ಭಾನುವಾರ, ಮಾರ್ಚ್ 7, 2021
24 °C

ಪ್ರಶ್ನೋತ್ತರ

ಯು ಪಿ ಪುರಾಣಿಕ್ Updated:

ಅಕ್ಷರ ಗಾತ್ರ : | |

ಪ್ರಶ್ನೋತ್ತರ

ಕುಮಾರ್‌, ತುಮಕೂರು

ನಾನು ನಿವೃತ್ತ ನೌಕರ. ಎಸ್‌ಬಿಎಂ ನಲ್ಲಿ ಪಿಂಚಣಿ ಪಡೆಯುತ್ತೇನೆ. ನಾನು ಪಿಂಚಣಿ ತೆಗೆದುಕೊಳ್ಳುವ ಶಾಖೆ ದೂರ ಇದೆ. ನಮ್ಮ ಮನೆ ಹತ್ತಿರ ಒಂದು ಎಸ್‌ಬಿಎಂ ಪ್ರಾರಂಭವಾಗಿದೆ. ನನ್ನ ಪ್ರಶ್ನೆ: ಓರ್ವ ವ್ಯಕ್ತಿ ಒಂದೇ ಬ್ಯಾಂಕಿನಲ್ಲಿ ಎರಡು ಖಾತೆ ಹೊಂದಬಹುದೇ ಅಥವಾ ಬ್ಯಾಂಕಿಂಗ್‌ ರೂಲ್ಸ್‌ನಲ್ಲಿ ಅವಕಾಶವಿದೆಯೇ? ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಪಿಂಚಣಿ ವರ್ಗಾಯಿಸಬಹುದಾದರೂ, ಬ್ಯಾಂಕು 4–5 ತಿಂಗಳು ತೆಗೆದುಕೊಳ್ಳುತ್ತದೆ.

ಉತ್ತರ:
ನೀವು ನಿಮ್ಮ ಮನೆಗೆ ಸಮೀಪದ ಎಸ್‌ಬಿಐ (ಹಿಂದೆ ಎಸ್‌ಬಿಎಂ ಆಗಿತ್ತು) ನಲ್ಲಿ ಖಾತೆ ತೆರೆಯಬಹುದು. ಒಂದೇ ಬ್ಯಾಂಕಿನಲ್ಲಿ ಎರಡು ಖಾತೆ ಬೇರೆ ಬೇರೆ ಜಾಗದಲ್ಲಿ ಪ್ರಾರಂಭಿಸಬಾರದು ಎನ್ನುವ ಕಾನೂನು ಇಲ್ಲ. ಹಿಂದೆ ಮನೆಗೆ ಸಮೀಪದ ಎಸ್‌ಬಿಐ ನಲ್ಲಿ ಖಾತೆ ಪ್ರಾರಂಭಿಸುವಾಗ, ಮೊದಲು ಪ್ರಾರಂಭಿಸಿದ, ಉಳಿತಾಯ ಖಾತೆಯಲ್ಲಿ ನಿಮಗೆ ಕೊಟ್ಟಿರುವ Custumer-ID ಸಂಖ್ಯೆಯನ್ನು ಆ ಶಾಖೆಗೆ ಕೊಡಿ.

*

ಕಾಶಿ ವಿಶ್ವನಾಥ, ಹುಬ್ಬಳ್ಳಿ

ನನ್ನ ತಂದೆ ನನಗೆ 30X40 ನಿವೇಶನ ಗಿಫ್ಟ್‌ ಆಗಿ ಕೊಟ್ಟಿದ್ದಾರೆ, ಗಿಫ್ಟ್‌ ಡೀಡ್‌ ನನ್ನ ಹೆಸರಿನಲ್ಲಿ ನೊಂದಣಿಯಾಗಿದೆ. ನಾನು ಈ ನಿವೇಶನ ಮಾರಾಟ ಮಾಡಿದರೆ ಏನಾದರೂ ತೊಂದರೆ ಇದೆಯೇ, ಇದೇ ವೇಳೆ ಇಲ್ಲಿ ಮನೆ ಕಟ್ಟುವುದಾದರೆ ಬ್ಯಾಂಕಿನಿಂದ ಸಾಲ ಸಿಗಬಹುದೇ? ನಾನು ಹೈಸ್ಕೂಲ್‌ ಟೀಚರ್‌.

ಉತ್ತರ: ನೀವು ನಿಮ್ಮ ತಂದೆಯಿಂದ ದಾನವಾಗಿ ಪಡೆದ ನಿವೇಶನ ಮಾರಾಟ ಮಾಡುವುದರಿಂದ ಯಾವ ತೊಂದರೆಯೂ ಇಲ್ಲ. ಆದರೆ, ನಿಮ್ಮ ತಂದೆಯವರು ಕೊಂಡುಕೊಳ್ಳುವಾಗ ಕೊಟ್ಟ ಮೊತ್ತ ಹಾಗೂ ನೀವು ಮಾರಾಟ ಮಾಡಿ ಬರುವ ಮೊತ್ತದ ವ್ಯತ್ಯಾಸಕ್ಕೆ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ತುಂಬಬೇಕಾಗುತ್ತದೆ.

ತೆರಿಗೆ ದರ ಶೇ 20 ತೆರಿಗೆ ಉಳಿಸಲು ಸೆಕ್ಷನ್‌ 54ಇ ಆಧಾರದ ಮೇಲೆ ಗರಿಷ್ಠ ₹ 50 ಲಕ್ಷಗಳ ತನಕ REC ಅಥವಾ NHIA  ಬಾಂಡ್‌ಗಳಲ್ಲಿ ಕನಿಷ್ಠ 3 ವರ್ಷಗಳ ಅವಧಿಗೆ, ಮಾರಾಟ ಮಾಡಿದ ಆರು ತಿಂಗಳೊಳಗೆ ತೊಡಗಿಸಬೇಕು. ಮನೆ ಸಾಲದ ಕಂತು ಬಡ್ಡಿ ತುಂಬುವ ಸಾಮರ್ಥ್ಯಕ್ಕನುಗುಣವಾಗಿ, ಬ್ಯಾಂಕಿನಲ್ಲಿ ನಿಮ್ಮ ಸಂಬಳದ ಆಧಾರದ ಮೇಲೆ 20–30 ವರ್ಷಗಳ ಅವಧಿಗೆ ಗೃಹ ಸಾಲ ಸಿಗುತ್ತದೆ.

*

ಬಿ.ಎಂ. ಮಹದೇವ್, ಬೆಂಗಳೂರು

ನನ್ನ ಅಳಿಯ ಲಕ್ಸುರಿ ಬಸ್–ಲಾರಿ ಅಪಘಾತದಲ್ಲಿ ನಿಧನರಾದರು. ನ್ಯಾಯಾಲಯ ₹ 25 ಲಕ್ಷ ಪರಿಹಾರ ಅದೇಶಿಸಿದೆ. ಸದರಿ ಹಣ ಆದಾಯ ತೆರಿಗೆಗೆ ಒಳಗಾಗುತ್ತಿದೆಯೇ ಹಾಗೂ ತೆರಿಗೆ ಸಲ್ಲಿಸಬೇಕಾ? ವಿನಾಯತಿ ಇದ್ದಲ್ಲಿ ಸೆಕ್ಷನ್ ಯಾವುದು?

ಉತ್ತರ: ಇಂತಹ ಒಂದು ಪ್ರಶ್ನೆ ಈ ಹಿಂದೆ ಬಂದಿದ್ದು, ಅದಕ್ಕೆ ನಾನು ಉತ್ತರಿಸಿದ್ದೇನೆ. ಅಪಘಾತದಿಂದ ಬಂದ ಹಣ ಆದಾಯವೆಂದು ಪರಿಗಣಿಸಲಾಗದು.

ಇದು ವಾರಸುದಾರರಿಗೆ ಬರುವ ಪರಿಹಾರ. ಈ ಕಾರಣದಿಂದ ಸೆಕ್ಷನ್‌ 10 ಆಧಾರದ ಮೇಲೆ ಸಂಪೂರ್ಣ ವಿನಾಯ್ತಿ ಇದೆ. ಒಂದು ವೇಳೆ ವಾರಸುದಾರರು ಪರಿಹಾರ ಪಡೆಯಲು ತಡವಾಗಿದ್ದು, ಬಡ್ಡಿ ಪಡೆಯುವಲ್ಲಿ ಕೂಡಾ ಬಡ್ಡಿ ಹಣಕ್ಕೂ ತೆರಿಗೆ ಇರುವುದಿಲ್ಲ.

Case: Managing Director Tamilnadu State Transport Corporation LTD V/S Chinnaduri-Case CRP (PD) NO. 134307-2012 and M.P. NO.1 Of 2012 Dated 2-6-216. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಚಾರ್ಟರ್ಡ್ ಅಕೌಂಟೆಂಟ್ ಸಂಪರ್ಕಿಸಿ.

*

ಅಮಾನುಲ್ಲ, ಚಿತ್ತಾವಾಡಗಿ ಹೊಸಪೇಟೆ

ನಾನು ಅಂಗವಿಕಲ. ಹಿರಿಯ ನಾಗರಿಕ. 10–12 ವರ್ಷಗಳಿಂದ ಉಳಿತಾಯ ಮಾಡಿ ₹ 4 ಲಕ್ಷ ಉಳಿಸಿದ್ದೇನೆ. ಹಿರಿಯ ನಾಗರಿಕರ ಉಳಿತಾಯ ಖಾತೆಗೆ ತೆರಿಗೆ ವಿನಾಯತಿ ಇದೆಯೇ. ಅಂಗವಿಕಲರಿಗೆ ಬಡ್ಡಿಯಲ್ಲಿ ಸರ್ಕಾರದ ಸೌಲತ್ತು ಇದೆಯೇ ತಿಳಿಸಿರಿ.

ಉತ್ತರ: 
 ಹಿರಿಯ ನಾಗರಿಕರಿಗೆ, ಅವಧಿ ಠೇವಣಿಯ ಮೇಲೆ ಶೇ 1/2 ದಷ್ಟು ಹೆಚ್ಚಿನ ಬಡ್ಡಿ ಬ್ಯಾಂಕುಗಳಲ್ಲಿ ಪಡೆಯಬಹುದು. ಉಳಿತಾಯ ಖಾತೆಯಲ್ಲಿ ಆರ್ಥಿಕ ವರ್ಷದಲ್ಲಿ ಸೆಕ್ಷನ್‌ 80TTA ಆಧಾರದ ಮೇಲೆ, ಗರಿಷ್ಠ ₹ 10,000 ತನಕ ಬರುವ ಬಡ್ಡಿಗೆ ತೆರಿಗೆ ವಿನಾಯತಿ ಇದೆ.

ನೀವು ಉಳಿತಾಯ ಖಾತೆಯಲ್ಲಿ ಗರಿಷ್ಠ ₹ 25,000 ಮಾತ್ರ ಉಳಿಸಿ, ಉಳಿದ ಹಣ ಅವಧಿ ಠೇವಣಿಯಲ್ಲಿ ಇರಿಸಿ ಹೆಚ್ಚಿನ ಬಡ್ಡಿ ಪಡೆಯಿರಿ. ಅಂಗವಿಕಲರು ಬ್ಯಾಂಕುಗಳಲ್ಲಿ ಇರಿಸುವ ಠೇವಣಿ ಮೇಲೆ ಉಳಿದವರಿಗಿಂತ ಹೆಚ್ಚಿನ ಬಡ್ಡಿ ಪಡೆಯಲಾರರು.

*

ಬಾಲಾಜಿ, ಬೆಂಗಳೂರು

ನಾನು ನಿಮ್ಮ ಅಂಕಣದಿಂದ ಪ್ರಭಾವಿತನಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ₹ 5,000 ಆರ್‌.ಡಿ. ಮಾಡಿದ್ದೇನೆ. ಅಟಲ್‌ ಪಿಂಚಣಿ ಯೋಜನೆಯಲ್ಲಿ ₹ 1,318 ಮಾಸಿಕ ಪಾವತಿಸುತ್ತಿದ್ದು, ಇದು ಪ್ರಯೋಜನವಿಲ್ಲ, ಆರ್‌.ಡಿ. ಮಾಡಿದರೆ ಇನ್ನೂ ಹೆಚ್ಚಿನ ಲಾಭ ಬರುತ್ತದೆ ಎಂಬುದಾಗಿ, ಯಾವುದೋ ಪತ್ರಿಕೆಯಲ್ಲಿ ಓದಿದೆ. ನಿಮ್ಮ ಸಲಹೆ ನೀಡಿರಿ, ಬೆಂಗಳೂರು ಗ್ರಾಮಠಾಣಾ ವ್ಯಾಪ್ತಿಯಲ್ಲಿ 1000 ಚ.ಅಡಿ. ನೀವೇಶನ ಇದೆ. ನನ್ನ ಮೂಲ ವೇತನ ₹ 15,530. ನನಗೆ ಗೃಹಸಾಲ ಸಿಗಬಹುದೇ, ತಿಳಿಸಿರಿ. ನಾನು ಸರ್ಕಾರಿ ವಾಹನದ ಚಾಲಕ.

ಉತ್ತರ:
ನೀವು ನನ್ನ ಅಂಕಣದಿಂದ ಪ್ರಭಾವಿತರಾಗಿ ₹ 5000 ಆರ್‌.ಡಿ. ಮಾಡಿರುವುದಕ್ಕೆ ಧನ್ಯವಾದಗಳು. ಅಟಲ್‌ ಪಿಂಚಣಿ ಯೋಜನೆ ನನ್ನ ಪ್ರಕಾರ ಒಂದು ಉತ್ತಮ ಯೋಜನೆ. ಆರ್‌.ಡಿ.ಯನ್ನು ಅಟಲ್‌ ಪಿಂಚಣಿ ಯೋಜನೆಗೆ ಹೋಲಿಸುವುದು ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಸಾಧ್ಯವಾದಷ್ಟು ಆರ್‌.ಡಿ. ಮಾಡಿರಿ ಹಾಗೂ ಅಟಲ್‌ ಪಿಂಚಣಿ ಯೋಜನೆ ಕೈಬಿಡಬೇಡಿ.

ಮನೆಕಟ್ಟಲು ನಿಮ್ಮ ಗ್ರಾಮಠಾಣಾ ಜಾಗ ಭೂ ಪರಿವರ್ತನೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಹಾಗೂ ‘ಬಿ’ ಖಾತೆಯಲ್ಲಿ ಬ್ಯಾಂಕುಗಳಿಂದ ಸಾಲ ಸಿಗುವುದು ಕಷ್ಟವಾದೀತು. ಇದೇ ವೇಳೆ, ನಿಮಗೆ ಮನೆ ನಿರ್ಮಿಸಲು ಕನಿಷ್ಠ ₹ 10 ಲಕ್ಷವಾದರೂ ಸಾಲ ಬೇಕಾದೀತು.

20 ವರ್ಷಗಳ ಮಾಸಿಕ ಸಮಾನ ಕಂತು

(ಇ.ಎಂ.ಐ.) ಪಡೆದಲ್ಲಿ ಕನಿಷ್ಠ ಮಾಸಿಕ ₹ 10,000 ಸಾಲಕ್ಕೆ ತೆರಬೇಕಾಗುತ್ತದೆ. ಇವೆಲ್ಲವನ್ನು ಪರಿಗಣಿಸಿ ಗೃಹಸಾಲ ಪಡೆಯಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸಿ.

*

ಮಾಲತೇಶ್ ಜಿ.ಜಿ., ರಾಣೆಬೆನ್ನೂರು

ನಾನು ಬೆಂಗಳೂರಿನಲ್ಲಿ ಡ್ರೈವರ್‌ ವೃತ್ತಿ ಮಾಡುತ್ತೇನೆ. ತಿಂಗಳ ಸಂಬಳ ₹ 12,000. ನನ್ನೊಡನೆ ₹ 5 ಲಕ್ಷ ಹಣವಿದೆ. ಎಫ್‌ಡಿ ಮಾಡಬೇಕೆಂದಿದ್ದೇನೆ. ಇದರಿಂದ ನನಗೆ ಪ್ರತೀ ತಿಂಗಳೂ ಬಡ್ಡಿ ಎಷ್ಟು ಪಡೆಯಬಹುದು ತಿಳಿಸಿರಿ. ಎಸ್‌ಬಿಐನಲ್ಲಿ ನನ್ನ ಖಾತೆ ಇದೆ. ಅಲ್ಲಿಯೇ ಮಾಡಬಹುದೇ ತಿಳಿಸಿರಿ. ನನಗೆ ಇದರಿಂದ ತೆರಿಗೆ ಬರಬಹುದೇ?

ಉತ್ತರ:
ಎಸ್‌ಬಿಐ ಭಾರತದ ಬಹು ದೊಡ್ಡ ಹಾಗೂ ಬಲಿಷ್ಠ ಬ್ಯಾಂಕ್‌. ನೀವು ಅಲ್ಲಿಯೇ ಎಫ್‌ಡಿ ಮಾಡಿರಿ. ಠೇವಣಿ ಮೇಲಿನ ಬಡ್ಡಿದರ ಬದಲಾಗುತ್ತಿದ್ದು, ಶೇ 7 ರಂತೆ ಲೆಕ್ಕ ಹಾಕಿದರೆ ತಿಂಗಳಿಗೆ ಸುಮಾರು ₹ 3,000  ಪಡೆಯಬಹುದು. ನೀವು ಪ್ರತೀ ತಿಂಗಳೂ ಬಡ್ಡಿ ಪಡೆದರೆ, ಬಡ್ಡಿ ದರದಲ್ಲಿ ಸ್ವಲ್ಪ ಮಟ್ಟಿನ ಕಡಿತ ಮಾಡಿ ಕೊಡುತ್ತಾರೆ.

ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಿರಿ. ವಾರ್ಷಿಕ ಬರುವ ಬಡ್ಡಿ ಆದಾಯ ಹಾಗೂ ನಿಮ್ಮ ತಿಂಗಳ ಸಂಬಳ ಸೇರಿ ವಾರ್ಷಿಕವಾಗಿ ₹ 2.50 ಲಕ್ಷ ದೊಳಗಿರುವಲ್ಲಿ ನಿಮಗೆ ತೆರಿಗೆ ಬರುವುದಿಲ್ಲ. ಎಫ್‌ಡಿ ಮಾಡುವಾಗ 15–ಜಿ ನಮೂನೆ ಫಾರಂ ಬ್ಯಾಂಕಿಗೆ ಕೊಡಿರಿ. ಇದರಿಂದ ಬಡ್ಡಿ ಮೂಲದಲ್ಲಿ (ಟಿಡಿಎಸ್‌) ತೆರಿಗೆ ಮುರಿಯುವುದಿಲ್ಲ.

*

ಲೂಯಿಸ್‌ ಫರ್ನಾಂಡಿಸ್‌, ಶಿರಸಿ

ನನ್ನ ಹತ್ತಿರ ವಿವಿಧ ಮೌಲ್ಯದ ಹರಿದ ನೋಟುಗಳಿವೆ. ಇವುಗಳನ್ನು ನನ್ನ ಎಸ್‌ಬಿ ಖಾತೆಗೆ ಜಮಾ ಮಾಡಲು ಕರ್ಣಾಟಕ ಬ್ಯಾಂಕಿನಲ್ಲಿ ಒಪ್ಪುತ್ತಿಲ್ಲ. ನಾನು ಇದನ್ನು ಹೇಗೆ ಬದಲಿಸಲಿ?

ಉತ್ತರ:
‘ಹರಿದ–ಹಾಗೂ ಹಳೆಯ (Torn & Soild) ಚಲಾವಣೆಯ ನೋಟುಗಳನ್ನು (Currency Notes) ಬದಲಾಯಿಸಿ ಕೊಡುತ್ತೇನೆ’ ಎಂಬುದಾಗಿ, ಎಲ್ಲಾ ಬ್ಯಾಂಕುಗಳು (ಖಾಸಗಿ ಬ್ಯಾಂಕುಗಳ ಸಹಿತ) ಬ್ಯಾಂಕಿನಲ್ಲಿ ಬೋರ್ಡು ಹಾಕಲು ಭಾರತೀಯ ರಿಸರ್ವ್‌ ಬ್ಯಾಂಕ್‌) ಎಲ್ಲಾ ಬ್ಯಾಂಕುಗಳಿಗೆ ಸುತ್ತೋಲೆ ಕಳಿಸಿದೆ. ಕರ್ಣಾಟಕ ಬ್ಯಾಂಕ್‌ ಆಗಲಿ ಇನ್ನಿತರ ಯಾವುದೇ ಬ್ಯಾಂಕುಗಳು ಬದಲಾಯಿಸಲು ಬರುವುದಿಲ್ಲ ಎಂದು ಗ್ರಾಹಕರಿಗೆ ಹೇಳಲು ಬರುವುದಿಲ್ಲ.

ಇನ್ನೊಮ್ಮೆ ಬ್ಯಾಂಕಿಗೆ ಹೋಗಿ ಮ್ಯಾನೇಜರ್‌ ಅವರನ್ನು ನೋಡಿರಿ. ಕರ್ಣಾಟಕ ಬ್ಯಾಂಕ್‌ ರಾಜ್ಯದ ಹೆಮ್ಮೆಯ ಖಾಸಗಿ ಬ್ಯಾಂಕ್‌ ಆಗಿದ್ದು, ನಿಮ್ಮ ಕೋರಿಕೆಯನ್ನು ಪರಿಗಣಿಸಿ, ಹಣವನ್ನು ಉಳಿತಾಯ ಖಾತೆಗೆ ಜಮಾ ಮಾಡುತ್ತಾರೆ.

*

ಗುರು. ಎಸ್‌. ದೊಡ್ಡಮನಿ, ಹಾವೇರಿ

ನಾನು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ಎಲ್ಲಾ ಕಡಿತದ ನಂತರ ₹ 20,000 ಬರುತ್ತದೆ. ನನ್ನ ಪತ್ನಿ ಸರ್ಕಾರಿ ನೌಕರಳು. ಎಲ್ಲಾ ಕಡಿತದ ನಂತರ ₹ 18,000 ಬರುತ್ತದೆ. ನಾವು ಮುಂದೆ ಮನೆ, ಕಾರು ಕೊಳ್ಳಲು ಉತ್ತಮ ಉಳಿತಾಯ ಯೋಜನೆ ಯಾವುದು?

ಉತ್ತರ:
ನಿಮ್ಮಬ್ಬರಿಂದ ತಿಂಗಳಿಗೆ ₹ 38,000 ವರಮಾನವಿದೆ. ನಿಮಗೆ ಉಳಿಯಲು ಮನೆ ಇಲಾಖೆಯಿಂದ ಕೊಟ್ಟಿರಬಹುದು. ಇಬ್ಬರ ಖರ್ಚಿಗೆ ₹ 10,000 ಇಟ್ಟುಕೊಂಡು, ಉಳಿದ ₹ 28,000 ನೀವು ಪ್ರತೀ ತಿಂಗಳೂ ಸುಲಭವಾಗಿ ಉಳಿಸಬಹುದು.  ಹಣದುಬ್ಬರ (Inflation) ದಿಂದಾಗಿ ಮುಂದೆ ನಿವೇಶನ ಕೊಳ್ಳುವುದು ಸ್ವಲ್ಪ ಕಷ್ಟವಾದೀತು. ಹಾವೇರಿ ಅಥವಾ ನೀವು ಬಯಸುವ ಊರಿನಲ್ಲಿ ಕನಿಷ್ಠ 30X40 ನಿವೇಶನ ಕೊಳ್ಳಿರಿ.

ಇದಕ್ಕಾಗಿ ಬ್ಯಾಂಕಿನಿಂದ ಸಾಲ ಮಾಡಬೇಕಾದೀತು. ಪಡೆದ ಸಾಲಕ್ಕೆ ಮಾಸಿಕ ₹ 25,000 ಕಂತು ಕಟ್ಟಿ ಸಾಲ ಆದಷ್ಟು ಬೇಗ ತೀರಿಸಿರಿ. ನಿವೇಶನ ಕೊಳ್ಳುವವರೆಗೆ, ಕನಿಷ್ಠ ₹ 25,000 ಇಬ್ಬರಿಂದ ಆರ್‌.ಡಿ. ಮಾಡಿರಿ. ಕಾರು ಕೊಳ್ಳುವುದನ್ನು ಸ್ವಲ್ಪ ಮುಂದೂಡಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

*

ಮಹಾದೇವ ಗೌಡ, ಶಿವಪುರ (ಚಾಮರಾಜನಗರ)

ನಾನು ಹಳ್ಳಿಯಲ್ಲಿ ಸಣ್ಣ ವ್ಯಾಪಾರ ಮಾಡುತ್ತೇನೆ. ನನ್ನ ಇಬ್ಬರು ಗಂಡು ಮಕ್ಕಳು ಬೆಂಗಳೂರಿನಲ್ಲಿ ಹೋಟೆಲಿನಲ್ಲಿದ್ದಾರೆ. ನಮಗೆ ಎಲ್ಲಾ ಖರ್ಚು ಹೋಗಿ ತಿಂಗಳಿಗೆ ₹ 5000 ರಿಂದ 10,000 ಉಳಿಯುತ್ತದೆ. ನಾನು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಲು ಏನು ಮಾಡಬೇಕು ತಿಳಿಸಿರಿ.

ಉತ್ತರ:
ಪ್ಯಾನ್‌ ಕಾರ್ಡು ಡಿಮ್ಯಾಟ್‌ ಅಕೌಂಟ್‌ ಹೊಂದಿ ಯಾವುದಾದರೂ ಷೇರ್‌ ಬ್ರೋಕರ್ಸ್‌ ಮುಖಾಂತರ ಷೇರು ಕೊಳ್ಳಬಹುದು. ನೀವು ಕನಿಷ್ಠ ಒಂದು ಷೇರು ಕೂಡಾ ಕೊಳ್ಳುವ ಅವಕಾಶವಿದೆ. ಷೇರ್‌ ಬ್ರೋಕರ್ಸ್‌ ಚಾಮರಾಜನಗರದಲ್ಲಿ ಇರಬಹುದು. ಅಲ್ಲಿ ವಿಚಾರಿಸಿರಿ.

ನಿಮಗೊಂದು ಕಿವಿಮಾತು – ಷೇರು ಮಾರುಕಟ್ಟೆಯಲ್ಲಿ ನೀವು ಉಳಿಸುವ ಸಂಪೂರ್ಣ ಹಣ ತೊಡಗಿಸುವುದು ಜಾಣತನವಲ್ಲ. ಪ್ರಾರಂಭದಲ್ಲಿ ₹ 2,000 ತಿಂಗಳಿಗೆ ಮ್ಯೂಚುವಲ್‌ ಫಂಡ್‌ನ ಸಿಪ್‌ (SIP) ಮುಖಾಂತರ ಹಾಕಿರಿ. ಈ ಕೆಲಸ ಕೂಡಾ ಚಾಮರಾಜನಗರದಲ್ಲಿ ಮಾಡಬಹುದು. ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿದ ಹಣಕ್ಕೆ ನಿಖರವಾಗಿ ಒಂದು ವರಮಾನ ಬರುತ್ತದೆ ಎನ್ನುವಂತಿಲ್ಲ. ಇಲ್ಲಿ ಲಾಭ–ನಷ್ಟ ಎರಡೂ ಇರುತ್ತದೆ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.

ಇ–ಮೇಲ್‌: businessdesk@prajavani.co.in

*

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.