ಮನದ ಮಾತಿಗೆ ಓಗೊಟ್ಟ ಯುವಕ

7

ಮನದ ಮಾತಿಗೆ ಓಗೊಟ್ಟ ಯುವಕ

Published:
Updated:
ಮನದ ಮಾತಿಗೆ ಓಗೊಟ್ಟ ಯುವಕ

‘ಅದು 2004ನೇ ಇಸವಿ. ಶಿವಮೊಗ್ಗದಲ್ಲಿ ಪಿಯುಸಿ ಮುಗಿಸಿದ್ದೇ ತಡ ನನ್ನ ಪಯಣ ಬೆಳೆದಿದ್ದು ನೀನಾಸಂ ಕಡೆಗೆ. ಅಲ್ಲಿ ಸಿಕ್ಕ ಒಂದು ವರ್ಷದ ರಂಗ ತರಬೇತಿ ನನಗೆ ಗಟ್ಟಿ ಅಡಿಪಾಯ ಹಾಕಿಕೊಟ್ಟಿತು. ನೀನಾಸಂ ತಿರುಗಾಟದಲ್ಲಿ ಇಡೀ ಕರ್ನಾಟಕ ಸುತ್ತಾಡಿದೆ. ನಟನಾಗಿ, ತಂತ್ರಜ್ಞನಾಗಿ ಮೂರು ನಾಟಕಗಳನ್ನು ಪ್ರದರ್ಶಿಸಿದ ಆ ಅನುಭವ ಅವಿಸ್ಮರಣೀಯ.

ಮುಂದಿನ ದಾರಿ ಸ್ಪಷ್ಟವಿತ್ತು. ಅದು ಬೆಂಗಳೂರಿನ ಕಡೆಗೆ ಮುನ್ನಡೆಸಿತು. ಆರಂಭದಲ್ಲಿ ಕೆಲಸವೇ ಮುಖ್ಯ. ಯಾವುದು ಅನ್ನೋದು ಅಮುಖ್ಯ. ತಿಂಗಳಿಗೆ ಒಂದಿಷ್ಟು ಸಂಬಳದ ಕೆಲಸ ಅನಿವಾರ್ಯವಾಗಿದ್ದ ಕಾಲದಲ್ಲಿ ಹಿರಿಯ ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರ ಸಂಪರ್ಕ ಸಿಕ್ಕಿತು. ಅವರ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾ (ಸಿಎಫ್‍ಡಿ) ಸಂಸ್ಥೆಯಲ್ಲಿ ಲೈಟಿಂಗ್ ಹಾಗೂ ಪ್ರೊಜೆಕ್ಟರ್ ಆಪರೇಟರ್ ಆಗಿ ಕೆಲಸ ಶುರು ಮಾಡಿದೆ.

ಬೆಳವಾಡಿ ಅವರ ನಾಟಕಗಳಿಗೆ ಲೈಟಿಂಗ್ ಮಾಡುವ ಜವಾಬ್ದಾರಿ ನನ್ನದು. ಈ ಟೀವಿ ವಾಹಿನಿಗೆ ಅವರು ಆಗ ‘ನೂರೆಂಟು ಸುಳ್ಳು’ ಎಂಬ ಧಾರಾವಾಹಿಯಲ್ಲಿ ಅಭಿನಯಕ್ಕೆ ಅವಕಾಶ ನೀಡಿದರು. ಅದೇಕೋ ಆ ಪ್ರಾಜೆಕ್ಟ್ ಟೇಕ್‍ಆಫ್ ಆಗಲಿಲ್ಲ.

ತೇಜಸ್ವಿ ಅವರ ‘ಚಿದಂಬರ ರಹಸ್ಯ’ ನಾಟಕ ರಂಗಶಂಕರದಲ್ಲಿ ಪ್ರದರ್ಶನಕ್ಕೆ ನಿಗದಿಯಾಗಿತ್ತು. ಆದರೆ ಪಾತ್ರಧಾರಿಗಳು ಕೈಕೊಟ್ಟಿದರಿಂದ ಬೆಳವಾಡಿ ಅವರು ಚಿಕ್ಕದಾದ ಮೂರು ಪಾತ್ರಗಳನ್ನು ನನಗೆ ವಹಿಸಿದರು. ನನ್ನೊಳಗಿನ ನಟ ಅಂದು ತುಂಬಾ ಖುಷಿಪಟ್ಟಿದ್ದ. ಬೆಂಗಳೂರಿಗೆ ಬಂದ ಮೇಲೆ ನಟಿಸಲು ಸಿಕ್ಕ ಮೊದಲ ಅವಕಾಶ ಅದು. ಬೆಳವಾಡಿ ಅವರಂತಹ ಗುರು ಸಿಕ್ಕಿದ್ದು ನನ್ನ ಪುಣ್ಯ.

‘ಸ್ವಯಂವರ ಲೋಕ’ ಎಂಬ ಮತ್ತೊಂದು ನಾಟಕದ ಮುಖ್ಯಪಾತ್ರದಲ್ಲಿ ಅಭಿನಯಿಸುವ ಅವಕಾಶವೂ ಅನಾಯಾಸವಾಗಿ ಬಂದಿತು. ಈ ನಾಟಕ ನೋಡಲು ಬಂದಿದ್ದ ಕೆ.ಎಂ. ಚೈತನ್ಯ ಮರುದಿನ ಕರೆ ಮಾಡಿದಾಗ ನನಗೆ ಉಡುಗೊರೆ ಕಾದಿತ್ತು. ಅವರು ತಮ್ಮ ‘ಮುಗಿಲು’ ಧಾರಾವಾಹಿಯಲ್ಲಿ ನಟಿಸುವ ಅಹ್ವಾನ ನೀಡಿದರು. ವಯಸ್ಸಿಗೆ ಮೀರಿದ ಪಾತ್ರ ಕೊಟ್ಟಿದ್ದರೂ ಮಾಡಿ ಸೈ ಎನಿಸಿಕೊಂಡೆ.

ನಿರ್ದೇಶಕನಾಗುವ ಕನಸು ಮೂಡಿದ್ದು 2010ರಲ್ಲಿ. ಬೆಳಗಾವಿಯಲ್ಲಿ ಮಕ್ಕಳಿಗಾಗಿ ಬೇಸಿಗೆ ರಂಗಶಿಬಿರ ಮಾಡುತ್ತಿದ್ದೆ. ಅದನ್ನೇ ಚಿತ್ರೀಕರಿಸಿ 22 ನಿಮಿಷದ ಸಾಕ್ಷ್ಯಚಿತ್ರವನ್ನಾಗಿ ರೂಪಿಸಿದೆ. ನಂತರ ‘ಪ್ರೇಮಪತ್ರಗಳು’ ಎಂಬ ಕಿರುಚಿತ್ರ ತಯಾರಾಯಿತು. ಇದನ್ನು ಫೇಸ್‍ಬುಕ್‍ನಲ್ಲಿ ವೀಕ್ಷಿಸಿ ಮೆಚ್ಚಿಕೊಂಡ ನಿರ್ದೇಶಕ ಬಿ. ಸುರೇಶ್ ಅವರು ಆಹ್ವಾನ ನೀಡಿದರು. ಆಗ ಉದಯ ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಒಂದು ಗಂಟೆಯ ಟೆಲಿಫಿಲ್ಮ್‌ಗೆ ಅಲ್ಬರ್ಟ್ ಕಾಮು ಅವರ ಕತೆಯ ಎಳೆ ಇಟ್ಟುಕೊಂಡು ‘ಏನೋ ಮಾಡಲು ಹೋಗಿ’ ಎನ್ನುವ ಕತೆ, ಚಿತ್ರಕತೆ, ಸಂಭಾಷಣೆ ಬರೆದೆ. ಚಿತ್ರೀಕರಣದ ಹೊಣೆಯೂ ನನಗೇ ಸಿಕ್ಕಿತು. ಇಲ್ಲಿಂದ ನಿರ್ದೇಶಕನಾಗಿ ಅಧಿಕೃತ ರೂಪ ಪಡೆದೆ. ಸುಮಾರು 20 ಟೆಲಿಫಿಲ್ಮ್ ನಿರ್ದೇಶಿಸಿದೆ.

ಮದರಂಗಿ ಮತ್ತು ಚೌಕಾಬಾರ: ಬಿ. ಸುರೇಶ್ ಪ್ರೋತ್ಸಾಹದಿಂದ ‘ಮದರಂಗಿ’ ಎಂಬ ಮೆಗಾ ಸೀರಿಯಲ್ ನಿರ್ದೇಶಿಸುವ ಜವಾಬ್ದಾರಿ ಸಿಕ್ಕಿತು. 670 ಕಂತುಗಳಲ್ಲಿ ಅದು ಮೂಡಿಬಂತು. ಆಗ ಸಿನಿಮಾ ನಿರ್ದೇಶನದ ಆಸೆ ಮೂಡಿದರೂ ವಿಭಿನ್ನ ಕಿರುಚಿತ್ರ ಮಾಡಬೇಕೆನ್ನಿಸಿ ‘ಚೌಕಾಬಾರ’ ನಿರ್ಮಿಸಿದೆ.

ಅಚ್ಯುತ ಕುಮಾರ್, ಶರತ್, ಮಂಜುನಾಥ ಹೆಗ್ಡೆ, ಅಶ್ವಿನಿ ಗೌಡ, ಕಿರಣ್ ನಾಯಕ್, ನಂದಿನಿ ನನ್ನ ಬೆನ್ನಿಗೆ ನಿಂತರು. ನೀನಾಸಂ ಸತೀಶ್, ಅಚ್ಯುತ್ ಹಣ ಹೂಡಿದರು. ಕಿರುಚಿತ್ರಗಳನ್ನು ಚಿತ್ರಮಂದಿರದಲ್ಲಿ ಏಕೆ ಬಿಡುಗಡೆ ಮಾಡಬಾರದು ಎಂಬ ಆಲೋಚನೆಗೆ ಮೂರ್ತ ರೂಪ ಸಿಕ್ಕಿತು. 50 ರೂಪಾಯಿ ಟಿಕೆಟ್ ಇಟ್ಟಿದ್ದರೂ 950 ಜನರು ಥಿಯೇಟರ್‌ಗೆ ಬಂದು ಚೌಕಾಬಾರ ವೀಕ್ಷಿಸಿದ್ದನ್ನು ನೋಡಿ ನನಗೆ ಅಚ್ಚರಿಯೋ ಅಚ್ಚರಿ. ಇದೇ ಉತ್ಸಾಹದಲ್ಲಿ ರಾಜ್ಯದ ಬಹುತೇಕ ಕಡೆ ಚಿತ ಪ್ರದರ್ಶಿಸಿದೆ. ಯೂಟ್ಯೂಬ್‍ನಲ್ಲೂ ಸಾಕಷ್ಟು ಮೆಚ್ಚುಗೆ ಸಿಕ್ಕಿತು. ರಾಜ್ಯ ಪ್ರಶಸ್ತಿಯೂ ಬಂತು.

ಸಿನಿಮಾ ತಯಾರಿಯಲ್ಲಿದ್ದ ನಾನು ರಾಘವೇಂದ್ರ ಹುಣಸೂರು ಅವರ ಒತ್ತಡಕ್ಕೆ ಮಣಿದು ಜೀ ಕನ್ನಡದಲ್ಲಿ ‘ಜನುಮದ ಜೋಡಿ’ ಧಾರಾವಾಹಿಯ ಆರಂಭದ 30 ಕಂತು ನಿರ್ದೇಶನ ಮಾಡಿಕೊಟ್ಟೆ. ‘ಚೌಕಾಬಾರ’ ನೋಡಿದ್ದ ನಯಾಜ್ ಹಾಗೂ ತುಳಸೀರಾಮುಡು ಎಂಬ ನಿರ್ಮಾಪಕರು ನನ್ನ ಸಿನಿಮಾಗೆ ಹಣ ಕೂಡಲು ಮುಂದೆ ಬಂದರು. ನನ್ನ ಕನಸಿನ ‘ಚೂರಿಕಟ್ಟೆ’ ಸಿನಿಮಾ ರೂಪ ಪಡೆಯಿತು. ಯಾವುದೇ ಕೆಲಸಕ್ಕೆ ನೂರರಷ್ಟು ಶ್ರಮ ವಹಿಸಿದರೆ ಫಲ ಖಂಡಿತ. ನನ್ನೊಳಗಿನ ನಟನೆಯ ವ್ಯಾಮೋಹವನ್ನೂ ಮೀರಿ ಈ ನಿರ್ದೇಶನ ವೃತ್ತಿ ಖುಷಿ ತಂದಿದೆ’. 

‘ಥ್ರಿಲ್ಲರ್’ ಚೂರಿಕಟ್ಟೆ

ಮಲೆನಾಡು ಹಾಗೂ ಅಲ್ಲಿನ ಟಿಂಬರ್ ಮಾಫಿಯಾ ಹಿನ್ನೆಲೆಯಲ್ಲಿ, ಪುಟ್ಟ ಪಟ್ಟಣವೊಂದರಲ್ಲಿ ಕತೆ ಸಾಗುತ್ತದೆ. ಅಲ್ಲಿನ ಜನ, ಅರಣ್ಯಾಧಿಕಾರಿಗಳು ಹಾಗೂ ಒಂದು ಯುವ ಜೋಡಿಯ ಸುತ್ತ ಇದು ಹೆಣೆದುಕೊಂಡಿದೆ. ಒಂದು ತಪ್ಪು ಇಡೀ ಕತೆಗೆ ನೀಡುವ ತಿರುವು ಸಿನಿಮಾದ ಹೂರಣ. ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಖ್ಯಾತಿಯ ಪ್ರವೀಣ್ ತೇಜ್ ಅವರು ಮುಖ್ಯಪಾತ್ರದಲ್ಲಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಅಚ್ಯುತ್, ಡಾನ್‌ ಆಗಿ ಬಾಲಾಜಿ ಮನೋಹರ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಇದೇ ತಿಂಗಳು ತೆರೆಗೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry