ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ಗೊಡ್ಡು ರೋಗ: ರೈತರ ಆತಂಕ

Last Updated 8 ಡಿಸೆಂಬರ್ 2017, 6:45 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ ಬೆಳೆಗೆ ಕಾಯಿ ಮಾಗುವ ಹಂತದಲ್ಲಿ ಗೊಡ್ಡು ರೋಗ ಕಾಣಿಸಿಕೊಂಡಿದ್ದು, ಇದರಿಂದ ಇಳುವರಿಯಲ್ಲಿ ಕುಂಠಿತವಾಗುವ ಬಗ್ಗೆ ರೈತರು ಆತಂಕಪಡುವಂತಾವಾಗಿದೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ 6 ತಿಂಗಳ ಬೆಳೆಯಾಗಿದ್ದು, ಬಿತ್ತನೆ ಮಾಡಿದ 2 ತಿಂಗಳು ಮಳೆ ಬರದೇ ಬೆಳವಣಿಗೆ ಕುಂಠಿತವಾಯಿತು. ನಂತರ ನಿರಂತರವಾಗಿ 1 ತಿಂಗಳು ಬಂದು ತೊಗರಿಗೆ ನೆಟೆ ರೋಗ, ಇನ್ನೊಂದು ಕಡೆ ಮಂಜು ಕಾಣಿಸಿಕೊಂಡು ತೊಗರಿ ಬೆಳವಣಿಗೆ ಕುಂಠಿತವಾಯಿತು. ನಂತರ ತೇವಾಂಶ ಕಡಿಮೆಯಾಗಿ ತೊಗರಿ ಬೆಳೆ ಹೂವು ಉದರಿಹೋಯಿತು. ಅದೆಲ್ಲ ಆದ ಮೇಲೆ ತೊಗರಿ ಗಿಡದಲ್ಲಿ ಅಲ್ಪಸ್ವಲ್ಪ ಕಾಯಿ ಉಳಿದಿದ್ದು, ಇನ್ನೂ ಕೆಲವು ಕಡೆ ಕಾಳು ಮಾಗುವ ಹಂತದಲ್ಲಿದೆ. ಆಗಲೇ ಗೊಡ್ಡು ರೋಗ ಕಾಣಿಸಿಕೊಂಡಿದ್ದು, ಇದರಿಂದ ರೈತರು ಕಷ್ಟಕ್ಕೀಡಾಗಿದ್ದಾರೆ.

ಈ ಕುರಿತು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಗುರುವಾರ ಮಾಹಿತಿ ನೀಡಿ, ‘ಪ್ರಸ್ತುತ ವರ್ಷ ತಾಲ್ಲೂಕಿನಲ್ಲಿ 45,250 ತೊಗರಿ ಬಿತ್ತನೆ ಗುರಿ ಹೊಂದಲಾಗಿತ್ತು. ಆ ಪೈಕಿ 36,280 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಬೆಳೆ ಕಟಾವು ಹಂತದಲ್ಲಿದ್ದು, ಗೊಡ್ಡು ರೋಗ ಕಾಣಿಸಿಕೊಂಡಿದೆ. ಸದ್ಯಕ್ಕೆ ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಬಿತ್ತನೆ ಮಾಡುವಾಗಲೇ ರೈತರು ಬೀಜೋಪಚಾರ ಮಾಡಬೇಕು ಮತ್ತು ಗೊಡ್ಡು ನಿರೋಧಕ ತಳಿಗಳನ್ನು ಬಳಸಬೇಕು’ ಎಂದು ಹೇಳುತ್ತಾರೆ.

‘ಪ್ರಸ್ತುತ ವರ್ಷ ತೊಗರಿ ಬೆಳೆ ಇಳುವರಿಯಲ್ಲಿ ಸಾಕಷ್ಟು ಕುಂಠಿತವಾಗುತ್ತದೆ. ತೇವಾಂಶ ಕಡಿಮೆ, ನೆಟೆರೋಗ, ಗೊಡ್ಡು ರೋಗ –ಇವೆಲ್ಲವೂ ಕಾಣಿಸಿಕೊಂಡಿದ್ದು, ತೊಗರಿ ಬೆಳೆಯಲು ಮಾಡಿರುವ ಖರ್ಚು ಮರಳಿ ಬರುವ ಭರವಸೆ ಇಲ್ಲ. ಸರ್ಕಾರ ಕ್ವಿಂಟಲ್‌ ತೊಗರಿಗೆ ₹7 ಸಾವಿರ ಬೆಲೆ ನಿಗದಿ ಮಾಡಬೇಕು’ ಎಂದು ರೈತ ಮುಖಂಡರಾದ ಚಂದ್ರಶೇಖರ ಕರಜಗಿ, ಚಂದ್ರಾಮ ಬಳಗೂಂಡೆ ಹೇಳುತ್ತಾರೆ.

* * 

ರೈತರು ಬಿತ್ತನೆ ಮಾಡುವಾಗ ರೋಗ ನಿರೋಧ ತಳಿಗಳನ್ನು ಬಿತ್ತನೆ ಮಾಡಬೇಕು. ಬೀಜೋಪಚಾರ ಕಡ್ಡಾಯವಾಗಿ ಮಾಡಬೇಕು. ಗೊಡ್ಡು ತೊಗರಿ ಗಿಡಗಳು ಕಾಣಿಸಿಕೊಂಡಾಗ ಅವುಗಳನ್ನು ಕಿತ್ತು ಹಾಕಬೇಕು.
ಶರಣುಗೌಡ ಪಾಟೀಲ,
ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT