಯಾವುದೂ ನಿರರ್ಥಕವಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.

ನೀವೇ ನಿಮ್ಮ ಜೀವನ ನಿರರ್ಥಕ ಎಂದುಕೊಂಡರೆ ಜೀವನ ನಿಜಕ್ಕೂ ನಿರರ್ಥಕವಾಗುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರಕಲಿಲ್ಲ ಎಂದರೆ ಕಾರಣಕ್ಕೆ ಅದು ನಿಮ್ಮಿಂದ ಸಾಧ್ಯವೇ ಇಲ್ಲ ಎಂದು ಅರ್ಥವಲ್ಲ. ಆಶಾವಾದಿಗಳಾಗಿರಿ; ಒಂದಲ್ಲ ಒಂದು ದಿನ ನಿಮ್ಮ ಮನಸ್ಸಿನ ಬೆಳಕಿನ ಕಿರಣ, ಕೌಶಲ, ಶ್ರಮ–ಇವೆಲ್ಲವೂ ನೀವು ಏನು ಎಂಬುದನ್ನು ಜಗತ್ತಿಗೆ ತೋರಿಸುತ್ತವೆ. ಅದಲ್ಲದೇ ನಿಮ್ಮ ಜೀವನದಲ್ಲಿ ಇಲ್ಲಿಯವರೆಗೆ ಇಲ್ಲದ ಹೊಸ ಕೌಶಲ ಒಂದು ನಿಮ್ಮಲ್ಲಿ ಇದೆ ಎಂಬುದನ್ನು ಇದು ತೋರಿಸುತ್ತದೆ.

ಒಂದಲ್ಲ ಒಂದು ದಿನ ನಾವೆಲ್ಲರೂ ಸಾಯುತ್ತೇವೆ. ಆದರೆ ನಾವು ಬದುಕಿದಷ್ಟು ದಿನದ ನಮ್ಮ ಪರಿಶ್ರಮದ ಹಿಂದಿನ ಪರಿಣಾಮವನ್ನು ನಾವು ಇಲ್ಲೇ ಬಿಟ್ಟು ಹೋಗಿರುತ್ತೇವೆ. ಪ್ರೀತಿ, ಸಂತೋಷದ ನೆನಪು, ನಾವು ಬದುಕಿದ್ದಾಗ ತೋರಿದ ಒಳ್ಳೆಯತನದ ಸುಳಿವುಗಳು ನಮ್ಮ ಸುತ್ತಲೂ ಸುತ್ತುತ್ತಿರುತ್ತವೆ.

ನಾವು ಏನನ್ನು ಯೋಚಿಸುತ್ತೇವೆ, ಏನು ಮಾಡುತ್ತೇವೆ ಎಂಬುದು ದೊಡ್ಡ ಸಂಗತಿಯಲ್ಲ, ಬದಲಾಗಿ ಮೊದಲು ಮಾನವರಾಗಬೇಕು, ಮಾನವೀಯ ಮೌಲ್ಯಗಳಿಗೆ ಬೆಲೆ ನೀಡಬೇಕು, ನಮ್ಮನ್ನು ನಾವು ಪ್ರೀತಿಸಬೇಕು, ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ ಮಾಡುವುದರಿಂದ ನಾವು ದೇಹವನ್ನು, ಮನಸ್ಸನ್ನು ಆರೋಗ್ಯಯುತವಾಗಿ ಇರಿಸಿಕೊಳ್ಳಬಹುದು. ಚೆನ್ನಾಗಿ ನಿದ್ದೆ ಮಾಡಿ. ದೇಹಕ್ಕೆ ಅಗತ್ಯವಿರುವಷ್ಟು ವಿಶ್ರಾಂತಿ ಕೊಡಿ. ಎಲ್ಲರೊಂದಿಗೆ ಆತ್ಮೀಯವಾಗಿರಿ. ಆಗ ಪ್ರಪಂಚವೇ ನಮ್ಮನ್ನು ಪ್ರೀತಿಸುತ್ತದೆ.

ನಿಮ್ಮಲಿರುವ ಕೌಶಲವನ್ನು ಪ್ರಯೋಗಕ್ಕೆ ಒಡ್ಡಿ. ಆಗ ಜಗತ್ತು ನಿಮಗೆ ಸಂತೋಷ ನೀಡುತ್ತದೆ. ಇಲ್ಲೇನಿದೆ? ಒಂದಲ್ಲ ಒಂದು ದಿನ ನಾವು ಸಾಯುತ್ತೇವೆ ಎಂಬ ನಿರಾಶಭಾವ ಇರಿಸಿಕೊಳ್ಳಬೇಡಿ. ಇರುವಷ್ಟು ದಿನ ಇತರರಿಗೆ ಸಂತೋಷ ನೀಡುವ ಮೂಲಕ ಸಂಸತದಿಂದ ಜೀವನ ಸಾಗಿಸಿ.

ದೇವರು ನೀಡಿದ, ನಿಮ್ಮೊಳಗೆ ಇರುವ ಒಳ್ಳೆಯತನವನ್ನು ಉಳಿಸಿಕೊಳ್ಳಿ. ಅವಕಾಶವಿರುವ ಎಲ್ಲ ಮಾರ್ಗಗಳನ್ನೂ ಬಳಸಿಕೊಂಡು ಬೆಳೆಸಿಕೊಳ್ಳಿ. ಮಹಾವ್ಯಕ್ತಿಗಳು ಆಶಾಕಿರಣದ ಸೆಲೆಯನ್ನು ಹುಟ್ಟು ಹಾಕಿರುತ್ತಾರೆ. ಅವರ ಜೀವನದುದ್ದಕ್ಕೂ ಸಂತೋಷದ ಹೊನಲನ್ನೇ ಹರಿಸಿರುತ್ತಾರೆ. ಸಮಾಜದ ತೊಡಕನ್ನು ತೊಡೆದು ಹಾಕಿದ ದೊಡ್ಡ ವ್ಯಕ್ತಿಗಳ ಕತೆಗಳನ್ನು ಓದಿ. ಅವರಲ್ಲಿನ ಜೀವನಪ್ರೀತಿಯನ್ನು ನಿಮ್ಮೊಳಗೂ ಹರಿಯುವಂತೆ ನೋಡಿಕೊಳ್ಳಿ. ಆಗ ಒಂದಲ್ಲ ಒಂದು ದಿನ ನಿಮ್ಮ ಜೀವನ ‘ಇದು ನಾನಾ!’ ಎಂದು ನೀವೇ ಅಂದುಕೊಳ್ಳುವಷ್ಟರ ಮಟ್ಟಿಗೆ ನಿಮ್ಮನ್ನು ಬದಲಾಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT