ಸೋಮವಾರ, ಜೂಲೈ 6, 2020
27 °C

‘ಜನವಿರೋಧಿ ಸರ್ಕಾರಗಳಿಗೆ ಪಾಠ ಕಲಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನ್ವಿ: ‘ರೈತರು ಹಾಗೂ ಜನ ವಿರೋಧಿ ನೀತಿ ಜಾರಿಗೆ ತಂದು ದುರಾಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್‌ ಸರ್ಕಾರಗಳಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದರು.

ಶುಕ್ರವಾರ ಪಟ್ಟಣದ ಧ್ಯಾನ ಮಂದಿರ ಸಭಾಂಗಣದಲ್ಲಿ ಜೆಡಿಎಸ್ ತಾಲ್ಲೂಕು ಘಟಕ ಆಯೋಜಿಸಿದ್ದ ‘ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜೆಡಿಎಸ್‌ಗೆ ಕಾರ್ಯಕರ್ತರೇ ಜೀವಾಳ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು. ಮುಂಬರುವ ಚುನಾವಣೆಯಲ್ಲಿ ಮಾನ್ವಿ ಕ್ಷೇತ್ರದಿಂದ ರಾಜಾ ವೆಂಕಟಪ್ಪ ನಾಯಕರ ಗೆಲುವಿಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಮಾತನಾಡಿ, ‘ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಎಡದಂಡೆ ನಾಲೆಯ ಶಾಶ್ವತ ದುರಸ್ತಿಗೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಕಾರಣ. ಜಿಲ್ಲೆಗೆ ಜೆಡಿಎಸ್‌ ಪಕ್ಷದ ಕೊಡುಗೆ ಕುರಿತು ಮತದಾರರಲ್ಲಿ ಅರಿವು ಮೂಡಿಸಲು ಪಕ್ಷದ ಕಾರ್ಯಕರ್ತರು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ‘ಮಾನ್ವಿ ಕ್ಷೇತ್ರದಲ್ಲಿ ಕಳೆದ ನಾಲ್ಕು ಅವಧಿಗೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಶಾಸಕರು ಕುಡಿಯುವ ನೀರಿನ ಕೆರೆ ನಿರ್ಮಾಣ ವಿಷಯದಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಮಗಾರಿ ತರಾತುರಿಯಲ್ಲಿ ಆರಂಭಿಸಿದ್ದಾರೆ. ಮಾನ್ವಿ ತಾಲ್ಲೂಕಿನ ಕೊನೆ ಭಾಗದ ರೈತರಿಗೆ ನೀರಿಲ್ಲದಂತೆ ಮಾಡಲಾಗಿದೆ. ಸ್ವತಃ ಕಾಡಾ ಅಧ್ಯಕ್ಷರಾಗಿರುವ ಶಾಸಕ ಹಂಪಯ್ಯ ನಾಯಕ ಈ ಕುರಿತು ಗಮನ ಹರಿಸುತ್ತಿಲ್ಲ’ ಎಂದು ದೂರಿದರು.

ಮಾಜಿ ಶಾಸಕ ವೆಂಕಟರಾವ್‌ ನಾಡಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಹಾಂತೇಶ ಪಾಟೀಲ ಅತ್ತನೂರು, ಶಿವನಗೌಡ ಗೊರೆಬಾಳ ಮತ್ತು ಖಾಸಿಂ ನಾಯಕ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರುಪಾಕ್ಷಿ, ಕರೆಮ್ಮ ದೇವದುರ್ಗ, ರಾಜಾ ಸೋಮನಾಥ ನಾಯಕ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ ಬಲ್ಲಟಗಿ, ಯುವ ಘಟಕದ ಅಧ್ಯಕ್ಷ ಪಿ.ರವಿಕುಮಾರ ವಕೀಲ, ಮಹಿಳಾ ಘಟಕದ ಅಧ್ಯಕ್ಷ ವಿಜಯಲಕ್ಷ್ಮೀ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಿಂದ ಕಾರ್ಯಕ್ರಮ ಆಯೋಜಿಸಿದ್ದ ಧ್ಯಾನ ಮಂದಿರದವರೆಗೆ ಮೆರವಣಿಗೆ ಮೂಲಕ ತೆರೆದ ಜೀಪಿನಲ್ಲಿ ಮುಖಂಡರನ್ನು ಕರೆದೊಯ್ಯಲಾಯಿತು.

* * 

ಕಾಡಾ ಅಧ್ಯಕ್ಷರಾಗಿರುವ ಸ್ಥಳೀಯ ಶಾಸಕ ಕ್ಷೇತ್ರದ ಕೊನೆ ಭಾಗಕ್ಕೆ ನೀರು ತಲುಪಿಸದೆ ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ

ರಾಜಾ ವೆಂಕಟಪ್ಪ ನಾಯಕ,

ಪ್ರಧಾನ ಕಾರ್ಯದರ್ಶಿ, ಜೆಡಿಎಸ್ ರಾಜ್ಯ ಘಟಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.