ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ ಕೋರ್ಟ್‌ನಲ್ಲಿ ಅವಮಾನ‘: ವಕೀಲಿ ವೃತ್ತಿಗೆ ಧವನ್‌ ವಿದಾಯ

Last Updated 11 ಡಿಸೆಂಬರ್ 2017, 19:57 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಡಾ. ರಾಜೀವ್‌ ಧವನ್‌ ತಮ್ಮ ವೃತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ಅವರಿಗೆ ಕೇವಲ ಎರಡೇ ಗೆರೆಗಳಲ್ಲಿ ಪತ್ರ ಬರೆದಿರುವ ಧವನ್‌, ‘ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ನಡುವಣ ಪ್ರಕರಣಕ್ಕೆ ‘ಅವಮಾನಕರ ಮುಕ್ತಾಯ’ ದೊರಕಿದ್ದು ವಕೀಲಿ ವೃತ್ತಿಗೆ ವಿದಾಯ ಹೇಳಲು ಕಾರಣ’ ಎಂದು ಹೇಳಿದ್ದಾರೆ.

‘ನನಗೆ ನೀಡಿದ ಹಿರಿಯ ವಕೀಲ ಎಂಬ ಸ್ಥಾನಮಾನವನ್ನು ನೀವು ತೆಗೆದುಕೊಳ್ಳಬಹುದು. ಹಾಗಿದ್ದರೂ, ನಾನು ಸುಪ್ರೀಂ ಕೋರ್ಟ್‌ನಲ್ಲಿ ನೀಡಿದ ಸೇವೆಯ ನೆನಪಾಗಿ ಅದು ನನ್ನ ಬಳಿಯಲ್ಲಿಯೇ ಉಳಿಯಲಿದೆ’ ಎಂದು ಅವರು ಹೇಳಿದ್ದಾರೆ.

ಸೋಮವಾರ ಪತ್ರಕರ್ತರೊಂದಿಗೆ ನಡೆಸಿದ ಅನೌಪಚಾರಿಕ ಸಂವಾದದಲ್ಲಿ ಧವನ್‌ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಜೆಐ ನಿರಾಕರಿಸಿದ್ದಾರೆ.

ತೀಕ್ಷ್ಣ ಮತ್ತು ಕಠೋರ ವಾದಗಳಿಗೆ ಹೆಸರಾದ ಧವನ್‌ ಅವರು ಹಲವು ನ್ಯಾಯಮೂರ್ತಿಗಳೊಂದಿಗೆ ಹಲವಾರು ಬಾರಿ ವಾಕ್ಸಮರ ನಡೆಸಿದ್ದರು.

ಕಳೆದ ವಾರ ಅಯೋಧ್ಯೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಕೂಡ ಧವನ್‌ ಅವರು ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ದುಶ್ಯಂತ್‌ ದವೆ ಅವರ ಜತೆ ಸೇರಿ ನ್ಯಾಯಮೂರ್ತಿಗಳೊಂದಿಗೆ ವಾಗ್ವಾದ ನಡೆಸಿದ್ದರು.

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದರೆ ನ್ಯಾಯಾಲಯದ ಕೊಠಡಿಯಿಂದ ಹೊರಹೋಗುವ ಬೆದರಿಕೆಯನ್ನೂ ಒಡ್ಡಿದ್ದರು.

ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ನಡುವಣ ಪ್ರಕರಣದಲ್ಲೂ, ನ್ಯಾಯಪೀಠ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ ನಂತರವೂ ತಮಗೆ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ನ್ಯಾಯಪೀಠದ ಮೇಲೆ ಪದೇ ಪದೇ ಒತ್ತಡ ತಂದಿದ್ದರು.

ಎಎಪಿ ಸರ್ಕಾರದ ಪರ ವಾದ ಮಂಡಿಸುತ್ತಿದ್ದ ಅವರು, ಈ ಪ್ರಕರಣದಲ್ಲಿ ತಮಗೆ ಸೋಲಾದರೂ ಚಿಂತೆಯಿಲ್ಲ ಎಂದೂ ಹೇಳಿದ್ದರು. ಆದರೆ, ದೆಹಲಿ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಮತ್ತೊಬ್ಬ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್‌ ಅವರು ಧವನ್‌ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಸಿಬಲ್‌, ಧವನ್‌ ಸೇರಿದಂತೆ ಸುಪ್ರೀಂ ಕೋರ್ಟ್‌ನ ಕೆಲವು ಹಿರಿಯ ವಕೀಲರ ವರ್ತನೆಗೆ ಸಿಜೆಐ ನೇತೃತ್ವದ ನ್ಯಾಯಪೀಠವು ತೀವ್ರ ಆಕ್ಷೇಪವನ್ನೂ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT