ಸೋಮವಾರ, ಮಾರ್ಚ್ 8, 2021
19 °C

‘ಎಗ್ಗಿಲ್ಲದ ಅಭಿವೃದ್ಧಿ’ಗೆ ಲಗಾಮು

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

‘ಎಗ್ಗಿಲ್ಲದ ಅಭಿವೃದ್ಧಿ’ಗೆ ಲಗಾಮು

ಬೆಂಗಳೂರು: ಪರಿಷ್ಕೃತ ನಗರ ಮಹಾಯೋಜನೆ (ಆರ್‌ಎಂಪಿ) 2031ರ ಎ– ಯೋಜನಾ ವಲಯದಲ್ಲಿ ವಸತಿ ಕಟ್ಟಡಗಳಿಗೆ ಮೂಲ ಫ್ಲೋರ್‌ ಏರಿಯಾ ರೇಷಿಯೊ (ಎಫ್‌ಎಆರ್‌) ಮಿತಿಯನ್ನು 1.80ಕ್ಕೆ ಹಾಗೂ ಬಿ–ಯೋಜನಾ ವಲಯದಲ್ಲಿ 2ಕ್ಕೆ ನಿಗದಿಪಡಿಸಲಾಗಿದೆ.

ಪರಿಷ್ಕೃತ ನಗರ ಮಹಾಯೋಜನೆ– 2015ರಲ್ಲಿ ವಸತಿ ಕಟ್ಟಡಗಳಿಗೆ 1.75ರಿಂದ 3.25ರಷ್ಟು ಮೂಲ ಎಫ್‌ಎಆರ್‌ ನಿಗದಿಪಡಿಸಲಾಗಿತ್ತು.

ಈ ಹಿಂದೆ ಎಫ್‌ಎಆರ್‌ ಹೆಚ್ಚು ಇದ್ದುದರಿಂದಲೇ ನಗರದ ಕೆಲವು ಪ್ರದೇಶಗಳಲ್ಲಿ ಬೆಳವಣಿಗೆ ದರ ವಿಪರೀತ ಹೆಚ್ಚಿತು. ನವದೆಹಲಿಯಲ್ಲೂ ವಸತಿ ಕಟ್ಟಡಗಳಿಗೆ ಮೂಲ ಎಫ್‌ಎಆರ್‌ ಮಿತಿಯನ್ನು 2ಕ್ಕೆ ನಿಗದಿಪಡಿಸಲಾಗಿದೆ. ಎಫ್‌ಎಆರ್‌ ಕಡಿಮೆ ಮಾಡುವುದರಿಂದ ಅಭಿವೃದ್ಧಿ ಚಟುವಟಿಕೆಗೆ ಕಡಿವಾಣ ಬೀಳುತ್ತದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಆದರೆ, ಈ ವಾದವನ್ನು ನಿವಾಸಿಗಳ ಸಂಘಟನೆಗಳು ಒಪ್ಪುವುದಿಲ್ಲ. 2031ರಲ್ಲಿ ಜನಸಂಖ್ಯೆ ದುಪ್ಪಟ್ಟಾಗಲಿದೆ ಎಂದು ಬಿಡಿಎ ಹೇಳುತ್ತಿದೆ. 15 ವರ್ಷಗಳಲ್ಲಿ ನಗರದ ವ್ಯಾಪ್ತಿ ಕೇವಲ 80 ಚದರ ಕಿ.ಮೀ.ಗಳಷ್ಟು ಹೆಚ್ಚಾಗಲಿದೆ ಎಂದು ಆರ್‌ಎಂಪಿಯಲ್ಲಿ ಅಂದಾಜು ಮಾಡಲಾಗಿದೆ. ಹೆಚ್ಚು ಎತ್ತರದ ಕಟ್ಟಡಗಳಿಗೆ ಅವಕಾಶ ನೀಡಿದರೆ ಮಾತ್ರ ಕಡಿಮೆ ಜಾಗದಲ್ಲಿ ಹೆಚ್ಚು ಜನವಸತಿಗೆ ಅವಕಾಶ ಕಲ್ಲಿಸಲು ಸಾಧ್ಯ. ವಸತಿ ಕಟ್ಟಡಗಳ ಮೂಲ ಎಫ್‌ಎಆರ್‌ ಮಿತಿಯನ್ನು ಹೆಚ್ಚು ಮಾಡುತ್ತಿದ್ದರೆ ಬಹುಮಹಡಿ ಕಟ್ಟಡ ನಿರ್ಮಿಸಲು ಉತ್ತೇಜನ ಸಿಗುತ್ತಿತ್ತು ಎಂಬುದು ಅವರ ವಾದ.

‘ಎಫ್‌ಎಆರ್‌ ವಿಚಾರದಲ್ಲಿ ಬಿಡಿಎ ವಾದವನ್ನು ಒಪ್ಪಲು ಸಾಧ್ಯವಿಲ್ಲ. ನಗರದ ವಿಸ್ತರಣೆ ವಿಚಾರದಲ್ಲಿ ಅವರು ಹೇಳುತ್ತಿರುವ ಅಂಶಗಳು ಒಂದಕ್ಕೊಂದು ತಾಳೆ ಆಗುತ್ತಿಲ್ಲ. ಒಂದೋ ನಗರದ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಬೇಕು. ಇಲ್ಲದಿದ್ದರೆ ಮೂಲ ಎಫ್‌ಎಆರ್‌ ಹೆಚ್ಚಿಸಬೇಕು. ಈ ಬಗ್ಗೆ ನಾವು ಆಕ್ಷೇಪಣೆ ಸಲ್ಲಿಸಲಿದ್ದೇವೆ’ ಎಂದು ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ಎನ್‌.ಎಸ್‌.ಮುಕುಂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂಲ ಎಫ್‌ಎಆರ್‌ ಮಿತಿಯನ್ನು 2ಕ್ಕೆ ನಿಗದಿಪಡಿಸಿದ್ದರೂ ಟಿಡಿಆರ್‌ ಅಥವಾ ಸರ್ಕಾರವೇ ಮಾರಾಟ ಮಾಡುವ ಪ್ರೀಮಿಯಂ ಎಫ್‌ಎಆರ್‌ ಖರೀದಿಸುವ ಮೂಲಕ ಕಟ್ಟಡದ ಎತ್ತರ ಹೆಚ್ಚಿಸಿಕೊಳ್ಳಲು ಅವಕಾಶ ಇದೆ. ಬಿ–ವಲಯದಲ್ಲಿ ಕೆಲವು ಕಡೆ ಟಿಡಿಆರ್‌ ಹಾಗೂ ಪ್ರೀಮಿಯಂ ಎಫ್‌ಎಆರ್‌ ಖರೀದಿಸಿ ಕಟ್ಟಡದ ಎಫ್‌ಎಆರ್‌ ಅನ್ನು 4ರವರೆಗೆ ವಿಸ್ತರಿಸಲು ಅವಕಾಶವಿದೆ. ಜನರು ಹೆಚ್ಚು ಎತ್ತರದ ಕಟ್ಟಡಗಳನ್ನು ನಿರ್ಮಿಸಿದಷ್ಟೂ ಆಸುಪಾಸಿನ ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಕಟ್ಟಡದ ಎಫ್‌ಎಆರ್‌ ಹೆಚ್ಚಿಸಲು ಬಯಸುವವರು ಪ್ರೀಮಿಯಂ ಎಫ್‌ಎಆರ್‌ ಅಥವಾ ಟಿಡಿಆರ್‌ ಖರೀದಿ ಮೂಲಕ ಮೂಲಸೌಕರ್ಯ ಅಭಿವೃದ್ಧಿಯ ವೆಚ್ಚವನ್ನೂ ಭರಿಸಬೇಕು’ ಎಂದು ಬಿಡಿಎ ಅಧಿಕಾರಿ ಸಮರ್ಥಿಸಿಕೊಂಡರು.

ಮೆಟ್ರೊ ಯೋಜನೆ: ಬಿ– ವಲಯದಲ್ಲಿ ಮಾತ್ರ ಹೆಚ್ಚುವರಿ ಎಫ್‌ಎಆರ್‌

ಮೆಟ್ರೊ ನಿಲ್ದಾಣ ಹಾಗೂ ಮೆಟ್ರೊ ಟರ್ಮಿನಲ್‌ಗಳ 150 ಮೀಟರ್‌ ವ್ಯಾಪ್ತಿಯ ಪ್ರದೇಶದಲ್ಲಿ ಸಾಮಾನ್ಯ ಎಫ್‌ಎಆರ್‌ಗಿಂತ ಹೆಚ್ಚು ಎಫ್‌ಎಆರ್‌ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಇದಕ್ಕೆ ಗರಿಷ್ಠ 4ರ ಮಿತಿ ನಿಗದಿಪಡಿಸಲಾಗಿದೆ. ಈ ಅವಕಾಶ ಬಿ–ವಲಯದಲ್ಲಿ (ಹೊರವರ್ತುಲ ರಸ್ತೆಗಿಂತ ಹೊರಗೆ) ಮಾತ್ರ.

‘ನಮ್ಮ ಮೆಟ್ರೊ’ ಯೋಜನೆಯ ಪ್ರಥಮ ಹಾಗೂ ದ್ವಿತೀಯ ಹಂತದ ಬಹುತೇಕ ನಿಲ್ದಾಣಗಳು ಎ–ವಲಯದೊಳಗೆ (ಹೊರವರ್ತುಲ ರಸ್ತೆಗಿಂತ ಒಳಗಿನ ಪ್ರದೇಶ) ಇವೆ. ಹಾಗಾಗಿ, ಈ ರಿಯಾಯಿತಿಯಿಂದ ಈಗಿರುವ ನಿಲ್ದಾಣಗಳ ವ್ಯಾಪ್ತಿಯ ‍ಪ್ರದೇಶಗಳಲ್ಲಿನ ಕಟ್ಟಡಗಳ ಎಫ್‌ಎಆರ್‌ ಹೆಚ್ಚಿಸಿಕೊಳ್ಳಲು ಅವಕಾಶ ಸಿಗುವುದಿಲ್ಲ.

ಮೆಟ್ರೊ ಯೋಜನೆಗಳಿಗೆ ನವೀನ ಹಣಕಾಸು ಯೋಜನೆ ಮೂಲಕ ಹಣ ಹೊಂದಿಸುವುದಕ್ಕೆ ಕೇಂದ್ರ ಸರ್ಕಾರದ ಹೊಸ ’ಮೆಟ್ರೊ ನೀತಿ’ ಉತ್ತೇಜನ ನೀಡುತ್ತದೆ. ನಿಲ್ದಾಣಗಳ 150 ಮೀ. ವ್ಯಾಪ್ತಿಯಲ್ಲಿ ಪ್ರೀಮಿಯಂ ಎಫ್‌ಎಆರ್‌ ಮಾರಾಟ ಮಾಡುವ ಮೂಲಕ ಮೆಟ್ರೊ ಯೋಜನೆಗೆ ಬಂಡವಾಳ ಕ್ರೋಡೀಕರಿಸುವ ಚಿಂತನೆ ರಾಜ್ಯ ಸರ್ಕಾರದ ಮುಂದೆಯೂ ಇದೆ.

‘ಮೆಟ್ರೊ ನಿಲ್ದಾಣ ಹಾಗೂ ಟರ್ಮಿನಲ್‌ ಬಳಿ ಪ್ರೀಮಿಯಂ ಎಫ್‌ಎಆರ್‌ ಮಾರಾಟ ಮಾಡುವುದಕ್ಕೆ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗುತ್ತಿದೆ’ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಜೈನ್‌ ಅವರು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದಾರೆ.

‘ಎ–ವಲಯದ ಮೆಟ್ರೊ ನಿಲ್ದಾಣಗಳ ಬಳಿ ಹೆಚ್ಚುವರಿ ಎಫ್‌ಎಆರ್‌ಗೆ ಅವಕಾಶ ನೀಡದಿರುವ ನಿರ್ಧಾರ ಸ್ವಾಗತಾರ್ಹ’ ಎನ್ನುತ್ತಾರೆ ಜಯನಗರದ ನಿವಾಸಿ ಮುರಳಿ.

‘ಅನೇಕ ಮೆಟ್ರೊ ನಿಲ್ದಾಣಗಳು ವಸತಿ ಪ್ರದೇಶದ ನಡುವೆ ಇವೆ. ಈ ನಿಲ್ದಾಣಗಳಲ್ಲಿನ ಜನಜಂಗುಳಿಯಿಂದಾಗಿ ಆಸುಪಾಸಿನ ನಿವಾಸಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿ ಎಫ್‌ಎಆರ್‌ ಹೆಚ್ಚಳಕ್ಕೆ ಅವಕಾಶ ಕಲ್ಪಿಸಿದರೆ ವಾಣಿಜ್ಯ ಚಟುವಟಿಕೆ ಹೆಚ್ಚಲಿದೆ. ಇಲ್ಲಿನ ನಿವಾಸಿಗಳ ಬದುಕು ಇನ್ನಷ್ಟು ಶೋಚನೀಯವಾಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಎಫ್‌ಎಆರ್‌ ಎಂದರೇನು?

ನಿವೇಶನದ ಅಳತೆ ಆಧರಿಸಿ ನಿರ್ಮಿಸಬಹುದಾದ ಕಟ್ಟಡದ ವಿಸ್ತೀರ್ಣ ಮತ್ತು ಅಂತಸ್ತುಗಳ ಮಿತಿಯೇ ಎಫ್‌ಎಆರ್‌.

ನಿವೇಶನದ ವಿಸ್ತೀರ್ಣ ಮತ್ತು ಅದು ಇರುವ ರಸ್ತೆ ಅಗಲವನ್ನು ಆಧರಿಸಿ ಎಷ್ಟು ಮಹಡಿಯ ಕಟ್ಟಡ ನಿರ್ಮಿಸಬಹುದು ಅಥವಾ ಎಷ್ಟು ಮಹಡಿಗಳನ್ನು ನಿರ್ಮಿಸಲು ಅವಕಾಶ ನೀಡಬಹುದು ಎಂಬುದನ್ನು ಲೆಕ್ಕಾಚಾರ ಹಾಕಲಾಗುತ್ತದೆ.

ಎಫ್‌ಎಆರ್‌ಗಳನ್ನು ಮೂಲ ಎಫ್‌ಎಆರ್‌ (ನಿವೇಶನದ ಅಳತೆ ಆಧರಿಸಿದ್ದು), ಟಿಡಿಆರ್‌ (ಅಭಿವೃದ್ಧಿ ಹಕ್ಕು ವರ್ಗಾವಣೆ) ಆಧಾರದ ಎಫ್‌ಎಆರ್‌ ಹಾಗೂ ಪ್ರೀಮಿಯಂ ಎಫ್‌ಎಆರ್‌ ಎಂದು ವರ್ಗೀಕರಿಸಬಹುದು. ಪ್ರೀಮಿಯಂ ಎಫ್‌ಎಆರ್‌ಗಳನ್ನು ಸರ್ಕಾರವೇ ಮಾರಾಟ ಮಾಡುತ್ತದೆ.

ಟಿಡಿಆರ್‌ ಅಥವಾ ಪ್ರೀಮಿಯಂ ಎಫ್‌ಎಆರ್‌ಗಳನ್ನು ಖರೀದಿಸಿ ಕಟ್ಟಡದಲ್ಲಿ ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್‌ಎಆರ್‌ಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗುತ್ತದೆ. ನಿರ್ದಿಷ್ಟ ಪ್ರದೇಶದಲ್ಲಿ ಎಲ್ಲ ರೀತಿಯ ಎಫ್‌ಎಆರ್‌ಗಳನ್ನು ಸೇರಿಸಿ ಗರಿಷ್ಠ ಎಷ್ಟು ಅಂತಸ್ತುಗಳ ಅಥವಾ ವಿಸ್ತೀರ್ಣದ ಕಟ್ಟಡ ನಿರ್ಮಿಸಬಹುದು ಎಂಬ ಕುರಿತು ನಗರ ಮಹಾಯೋಜನೆಯಲ್ಲಿ ಮಿತಿ ನಿಗದಿಪಡಿಸಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.