ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ನಗರದೊಳಗೊಂದು ದೇವರ ಕಾಡು!

Last Updated 4 ಡಿಸೆಂಬರ್ 2017, 5:00 IST
ಅಕ್ಷರ ಗಾತ್ರ

ಮಂಡ್ಯ: ಸೂರ್ಯನಿಗೆ ಎಕ್ಕದ ಗಿಡ, ಮಂಗಳನಿಗೆ ಕಗ್ಗಲಿ ಗಿಡ, ಬುಧನಿಗೆ ಉತ್ತರಾಣಿ ಗಿಡ, ಗುರುವಿಗೆ ಅರಳಿ ಮರ. ಹೀಗೆ ನವಗ್ರಹಗಳಿಗೆ ಅಧಿಪತಿಯಾಗಿರುವ ಮರಗಿಡಗಳು ಈ ಅರಣ್ಯದಲ್ಲಿವೆ.

ಮಿಥುನ ರಾಶಿಗೆ ಹಲಸಿನ ಮರ, ಕರ್ಕಾಟಕ ರಾಶಿಗೆ ಮುತ್ತುಗ ಮರ, ಮೀನರಾಶಿಗೆ ಆಲದ ಮರ. ಹೀಗೆ ದ್ವಾದಶ ರಾಶಿಗಳ ಅಧಿಪತಿಯಾದ ವೃಕ್ಷಗಳೂ ಇಲ್ಲಿವೆ. ಹೀಗಾಗಿ ಇದು ದೇವರಕಾಡು ಎಂದೇ ಪ್ರಸಿದ್ಧ ಪಡೆದಿದೆ!

ಅಷ್ಟಕ್ಕೂ ಇದು ಅರಣ್ಯವಲ್ಲ, ನಗರದ ಹೃದಯ ಭಾಗದಲ್ಲಿ ಅರಣ್ಯದಂತಿರುವ ಉದ್ಯಾನ. ಹೆಸರು; ಶಿವನಂಜಯ್ಯ ಪಾರ್ಕ್‌. ಹೌದು, ಸುಭಾಷ್‌ನಗರದಲ್ಲಿರುವ ಎಂ.ಕೆ.ಶಿವನಂಜಯ್ಯ ಉದ್ಯಾನ ಯಾವುದೇ ಅರಣ್ಯಕ್ಕೇನೂ ಕಡಿಮೆ ಇಲ್ಲ.

ಇಲ್ಲಿರುವ ನೂರಾರು ಮರಗಿಡಗಳು ಪ್ರಕೃತಿ ಪ್ರೇಮಿಗಳ ಮನಸ್ಸುಗಳನ್ನು ಅರಳಿಸುತ್ತದೆ. ತಂಪಾದ ತಂಗಾಳಿಯನ್ನು ಸವಿಯಲು ಈ ಉದ್ಯಾನಕ್ಕೆ ಭೇಟಿ ನೀಡುವವರಿಗೆ ಲೆಕ್ಕವಿಲ್ಲ. ಜನವಸತಿ, ವಾಣಿಜ್ಯ ಮಳಿಗೆ, ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳ ನಡುವೆ ಅರಳಿ ನಿಂತಿರುವ ಈ ಉದ್ಯಾನ ನಗರದ ಜನರಿಗೆ ಅರಣ್ಯದ ಅನುಭವ ತಂದು ಕೊಟ್ಟಿದೆ.

ಸುವಾಸನೆಗೆ ಇಲ್ಲಿ ಹೂವಿನ ಗಿಡಗಳುಂಟು, ಭಕ್ತಿಗೆ ಅರಳಿ ಮರಗಳುಂಟು, ತಂಪಾದ ನೆರಳಿಗೆ ಹೊಂಗೆ ಮರಗಳುಂಟು, ಬೇವಿನ ಮರ, ಬನ್ನಿ ಮರ, ಛತ್ರಿ ಮರ ಮುಂತಾದ ನೂರಾರು ಮರಗಳಿರುವ ಈ ಉದ್ಯಾನ ನಗರದ ಹಸಿರುಪ್ರೇಮಿಗಳ ಸ್ವರ್ಗದಂತಿದೆ. ನಿತ್ಯ ಮುಂಜಾನೆ, ಸಂಜೆ ನೂರಾರು ಜನರು ಇಲ್ಲಿ ವಿಹಾರ ಮಾಡುತ್ತಾರೆ.

ಕೆಲ ವಿದ್ಯಾರ್ಥಿಗಳು, ಕಚೇರಿಗಳ ನೌಕರರು ಮಧ್ಯಾಹ್ನದ ಊಟವನ್ನು ಈ ಉದ್ಯಾನದಲ್ಲಿರು ಮರದ ನೆರಳಿನಲ್ಲಿ ಉಣ್ಣುತ್ತಾರೆ. ಕೆಲ ವಿದ್ಯಾರ್ಥಿಗಳು ಉದ್ಯಾನದಲ್ಲಿ ಕುಳಿತು ಓದಿಕೊಳ್ಳುತ್ತಾರೆ. ಹಲವರಿಗೆ ಈ ಉದ್ಯಾನದಲ್ಲಿ ಪ್ರೇಮಾಂಕುರವೂ ಆಗಿದೆ!

‘170 ಆಲದ ಮರ ಕೊಡುವ ಆಮ್ಲಜನಕವನ್ನು ಒಂದೇ ಒಂದು ಅರಳಿ ಮರ ಕೊಡುತ್ತದೆ. ಈ ಉದ್ಯಾನದಲ್ಲಿರುವ ಬೃಹತ್‌ ಅರಳಿಮರ ಈ ಭಾಗದ ಜನರಲ್ಲಿ ಭಕ್ತಿಯ ಭಾವ ಮೂಡಿಸಿದೆ. ಮರಕ್ಕೆ ಕಟ್ಟೆಯೂ ಇರುವ ಕಾರಣ ಇಲ್ಲಿ ಧಾರ್ಮಿಕ ಭಾವನೆ ಇದೆ. ಈ ಉದ್ಯಾನದಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆಯುವುದಿಲ್ಲ. ಇಲ್ಲಿರುವ ಜನರೇ ಈ ಉದ್ಯಾನದ ಸಸಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಉದ್ಯಾನದ ಸಮೀಪದಲ್ಲೇ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಮನೆ ಇದೆ. ಅವರ ಕಾಳಜಿಯಿಂದಾಗಿ ಈ ಉದ್ಯಾನ ಅಭಿವೃದ್ಧಿ ಹೊಂದಿದೆ. ಅವರೂ ನಿತ್ಯ ಇಲ್ಲೇ ವಾಕಿಂಗ್‌ ಮಾಡುತ್ತಾರೆ’ ಎಂದು ಉದ್ಯಾನದಲ್ಲಿ ನಿತ್ಯ ವಿಹಾರ ಮಾಡುವ ಹಿರಿಯರಾದ ಸಿದ್ದೇಗೌಡ ಹೇಳಿದರು.

ದೇವರ ಕಾಡು: ದೇವರ ಕಾಡು ಎನ್ನುವ ಪರಿಕಲ್ಪನೆ ಈಚೆಗೆ ಹೆಚ್ಚಾಗಿ ಪ್ರಸದ್ಧಿ ಪಡೆಯುತ್ತಿದೆ. ಅರಣ್ಯವನ್ನು ದೇವರು ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಊರಿನ ಹೊರಗೆ ಇರುವ ಕಾಡನ್ನು ನಾವು ದೇವರು ಎನ್ನುತ್ತೇವೆ. ಆದರೆ ಊರಿನ ಒಳಗಿರುವ ಅರಣ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ.

ಹೀಗಾಗಿ ಜನವಸತಿ ಪ್ರದೇಶದಲ್ಲಿ ಇರುವ ಸಣ್ಣ ಪ್ರಮಾಣದ ಅರಣ್ಯವನ್ನು ರಕ್ಷಣೆ ಮಾಡಲು ಅದಕ್ಕೆ ‘ದೇವರು‌’ ಎನ್ನುವ ಪದ ಸೇರಿಸಲಾಗಿದೆ ಎಂದು ಪರಿಸರ ಪ್ರೇಮಿಗಳು ಹೇಳುತ್ತಾರೆ. ಮರಗಿಡಗಳು ಕಳ್ಳಕಾಕರ ಪಾಲಾಗಬಾರದು ಎಂಬ ಉದ್ದೇಶದಿಂದ ದೇವರ ಕಾಡು ಎಂಬ ಪರಿಕಲ್ಪನೆ ಮೂಡಿದೆ. ದೇವಾಲಯದ ಸುತ್ತಮುತ್ತ ಮರಗಿಡಗಳನ್ನು ಬೆಳೆಸಿದರೂ ಅದನ್ನು ದೇವರ ಕಾಡು ಎಂದೇ ಕರೆಯುವುದುಂಟು.

ಶಿವನಂಜಯ್ಯ ಉದ್ಯಾನದಲ್ಲಿರುವ ಅಪಾರ ಮರಗಿಡಗಳು, ಸಸ್ಯ ಸಂಕುಲಗಳನ್ನು ಸಂರಕ್ಷಣೆ ಮಾಡುವುದಕ್ಕಾಗಿ ಕೆಲವು ನಿವಾಸಿಗಳು ಉದ್ಯಾನವನ್ನು ದೇವರ ಕಾಡು ಎಂದೇ ಕರೆದಿದ್ದಾರೆ. ಉದ್ಯಾನದಲ್ಲಿರುವ ಮರಗಿಡಗಳನ್ನು ರಾಶಿ, ನವಗ್ರಹಗಳ ಹೆಸರಿನೊಂದಿಗೆ ಸೇರಿಸಿ ಅಲ್ಲಿ ದೇವರ ಕಾಡು ಎಂಬ ಬೋರ್ಡ್‌ ಕೂಡ ಹಾಕಿದ್ದಾರೆ.

‘ನಗರಸಭೆ ಉದ್ಯಾನವನ್ನು ಬಹಳ ಚೆನ್ನಾಗಿ ನಿರ್ವಹಣೆ ಮಾಡಿದೆ. ಆದರೆ ಇಲ್ಲಿರುವ ಸಸ್ಯ, ಮರಗಿಡಗಳನ್ನು ಇಲ್ಲಿಯ ನಿವಾಸಿಗಳು, ಪರಿಸರ ಪ್ರೇಮಿಗಳು ಬೆಳೆಸಿದ್ದಾರೆ. ಜನರು ಈ ಉದ್ಯಾನಕ್ಕೆ ದೇವರ ರೂಪ ಕೊಡುತ್ತಾ ಬಂದಿದ್ದಾರೆ. ಸುತ್ತಲೂ ಕೂರುವ ಕುರ್ಚಿಗಳಿವೆ. ನಡುವೆ ಹೈಮಾಸ್ಟ್‌ ದೀಪವಿದೆ. ರಾತ್ರಿ ಊಟವಾದ ನಂತರವೂ ಇಲ್ಲಿ ವಿಹಾರ ಮಾಡುತ್ತಾರೆ. ಸುಭಾಷ್‌ನಗರ, ವಿದ್ಯಾನಗರ, ಗಾಂಧಿ ನಗರಗಳ ಜನರಿಗೆ ಈ ಉದ್ಯಾನ ಪ್ರೀತಿ, ಆರೋಗ್ಯ ನೀಡಿದೆ’ ಎಂದು ಸುಭಾಷ್‌ ನಗರದ ನಿವಾಸಿ ಶಾರದಮ್ಮ ಹೇಳಿದರು.

20 ಲಕ್ಷದಲ್ಲಿ ಉದ್ಯಾನ ಅಭಿವೃದ್ಧಿ
ಶಿವನಂಜಪ್ಪ ಉದ್ಯಾನ ಮತ್ತಷ್ಟು ಅಭಿವೃದ್ಧಿಗೊಳ್ಳಲಿದ್ದು ಅಮೃತ್‌ ಯೋಜನೆಯಡಿ ₹ 20 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಗರಸಭೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉದ್ಯಾನದಲ್ಲಿ ಮಳೆ ಕೊಯ್ಲು ಘಟಕವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಉದ್ಯಾನಕ್ಕೆ ಬರುವ ಜನರ ಅನುಕೂಲಕ್ಕಾಗಿ ಹೈಟೆಕ್‌ ಶೌಚಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಇಲ್ಲಿ ಮಕ್ಕಳು ಆಟವಾಡಲು ಯಾವುದೇ ಉಪಕರಣಗಳು ಇಲ್ಲ. ಹೀಗಾಗಿ ಉದ್ಯಾನದ ಒಳಗೊಂದು ಸಣ್ಣ ಮಕ್ಕಳಾಟದ ಸ್ಥಳ ನಿರ್ಮಿಸಿ ಆಟಿಕೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಕುಡಿಯುವ ನೀರಿನ ಘಟಕ, ಉದ್ಯಾನದಲ್ಲಿ ಮೂಲೆಯಲ್ಲಿ ತಂಗುದಾಣ ನಿರ್ಮಿಸಲು ಯೋಜಿಸಲಾಗಿದೆ.

‘ಅಮೃತ್‌ ಯೋಜನೆ ಕಾಮಗಾರಿಗಳು ನಗರದೆಲ್ಲೆಡೆ ಭರದಿಂದ ಸಾಗಿವೆ. ಶೀಘ್ರ ಶಿವನಂಜಪ್ಪ ಉದ್ಯಾನದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಈ ಪಾರ್ಕ್‌ನಲ್ಲಿರುವ ಗಿಡ ಮರಗಳು ನಗರಕ್ಕೆ ಸೌಂದರ್ಯ ತುಂಬಿವೆ. ಇಲ್ಲಿಯ ಸಸ್ಯ ಸಂಕುಲಕ್ಕೆ ಧಕ್ಕೆಯಾಗದಂತೆ ಶೀಘ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಟಿ.ಎನ್‌.ನರಸಿಂಹಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT