ಪರಿಸರ ಜಾಗೃತಿ ಮೂಡಿಸುವ ಪ್ರೌಢಶಾಲೆ

7

ಪರಿಸರ ಜಾಗೃತಿ ಮೂಡಿಸುವ ಪ್ರೌಢಶಾಲೆ

Published:
Updated:

ಬಾಗೇಪಲ್ಲಿ: ತಾಲ್ಲೂಕಿನ ಗಡಿಭಾಗದ ಬಿಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಓದಿನ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಕಲಿಸಿಕೊಡಲಾಗುತ್ತಿದೆ. ಶಾಲೆ ಸುತ್ತ ಮುತ್ತಲಿನ ಪರಿಸರ ರಕ್ಷಣೆ, ಹಸಿರುಮಯ ವಾತಾವರಣ ನಿರ್ಮಿಸಲು ಆದ್ಯತೆ ನೀಡಿ ಎಲ್ಲರ ಗಮನ ಸೆಳೆಯುತ್ತಿದೆ.

ಶಾಲೆಯ ವಿದ್ಯಾರ್ಥಿಗಳು ಆಟ ಅಧ್ಯಯನದ ಜತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲೂ ಮುಂದಿದ್ದಾರೆ. ಪರಿಸರದ ಮಹತ್ವವನ್ನು ಊರ ಜನರಿಗೆ ತಿಳಿಸುವ ಮಹತ್ತರ ಕೆಲಸವನ್ನೂ ಮಕ್ಕಳು ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಹಬ್ಬಗಳಲ್ಲಿ ಮಕ್ಕಳು ಪ್ರದರ್ಶಿಸುವ ಕಾರ್ಯಕ್ರಮ ವೀಕ್ಷಿಸಲು ಗ್ರಾಮದ ಜನರೇ ಸೇರುವರು.

ಗ್ರಾಮಸ್ಥರ ಸಹಕಾರ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ನೆಟ್ಟು ಪೋಷಿಸಿದ ಸಸಿಗಳು ದೊಡ್ಡ ಮರಗಳಾಗಿ ಬೆಳೆದಿವೆ. ಇದರಿಂದಾಗಿ ಶಾಲೆ ಆವರಣ ಪ್ರವೇಶಿಸುತ್ತಲೇ ತಂಗಾಳಿ ಬೀಸಿ ಸ್ವಾಗತಿಸುತ್ತದೆ.

ಶುಚಿತ್ವಕ್ಕೆ ಆದ್ಯತೆ: ಶಾಲೆ ಆವರಣದಲ್ಲಿ ಮಕ್ಕಳಿಗೆ ಎಟಕುವ ಜಾಗದಲ್ಲಿ ಮರಗಳಿಗೆ ಕಸದ ಬುಟ್ಟಿ ನೇತು ಹಾಕಲಾಗಿದೆ. ನಿತ್ಯ ತರಗತಿಯ ನಾಯಕರ ಗುಂಪಿನ ನೇತೃತ್ವದಲ್ಲಿ ಮೈದಾನವನ್ನು ಶುಚಿಗೊಳಿಸಲಾಗುತ್ತದೆ ಶಾಲೆ ಬಿಟ್ಟಾಗ ಬುಟ್ಟಿಯಲ್ಲಿರುವ ಕಸವನ್ನು ನಿರ್ದಿಷ್ಟ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತದೆ.

ವಿಜ್ಞಾನ ಪ್ರಯೋಗಾಲಯ: ಸುಸಜ್ಜಿತವಾದ ಉತ್ತಮ ವಿಜ್ಞಾನ ಪ್ರಯೋಗಾಲಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಶಿಕ್ಷಕರ ಬೋಧನಾ ವಿಧಾನವೂ ವಿಶಿಷ್ಟವಾಗಿದೆ. ಮಕ್ಕಳ ಮನೆಗೆ ಭೇಟಿ ನೀಡಿ ಸೌಹಾರ್ದ ವಾತಾವರಣ ನಿರ್ಮಿಸಿದ್ದಾರೆ.

ಗುಣಮಟ್ಟದ ಶಿಕ್ಷಣ, ಶಿಕ್ಷಕರ ಕಲಿಸುವ ವಿಶೇಷ ಆಸಕ್ತಿಯಿಂದಾಗಿ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರಾಸರಿ ಶೇ 85ರಷ್ಟು ಫಲಿತಾಂಶ ಪಡೆಯುತ್ತಿದೆ. 2016-17ನೇ ಸಾಲಿನಲ್ಲಿ ಗ್ರಾಮಾಂತರ ಪ್ರೌಢಶಾಲೆಗಳಲ್ಲಿ ಇಲ್ಲಿಯ ಕೆ.ಆರ್. ಅರ್ಚನಾ (608) ಅಂಕ ಗ್ರಾಮಾಂತರ ಶಾಲೆಗಳಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಅಲ್ಲದೆ 6 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

10ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ 9-10 ವಿದ್ಯಾರ್ಥಿಗಳ ಗುಂಪನ್ನು ರಚಿಸಲಾಗಿದೆ. ಅದನ್ನು ಒಬ್ಬ ಶಿಕ್ಷಕ ದತ್ತು ಪಡೆದಿದ್ದಾರೆ. ಶಾಲಾ ಅವಧಿಯ ನಂತರ ಪಾಠಗಳ ಬೋಧನೆ ಜೊತೆಗೆ ವಾರ್ಷಿಕ ಪರೀಕ್ಷೆಗೆ ಪೂರ್ವ ತಯಾರಿಯನ್ನೂ ಮಾಡಲು ತರಬೇತಿ ನೀಡುವರು ಎನ್ನುತ್ತಾರೆ ಮುಖ್ಯ ಶಿಕ್ಷಕ ಮಲ್ಲಪ್ಪ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಿರಂತರ ಪರಿಶ್ರಮದಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟಿಗೆ ಬೆಳೆದು ನಿಂತಿದೆ. ವಿಜ್ಞಾನ ವಸ್ತು ಪ್ರದರ್ಶನ, ಇಕೋ ಕ್ಲಬ್, ವಿಜ್ಞಾನ ಕ್ಲಬ್‌ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಂತೆ ಮಾಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ ಎಂದೂ ಅವರು ಹೇಳುವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry