ಸೋಮವಾರ, ಮಾರ್ಚ್ 8, 2021
26 °C

ಭ್ರೂಣಲಿಂಗ ಪತ್ತೆ ತಡೆ: ಸಭೆಗೆ ‘ಸುಪ್ರೀಂ’ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರೂಣಲಿಂಗ ಪತ್ತೆ ತಡೆ: ಸಭೆಗೆ ‘ಸುಪ್ರೀಂ’ ಸೂಚನೆ

ನವದೆಹಲಿ: ಭ್ರೂಣ ಲಿಂಗ ಪತ್ತೆಗೆ ಸಂಬಂಧಿಸಿ ಅಂತರ್ಜಾಲದಲ್ಲಿ ಲಭ್ಯವಿರುವ ಸಾಮಗ್ರಿಗಳನ್ನು ತೆಗೆದುಹಾಕಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಗೂಗಲ್‌, ಮೈಕ್ರೊಸಾಫ್ಟ್‌, ಯಾಹೂ ಮತ್ತು ಇತರ ಅಂತರ್ಜಾಲ ಕಂಪೆನಿಗಳ ಜತೆ ಸಭೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆಯ ನಿಯಮಗಳ ಉಲ್ಲಂಘನೆ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ನಿರ್ದೇಶಿದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಲೈಂಗಿಕ ವಿಡಿಯೊಗಳು ಮತ್ತು ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರ ವಿಡಿಯೊಗಳ ಬಗ್ಗೆ ದೂರು ನೀಡುವುದಕ್ಕೆ ಜನವರಿ 10ರೊಳಗೆ ಪೋರ್ಟಲೊಂದನ್ನು ಸಿದ್ಧಪಡಿಸುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಈಗಾಗಲೇ ಸೂಚನೆ ನೀಡಿದೆ.  ಅಂತರ್ಜಾಲದಲ್ಲಿರುವ ಆಕ್ಷೇ‍ಪಾರ್ಹ ಮಾಹಿತಿ, ಚಿತ್ರ ಮತ್ತು ವಿಡಿಯೊಗಳನ್ನು ಸ್ಥಗಿತಗೊಳಿಸುವಲ್ಲಿ ಸರ್ಕಾರ ನೇಮಿಸಿರುವ ನೋಡಲ್‌ ಸಂಸ್ಥೆ ವಿಫಲವಾಗಿದೆ ಎಂದು ಅರ್ಜಿದಾರರ ಪರ ವಕೀಲ ಸಂಜಯ ಪಾರೇಖ್‌ ವಾದಿಸಿದರು. ಇಂತಹ ಮಾಹಿತಿ ಸ್ಥಗಿತಗೊಳಿಸುವಲ್ಲಿ ಅಂತರ್ಜಾಲ ಶೋಧ ಸಂಸ್ಥೆಗಳು ವಿಫಲವಾಗಿವೆ ಎಂದೂ ಅವರು ಪ್ರತಿಪಾದಿಸಿದರು.

ಭ್ರೂಣ ಲಿಂಗ ಪತ್ತೆಗೆ ಸಂಬಂಧಿಸಿದ ಸಾಮಗ್ರಿ ಕಂಡುಬಂದ 12 ತಾಸುಗಳೊಳಗೆ ಅವುಗಳನ್ನು ತೆಗೆದು ಹಾಕಲಾಗುತ್ತಿದೆ ಎಂದು ಅಂತರ್ಜಾಲ ಶೋಧ ಕಂಪೆನಿಗಳ ಪರ ವಕೀಲರಾದ ಎ.ಎಂ. ಸಿಂಘ್ವಿ ಮತ್ತು ಕೆ.ವಿ. ವಿಶ್ವನಾಥನ್‌ ಹೇಳಿದರು. ಅಂತರ್ಜಾಲದಲ್ಲಿ ಲಕ್ಷಾಂತರ ವೆಬ್‌ಸೈಟ್‌ಗಳು ಮತ್ತು ಕೋಟ್ಯಂತರ ವೆಬ್‌ ಪುಟಗಳಿವೆ. ಹಾಗಿದ್ದರೂ ಆಕ್ಷೇಪಾರ್ಹ ಸಾಮಗ್ರಿಯನ್ನು ಸಮರ್ಪಕವಾಗಿಯೇ ತೆಗೆದು ಹಾಕಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.