ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಕ್ಟೇರ್‌ಗೆ 62 ಕ್ವಿಂಟಲ್ ಇಳುವರಿ!

Last Updated 8 ಡಿಸೆಂಬರ್ 2017, 6:57 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಭತ್ತದ ಖಣಜ’ವಾದ ದಕ್ಷಿಣ ಕೊಡಗು ಈಗ ಹವಾಮಾನ ವೈಪರೀತ್ಯ, ಕಾರ್ಮಿಕರ ಸಮಸ್ಯೆ, ಬೆಲೆ ಕುಸಿತ... ಈ ರೀತಿಯ ಹತ್ತಾರು ಸಮಸ್ಯೆಗಳಿಂದ ನಲುಗುತ್ತಿದೆ; ಭತ್ತ ಬೆಳೆಯುವ ಪ್ರದೇಶವೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಸಂಬಾಳಿಸಿಕೊಂಡು ಭತ್ತದ ಕೃಷಿಯಲ್ಲಿ ಯಶಸ್ಸು ಕಂಡವರು ಬಾಳೆಲೆ ದೇವನೂರು ಗ್ರಾಮದ ಪೋಡಮಾಡ ಮೋಹನ್.

ಇವರು ಕೇವಲ 2.5 ಎಕರೆ ಭೂಮಿಯಲ್ಲಿ ಮಾತ್ರ ಭತ್ತದ ಕೃಷಿ ಕೈಗೊಂಡಿದ್ದಾರೆ. ಇಷ್ಟರಲ್ಲಿಯೇ ಸಮೃದ್ಧಿಯಾಗಿ ಬೆಳೆ ತೆಗೆಯುತ್ತಿದ್ದಾರೆ. ಬಾಳೆಲೆ ಭಾಗಕ್ಕೆ ಮಳೆ ಯಾವತ್ತೂ ಕಡಿಮೆ. ಹೀಗಾಗಿ, ಈ ಭಾಗದ ಜನರು ಕಾಫಿಗೆ ಕೊಡುವಷ್ಟು ಆದ್ಯತೆಯನ್ನು ಭತ್ತಕ್ಕೆ ಕೊಡಲಾರರು. ಇಂತಹ ಸನ್ನಿವೇಶದಲ್ಲಿ ಮೋಹನ್ ಅವರು ತೋಡುಗಳಲ್ಲಿ ಹರಿಯವ ನೀರನ್ನು ಬಳಸಿಕೊಂಡು ಉತ್ತಮ ಕೃಷಿ ಕೈಗೊಂಡಿದ್ದಾರೆ.

ಮಳೆಗಾಲದಲ್ಲಿ ಸಂಗ್ರಹಿಸಿಕೊಂಡು ಕೆರೆಗಳಿಗೆ ತುಂಬಿಸಿಕೊಳ್ಳುತ್ತಾರೆ. ಬಳಿಕ ಗದ್ದೆಯಲ್ಲಿ ನೀರು ಕಡಿಮೆಯಾದರೆ ಕೆರೆಯಿಂದ ನೀರು ಹಾಯಿಸಿಕೊಳ್ಳುತ್ತಾರೆ. ಹೀಗಾಗಿ, ಪ್ರತಿ ವರ್ಷವೂ ಗದ್ದೆಯನ್ನು ಖಾಲಿ ಬಿಡದೇ ಕೃಷಿಮಾಡಿ ಉತ್ತಮ ಬೆಳೆ ತೆಗೆಯುತ್ತಿದ್ದಾರೆ.

2015–16ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಂದು ಹೆಕ್ಟೇರ್‌ಗೆ 62.64 ಕ್ವಿಂಟಲ್ ಭತ್ತ ಬೆಳೆದು ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಇಳುವರಿ ಪಡೆದ ರೈತರಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಹೀಗಾಗಿ ಇವರನ್ನು ಕೃಷಿ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಿದೆ.

ಕಾಫಿ ತೋಟದ ನಡುವಿನ ಹಳ್ಳದಲ್ಲಿರುವ ಗದ್ದೆಗಳು ಯಾವಾಗಲೂ ನೀರಿನ ಪಸೆಯಿಂದ ಕೂಡಿರುತ್ತವೆ. ಗದ್ದೆ ಮಣ್ಣು ಕೂಡ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರದಿಂದ ಫಲವತ್ತಾಗಿದೆ. ಈ ವರ್ಷವೂ ಗದ್ದೆಯಲ್ಲಿ ಭತ್ತ ಸುಮಾರು 5 ಅಡಿಯಷ್ಟು ಎತ್ತರವಾಗಿ ಸಮೃದ್ಧಿಯಾಗಿ ಬೆಳೆದಿದೆ. ಗೊನೆಗಳು ಕೂಡ ನೀಳವಾಗಿದ್ದು ಕಾಳುಬಿಟ್ಟು ತಲೆದೂಗುತ್ತಿವೆ. ಭತ್ತದ ಗೊನೆ ಹಿಡಿದು ಮುದ್ದಿಸುವ ಮೋಹನ್ ಅದರೊಳಗೆ ಸುತ್ತುತ್ತಾ ಆನಂದಿಸುತ್ತಾರೆ.

ಮೋಹನ್ ಅವರು ಉಳುಮೆಗೆ ಟಿಲ್ಲರ್ ಬಳಸಿದರೂ ನಾಟಿ ಮತ್ತು ಕೊಯ್ಲನ್ನು ಕೈಯಿಂದಲೇ ಮಾಡಿಸುತ್ತಾರೆ. ಒಕ್ಕಣೆಯನ್ನೂ ಸಾಂಪ್ರದಾಯಿಕವಾಗಿ ಕಾರ್ಮಿಕರಿಂದಲೇ ಮಾಡಿಸುತ್ತಾರೆ. ಇದರಿಂದ ಹುಲ್ಲು ಮತ್ತು ಭತ್ತ ಎರಡರಲ್ಲಿಯೂ ಅವರಿಗೆ ಆದಾಯ ಬರುತ್ತಿದೆ.

ಭತ್ತದ ಹುಲ್ಲಿಗೂ ಉತ್ತಮ ಬೆಲೆ ಇರುವುದರಿಂದ ಹುಲ್ಲನ್ನು ಹಾಳು ಮಾಡುತ್ತಿಲ್ಲ. ಹೀಗಾಗಿ ಅವರಿಗೆ ಭತ್ತದ ಕೃಷಿ ಕೈಹಿಡಿದಿದೆ. ಲಾಭದಾಯಕ ಎನ್ನಿಸಿದೆ. ಜತೆಗೆ ಕಾಫಿ, ಅಡಿಕೆ, ತೆಂಗು, ಬಾಳೆ, ಸಪೋಟ ಮೊದಲಾದವುಗಳನ್ನು ಅಚುಕಟ್ಟಾಗಿ ಬೆಳೆದಿದ್ದಾರೆ.

ಕಾಫಿ ತೋಟವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಭತ್ತದ ಗದ್ದೆಯ ಮಧ್ಯದಲ್ಲಿರುವ ವಿಶಾಲವಾದ ಕೆರೆಯಲ್ಲಿ ಸಾವಿರಾರು ಮೀನುಗಳನ್ನು ಸಾಕಿದ್ದಾರೆ. ಪಪ್ಪಾಯಿ, ಸಪೋಟ, ಸೀಬೆ ಮೊದಲಾದ ಹಣ್ಣುಗಳಿರುವ ಇವರ ತೋಟದಲ್ಲಿ ಪಕ್ಷಿಗಳ ಕಲರವ ಕಿವಿಗಡಚಿಕ್ಕುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT