ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೇಟೆ’ಯ ಬಗಲಲ್ಲೇ ಇದೆ ಬೆಂಕಿ!

ಅಗ್ನಿ ಅವಘಡ: 4 ವಲಯ ಗುರುತಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಅಧ್ಯಯನ
Last Updated 1 ಜನವರಿ 2018, 20:04 IST
ಅಕ್ಷರ ಗಾತ್ರ

ಬೆಂಗಳೂರು: ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನಡೆಸಿದ ಅಧ್ಯಯನದ ಆಧಾರದಲ್ಲಿ ಮಹಾನಗರದಲ್ಲಿ ಬೆಂಕಿ ಅನಾಹುತದ ಅಪಾಯ ಎದುರಿಸುತ್ತಿರುವ ನಾಲ್ಕು ವಲಯಗಳನ್ನು ಗುರುತಿಸಲಾಗಿದೆ.

ನಿರ್ದಿಷ್ಟ ಪ್ರದೇಶದ ಜನಸಾಂದ್ರತೆ, ವಾಣಿಜ್ಯ ಕಟ್ಟಡಗಳ ಸಾಂದ್ರತೆ, ಸಾರ್ವಜನಿಕ ತಾಣಗಳು, ಕೈಗಾರಿಕಾ ಪ್ರದೇಶಗಳು, ಬಹುಮಹಡಿ ಕಟ್ಟಡಗಳು ಹಾಗೂ ಅಪಾಯಕಾರಿ ಕೈಗಾರಿಕಾ ಘಟಕಗಳನ್ನು ಪರಿಗಣಿಸಿ ಅತಿ ಹೆಚ್ಚು ಅಪಾಯ, ಹೆಚ್ಚು ಅಪಾಯ, ಸಾಧಾರಣ ಅಪಾಯ ಹಾಗೂ ಕಡಿಮೆ ಅಪಾಯದ ವಲಯಗಳನ್ನಾಗಿ ವರ್ಗೀಕರಿಸಲಾಗಿದೆ. ಪರಿಷ್ಕೃತ ನಗರ ಮಹಾಯೋಜನೆ 2031ರ ಕರಡಿನಲ್ಲಿ ಈ ಕುರಿತ ವಿವರಗಳಿವೆ.

ನಗರದ ಒಟ್ಟು ಭೂಪ್ರದೇಶದ ಶೇ 14ರಷ್ಟು ಪ್ರದೇಶಗಳು ಅತಿ ಹೆಚ್ಚು ಅಪಾಯದ ವಲಯದಲ್ಲಿವೆ. ಕೇಂದ್ರ ಮಾರುಕಟ್ಟೆ ಪ್ರದೇಶದ (ಪೇಟೆ) ಬಗಲಲ್ಲೇ ಬೆಂಕಿಯನ್ನು ಕಟ್ಟಿಕೊಂಡಿದೆ. ಸುಲಭವಾಗಿ ಬೆಂಕಿ ಹತ್ತಿಕೊಳ್ಳಬಲ್ಲ ಸರಕುಗಳ ಮಾರಾಟ ನಡೆಯುವ ಮಾರುಕಟ್ಟೆ ಪ್ರದೇಶ ಇತರ ಕಡೆಗಳಿಗಿಂತ ಹೆಚ್ಚು ಅಪಾಯವನ್ನು ಎದುರಿಸುತ್ತಿದೆ. ಇದರ ಜೊತೆಗೆ ರಿಚ್ಮಂಡ್‌ ಟೌನ್‌, ಮಲ್ಲೇಶ್ವರ, ಬೈಯಪ್ಪನಹಳ್ಳಿ, ಪೀಣ್ಯ, ಸಿ.ವಿ.ರಾಮನ್‌ ನಗರ, ಬ್ಯಾಟರಾಯನಪುರಗಳೂ ಅತಿ ಹೆಚ್ಚು ಅಪಾಯ ವಲಯದ ವ್ಯಾಪ್ತಿಯಲ್ಲಿವೆ.

ಹೆಚ್ಚು ಒತ್ತೊತ್ತಾಗಿ ಕಟ್ಟಡಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಬೆಂಕಿ ಸುಲಭವಾಗಿ ಹಬ್ಬುತ್ತದೆ. ಕಿರಿದಾದ ರಸ್ತೆಗಳಿರುವಲ್ಲಿ ಅಗ್ನಿಶಾಮಕ ವಾಹನಗಳು ಸಕಾಲದಲ್ಲಿ ಸ್ಥಳ ತಲುಪುವುದಕ್ಕೆ ಆಗದು. ಇಂತಹ ಪ್ರದೇಶಗಳಲ್ಲಿ ಬೆಂಕಿ ಅನಾಹುತದಿಂದ ಉಂಟಾಗುವ ಹಾನಿಯ ಪ್ರಮಾಣವೂ ಅಧಿಕ.

ಹೆಚ್ಚು ಅಪಾಯದ ವಲಯದಲ್ಲಿ 12 ಪ್ರದೇಶಗಳನ್ನು, ಸಾಧಾರಣ ಅಪಾಯದ ವಲಯದಲ್ಲಿ 10 ಹಾಗೂ ಕಡಿಮೆ ಅಪಾಯದ ವಲಯದಲ್ಲಿ 9 ಪ್ರದೇಶಗಳನ್ನು ಗುರುತಿಸಲಾಗಿದೆ.

ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಿರುವವರು ಅಥವಾ ಇಲ್ಲಿನ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಬೆಂಕಿ ಅಪಾಯವನ್ನು ಎದುರಿಸುವ ಸಾಧ್ಯತೆ ಅಧಿಕ. ಇಂತಹ ಕಟ್ಟಡಗಳನ್ನು ನಿರ್ಮಿಸುವಾಗ ಅಗ್ನಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಕರಡಿನಲ್ಲಿ ಹೇಳಲಾಗಿದೆ.

ಹೈಟೆನ್ಷನ್‌ ವಿದ್ಯುತ್‌ ಮಾರ್ಗ ಅಸುರಕ್ಷಿತ
ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ರೂಪಿಸಿರುವ ಸುರಕ್ಷಾ ಮಾನದಂಡಗಳ ಪ್ರಕಾರ ಹೈ–ಟೆನ್ಷನ್‌ ವಿದ್ಯುತ್‌ ಮಾರ್ಗಗಳ ಆಸುಪಾಸಿನಲ್ಲಿ ಮೀಸಲು ವಲಯವನ್ನು ಕಾದಿರಿಸಬೇಕು. ಆದರೆ, ನಗರದ ಕೆಲವು ಪ್ರದೇಶಗಳಲ್ಲಿ ಹೈ–ಟೆನ್ಷನ್‌ ವಿದ್ಯುತ್‌ ಮಾರ್ಗ ಹಾದುಹೋಗುವಲ್ಲಿ ಈ ಮಾನದಂಡಗಳನ್ನು ಕಡೆಗಣಿಸಲಾಗಿದೆ.

ಇಂತಹ ವಿದ್ಯುತ್ ಮಾರ್ಗಗಳ ಕೆಳಗಡೆಯೇ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇವು ಮನುಷ್ಯ ಜೀವಗಳಿಗೂ ಅಪಾಯವನ್ನು ಆಹ್ವಾನಿಸುವಂತಿವೆ. ಇಂತಹ ಕಡೆ ಅನಧಿಕೃತ ಅಭಿವೃದ್ಧಿ ಚಟುವಟಿಕೆಗೆ ಕಡಿವಾಣ ಹಾಕಬೇಕು. ಕೆಲವು ಕಡೆ ವಿದ್ಯುತ್‌ ತಂತಿಗಳು ಜೋತುಬೀಳುತ್ತಿದ್ದು, ಇವು ಕೂಡ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ. ತಂತಿಗಳು ಜೋತುಬೀಳದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕರಡಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT