ಭಾನುವಾರ, ಮೇ 31, 2020
27 °C
ಸಂಚಾರ ಪೊಲೀಸರಿಗೆ 300 ಉಪಕರಣ: ಮಾಹಿತಿ ಸಂಗ್ರಹಕ್ಕೆ ಒಂದೇ ಸರ್ವರ್‌

ನಿಯಮ ಉಲ್ಲಂಘನೆ: ದಂಡ ವಸೂಲಿಗೆ ಏಕೀಕೃತ ವ್ಯವಸ್ಥೆ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ನಿಯಮ ಉಲ್ಲಂಘನೆ: ದಂಡ ವಸೂಲಿಗೆ ಏಕೀಕೃತ ವ್ಯವಸ್ಥೆ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಲು ರಾಜ್ಯದಾದ್ಯಂತ ಏಕೀಕೃತ ವ್ಯವಸ್ಥೆ ಜಾರಿಗೆ ತರಲು ಪೊಲೀಸ್‌ ಇಲಾಖೆ ತೀರ್ಮಾನಿಸಿದೆ.

ರಾಜ್ಯದ ಯಾವುದೇ ಜಿಲ್ಲೆ ಹಾಗೂ ಮಹಾನಗರಗಳಲ್ಲಿ ವಾಹನ ಸವಾರರು ನಿಯಮ ಉಲ್ಲಂಘಿಸಿದರೆ, ಆಯಾ ಜಿಲ್ಲೆ ಹಾಗೂ ಮಹಾನಗರಗಳ ವ್ಯಾಪ್ತಿಯ ಪೊಲೀಸರಷ್ಟೇ ದಂಡ ಸಂಗ್ರಹಿಸುವ ವ್ಯವಸ್ಥೆ ಇದುವರೆಗೆ ಜಾರಿಯಲ್ಲಿತ್ತು.

ಪೊಲೀಸರು ಇನ್ನು ಮುಂದೆ ವ್ಯಾಪ್ತಿಯ ಮಿತಿ ಇಲ್ಲದೆ ದಂಡ ಸಂಗ್ರಹಿಸುವ ಅಧಿಕಾರ ಪಡೆಯಲಿದ್ದಾರೆ. ವಾಹನ ಸವಾರರು, ಯಾವುದೇ ಜಿಲ್ಲೆ ಹಾಗೂ ಮಹಾನಗರಗಳಲ್ಲಿ ನಿಯಮ ಉಲ್ಲಂಘಿಸಿದರೂ ಯಾವುದೇ ಸಂಚಾರ ಠಾಣೆಯ ಪೊಲೀಸರು ದಂಡ ವಸೂಲಿ ಮಾಡಬಹುದು.

ಒಂದೇ ಸರ್ವರ್‌: ರಾಜ್ಯದಲ್ಲಿ ಒಟ್ಟು 114 ಸಂಚಾರ ಪೊಲೀಸ್‌ ಠಾಣೆಗಳಿವೆ. ನಿಯಮ ಉಲ್ಲಂಘನೆ ಪ್ರಕರಣಗಳು ಕಂಡುಬಂದಾಗ, ಅದರ ದತ್ತಾಂಶವನ್ನು ಆಯಾ ಜಿಲ್ಲೆ ಅಥವಾ ಮಹಾನಗರಗಳ ಸರ್ವರ್‌ನಲ್ಲಷ್ಟೇ ಸಂಗ್ರಹಿಸಿಡಲಾಗುತ್ತಿದೆ. ಅಂಥ ಸರ್ವರ್‌ನಲ್ಲಿರುವ ದತ್ತಾಂಶವನ್ನು ಬೇರೆ ಜಿಲ್ಲೆ ಅಥವಾ ಮಹಾನಗರಗಳ ಪೊಲೀಸರಿಗೆ ನೋಡಲು ಲಭ್ಯವಾಗುತ್ತಿಲ್ಲ. ಹೀಗಾಗಿ ಪ್ರತಿಯೊಂದು ಠಾಣೆಯ ದತ್ತಾಂಶವನ್ನು ಒಂದೇ ಸರ್ವರ್‌ನಲ್ಲಿ ಸಂಗ್ರಹಿಸಿಟ್ಟು, ಅದನ್ನು ಆಧರಿಸಿ ದಂಡ ವಸೂಲಿ ಮಾಡುವುದಕ್ಕಾಗಿ ಈ ವ್ಯವಸ್ಥೆ ರೂಪಿಸಲಾಗಿದೆ.

‘ಬೆಂಗಳೂರಿನ ಸಂಚಾರ ನಿರ್ವಹಣಾ ಕೇಂದ್ರದಲ್ಲೇ (ಟಿಎಂಸಿ) ಕೇಂದ್ರೀಕೃತ ಸರ್ವರ್‌ ಇರಲಿದ್ದು, ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ರಾಜ್ಯದ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದತ್ತಾಂಶವು ಇದರಲ್ಲಿ ಸಂಗ್ರಹವಾಗಲಿದೆ. ಇದರಿಂದ ದಂಡ ಸಂಗ್ರಹಿಸುವುದು ಮತ್ತಷ್ಟು ಸುಲಭ ಹಾಗೂ ಪಾರದರ್ಶಕವಾಗಲಿದೆ’ ಎಂದು ರಸ್ತೆ ಸುರಕ್ಷತೆ ಮತ್ತು ಸಾರಿಗೆ ವಿಭಾಗದ ಆಯುಕ್ತ (ಪ್ರಭಾರಿ) ಎಂ.ಎ.ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

300 ಉಪಕರಣ ವಿತರಣೆ: ‘ಬೆಂಗಳೂರಿನ 44 ಹಾಗೂ ಮೈಸೂರಿನ 5 ಸಂಚಾರ ಠಾಣೆ ಹೊರತುಪಡಿಸಿ ಉಳಿದ ಠಾಣೆಗಳಲ್ಲಿ ಕಾಗದದಲ್ಲೇ ದಂಡ ಬರೆದುಕೊಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ತಂತ್ರಜ್ಞಾನ ಬಳಸಿ ದಂಡ ವಿಧಿಸುವ ಪ್ರಕ್ರಿಯೆ ಜಾರಿಗೆ ತರಲಾಗುತ್ತಿದೆ. ಏಕೀಕೃತ ವ್ಯವಸ್ಥೆಗೆ ತಕ್ಕುದಾದ 300 ಉಪಕರಣಗಳನ್ನು ಸಂಚಾರ ಪೊಲೀಸರಿಗೆ ನೀಡಲಿದ್ದೇವೆ’ ಎಂದು ಸಲೀಂ ಹೇಳಿದರು.

‘ಬೆಂಗಳೂರಿನ ಪೊಲೀಸರು ಇಂಥ 625 ಉಪಕರಣಗಳನ್ನು ಈಗಾಗಲೇ ಬಳಸುತ್ತಿದ್ದಾರೆ. ಉಳಿದೆಲ್ಲ ಜಿಲ್ಲೆಗಳ ಸಂಚಾರ ಪೊಲೀಸರಿಗೆ ಇದನ್ನು ನೀಡಲಿದ್ದೇವೆ. ಏಪ್ರಿಲ್‌ ಅಂತ್ಯದಲ್ಲಿ ಪುನಃ 150 ಉಪಕರಣಗಳನ್ನು ಕೊಡಲಿದ್ದೇವೆ.’

‘ಉಪಕರಣ ಬಳಕೆ ಸಂಬಂಧ ಸಂಚಾರ ಠಾಣೆಯ ಎಎಸ್‌ಐ, ಎಸ್‌ಐ ಹಾಗೂ ಇನ್‌ಸ್ಪೆಕ್ಟರ್‌ಗಳಿಗೆ ತರಬೇತಿ ನೀಡಲಿದ್ದೇವೆ. ಅದಕ್ಕಾಗಿ ಅರ್ಹ ಪೊಲೀಸರನ್ನು ಆಯ್ಕೆ ಮಾಡಿದ್ದೇವೆ’ ಎಂದರು. 

ದಂಡದ ಲೆಕ್ಕವಿಡಲು ಸಹಾಯ: ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಪಾವತಿಯಾದ ದಂಡದ ಬಗ್ಗೆ ಆಯಾ ಜಿಲ್ಲಾ ಮಟ್ಟದ ಪೊಲೀಸ್‌ ಅಧಿಕಾರಿಗಳಿಗೆ ಮಾತ್ರ ಗೊತ್ತಾಗುತ್ತಿದೆ. ಇಲಾಖೆಯ ಉನ್ನತ ಅಧಿಕಾರಿಗಳಿಗೆ ಆ ಬಗ್ಗೆ ನಿಖರ ಮಾಹಿತಿ ತಿಳಿಯುತ್ತಿಲ್ಲ. ಏಕೀಕೃತ ವ್ಯವಸ್ಥೆ

ಯಿಂದಾಗಿ ದಂಡದ ಲೆಕ್ಕದ ಮಾಹಿತಿಯು ಕೇಂದ್ರೀಕೃತ ಸರ್ವರ್‌ನಲ್ಲಿ ಸಂಗ್ರಹವಾಗಲಿದೆ. ಯಾವಾಗ ಬೇಕಾದರೂ ಉನ್ನತ ಅಧಿಕಾರಿಗಳು ಮಾಹಿತಿ ನೋಡಬಹುದು.

‘ಸವಾರರಿಗೆ ಸ್ಥಳದಲ್ಲೇ ದಂಡ ಪಾವತಿಯ ರಶೀದಿ ಸಿಗಲಿದೆ. ಪೊಲೀಸರು ನಿಯಮ ಮೀರಿ ದಂಡ ವಸೂಲಿ ಮಾಡಿ

ದರೆ ಸವಾರರು ಉನ್ನತ ಅಧಿಕಾರಿಗಳಿಗೆ ದೂರು ನೀಡಬಹುದು. ಅಂಥ ಪ್ರಕರಣಗಳಲ್ಲಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಸರ್ವರ್‌ನಲ್ಲಿರುವ ದಾಖಲೆಗಳು ಪುರಾವೆ ಆಗಲಿವೆ’ ಎಂದು ಅಧಿಕಾರಿ ತಿಳಿಸಿದರು.

**

ಉಪಕರಣದ ಬಗ್ಗೆ

* ಕೇಂದ್ರೀಕೃತ ಸರ್ವರ್‌ನಿಂದ ಈ ಉಪಕರಣ ಕಾರ್ಯನಿರ್ವಹಿಸಲಿದೆ.

* ರಾಜ್ಯದ ಸಂಚಾರ ಪೊಲೀಸರು, ಏಕಕಾಲದಲ್ಲಿ ಉಪಕರಣ ಬಳಕೆ ಮಾಡಬಹುದು.ವಾಹನಗಳ ನೋಂದಣಿ ಸಂಖ್ಯೆ ಹಾಗೂ ಚಾಲನಾ ಪರವಾನಗಿ ಪತ್ರದ (ಡಿಎಲ್‌) ಸಂಖ್ಯೆ ಮೂಲಕ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಿಳಿಯಬಹುದು

* ಸ್ಥಳದಲ್ಲೇ ದಂಡದ ರಶೀದಿ ಮುದ್ರಿಸಬಹುದು

* ಕ್ರೆಡಿಟ್‌ ಹಾಗೂ ಡೇಬಿಟ್‌ ಕಾರ್ಡ್‌ ಮೂಲಕ ದಂಡ ಪಾವತಿಗೆ ಅವಕಾಶ

**

ಪ್ರತ್ಯೇಕ ಐಡಿ

ಈ ಉಪಕರಣಗಳಲ್ಲಿ ಪಿಓಎಸ್‌ ತಂತ್ರಜ್ಞಾನ ಅಳವಡಿಸಲಾಗಿದೆ. ಉಪಕರಣ ಬಳಕೆದಾರರಿಗೆ ಪ್ರತ್ಯೇಕ ಯೂಸರ್ ಐಡಿ ನೀಡಲಾಗುತ್ತಿದೆ. ಅದನ್ನು ನಮೂದಿಸಿದರೆ ಮಾತ್ರ, ಆರಂಭಿಸಲಿದೆ. ಕಳವಾದರೆ, ಅದನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲು ಅವಕಾಶವಿದೆ.

**

ಆರ್‌ಟಿಒ ಮಾಹಿತಿ ಜೋಡಣೆ

ಆರ್‌ಟಿಒ ಕಚೇರಿಗಳ ದತ್ತಾಂಶವನ್ನೂ ಸರ್ವರ್‌ಗೆ ಜೋಡಿಸಲಾಗುತ್ತಿದೆ. ಆ ದತ್ತಾಂಶವನ್ನು ಪೊಲೀಸರು, ಉಪಕರಣದಲ್ಲಿ ವೀಕ್ಷಿಸಬಹುದು. ವಾಹನ ನೋಂದಣಿ ಹಾಗೂ ಡಿ.ಎಲ್‌ ಸಂಖ್ಯೆಯನ್ನು ನಮೂದಿಸಿ ನಿಯಮ ಉಲ್ಲಂಘನೆಯ ಹಳೆ ಪ್ರಕರಣಗಳನ್ನು ಪತ್ತೆ ಹಚ್ಚಬಹುದು.

‘ಚಾಲಕರಿಂದಾದ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಚಾಲನಾ ಪರವಾನಗಿ ಪತ್ರ (ಡಿಎಲ್‌) ಆಧರಿಸಿ ದಂಡ ವಿಧಿಸುವಂತೆ ಪೊಲೀಸರಿಗೆ ಹೇಳಿದ್ದೇವೆ. ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಹಂಚಿಕೊಂಡಿದ್ದೇವೆ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ ಹೇಳಿದರು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.