ಶನಿವಾರ, ಜೂಲೈ 4, 2020
21 °C

‘ದೊಡ್ಮನೆ ಸೊಸೆ’ಯ ಜೀವನ ಸೂತ್ರ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

‘ದೊಡ್ಮನೆ ಸೊಸೆ’ಯ ಜೀವನ ಸೂತ್ರ

ನಾನಿನ್ನೂ ಚಿಕ್ಕವಳು. ಚಿಕ್ಕ ವಯಸ್ಸಿನಲ್ಲೇ ಟಿ.ವಿ. ಪರದೆ ನನ್ನನ್ನಾವರಿಸಿಕೊಂಡಿತು. ಸೆಳೆದು ಹಿಡಿದಿಟ್ಟುಕೊಂಡಿತು. ಅದರ ಜೊತೆ–ಜೊತೆಗೆ ನಾನೂ ಬೆಳೆದೆ.

ಜೀವನ ಅಂದ್ರೆ ಏನು ಅಂತ ಹೇಳುವಷ್ಟು ಪ್ರಬುದ್ಧಳೇನಲ್ಲ. ಆದಾಗ್ಯೂ ಹೆಚ್ಚೂ–ಕಡಿಮೆ ಹತ್ತು ವರ್ಷಗಳೇ ಕಳೆದವೇನೊ ನಾನು ಈ ಕ್ಷೇತ್ರಕ್ಕೆ ಪರಿಚಯವಾಗಿ. ಈ ಅನುಭವದಲ್ಲಿ ಒಂದು ಸಂಗತಿಯನ್ನು ಕಂಡುಕೊಂಡಿದ್ದೇನೆ. ಜೀವನದಲ್ಲಿ ಏನೇ ಬಂದ್ರೂ ಭರವಸೆ ಕಳೆದುಕೊಳ್ಳಬಾರದು. ಒಂದೊಮ್ಮೆ ಸೋಲು ಬಂದರೂ ಮುಂದೆ ಯಶಸ್ಸು ನಮಗಾಗಿ ಕಾಯ್ತಾ ಇರುತ್ತೆ. ಆ ಭರವಸೆಯೊಂದಿಗೆ ಹುಮ್ಮಸ್ಸಿನಿಂದ ಹೆಜ್ಜೆ ಹಾಕ್ತಾ ಇರಬೇಕು.

ಪುಟ್ಟ ನಿರೂಪಕಿ

ನನ್ನಮ್ಮನಿಗೆ ನನ್ನ ಬಗ್ಗೆ ಬಹಳ ಕನಸುಗಳಿವೆ. ಚಿಕ್ಕಂದಿನಿಂದಲೂ ಓದು, ಶಾಲೆ, ಆಟ–ಪಾಠದ ಜೊತೆಗೆ ಇತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ನನ್ನನ್ನ ಬಿಸಿಯಾಗಿಟ್ರು. ಆವಾಗಿನಿಂದಲೂ ನೃತ್ಯ, ನಟನೆ, ಮಾತುಗಾರಿಕೆಗೆ ನಾನು ಫೇಮಸ್‌ ಆದೆ. ನೋಡಿದವರೆಲ್ಲ ನಾನು ಒಳ್ಳೆ ಕಲಾವಿದೆ ಆಗ್ತಿನಿ ಅಂತಿದ್ರು. ಅಂಥ ಮಾತುಗಳೇ ಸ್ಫೂರ್ತಿಯಾದವು. ಕನಸುಗಳಾಗಿ ಮೊಳಕೆ ಒಡೆದವು.

