ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೊಂದು ರಮ್ಯ ಕಥನ

Last Updated 8 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಗುಲ್‌–ಎ–ಬಕಾವಲಿ’... ಇದು ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಅನನ್ಯ ಛಾಪು ಮೂಡಿಸಿದ್ದ ಗುಬ್ಬಿ ವೀರಣ್ಣ ಅವರ ನಾಟಕ ಕಂಪೆನಿಯಲ್ಲಿ ಪ್ರದರ್ಶನವಾಗುತ್ತಿದ್ದ ಜನಪ್ರಿಯ ನಾಟಕ. ಈ ನಾಟಕವನ್ನು ಚಿಂದೋಡಿ ನಾಟಕ ಕಂಪೆನಿಯೂ ಕೆಲಕಾಲ ಪ್ರಯೋಗಿಸಿತ್ತು.

ಅಂದು ಅಪ್ಪಟ ಕಂಪೆನಿ ನಾಟಕ ಶೈಲಿಯಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮನಗೆದ್ದಿದ್ದ ಈ ನಾಟಕ ಈಗ ಮತ್ತೊಮ್ಮೆ ರಂಗದ ಮೇಲೆ ಪ್ರದರ್ಶನವಾಗಲು ಸಜ್ಜಾಗಿದೆ. ಖ್ಯಾತ ರಂಗ ನಿರ್ದೇಶಕ ಎಂ.ಎಸ್. ಸತ್ಯು ಅವರ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ’ಗುಲ್‌–ಎ–ಬಕಾವಲಿ’ ನಾಟಕ ಡಿಸೆಂಬರ್ 9ರಂದು ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.

‘ಗುಬ್ಬಿ ನಾಟಕ ಕಂಪೆನಿಯ ಕ್ಲಾಸಿಕ್ ನಾಟಕಗಳಲ್ಲಿ ಈ ನಾಟಕವೂ ಒಂದು. ಆರಂಭದಲ್ಲಿ ಈ ನಾಟಕದ ಸ್ಕ್ರಿಪ್ಟ್ ಅನ್ನು ಇಟ್ಟುಕೊಂಡೇ ನಾಟಕ ಮಾಡಬೇಕೆಂದುಕೊಂಡಿದ್ದೆವು. ಆದರೆ, ನಾಟಕದ ಮೂಲಪ್ರತಿ ದೊರೆಯಲಿಲ್ಲ. ಲಂಡನ್ ಮ್ಯೂಸಿಯಂನಲ್ಲಿ ಕಥೆಯ ಮೂಲ ಸ್ಕ್ರಿಪ್ಟ್‌ ದೊರೆಯಿತು. ಅದನ್ನೇ ಇಟ್ಟುಕೊಂಡು ಈಗ ಎಂ.ಎಸ್‌. ಸತ್ಯು ಅವರು ‘ಗುಲ್–ಎ–ಬಕಾವಲಿ’ ನಿರ್ದೇಶಿಸಿದ್ದಾರೆ.

ಫ್ಯಾಂಟಸಿಯಾಗಿರುವ ಈ ನಾಟಕದ ಮೂಲ ಸ್ವರೂಪವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಅದುವೇ ಈ ನಾಟಕದ ವಿಶೇಷ. ಸಾಮಾನ್ಯವಾಗಿ ಸತ್ಯು ಅವರ ನಾಟಕಗಳಲ್ಲಿ ರಾಜಕೀಯ ಪಲ್ಲಟದ ಚಿತ್ರಣವಿರುತ್ತದೆ. ಆದರೆ, ಈ ನಾಟಕ ಹಾಗಿಲ್ಲ’ ಎನ್ನುತ್ತಾರೆ ‘ಗುಲ್–ಎ–ಬಕಾವಲಿ’ಯ ಸಹ ನಿರ್ದೇಶಕ ಎಂ.ಸಿ.ಆನಂದ.

ಗುಬ್ಬಿ ಕಂಪೆನಿಯಲ್ಲಿ ಮೂಲ ಕಥೆಯನ್ನಿಟ್ಟುಕೊಂಡು ನಾಟಕೀಯವಾಗಿ ತುಸು ಮಾರ್ಪಾಟು ಮಾಡಿಕೊಂಡಿದ್ದರು. ಸತ್ಯು ಸರ್ ಇದನ್ನು ನೋಡಿದ್ದರು. ಆಗ ಈ ನಾಟಕ ಸಂಗೀತದ ಕಾರಣಕ್ಕಾಗಿಯೂ ಪ್ರಸಿದ್ಧಿಯಾಗಿತ್ತು. ಕಂಪೆನಿ ನಾಟಕ ಶೈಲಿಯಿಂದ ಆಧುನಿಕ ರಂಗದ ಶೈಲಿಗೆ ಒಗ್ಗಿಸಿಕೊಂಡಿದ್ದೇವೆ. ಚಮತ್ಕಾರಿಕ ಗುಣಗಳನ್ನು ಕಡಿಮೆ ಮಾಡಿ ಕಥೆ, ಸಂಗೀತ, ನೃತ್ಯಕ್ಕೆ ಒತ್ತು ನೀಡಲಾಗಿದೆ. ನಾಟಕಕ್ಕೆ ನಂದಿನಿ ಮೆಹ್ತಾ ಅವರ ಅದ್ಭುತ ನೃತ್ಯ ಸಂಯೋಜನೆ ಇದೆ ಎಂದು ವಿವರಿಸುತ್ತಾರೆ ಅವರು.

ನರ್ಮದಾ ನದಿ ತೀರದ ಅನಾಮಧೇಯ ಲೇಖಕನೊಬ್ಬ ಪಾರ್ಸಿ ಭಾಷೆಯಲ್ಲಿ ಬರೆದ ನಾಟಕವೇ ‘ಗುಲ್–ಎ–ಬಕಾವಲಿ’. ತೆಲುಗು, ತಮಿಳು, ಉರ್ದು, ಬಂಗಾಲಿ, ಪಂಜಾಬಿ ಮತ್ತಿತರ ಭಾಷೆಗಳಲ್ಲಿ ಇದೇ

ಕಥೆಯನ್ನಾಧರಿಸಿದ ಚಲನಚಿತ್ರಗಳು ನಿರ್ಮಾಣಗೊಂಡಿವೆ. ನೂರಾರು ವರ್ಷಗಳ ಹಿಂದೆ, ನರ್ಮದಾ ನದಿಯ ತೀರದಲ್ಲಿ ಮಹಾ ಗರ್ವಿಯಾದ ರಾಜನೊಬ್ಬ ರೇವ ಎಂಬ ದೇಶವನ್ನು ಆಳುತ್ತಿದ್ದ. ಅನೇಕ ಪತ್ನಿಯರನ್ನು ಹೊಂದಿದ್ದ ಆ ರಾಜ ಕ್ರೂರಿ, ಅಹಂಕಾರಿ ಹಾಗೂ ವಿಷಯಲಂಪಟನಾಗಿದ್ದ. ಪ್ರಜೆಗಳ ಕ್ಷೇಮಕುಶಲವನ್ನೂ ಕಡೆಗಣಿಸಿದ್ದ ಆ ರಾಜನಿಗೆ ಸ್ವಂತ ಮಗನಿಂದಲೇ ದೃಷ್ಟಿ ಕಳೆದುಕೊಳ್ಳುವ ಶಾಪವಿತ್ತು. ಇದಕ್ಕೆ ಭಯಗೊಂಡ ರಾಜ ಗರ್ಭಿಣಿ ಪತ್ನಿಯನ್ನು ಕಾಡಿಗಟ್ಟುತ್ತಾನೆ.

ಬಹುವರ್ಷಗಳ ಬಳಿಕ ಆ ರಾಜ ಬೇಟೆಗೆಂದು ಕಾಡಿಗೆ ತೆರಳಿದಾಗ ಮಗನ ಮುಖಾಮುಖಿಯಾಗುತ್ತದೆ. ಹುಲಿಯೊಂದಿಗೆ ಆಟವಾಡುತ್ತಿದ್ದ ಮಗನನ್ನು ನೋಡಿದ ಕೂಡಲೇ ರಾಜನ ದೃಷ್ಟಿ ಹೋಗುತ್ತದೆ.  ಬಕಾವಲಿಯ ಹೂವನ್ನು ತಂದು ಅದರ ರಸವನ್ನು ಕಣ್ಣಿಗೆ ಹಾಕಿದರೆ ಶಾಪ ನಿವಾರಣೆಯಾಗುವ ವಿಷಯ ತಿಳಿಯುತ್ತದೆ. ಇದನ್ನು ಅರಿತ ರಾಜನ ಕಿರಿಯ ಮಗ ತಾಜ್-ಉಲ್-ಮುಲಕ್ ಸಾಕಷ್ಟು ಸಾಹಸ ಮಾಡಿ, ಬಕಾವಲಿಯ ಹೂವನ್ನು ಪಡೆದು, ರಾಜನಿಗೆ ದೃಷ್ಟಿ ಮರಳಿ ದೊರೆಯುವಂತೆ ಮಾಡುತ್ತಾನೆ.

ಇತ್ತ ತಾಜ್–ಉಲ್–ಮುಲಕ್‌ ದಿಲ್‌ಬರ್ ಎಂಬ ಸುಂದರಿಯನ್ನು ವರಿಸಬೇಕೆನ್ನು ಕೊಳ್ಳುತ್ತಿರುವಾಗಲೇ ದೇವಕನ್ಯೆ ಬಂದು ಆತನನ್ನು ಧರ್ಮಸಂಕಟಕ್ಕೆ ಸಿಲುಕಿಸುತ್ತಾಳೆ. ಆ ಧರ್ಮಸಂಕಟವೇ ನಾಟಕ ಜೀವಾಳ. ಇದನ್ನು ’ಗುಲ್‌–ಎ–ಬಕಾವಲಿ‘ ನಾಟಕದ ಮೂಲಕ ಎಂ.ಎಸ್. ಸತ್ಯು ಅವರ ರಂಗದ ಮೇಲೆ ರಮ್ಯವಾಗಿ ಅನಾವರಣಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT