ಭಾನುವಾರ, ಮಾರ್ಚ್ 7, 2021
30 °C

ದೆಹಲಿ ವಾಯುಮಾಲಿನ್ಯ ಸಮಸ್ಯೆ ತಾತ್ಕಾಲಿಕ ಪರಿಹಾರ ಉತ್ತರವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ ವಾಯುಮಾಲಿನ್ಯ ಸಮಸ್ಯೆ ತಾತ್ಕಾಲಿಕ ಪರಿಹಾರ ಉತ್ತರವಲ್ಲ

ಈ ಬಾರಿ ದೀಪಾವಳಿಯ ಸಂದರ್ಭದಲ್ಲಿ ದೆಹಲಿಯಲ್ಲಿ ಪಟಾಕಿಗೆ ನಿಷೇಧ ಹೇರಲಾಗಿತ್ತು. ವಾಯು ಮಾಲಿನ್ಯ ಪ್ರಮಾಣವನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವಂತೆ ಈ ಬಾರಿಯೂ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ದೆಹಲಿಯಲ್ಲಿನ ವಾಯು ಮಾಲಿನ್ಯ ಪ್ರಮಾಣ ಅಪಾಯಕಾರಿ ಮಟ್ಟವನ್ನು ತಲುಪಿದ್ದು ಆತಂಕಕಾರಿ ಸಂಗತಿ. ಕಳೆದ ವಾರ ಅಲ್ಲಿನ ಶಾಲೆಗಳಿಗೆ ರಜೆ ಘೋಷಿಸಬೇಕಾದ ಸ್ಥಿತಿಯೂ ಎದುರಾದದ್ದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎದುರಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಹೆಚ್ಚಿನ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಪರಿಸರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿರುವ ಈ ಪ್ರಾಧಿಕಾರ ಇದಕ್ಕೆ ಸಂಬಂಧಿಸಿದಂತೆ ಅನೇಕ ಮಾರ್ಗದರ್ಶಿ ಸೂತ್ರಗಳನ್ನೂ ಪ್ರಕಟಿಸಿದೆ. ಈ ಮಧ್ಯೆ, ದೆಹಲಿಯ ಆಪ್ ಸರ್ಕಾರದ ನಿರ್ದೇಶನದ ಪ್ರಕಾರ, ಸೋಮವಾರದಿಂದ ಆರಂಭವಾಗಬೇಕಿದ್ದ ಸಮ– ಬೆಸ ಸಂಖ್ಯೆಯ ವಾಹನಗಳ ಸಂಚಾರ ನಿಯಮವನ್ನು ಸರ್ಕಾರವೇ ಕೈಬಿಟ್ಟಂತಹ ಬೆಳವಣಿಗೆಯೂ ನಡೆದಿದೆ. ಸಮ– ಬೆಸ ಸಂಖ್ಯೆಯ ವಾಹನಗಳ ಸಂಚಾರ ನಿಯಮ ಅನುಷ್ಠಾನದ ವೇಳೆ ದ್ವಿಚಕ್ರ ವಾಹನಗಳು ಮತ್ತು ಮಹಿಳೆಯರು, ಶಾಲಾಮಕ್ಕಳು ಹಾಗೂ ಅತಿಗಣ್ಯರ ವಾಹನಗಳಿಗೆ ವಿನಾಯಿತಿ ನೀಡಿದ್ದಕ್ಕೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ವ್ಯಕ್ತಪಡಿಸಿದ ತೀವ್ರ ಆಕ್ಷೇಪ ಇದಕ್ಕೆ ಕಾರಣ. ಇಂತಹ ವಿನಾಯಿತಿಗಳಿಂದ ಮಾಲಿನ್ಯ ನಿಯಂತ್ರಣ ಕ್ರಮಗಳು ಹೆಚ್ಚೇನೂ ಪರಿಣಾಮಕಾರಿಯಾಗವು ಎಂಬಂತಹ ವಾದ ಇದ್ದೇ ಇದೆ. 32 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಸವಾರರಿದ್ದಾರೆ ದೆಹಲಿಯಲ್ಲಿ. ದ್ವಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಿದಲ್ಲಿ ಈ ವಾಹನಗಳ ಸವಾರರಿಗೆ ಪರ್ಯಾಯ ಸಾರಿಗೆ ಒದಗಿಸುವಷ್ಟು ಸಾಮರ್ಥ್ಯ ದೆಹಲಿಯಲ್ಲಿನ ಸದ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಿಲ್ಲ. ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವಷ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸನ್ನದ್ಧವಾಗಿಲ್ಲ ಎಂಬುದು ನಿಜಕ್ಕೂ ದೊಡ್ಡ ಸವಾಲು. ವಾಯು ಮಾಲಿನ್ಯ ನಿರ್ವಹಣೆಯ ಕಠಿಣ ಸವಾಲುಗಳ ಸಂಕೀರ್ಣತೆಗೆ ಇದು ದ್ಯೋತಕ.

ಪಂಜಾಬ್ ಮತ್ತು ಹರಿಯಾಣಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದು, ಕಟ್ಟಡ ಮತ್ತು ನಿರ್ಮಾಣ ಕಾಮಗಾರಿಯ ದೂಳು, ಕೈಗಾರಿಕೆಗಳು ಮತ್ತು ವಾಹನಗಳು ಉಗುಳುವ ಹೊಗೆಯಿಂದ ಪರಿಸ್ಥಿತಿ ಬಿಗಡಾಯಿಸಿದೆ ಎಂದು ದೆಹಲಿ ಸರ್ಕಾರ ಹೇಳಿಕೊಂಡಿದೆ. ಕೃಷಿಬೆಳೆ ತ್ಯಾಜ್ಯಗಳಿಗೆ ಬೆಂಕಿ ಹಾಕಿ ಸುಡುವುದನ್ನು ನಿಯಂತ್ರಿಸುವುದು ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರೈತರಿಗೆ ಸಂಬಂಧಿಸಿದ ಈ ವಿಚಾರದಲ್ಲಿ ಬೇರೆ ಬೇರೆ ಪಕ್ಷಗಳ ರಾಜಕೀಯ ನಾಯಕರು ರಾಜಕೀಯ ಮಾಡುವುದು ಸಲ್ಲದು. ಪರಿಸರಕ್ಕೆ ಮಾರಕವಾಗದಂತೆ ಕೃಷಿ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನ ನೀಡಬೇಕು. ಹಾಗೆಯೇ ದೆಹಲಿಯಲ್ಲಿ ದಟ್ಟ ಹೊಂಜು ಮುಸುಕಿ ವಾಯು ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕಿಂತಲೂ ಹೆಚ್ಚಿನ ಪ್ರಮಾಣಕ್ಕೆ ಏರುವವರೆಗೂ ಆಡಳಿತಗಾರರು ನಿರ್ಲಕ್ಷ್ಯ ತೋರುವುದು ಏಕೆ? ವಾಯು ಮಾಲಿನ್ಯ ಸಮಸ್ಯೆಗೆ ದಿಢೀರ್ ಉತ್ತರ ಸಾಧ್ಯವಿಲ್ಲ ಎಂಬುದನ್ನು ಆಡಳಿತಗಾರರು ಮೊದಲು ಅರಿತುಕೊಳ್ಳಬೇಕು. ವಾಯುಮಾಲಿನ್ಯ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಬಿಡಬಹುದಾದ ಯಾವ ಮಾಂತ್ರಿಕ ದಂಡವೂ ಇಲ್ಲ ಎಂಬುದು ನಮಗೆ ಗೊತ್ತಿರಬೇಕು.

ಹೀಗಾಗಿ, ವಾಯುಮಾಲಿನ್ಯ ಸಮಸ್ಯೆಯ ಹಿಂದಿರುವ ವಿಜ್ಞಾನವನ್ನು ಅರಿತುಕೊಳ್ಳುವುದು ಅಗತ್ಯ. ಈ ಸಮಸ್ಯೆ, ಕಾರುಗಳನ್ನು ರಸ್ತೆಗಳಿಂದ ಹೊರಗಿಡುವುದರಿಂದಷ್ಟೇ ಪರಿಹಾರವಾಗದು. ಇದೇನಿದ್ದರೂ ತಾತ್ಕಾಲಿಕ ಪರಿಹಾರ ಅಷ್ಟೆ. ಶಾಶ್ವತ ಪರಿಹಾರ ಬೇಕು. ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಅದರ ಆಧಾರದ ಮೇಲೆ ದೀರ್ಘಾವಧಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.