ನೃತ್ಯ ಕಾರ್ಯಕ್ರಮದಲ್ಲಿ ನನ್ನ ಹಾವಭಾವ, ಮಾತಿನ ಮೋಡಿ ಕಂಡು ಉದಯ ಟಿ.ವಿ.ಯ ಚಿಂಟೂ ವಾಹಿನಿಯಿಂದ ಕರೆ ಬಂತು. ನಿರೂಪಣೆಗೆ ಇಳಿದಾಗ ನನಗೆ ಆರು ವರ್ಷ. ನನ್ನ ಪ್ರತಿಭೆ ಗುರುತಿಸಿ ಬರುವ ಯಾವುದೇ ಅವಕಾಶವೂ ಕೈತಪ್ಪಿ ಹೋಗದಂತೆ ನೋಡಿಕೊಂಡವರು ಅಪ್ಪ, ಅಮ್ಮ. ಅಲ್ಲಿಂದ ಸುಮಾರು ಆರು ವರ್ಷ ಕಾಲ ನಿರೂಪಕಿಯ ಪೋಷಾಕು ತೊಟ್ಟೆ. ಆ ಪುಟ್ಟ ನಿರೂಪಕಿಯ ಮಾತಿನ ಲಾಲಿತ್ಯವನ್ನು ಜನ ಮೆಚ್ಚಿದರು. ಶ್ಲಾಘಿಸಿದರು. ಅನೇಕ ಅವಕಾಶಗಳು ಬಂದರೂ ವಯಸ್ಸು ಚಿಕ್ಕದು ಅಂತ ಕೆಲ ಅವಕಾಶಗಳು ಕೈತಪ್ಪಿದವು.

ನಂತರ ರ‍್ಯಾಂಪ್ ಮೇಲೂ ನನ್ನ ಹೆಜ್ಜೆ ಗುರುತು ಮೂಡಿತು. 2016ರಲ್ಲಿ ‘ಮಿಸ್ ಕರ್ನಾಟಕ ಇಂಟರ್‌ ನ್ಯಾಷನಲ್’ ಮೊದಲ ರನ್ನರ್‌ ಅಪ್ ಆದಾಗ ನನ್ನ ಕನಸಿಗೆ ಗರಿ ಮೂಡಿತು.

ಸಣ್ಣ ಅಳುಕು, ದೊಡ್ಡ ಸಂಭ್ರಮ

ಉದಯ ಟಿ.ವಿ.ಯ ‘ದೊಡ್ಮನೆ ಸೊಸೆ’ಗೆ ಆಯ್ಕೆಯಾದಾಗ ಸಣ್ಣ ಅಳುಕಿನ ಜೊತೆಗೆ ಸಂಭ್ರಮವೂ ಮನೆ ಮಾಡಿತು. ಅಳುಕು ಯಾಕಂದ್ರೆ ಈ ಪಾತ್ರ ನನ್ನ ವಯಸ್ಸು, ನನ್ನ ಸ್ವಭಾವ, ನನ್ನ ವರ್ತನೆಗೆ ಸಂಪೂರ್ಣ ವಿರುದ್ಧವಾದುದು. ಈ ಶೂಟಿಂಗ್‌ಗೂ ಮುನ್ನ ನಾನು ಹಳ್ಳಿಯನ್ನು ಇಷ್ಟು ಹತ್ತಿರದಿಂದ ನೋಡಿದ್ದೇ ಇಲ್ಲ. ಹಳ್ಳಿಯ ಜೀವನ ನನಗೆ ಹೊಸದು.

ಸಂಭ್ರಮವೂ ಇದೆ ಅಂದ್ನಲ್ಲ. ನಮಗೆ ಪರಿಚಯವೇ ಇಲ್ಲದ ಇಂಥ ಪಾತ್ರಗಳನ್ನು ಜೀವಿಸುವುದರಲ್ಲಿಯೇ ಕಲಾವಿದರ ಸಾರ್ಥಕತೆ ಅಡಗಿರುವುದು. ಬೆಂಗ್ಳೂರಿನ ಗಗನಾ ಅನ್ನೊ ಈ ಮಾಡರ್ನ್‌ ಗರ್ಲ್‌ ಅಪ್ಪಟ ಹಳ್ಳಿ ಹುಡುಗಿಯಾಗಿ ಪರಿವರ್ತನೆಗೊಳ್ಳಲು ಸಾಕಷ್ಟು ತಯಾರಿಯೂ ಬೇಕಿತ್ತು. ಅದಕ್ಕಾಗಿ ಇಂಥ ಕಥೆ ಇರುವ ಕೆಲವು ಸಿನಿಮಾಗಳನ್ನು ನೋಡಿದೆ. ಇಲ್ಲಿನ ಜನರನ್ನು ಸೂಕ್ಷ್ಮವಾಗಿ ಗಮನಿಸಿದೆ. ಹಳ್ಳಿಯ ಉಡುಗೆ, ತೊಡುಗೆ, ಸಂಪ್ರದಾಯ, ನಡೆ-ನುಡಿ ಎಲ್ಲವನ್ನೂ ಇಲ್ಲಿ ಬಂದ ಮೇಲೆಯೇ ಕಲಿತಿದ್ದು. ಒಮ್ಮೆಯೂ ಎತ್ತಿನ ಚಕ್ಕಡಿ ಹತ್ತದ ನಾನು, ಚಕ್ಕಡಿ ಓಡಿಸಿದೆ. ಅದಂತೂ ತುಂಬಾ ಒಳ್ಳೆ ಅನುಭವ. ಮುಂದೆ ಕಥೆ ಹೊಸ ಹೊಸ ತಿರುವು ಪಡೆಯುತ್ತ ಸಾಗುತ್ತದೆ. ಮುಂದೇನು ನಡೆಯುತ್ತೆ? ದೊಡ್ಡಮ್ಮ ಸೊಸೆಯನ್ನ ಹೇಗೆ ನಡೆಸಿಕೊಳ್ಳುತ್ತಾಳೆ? ದೊಡ್ಮನೆಯಲ್ಲಿ ಏನೆಲ್ಲಾ ನಡೆಯಬಹುದು... ವೀಕ್ಷಕರಂತೆ ನಾನೂ ಉತ್ಸಾಹದಿಂದ ಕಾದಿದ್ದೇನೆ.

ಮುಂದೇನು ಅಂತ ಯೋಚಿಸೋಕೂ ನನಗೀಗ ಸಮಯ ಇಲ್ಲದಂತಾಗಿದೆ. ದೊಡ್ಮನೆಯಲ್ಲಿ ಬಿಸಿಯಾಗಿದ್ದೇನೆ. ಜೊತೆಗೆ ಓದು, ಪರೀಕ್ಷೆ, ಪ್ರಾಕ್ಟಿಕಲ್, ನೋಟ್ಸ್‌ ಅಂತೆಲ್ಲಾ ಸಿಕ್ಕಾಪಟ್ಟೆ ಕೆಲಸ. ನ್ಯೂ ಹಾರಿಜನ್‌ ಕಾಲೇಜಿನಲ್ಲಿ ಬಿ.ಕಾಂ. ಎರಡನೇ ವರ್ಷದಲ್ಲಿದ್ದೇನೆ. ಸ್ನೇಹಿತೆಯರ ಬೆಂಬಲವೂ ಇದೆ. ಸಿನಿಮಾ ನನ್ನ ಕನಸು. ಅತ್ಯುತ್ತಮ ಕಲಾವಿದೆಯಾಗಿ ಬೆಳೆಯಬೇಕೆನ್ನುವ ಹಂಬಲವಿದೆ. ಓದು ಮುಗಿದ ಮೇಲೆ ಮುಂದಿನ ಆಲೋಚನೆ.

ಅಮ್ಮ- ಅಪ್ಪ, ಅಕ್ಕ ಹಾಗೂ ತಮ್ಮನಿಗೆ ನಾನೆಂದರೆ ಹೆಮ್ಮೆ. ಅಮ್ಮ- ಅಪ್ಪನ ಪ್ರೋತ್ಸಾಹವೇ ನಾನಿಂದು ಇಲ್ಲಿ ನಿಲ್ಲಲು ಕಾರಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.