ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟನ್‌ ಕಬ್ಬಿಗೆ ₹ 200 ಹೆಚ್ಚಳ ಪ್ರಸ್ತಾವ: ಆಕ್ರೋಶ

Last Updated 13 ನವೆಂಬರ್ 2017, 8:41 IST
ಅಕ್ಷರ ಗಾತ್ರ

ಮಂಡ್ಯ: ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ ₹ 2,550 ನ್ಯಾಯಯುತ ಬೆಲೆಯ ಜೊತೆಗೆ ₹ 200 ಸೇರಿಸಿ ನೀಡುವ ಕುರಿತು ರಾಜ್ಯ ಸರ್ಕಾರ ಕಬ್ಬು ದರ ನಿಯಂತ್ರಣ ಮಂಡಳಿಗೆ ಸೂಚಿಸಿರುವುದು ಜಿಲ್ಲೆಯಾದ್ಯಂತ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಗುಜರಾತ್‌ ಮಾದರಿಯಲ್ಲಿ ದರ ನೀಡಲು ಪರಿಶೀಲಿಸುವಂತೆ ಮಂಡಳಿಗೆ ಸೂಚನೆ ನೀಡಿದೆ. ರೈತರು ಪ್ರತಿ ಟನ್‌ ಕಬ್ಬಿಗೆ ₹ 3,500 ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ನ್ಯಾಯಯುತ ಬೆಲೆಗೆ ಕೇವಲ ₹ 200 ಸೇರಿಸಿ ಕೊಡುವಂತೆ ತಿಳಿಸಿರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ.

ರೈತರು ಭಿಕ್ಷೆ ಕೇಳುತ್ತಿಲ್ಲ. ವರ್ಷಾನುಗಟ್ಟಲೆ ಕಷ್ಟಪಟ್ಟು ಬೆಳೆದ ಕಬ್ಬಿಗೆ ಸೂಕ್ತವಾದ ಬೆಲೆ ನೀಡಿ ಎಂದು ಒತ್ತಾಯ ಮಾಡುತ್ತಿದ್ದೇವೆ. ಆದರೆ ಸರ್ಕಾರ ರೈತರ ಹಿತವನ್ನು ಬದಿಗಿಟ್ಟು ಖಾಸಗಿ ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮಣಿಯುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

‘ನಾಲ್ಕೈದು ವರ್ಷಗಳ ಹಿಂದೆ ಕೆ.ಜಿ.ಸಕ್ಕರೆಗೆ ₹ 19 ಇತ್ತು. ಆಗಲೂ ಟನ್‌ ಕಬ್ಬಿಗೆ ₹ 2,500 ಇತ್ತು ಈಗ ಕೆ.ಜಿ. ಸಕ್ಕರೆ ₹ 40ಕ್ಕೇರಿದೆ. ಆದರೆ ಕಬ್ಬಿನ ದರ ಮಾತ್ರ ಬದಲಾಗಿಲ್ಲ. ಇದು ಯಾವ ನ್ಯಾಯ? ಜನಪ್ರತಿನಿಧಿಗಳು ಧ್ವನಿ ಎತ್ತದ ಕಾರಣ ರಾಜ್ಯ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ಸಕ್ಕರೆ ಲಾಬಿಯಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ. ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಕುರಿತು ರಾಜಕಾರಣಿಗಳು ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ’ ಎಂದು ರೈತ ಮುಖಂಡ ಕೆ.ಎಸ್‌.ನಂಜುಂಡೇಗೌಡ ಹೇಳಿದರು.

‘ರೈತ ಬೆಳೆಯುವ ಕಬ್ಬಿನಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಲಾಭವಾಗುತ್ತಿದೆ. ಖರೀದಿ, ಮಾರಾಟ ತೆರಿಗೆಯಿಂದ ಲಾಭವಾಗುತ್ತಿದೆ. ಸಕ್ಕರೆ ಕಾರ್ಖಾನೆಗಳು ಸಹ ವಿದ್ಯುತ್‌ ಘಟಕ, ಕಾಕಂಬಿ, ಮದ್ಯ ತಯಾರಿಕೆಯಿಂದ ಲಾಭಗಳಿಸುತ್ತಿವೆ. ಆದರೆ ಆ ಲಾಭ ಕಷ್ಟಪಟ್ಟು ಕಬ್ಬು ಬೆಳೆದ ರೈತನಿಗೆ ಹಂಚಿಕೆಯಾಗುತ್ತಿಲ್ಲ. ಕಬ್ಬು ಬೆಲೆ ನಿಯಂತ್ರಣ ಮಂಡಳಿ ಕೇವಲ ₹ 200 ನೀಡುವ ಬಗ್ಗೆ ಆದೇಶ ಹೊರಡಿಸಿದರೆ ಜಿಲ್ಲೆಯಾದ್ಯಂತ ಹೋರಾಟ ಮಾಡಲಾಗುವುದು’ ಎಂದು ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಹೇಳಿದರು.

ಎಫ್‌ಆರ್‌ಪಿ ದರ ₹ 3,500 ನಿಗದಿಯಾಗಲಿ: ‘ನ್ಯಾಯಯುತ ಬೆಲೆ ₹ 3,500ಕ್ಕೆ ನಿಗದಿಯಾಗಬೇಕು. ಆ ನಂತರ ಇಳುವರಿ ಆಧರಿಸಿ ಬೆಲೆ ನಿಗದಿ ಮಾಡಬೇಕು. ಬೆಲೆ ಏರಿಕೆಯ ದಿನದಲ್ಲಿ ಕಬ್ಬು ಕಡಿಯುವ ದರ, ಸಾಗಣೆ ವೆಚ್ಚ ವಿಪರೀತವಾಗಿ ಏರುತ್ತಿದೆ. ಸರ್ಕಾರ ಬೆಲೆ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಇಳುವರಿ ವಿಚಾರದಲ್ಲಿ ಸಕ್ಕರೆ ಕಾರ್ಖಾನೆಗಳು ಮಾಹಿತಿ ನೀಡದೆ ವಂಚಿಸುತ್ತಿವೆ. ಜಿಲ್ಲೆಯ ಕಬ್ಬಿನಲ್ಲಿ ಹೆಚ್ಚು ಇಳುವರಿ ಬರುತ್ತಿಲ್ಲ ಎಂಬ ಸರ್ಕಾರವೇ ಅಪಪ್ರಚಾರ ಮಾಡಿದೆ. ಇದು ಖಂಡನೀಯ’ ಎಂದು ಮುಖಂಡ ಕೋಣಸಾಲೆ ನರಸರಾಜು ಆಕ್ರೋಶ ವ್ಯಕ್ತಪಡಿಸಿದರು.

ರಕ್ತದಲ್ಲಿ ಕಬ್ಬು ಬೆಳೆದಿದ್ದಾರೆ: ‘ಈ ವರ್ಷ ರೈತರು ನೀರಿನಿಂದ ಕಬ್ಬು ಬೆಳೆದಿಲ್ಲ, ರಕ್ತದಿಂದ ಬೆಳೆದಿದ್ದಾರೆ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯುತ್‌ ಕಣ್ಣಾಮುಚ್ಚಾಲೆಯಲ್ಲಿ ಹಗಲು–ರಾತ್ರಿ ಎನ್ನದೇ ರೈತ ನೀರು ಹಾಯಿಸಿ ಕಬ್ಬು ಉಳಿಸಿಕೊಂಡಿದ್ದಾನೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೇವಲ ₹ 200 ನೀಡಲು ಹೊರಟಿರುವುದು ಸರಿಯಲ್ಲ. ಯಾವ ಲೆಕ್ಕದಲ್ಲಿ ಅಷ್ಟು ಹಣ ನೀಡಲಾಗುತ್ತಿದೆ ಎಂಬುದನ್ನು ಸರ್ಕಾರ ಮೊದಲು ಸ್ಪಷ್ಟಪಡಿಸಬೇಕು’ ಎಂದು ರೈತಸಂಘ ಮೂಲಸಂಘಟನೆ ಮುಖಂಡ ಕೆ.ಎಸ್‌.ಸುಧೀರ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT