ಭಾನುವಾರ, ಜೂನ್ 7, 2020
30 °C

ಕೊಕ್ಕರೆಬೆಳ್ಳೂರು ಅಭಿವೃದ್ದಿಗೆ ಎನ್‌ಜಿಒ ಸಹಭಾಗಿತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಕ್ಕರೆಬೆಳ್ಳೂರು ಅಭಿವೃದ್ದಿಗೆ ಎನ್‌ಜಿಒ ಸಹಭಾಗಿತ್ವ

ಭಾರತೀನಗರ: ಸಮೀಪದ ಪ್ರಸಿದ್ದ ಪಕ್ಷಿಧಾಮ ಕೊಕ್ಕರೆ ಬೆಳ್ಳೂರು ಅಭಿವೃದ್ಧಿಗೆ ‘ವರ್ಲ್ಡ್‌ ವೈಡ್‌ ಫಂಡ್‌ ಫಾರ್ ನೇಚರ್‌ ಇಂಡಿಯ’ ಎಂಬ ಸ್ವಯಂ ಸೇವಾ ಸಂಸ್ಥೆ ಸಹಭಾಗಿತ್ವವಹಿಸಿದೆ. ಎಚ್‌ಎಸ್‌ಬಿಸಿ ಎಂಬ ಕಾರ್ಪೊರೇಟ್‌ ಸಂಸ್ಥೆಯ ಸಹಯೋಗದೊಂದಿಗೆ ಈ ಸಂಸ್ಥೆಯು ಕೊಕ್ಕರೆಬೆಳ್ಳೂರು ಗ್ರಾಮದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುತ್ತಿದೆ.

ಕೊಕ್ಕರೆಗಳ ನೀರಿನ ಮೂಲವಾದ ಗ್ರಾಮದಲ್ಲಿರುವ ಎಲ್ಲ 7 ಕಟ್ಟೆಗಳನ್ನು ಅಭಿವೃದ್ಧಿ ಮಾಡುವ ಯೋಜನೆ ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದಾರೆ. ಗ್ರಾಮದ ಪುರಾತನ ಕಟ್ಟೆಗಳಾದ ದೊಡ್ಡಕಟ್ಟೆ, ಚಿಕ್ಕಚನ್ನಿಕಟ್ಟೆ, ಹೊಳೆಯನ ಕಟ್ಟೆ, ವನದಾಸಿ ಕಟ್ಟೆ, ಕಂಗಲಾರನ ಕಟ್ಟೆ, ಕೆಂಪೇಗೌಡನ ಕಟ್ಟೆ ಹಾಗು ವಡ್ಡರ ತಿಮ್ಮಿಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಗ್ರಾಮವನ್ನು ಸಂಪೂರ್ಣ ಅರಣ್ಯೀಕರಣಗೊಳಿಸಲು ಅರಣ್ಯ ಇಲಾಖೆಯ ಸಹಯೋಗದಲ್ಲಿ ಜಾಗ ಇರುವ ಕಡೆ ಸಸಿ ನೆಟ್ಟು ಪೋಷಿಸುವ ಕೆಲಸ ಮಾಡುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪ್ರಕೃತಿ ನಿರೂಪಣಾ ಕೇಂದ್ರದ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಕೇಂದ್ರವನ್ನು 3 ವರ್ಷಗಳ ಕಾಲ ನಿರ್ವಹಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಗ್ರಾಮದಲ್ಲಿ ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಕುರಿತು ಗ್ರಾಮದ 8 ಮಂದಿ ಸದಸ್ಯರನ್ನೊಳಗೊಂಡ ಪ್ರಕೃತಿ ಸಮಿತಿ ರಚಿಸಿ ಸಮುದಾಯ ಸಹಭಾಗಿತ್ವವನ್ನು ಪಡೆದುಕೊಂಡಿದೆ.

ಗ್ರಾಮಕ್ಕೆ ಬರುವ ಪ್ರವಾಸಿಗರಿಗೆ ಗ್ರಾಮವನ್ನು ಕುರಿತು ಪರಿಚಯಿಸುವ, ಜೀವ ರಾಶಿಗಳ ಕುರಿತು ಮಾಹಿತಿ ನೀಡುವ ಕೆಲಸವನ್ನು ಸಂಸ್ಥೆಯು ನಿರ್ವಹಿಸುತ್ತಿದೆ. ಇದಕ್ಕಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ.

ಕೊಕ್ಕರೆಬೆಳ್ಳೂರು ಸುತ್ತಮುತ್ತ ಬರುವ 13 ಗ್ರಾಮಗಳನ್ನು ಆಯ್ದುಕೊಂಡು ಸಾವಯವ ಕೃಷಿಗೆ ಉತ್ತೇಜನ ನೀಡಲು ಯೋಜನೆ ಕೈಗೆತ್ತಿಕೊಂಡಿದೆ. ಮಂಡ್ಯ ಸಾವಯವ ಕೃಷಿಕರ ಸಹಕಾರ ಸಂಘದ ಸಹಭಾಗಿತ್ವದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗುತ್ತದೆ.

ಗ್ರಾಮವನ್ನು ಸಂಪೂರ್ಣ ರಾಸಾಯನಿಕ ಮುಕ್ತ ಮಾಡಲು ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಸಂಬಂಧ ರೈತರನ್ನು ಸಂಘಟಿಸಿ ರೈತ ಕೂಟಗಳನ್ನು ರಚಿಸಲಾಗಿದೆ. ಜೊತೆಗೆ ಮಹಿಳಾ ರೈತರನ್ನು ಸಂಘಟಿಸಿ ಕೀರೆಮಡಿ ಮಹಿಳಾ ಕೂಟಗಳನ್ನು ರಚಿಸಲಾಗಿದೆ.

ಈ ಕೂಟಗಳ ಸದಸ್ಯರುಗಳಿಗೆ ಉಚಿತವಾದ ಸಿರಿಧಾನ್ಯ ಬಿತ್ತನೆ ಬೀಜಗಳ ವಿತರಣೆ ಮಾಡಿ ಬೆಳೆ ತೆಗೆಯಲು, ಅದಕ್ಕೆ ಮಾರುಕಟ್ಟೆ ಕಲ್ಪಿಸಲು ಕ್ರಮ ವಹಿಸಲಾಗಿದೆ. ಕೀರೆಮಡಿ ಮಹಿಳಾ ಕೂಟಗಳ ಸದಸ್ಯರಿಗೆ ಉಚಿತ ಸೊಪ್ಪು ತರಕಾರಿ ಬೀಜಗಳನ್ನು ವಿತರಣೆ ಮಾಡಿ ರಾಸಾಯನಿಕ ರಹಿತವಾದ ಬೆಳೆ ತೆಗೆಯಲು ನಿರಂತ ಜಾಗೃತಿ ಮೂಡಿಸಲಾಗುತ್ತಿದೆ.

ಗ್ರಾಮದಲ್ಲಿ ಬರುವ ಎಲ್ಲ ನೀರಿನ ಮೂಲಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆಯ ಮೂಲಕ ಪ್ರಯೋಗಾಲಯಕ್ಕೆ ಕಳುಹಿಸಿ ನೀರಿನ ಗುಣಮಟ್ಟದ ತಪಾಸಣೆ ಮಾಡಿಸಲಾಗುತ್ತಿದೆ. ಕೊಕ್ಕರೆಗಳ ಅಸ್ತಿತ್ವಕ್ಕೆ, ಅವುಗಳ ಆರೋಗ್ಯವಂತ ಬದುಕಿಗೆ ನೆರವಾಗಲು ಸಂಸ್ಥೆಯು ಕಾಳಜಿ ವಹಿಸುತ್ತಿದೆ ಎಂದು ಸಂಸ್ಥೆಯ ಯೋಜನಾ ನಿರ್ದೇಶಕ ಎಂ.ಎಂ. ಬೋಪಯ್ಯ ಹೇಳಿದರು.

ಗ್ರಾಮದ ಎಲ್ಲ ಜಲ ಮೂಲಗಳ ನೀರು ಸಂಗ್ರಹಿಸಿ ಅರಣ್ಯ ಇಲಾಖೆ ಮೂಲಕ ಪ್ರಯೋಗಾಲಯಕ್ಕೆ ಕಳುಹಿಸಿ ನೀರಿನ ಗುಣಮಟ್ಟ ತಪಾಸಣೆ ಮಾಡಲಾಗುತ್ತಿದೆ

ಎಂ.ಎಂ.ಬೋಪಯ್ಯ ಯೋಜನಾ ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.