ಸೋಮವಾರ, ಮಾರ್ಚ್ 1, 2021
29 °C

‘ಕಷ್ಟ ಸಹಿಸಿ ಮುನ್ನಡೆದರೆ ಬದುಕು ಸರಾಗ’

ಕಲಾವತಿ ಬೈಚಬಾಳ Updated:

ಅಕ್ಷರ ಗಾತ್ರ : | |

‘ಕಷ್ಟ ಸಹಿಸಿ ಮುನ್ನಡೆದರೆ ಬದುಕು ಸರಾಗ’

ನನ್ನ ಹೆಸರು ಮಾಹಿಬಾಷಾ. ನನಗೀಗ 50 ವರ್ಷ. ಸುಮಾರು 15–16 ವರ್ಷಗಳಿಂದ ಮಹಾತ್ಮ ಗಾಂಧಿ ರಸ್ತೆಯ ಕೆನರಾ ಬ್ಯಾಂಕ್ ರಸ್ತೆ ಬದಿಯಲ್ಲಿ ಈ ಪುಟ್ಟ ಡಬ್ಬಾ ಅಂಗಡಿಯಲ್ಲೇ ಹಣ್ಣು, ತರಕಾರಿಗಳು, ಸ್ನ್ಯಾಕ್ಸ್, ಬೇಲ್‌ಪುರಿ ಸೇವ್‍ಪುರಿ ಇತ್ಯಾದಿಗಳ ಮಾರಾಟ ಮಾಡ್ಕೊಂಡಿದ್ದೀನಿ..

ಮೂಲತಃ ಬೆಂಗಳೂರಿನವನೇ ನಾನು. ಶಿವಾಜಿ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದೀನಿ.. ನನ್ನ ಹೆಂಡತಿನೂ ಕೆಲಸಕ್ಕೆ ಹೋಗ್ತಾಳೆ. ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇದ್ದುದ್ದರಲ್ಲೆ ನಮ್ಮ ಸುಖ ಸಂಸಾರ ಆಮೆ ವೇಗದಲ್ಲಿ ಸಾಗುತ್ತಿದೆ. ಈ ವ್ಯಾಪಾರದಿಂದ ಬರೋ ಅಷ್ಟಿಷ್ಟು ಹಣ ಕೂಡಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಅವರು ಬೆಳೆದು ದೊಡ್ಡವರಾಗ್ತಾ ಬಂದ್ರು, ಇನ್ನು ಹೆಣ್ಮಕ್ಕಳಿಗೆ ಮದ್ವೆ, ಬಾಣಂತನ ಎಲ್ಲಾ ಇರುತ್ತೆ. ಹಣ ಹೊಂದಿಸೋದೆ ದೊಡ್ಡ ಕಷ್ಟ. ಬೆಟ್ಟದಷ್ಟು ಜವಾಬ್ದಾರಿ ಇದೆ.

ಕೆ.ಆರ್‌.ಮಾರ್ಕೆಟ್‌, ಶಿವಾಜಿನಗರದಿಂದ ಹಣ್ಣು ಮತ್ತು ತರಕಾರಿಗಳನ್ನು ತರ್ತೀನಿ. ಸವಾರಿಗೆ ಸೈಕಲ್‌ ಇದೆ. ಈ ವ್ಯಾಪಾರದಿಂದ ಖರ್ಚೆಲ್ಲಾ ಕಳೆದು ತಿಂಗಳಿಗೆ ಅಬ್ಬಬ್ಬಾ ಅಂದರೆ ₹ 2ರಿಂದ 3ಸಾವ್ರ ಉಳಿತಾಯ ಆಗುತ್ತೆ. ಬೇಸಿಗೆಯಲ್ಲಿ ವ್ಯಾಪಾರ ಚೆನ್ನಾಗಿ ನಡಿಯತ್ತೆ. ಮಳೆಗಾಲದ ದಿನಗಳಲ್ಲಿ ಬಹಳ ಕಮ್ಮಿ. ಮಳೆ ಬಂದ್ರೆ ಅಂಗಡಿ ತೆರೆಯೋದೆ ಕಷ್ಟ. ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲ.

ನಾವೆಲ್ಲ ದಿನಗೂಲಿಗಳ ಹಾಗೆ ಕೆಲಸ ಮಾಡೋರಮ್ಮ. ಅವತ್ತು ದುಡಿದ್ರೆ ಮಾತ್ರ ಕುಟುಂಬದೋರ ಹೊಟ್ಟೆಗೆ ಹಿಟ್ಟು. ಇಲ್ಲಾಂದ್ರೆ ಗಂಜಿನೆ ಗತಿ. ಎಷ್ಟೋ ಬಾರಿ ಹೇಳಲಿಕ್ಕೆ ಆಗದಿರುವಷ್ಟು ಕಷ್ಟ ಅನುಭವಿಸಿದ್ದೇವೆ. ಆ ಅಲ್ಲಾಹುನೇ ನಮಗೆ ದಾರಿ ತೋರಿದ್ದಾನೆ. ಪ್ರತಿನಿತ್ಯ ತುತ್ತಿನ ಜೋಳಿಗೆ ತುಂಬಿಕೊಳ್ಳುವ ತವಕ ನಮಗೆ ಏನ್‌ ಮಾಡೋದು... ಇಷ್ಟೇ ಜೀವನ... 

ಕಚೇರಿಗಳಲ್ಲಿ ದುಡಿಯುವ ನೂರಾರು ಜನರು ಇಲ್ಲಿ ಬಂದು ತಿಂಡಿ, ಹಣ್ಣುಗಳನ್ನು ಸವಿಯುತ್ತಾರೆ. ಪೇಪರ್ ಬೌಲ್‌ನಲ್ಲಿ ಬಾಳೆಹಣ್ಣು, ಪಪ್ಪಾಯಿ, ಕಲ್ಲಂಗಡಿ, ಅನಾನಸು ಹೀಗೆ ಐದಾರು ಹಣ್ಣುಗಳ  ‘ಮಿಕ್ಸೆಡ್‌ ಫ್ರೂಟ್ಸ್’, ‘ಮಿಕ್ಸ್‌ ವೆಜಿಟೆಬಲ್ಸ್‌’ ಆರೋಗ್ಯಕ್ಕೂ ಒಳ್ಳೇದಲ್ವಾ? ಒಂದು ಬೌಲ್‌ ಹಣ್ಣಿಗೆ ₹25.

ಜನರ ಆರೋಗ್ಯದ ಕಾಳಜಿ ಜೊತೆಗೆ, ಹಸಿದ ಹೊಟ್ಟೆ ತಣ್ಣಗಾಗಿಸೋದು ಪುಣ್ಯದ ಕೆಲಸವೇ ಸರಿ. ಅಲ್ವೇನಮ್ಮ. ‘ನಿಮ್ಮ ಭೇಲ್‌ಪುರಿ, ಡಿಕ್ಕಿಪುರಿ, ತಮಡಿಚಟ್, ನಿಬಟ್ ಮಸಾಲಾ ನಮಗೆ ಬಹಳ ಇಷ್ಟ ಚಾಚಾ’ ಅಂತ ಗ್ರಾಹಕರು ಹೇಳಿದಾಗ ಖುಷಿಯಾಗುತ್ತದೆ.

ನಮ್ಮಂತಹ ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಯಾವುದೇ ರಕ್ಷಣೆ, ಸೌಲಭ್ಯ ಹಾಗೂ ಸವಲತ್ತು ಇಲ್ಲ. ನಮ್ಮೊಂಥೋರು ಬದುಕೋದೆ ಕಷ್ಟ. ಕಷ್ಟ ಅಂತಾ ಕೂತ್ರೆ, ಜೀವನವೇ ಕಷ್ಟ ಆಗುತ್ತೆ.  ಬಂದಿದ್ದು ಬರ್ಲೀ ಮುನ್ನಡೆಯುತ್ತೆನೆ ಅನ್ನೋ ಧೈರ್ಯ ಇದ್ದರೆ ಸಾಕು. ಎಲ್ಲಾನೂ ಗೆಲ್ತೀವಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.