ಶನಿವಾರ, ಜೂಲೈ 4, 2020
21 °C
ಸ್ವಾತಂತ್ರ್ಯ ಉದ್ಯಾನದಲ್ಲಿ ರಾಷ್ಟ್ರಮಟ್ಟದ ಉತ್ಸವ, 11 ರಾಜ್ಯಗಳ ಖಾದಿ ತಯಾರಕರು ಭಾಗಿ

ಸ್ವಾತಂತ್ರ್ಯ ಉದ್ಯಾನದಲ್ಲಿ ಖಾದಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯ ಉದ್ಯಾನದಲ್ಲಿ ಖಾದಿ ಸಂಭ್ರಮ

ಬೆಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ವಿವಿಧ ರಾಜ್ಯಗಳಲ್ಲಿ ತಯಾರಾದ ಅಪ್ಪಟ ಖಾದಿ ವಸ್ತ್ರಗಳ ಮಾರಾಟ ಮತ್ತು ಪ್ರದರ್ಶನ ಮೇಳ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ವಿಧ್ಯುಕ್ತವಾಗಿ ಆರಂಭಗೊಂಡಿತು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಆಯೋಜಿಸಿರುವ ರಾಷ್ಟ್ರಮಟ್ಟದ ಖಾದಿ ಉತ್ಸವ ಜ.31ರವರೆಗೆ ನಡೆಯಲಿದೆ. ರಾಜ್ಯದ ಖಾದಿ ವಸ್ತ್ರ ತಯಾರಕರಷ್ಟೇ ಅಲ್ಲದೆ,11 ರಾಜ್ಯಗಳಿಂದ ಖಾದಿ ವಸ್ತ್ರ ತಯಾರಕರು ಭಾಗವಹಿಸಿದ್ದಾರೆ. ಪೀಪಲ್‌ ಪ್ಲಾಜಾದಲ್ಲಿರುವ 210 ಮಳಿಗೆಗಳಲ್ಲಿ ಅರಳೆ ಖಾದಿ, ರೇಷ್ಮೆ ಖಾದಿ, ಉಣ್ಣೆ ಖಾದಿ ಹಾಗೂ ಪಾಲಿ ವಸ್ತ್ರಗಳು ನೋಡಲು, ಖರೀದಿಸಲು ಲಭ್ಯವಿವೆ.

ಕೈಮಗ್ಗದಿಂದ ನೇಯ್ದ ರೇಷ್ಮೆ ಸೀರೆಗಳು, ಖಾದಿ ಸೀರೆಗಳು, ಖಾದಿ ಜುಬ್ಬಾ, ಪೈಜಾಮ, ಅಂಗಿ, ಪ್ಯಾಂಟು, ಚೂಡಿ, ಲಂಗ–ದಾವಣಿ, ಟವೆಲ್‌, ಚಡ್ಡಿ, ಬನಿಯನ್‌, ಜಮಖಾನಾ, ಮ್ಯಾಟ್‌, ಕಂಬಳಿ ಎಲ್ಲವೂ ಇಲ್ಲಂಟು.

ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿಯಿಂದ (ಎನ್‌ಐಎಫ್‌ಟಿ) ವಿನ್ಯಾಸಗೊಳಿಸಿರುವ ಸಾಂಪ್ರಾಯಿಕ ಶೈಲಿ ಮತ್ತು ಆಧುನಿಕ ಶೈಲಿಯ ಖಾದಿ ವಸ್ತ್ರಗಳು ಫ್ಯಾಷನ್‌ ಪ್ರಿಯರ ಕಣ್ಮನ ಸೆಳೆಯುತ್ತಿವೆ. ರೇಮಂಡ್‌, ಲೆವಿಸ್‌ ಕಂಪನಿಗಳ ಬ್ರಾಂಡ್‌ಗಳ ವಿನ್ಯಾಸಗಳಿಗೂ ಪೈಪೋಟಿ ನೀಡುವಂತಹ ವಿನ್ಯಾಸಗಳು ಇಲ್ಲಿವೆ.

‘ಸಾಂಪ್ರದಾಯಿಕ ಶೈಲಿಯ ವಿನ್ಯಾಸಗಳು, ನೈಸರ್ಗಿಕ ಬಣ್ಣಗಳ ಖಾದಿ ಉಡುಪುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿವೆ’ ಎನ್ನುತ್ತಾರೆ ಎನ್‌ಐಎಫ್‌ಟಿಯ ವಸ್ತ್ರವಿನ್ಯಾಸ ವಿಭಾಗದ ಪ್ರೊ.ರಯಾನ್‌.

ಮಧುರೈನ ಕೃಷ್ಣಕಾಂತ್‌, ‘ಯುವಜನರಿಗೆ ಹೆಚ್ಚು ಇಷ್ಟವಾಗುವ ಆಕರ್ಷಕ ವಿನ್ಯಾಸಗಳ ಉಡುಪುಗಳನ್ನು ತಂದಿದ್ದೇನೆ. ದಿನಕ್ಕೆ ಕನಿಷ್ಠ ₹15,000ದಿಂದ ₹1ಲಕ್ಷದವರೆಗೆ ವ್ಯಾಪಾರವಾಗುವ ನಿರೀಕ್ಷೆ ಇದೆ’ ಎಂದರು.

ಜಮ್ಮು ಮತ್ತು ಕಾಶ್ಮೀರದ ಜ್ಯೂನಿಮೀರ್‌ನ ಕ್ಯಾಕಶಾ ಖಾದಿ ಗ್ರಾಮೋದ್ಯೋಗ ಆಶ್ರಮದ ಜಾಹಿದ್‌, ಕಸೂತಿ ಮಾಡಿದ ಖಾದಿ ಉಡುಪು ಮಾರಾಟಕ್ಕೆ ಇಟ್ಟಿದ್ದರು. ಬಿಹಾರದ ಮಧುಬನಿ ಜಿಲ್ಲೆಯ ನಾರಾಯಣಪುರ ಗ್ರಾಮೀಣ ವಿಕಾಸ ಸಂಸ್ಥೆ ನವೀನ ವಿನ್ಯಾಸಗಳ ಉಡುಪುಗಳನ್ನು ಮಾರಾಟಕ್ಕೆ ಇಟ್ಟಿದೆ.

ಚಿಂತಾಮಣಿಯ ಟಿಎನ್‌ಆರ್‌ ಮಳಿಗೆಯಲ್ಲಿದ್ದ ರೇಷ್ಮೆ ಸೀರೆಗಳಿಗೆ ಮನಸೋಲದ ಮಹಿಳೆಯರೇ ಇರಲಿಲ್ಲ. ‘ಕಂಚಿ ರೇಷ್ಮೆ ಸೀರೆಗಳಿಗಿಂತಲೂ ಪರಿಶುದ್ಧ ರೇಷ್ಮೆ ಸೀರೆಗಳು ಇಲ್ಲಿಯೇ ಸಿಗುತ್ತಿವೆ. ಜತೆಗೆ ಬೆಲೆಯೂ ಕಡಿಮೆ ಇದೆ. ಮದುವೆಗೆ ಚಿಂತಾಮಣಿಯ ರೇಷ್ಮೆ ಸೀರೆಗಳನ್ನು ಖರೀದಿಸುತ್ತಿದ್ದೇವೆ’ ಎಂದು ವಿಜಯಪುರ ಜಿಲ್ಲೆಯಖಾದಿ ಗ್ರಾಮೋದ್ಯೋಗ ಅಧಿಕಾರಿ ಸಾವಿತ್ರಿ ದಳವಾಯಿ ಪ್ರತಿಕ್ರಿಯಿಸಿದರು.

ಸುಮಾರು ₹20,000 ಮೌಲ್ಯದ ಖಾದಿ ಅಂಗಿ, ಜುಬ್ಬಾ, ಟವೆಲ್‌, ಸೀರೆಗಳನ್ನು ಖರೀದಿಸಿದ್ದ ಬನಶಂಕರಿಯ ವೈದ್ಯ ಡಾ.ಶ್ರೀನಿವಾಸ್‌, ‘ಇಷ್ಟೊಂದು ವೈವಿಧ್ಯಮಯ ವಿನ್ಯಾಸದ ಖಾದಿ ಬಟ್ಟೆಗಳು ಒಂದೇ ಸೂರಿನಡಿ ಸಿಗುವುದು ಅಪರೂಪ. ಹೆಚ್ಚು ಆಯ್ಕೆಗಳೂ ಇವೆ. ಕುಟುಂಬದ ಸದಸ್ಯರೆಲ್ಲರ ಅಭಿರುಚಿಗೆ ತಕ್ಕಂತಹ ಉಡುಪುಗಳಿವೆ’ ಎಂದು ಅವರು ಹೇಳಿದರು.

30 ಪಂಚೆ ಮುಂಗಡ ಕಾಯ್ದಿರಿಸಿದ ಸಿಎಂ

ಖಾದಿ ಪಂಚೆಗಳಿಗೆ ಮಾರು ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹರಿಹರ ಚರಕ ಗ್ರಾಮೋದ್ಯೋಗ ಸಹಕಾರ ಸಮಿತಿ ಮಳಿಗೆಯಲ್ಲಿ ತಲಾ ₹585 ಬೆಲೆಯ 30 ಪಂಚೆಗಳಿಗೆ ಮುಂಗಡ ಕಾಯ್ದಿರಿಸಿದರು. ಪಂಚೆ ಮತ್ತು ಬಿಲ್‌ ಅನ್ನು ಬುಧವಾರ ಮನೆಗೆ ಕಳುಹಿಸುವಂತೆ ಹರಿಹರ ಚರಕದ ಕಾರ್ಯದರ್ಶಿ ಎಂ.ಎಸ್‌.ರಮೇಶ್‌ ಅವರಿಗೆ ಕೋರಿಕೆ ಇಟ್ಟರು.

₹40 ಕೋಟಿ ವಹಿವಾಟು ನಿರೀಕ್ಷೆ

ಕಳೆದ ಬಾರಿ ಉತ್ಸವಕ್ಕೆ 1.20 ಲಕ್ಷ ಜನರು ಭೇಟಿ ನೀಡಿದ್ದರು. ₹31 ಕೋಟಿ ವಹಿವಾಟು ನಡೆದಿತ್ತು. ಈ ಬಾರಿ ಮೊದಲ ದಿನವೇ 5,000ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. 31ರವರೆಗೆ 2 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಅಂದಾಜು ₹40 ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಖಾದಿ ಗ್ರಾಮೋದ್ಯೋಗ ಮಂಡಳಿ ಸಿಇಒ ಜಯವಿಭವಸ್ವಾಮಿ ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಫೆಬ್ರುವರಿಯಲ್ಲಿ ಖಾದಿ ಉತ್ಸವ ಆಯೋಜಿಸಲಾಗಿದೆ. ಫೆ.11ರಂದು ಖಾದಿ ಉಡುಪಿನ ಫ್ಯಾಷನ್‌ ಷೋ ಕೂಡ ನಡೆಯಲಿದೆ ಎಂದರು.

*

ಖಾದಿ ಹೆಸರಿನಲ್ಲಿ ಕೃತಕ ಹತ್ತಿ ಬಟ್ಟೆ ಮಾರಾಟ ಮಾಡಿ ಜನರನ್ನು ವಂಚಿಸುವುದಕ್ಕೆ ಸರ್ಕಾರ ಕಠಿಣ ನಿರ್ಬಂಧ ಹೇರಬೇಕು.

–ಡಾ.ಪಾಟೀಲ ಪುಟ್ಟಪ್ಪ, ಕರ್ನಾಟಕ ವಿದ್ಯಾವರ್ಧಕ ಸಂಘ ಅಧ್ಯಕ್ಷ

*

ಖಾದಿ ಮತ್ತು ಗ್ರಾಮೋದ್ಯೋಗವನ್ನು ಕೈಗಾರಿಕಾ ಇಲಾಖೆಯಿಂದ ಬೇರ್ಪಡಿಸಿ, ಇದಕ್ಕಾಗಿ ಸ್ವತಂತ್ರವಾದ ಮತ್ತು ಪ್ರತ್ಯೇಕ ನಿರ್ದೇಶನಾಲಯ ಆರಂಭಿಸಬೇಕು.

–ಡಾ.ಎಚ್‌.ಎಸ್‌.ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.