ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾರ್ಟ್‌ಮೆಂಟ್‌ನ ಎಸ್‌ಟಿಪಿಯಲ್ಲಿ ನಡೆದ ಅವಘಡ: ಉಸಿರುಗಟ್ಟಿ ಮೂವರ ಸಾವು

Last Updated 7 ಜನವರಿ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಚ್‌.ಎಸ್‌.ಆರ್‌ ಲೇಔಟ್‌ನ ಸೋಮಸುಂದರಪಾಳ್ಯದ ಎನ್‌.ಡಿ. ಸೆಪಲ್‌ ಅಪಾರ್ಟ್‌ಮೆಂಟ್‌ನ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ದುರಸ್ತಿ ವೇಳೆ ಸ್ವಚ್ಛತಾ ಮೇಲ್ವಿಚಾರಕ ಸೇರಿ ಮೂವರು ಉಸಿರುಗಟ್ಟಿ ಭಾನುವಾರ ಮೃತಪಟ್ಟಿದ್ದಾರೆ.

ಸ್ಥಳೀಯ ನಿವಾಸಿಗಳಾದ ನಾರಾಯಣಸ್ವಾಮಿ (35), ಎಚ್‌. ಶ್ರೀನಿವಾಸ್‌ (58) ಹಾಗೂ ಮಾದೇಗೌಡ (42)‌ ಮೃತರು. ನಾರಾಯಣಸ್ವಾಮಿ ಅಪಾರ್ಟ್‌ಮೆಂಟ್‌ನಲ್ಲಿ ಸ್ವಚ್ಛತಾ ಮೇಲ್ವಿಚಾರಕರಾಗಿದ್ದರು. ಮಾದೇಗೌಡ ಹಾಗೂ ಶ್ರೀನಿವಾಸ್‌ ಕೂಲಿ ಕಾರ್ಮಿಕರು. ಅವರು ಪೇಂಟಿಂಗ್, ಔಷಧಿ ಸಿಂಪರಣೆ, ಉದ್ಯಾನ ನಿರ್ವಹಣೆ ಹಾಗೂ ಎಲೆಕ್ಟ್ರಿಕಲ್‌ಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿದ್ದರು.

ಎಸ್‌ಟಿಪಿಯ ಮೋಟರ್‌ ಕೆಲ ದಿನಗಳ ಹಿಂದೆ ಕೆಟ್ಟು ಹೋಗಿತ್ತು. ಅದನ್ನು ದುರಸ್ತಿಪಡಿಸಲು ಶ್ರೀನಿವಾಸ್‌ ಹಾಗೂ ಮಾದೇಗೌಡ ಅವರನ್ನು ನಾರಾ
ಯಣಸ್ವಾಮಿ ಅಪಾರ್ಟ್‌ಮೆಂಟ್‌ಗೆ ಕರೆಸಿದ್ದರು. ಶ್ರೀನಿವಾಸ್‌ ಅವರು ಬೆಳಿಗ್ಗೆ ಎಸ್‌ಟಿಪಿಯಲ್ಲಿ ಇಳಿದು ಮೋಟರ್‌ ದುರಸ್ತಿ ಮಾಡಲು ಮುಂದಾಗಿದ್ದ ವೇಳೆ ವಿಷಯುಕ್ತ ಗಾಳಿ ಸೇವಿಸಿ ಅಸ್ವಸ್ಥರಾದರು.

ಮೇಲಕ್ಕೆ ಬರಲು ಸಾಧ್ಯವಾಗದೇ, ಉಸಿರಾಟದ ತೊಂದರಕ್ಕೆ ಸಿಲುಕಿ ಅವರು ಸಹಾಯಕ್ಕಾಗಿ ಕೂಗಿದ್ದರು. ಆಗ ಮಾದೇಗೌಡ ಹಾಗೂ ನಾರಾಯಣಸ್ವಾಮಿ ಸಹ ಎಸ್‌ಟಿಪಿಯ ಟ್ಯಾಂಕ್‌ ಒಳಗೆ ಇಳಿದಿದ್ದರು.

ಅರ್ಧಗಂಟೆಯಾದ ನಂತರ ಈ ಮೂವರು ಕಾಣಿಸದಿದ್ದುದರಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಎಸ್‌ಟಿಪಿ ಬಳಿ ಹೋದಾಗ ಬೊಬ್ಬೆ ಕೇಳಿಸುತ್ತಿತ್ತು. ಅವರು ಅಪಾಯಕ್ಕೆ ಸಿಲುಕಿರುವುದನ್ನು ತಿಳಿದು ಅಪಾರ್ಟ್‌ಮೆಂಟ್‌ ನಿವಾಸಿಗಳ ‌ಸಂಘದವರಿಗೆ ಮಾಹಿತಿ ನೀಡಿದ್ದರು. ಸಂಘದವರು ಪೊಲೀಸರಿಗೆ ವಿಷಯ ತಿಳಿಸಿದ್ದರು.

ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು, ಮಾದೇಗೌಡ ಹಾಗೂ ನಾರಾಯಣಸ್ವಾಮಿ ಅವರನ್ನು ಹೊರಗೆ ತಂದರು. ಅಷ್ಟರಲ್ಲೇ ಅವರಿಬ್ಬರು ಅಸುನೀಗಿದ್ದರು. ಬಳಿಕ ಅವರ ದೇಹವನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ಸಾಗಿಸಲಾಯಿತು. ಉಸಿರಾಡುತ್ತಿದ್ದ ಶ್ರೀನಿವಾಸ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆದೊಯ್ದರು. ಮಾರ್ಗ ಮಧ್ಯೆ ಅವರೂ ಕೊನೆಯುಸಿರೆಳೆದರು.

ಮೃತನ ವಿರುದ್ಧವೇ ಎಫ್‌ಐಆರ್‌...
ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಕಾರ್ಮಿಕರನ್ನು ಎಸ್‌ಟಿಪಿಗೆ ಇಳಿಸಿದ್ದಕ್ಕಾಗಿ ನಾರಾಯಣಸ್ವಾಮಿ ಹಾಗೂ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ವಿರುದ್ಧ ‘ನಿರ್ಲಕ್ಷ್ಯದ ಸಾವು’ (ಐಪಿಸಿ 304ಎ) ಬಂಡೆಪಾಳ್ಯ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಅವಘಡಕ್ಕೆ ನಾರಾಯಣಸ್ವಾಮಿ ಕಾರಣ. ಮೃತರಾಗಿದ್ದರೂ ಅವರನ್ನೇ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿದ್ದೇವೆ. ಜತೆಗೆ ಸಂಘದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT