ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಸೋದರರು ಸೇರಿ ಮೂವರ ಸೆರೆ

Last Updated 5 ಜನವರಿ 2018, 19:38 IST
ಅಕ್ಷರ ಗಾತ್ರ

ಬೆಂಗಳೂರು: ದೆಹಲಿ, ಮುಂಬೈ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳ ಮೂಲಕ 108 ಕೆ.ಜಿ ಚಿನ್ನ ಸಾಗಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ವಜ್ರದ ವ್ಯಾಪಾರಿ ಸೇರಿ ಮೂವರನ್ನು ಕೇಂದ್ರ ಕಂದಾಯ ವಿಚಕ್ಷಣ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಗುಜರಾತ್‌ನ ಮಿಲನ್ ಪಟೇಲ್, ಅವರ ತಮ್ಮ ಗೌತಮ್ ಪಟೇಲ್ ಹಾಗೂ ಮುಂಬೈನ ರಾಜು ಬಂಧಿತರು. ಆರೋಪಿಗಳು ಪಂಪ್‌ಸೆಟ್‌ಗಳಲ್ಲಿ ಚಿನ್ನದ ಗಟ್ಟಿಗಳನ್ನು ಇಟ್ಟು ಸಾಗಣೆ ಮಾಡುತ್ತಿದ್ದರು. ಡಿ.19 ಮತ್ತು 21ರಂದು ಬೆಂಗಳೂರು, ಮುಂಬೈ ಹಾಗೂ ದೆಹಲಿ ವಿಮಾನ ನಿಲ್ದಾಣಗಳ ಕಾರ್ಗೊ ವಿಭಾಗಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಏರ್‌ ಇಂಟೆಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳು, 108 ಕೆ.ಜಿ ಚಿನ್ನ ಹಾಗೂ 280 ಪಂಪ್‌ಸೆಟ್‌ಗಳನ್ನು ಜಪ್ತಿ ಮಾಡಿದ್ದರು.

ವಜ್ರದ ವ್ಯಾಪಾರಿಯಾದ ಮಿಲನ್, ‘ಮೆಟ್ರೊ ಗೋಲ್ಡ್ ಆ್ಯಂಡ್ ಡೈಮಂಡ್ ಜ್ಯುವೆಲರ್ಸ್‌’ ಹೆಸರಿನಲ್ಲಿ ದುಬೈ, ರಾಜ್‌ಕೋಟ್ ಹಾಗೂ ಮುಂಬೈನಲ್ಲಿ ಮಳಿಗೆಗಳನ್ನು ಹೊಂದಿದ್ದಾರೆ. ಅವರ ತಮ್ಮ ಗೌತಮ್, ಪಂಪ್‌ಸೆಟ್ ಮಾರಾಟ ಸೇರಿದಂತೆ ಯಂತ್ರೋಪಕರಣ ಉದ್ದಿಮೆಯಲ್ಲಿ ತೊಡಗಿದ್ದಾರೆ. ರಾಜು ಕಮಿಷನ್ ಆಸೆಗೆ ಈ ಸೋದರರ ಬಳಿ ಕೆಲಸಕ್ಕಿದ್ದ ಎಂದು ಮೂಲಗಳು ತಿಳಿಸಿವೆ.

‌‘ಮೂರು ವಿಮಾನ ನಿಲ್ದಾಣಗಳಲ್ಲಿ ನಡೆಸಿದ್ದ ಕಾರ್ಯಾಚರಣೆಯ ವಿವರವನ್ನು ಕೇಂದ್ರದ ಕಂದಾಯ ವಿಚಕ್ಷಣ ದಳಕ್ಕೆ ನೀಡಿದ್ದೆವು. ಆ ದಳದ ಅಧಿಕಾರಿಗಳು, ರಾಜ್‌ಕೋಟ್ ಹಾಗೂ ಮುಂಬೈನಲ್ಲಿ ದಂಧೆಕೋರರನ್ನು ಬಂಧಿಸಿದ್ದಾರೆ’ ಎಂದು ಕೆಐಎಎಲ್‌ನ ಎಐಯು ಅಧಿಕಾರಿಗಳು ಮಾಹಿತಿ ನೀಡಿದರು.

ಪಾಕ್ ನಂಟು: ‘ಪಾಕಿಸ್ತಾನದ ವಜ್ರದ ವ್ಯಾಪಾರಿ ಹನೀಫ್‌ನೇ ಚಿನ್ನ ಸಾಗಣೆಯ ಕಿಂಗ್‌ಪಿನ್. ಆತನಿಗೂ ಈ ಸೋದರರಿಗೂ ನಂಟಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಹನೀಫ್ ಹಲವು ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾನೆ. ಆತನಿಗೆ 6 ತಿಂಗಳ ಹಿಂದೆ ಈ ಸೋದರರ ಪರಿಚಯವಾಗಿತ್ತು. ಅಕ್ರಮವಾಗಿ ಚಿನ್ನ ಸಾಗಣೆ ಮಾಡುವುದನ್ನು ಕರಗತ ಮಾಡಿಕೊಂಡಿದ್ದ ಹನೀಫ್, ತನ್ನ ವಿದ್ಯೆಗಳನ್ನು ಇವರಿಗೂ ಹೇಳಿ ಕೊಟ್ಟಿದ್ದ. ನಂತರ ಸೋದರರು ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಗಟ್ಟಿಗಳನ್ನು ಖರೀದಿಸಿ, ಅವುಗಳನ್ನು ದುಬೈ ಮೂಲಕ ಭಾರತಕ್ಕೆ ಸಾಗಿಸುತ್ತಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ಹೀಗೆ ಸಾಗಣೆ...
‘ಕೆಟ್ಟು ಹೋಗಿದ್ದ ಪಂಪ್‌ಸೆಟ್‌ಗಳನ್ನು ಗೋದಾಮಿನಲ್ಲಿ ಇಟ್ಟಿದ್ದೆ. ಅವುಗಳಲ್ಲೇ ಚಿನ್ನದ ಗಟ್ಟಿಗಳನ್ನು ಇಟ್ಟು ಸಾಗಿಸಲು ಉಪಾಯ ಮಾಡಿದೆ. ನಾನು ಹಾಗೂ ಅಣ್ಣ ಮೊದಲು 280 ಪಂಪ್‌ಸೆಟ್‌ಗಳನ್ನು ದುಬೈಗೆ ಸಾಗಿಸಿದೆವು. ದಕ್ಷಿಣ ಆಫ್ರಿಕಾದಿಂದ ಚಿನ್ನದ ಗಟ್ಟಿಗಳು ಬರುತ್ತಿದ್ದಂತೆಯೇ, ಪ್ರತಿ ಪಂಪ್‌ಸೆಟ್‌ನಲ್ಲೂ ಗಟ್ಟಿಗಳನ್ನು ಇಟ್ಟು ಅವುಗಳಿಗೆ ಗ್ರೀಸ್ ಮೆತ್ತಿದೆವು. ಕೊನೆಗೆ ಪ್ಯಾಕಿಂಗ್ ಮಾಡಿ, ರಾಜು ನೆರವಿನಿಂದ ವಿಮಾನ ನಿಲ್ದಾಣಗಳ ಮೂಲಕ ದೇಶದ ವಿವಿಧ ಭಾಗಗಳಿಗೆ ಸಾಗಿಸಲು ಮುಂದಾಗಿದ್ದೆವು’ ಎಂದು ಗೌತಮ್ ಪಟೇಲ್ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT