ಭಾನುವಾರ, ಜೂನ್ 7, 2020
30 °C

ಬಡವರ ಸೇವೆಯಲ್ಲಿ ಪ್ರಜಾಪ್ರಭುತ್ವದ ಸಾರ್ಥಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡವರ ಸೇವೆಯಲ್ಲಿ ಪ್ರಜಾಪ್ರಭುತ್ವದ ಸಾರ್ಥಕತೆ

ಚಿಕ್ಕಬಳ್ಳಾಪುರ: ‘ಪ್ರಜಾಪ್ರಭುತ್ವದ ಸಾರ್ಥಕತೆ ಇರುವುದೇ ಬಡವರ ಸೇವೆಯಲ್ಲಿ. ಸಾಮಾಜಿಕ ನ್ಯಾಯದ ಪರಿಪಾಲನೆ ಆ ನೆಲೆಯಲ್ಲಿ ಆಗಬೇಕಿದೆ. ಆದ್ದರಿಂದ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಅಸಹಾಯಕರು, ಬಡವರು, ಅವಕಾಶವಂಚಿತ ವರ್ಗದ ಬಗ್ಗೆ ಅಂತಃಕರಣದಿಂದ ಕೆಲಸ ಮಾಡಿದಾಗ ಪ್ರಜಾಪ್ರಭುತ್ವದ ಸಾರ್ಥಕತೆ ಹೆಚ್ಚಾಗುತ್ತದೆ’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಪ್ರತಿಪಾದಿಸಿದರು.

ನಗರದಲ್ಲಿ ಶುಕ್ರವಾರ ರಾತ್ರಿ ಜಿಲ್ಲಾ ದಶಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಜನೋಪಕಾರಿ ಕೆಲಸ ಮಾಡಿದವರನ್ನು ಸಾವಿರಾರು ವರ್ಷಗಳಾದರೂ ನೆನೆಯುವ ಜನ ಸಂಸ್ಕೃತಿ ನಮ್ಮದು. ವಿನಯವಂತಿಕೆ ನಮ್ಮ ಜನರಲ್ಲಿದೆ.’ ಎಂದು ಹೇಳಿದರು.

ಸಂಸದ ವೀರಪ್ಪ ಮೊಯಿಲಿ ಮಾತನಾಡಿ, ‘ಸಿದ್ದರಾಮಯ್ಯ ಅವರ ಕಾಲದಲ್ಲಿ ಜಿಲ್ಲಾ ಕೇಂದ್ರಕ್ಕೆ ಅಗತ್ಯವಾದ ಎಲ್ಲಾ ಆಡಳಿತ ಕಚೇರಿಗಳು ತಲೆ ಎತ್ತಿದವು. ರಂಗಮಂದಿರ ಕೆಲಸ ಆರಂಭವಾಗಿದೆ. ವೈದ್ಯಕೀಯ ಕಾಲೇಜಿಗೆ ಮಂಜೂರಾತಿ ದೊರೆತಿದೆ. ಶೀಘ್ರದಲ್ಲಿಯೇ ಅದಕ್ಕೆ ಅನುದಾನ ಬರುತ್ತದೆ. ಇಲ್ಲಿನ ರೈತರು ವೈಜ್ಞಾನಿಕ ಮನೋಭೂಮಿಕೆ ಉಳ್ಳವರು. ಆದರೆ ಈ ಭಾಗದ ಅತ್ಯಂತ ದೊಡ್ಡ ಕೊರತೆ ಕುಡಿಯುವ ನೀರಿನದು. ಇದಕ್ಕೆ ಶಾಶ್ವತವಾಗಿ ನೀಗಿಸಲು ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಒಂದೆರಡು ವರ್ಷದಲ್ಲಿ ಎಲ್ಲ ಕೆರೆಗಳಿಗೆ ನೀರು ಬರುತ್ತದೆ’ ಎಂದು ಹೇಳಿದರು.

ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ಎರಡ್ಮೂರು ವರ್ಷಗಳಲ್ಲಿ ಎತ್ತಿನಹೊಳೆ ನೀರು ಈ ಭಾಗದ ಎಲ್ಲ ಕೆರೆಗಳಿಗೆ ತುಂಬುತ್ತದೆ. ಅದಕ್ಕೂ ಮೊದಲು ಏತ ನೀರಾವರಿ ಯೋಜನೆಯಲ್ಲಿ ಎರಡು ವರ್ಷಗಳ ಒಳಗೆ ಗೋಪಾಲಕೃಷ್ಣ ಅಮಾನಿ ಕೆರೆಗೆ ಹೆಬ್ಬಾಳ ನಾಗವಾರ ಕೆರೆಗಳ ಸಂಸ್ಕರಿತ ನೀರು ಖಂಡಿತ ಬರುತ್ತದೆ. ಆ ನೀರು ಶುದ್ಧವಾಗಿಲ್ಲ ಎನ್ನುವ ಅನುಮಾನ ಜನರಲ್ಲಿ ಬರಬಾರದು ಎನ್ನುವ ಕಾರಣಕ್ಕೆ ಮೂರನೇ ಹಂತದ ಶುದ್ಧೀಕರಣ ಮಾಡಬೇಕು ಎಂದು ನಾವು ಮುಖ್ಯಮಂತ್ರಿ ಅವರಿಗೆ ಈ ವಿಚಾರ ಮನವರಿಕೆ ಮಾಡಿದ್ದೇವೆ’ ಎಂದು ಹೇಳಿದರು.

ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್‌.ಶಿವಶಂಕರರೆಡ್ಡಿ ಮಾತನಾಡಿ, ‘ಜಿಲ್ಲೆಯಲ್ಲಿ ಇನ್ನಷ್ಟು ಕೈಗಾರಿಕೆಗಳನ್ನು ತರುವ ಜತೆಗೆ ಪ್ರವಾಸೋದ್ಯಮ ತಾಣಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ. ಕೃಷಿಗೆ ಪೂರಕವಾದ ಕೈಗಾರಿಕೆಗಳು ಜಿಲ್ಲೆಯಲ್ಲಿ ತಲೆ ಎತ್ತಬೇಕಾಗಿದೆ’ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ‘ಜಿಲ್ಲಾ ದಶಮಾನೋತ್ಸವ’ಕ್ಕೆ ಚಾಲನೆ ನೀಡಿದರು. ಸಂಸದ ಎಂ.ವೀರಪ್ಪ ಮೊಯಿಲಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಶಾಸಕ ಎಂ.ರಾಜಣ್ಣ ಅವರು ಪ್ರವಾಸೋದ್ಯಮ ಕೈಪಿಡಿ ಬಿಡುಗಡೆ ಮಾಡಿದರು. ಸಂಸದ ಕೆ.ಎಚ್ ಮುನಿಯಪ್ಪ ಅವರು ಚಾಲನೆ ನೀಡಿದರು.

ಶಾಸಕರಾದ ಡಾ.ಕೆ.ಸುಧಾಕರ್, ಎಂ.ರಾಜಣ್ಣ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಜಿಲ್ಲಾ ಪಂಚಾ ಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ.ಮುನಿ ಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ನಗರಸಭೆ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾಧಿಕಾರಿ ದೀಪ್ತಿ ಕಾನಡೆ,ಡ್ಡಿ ಉಪಸ್ಥಿತರಿದ್ದರು.

ದಶಮಾನೋತ್ಸವದಲ್ಲಿ ಇಂದು..

ಬೆಳಿಗ್ಗೆ 6: ನಗರದ ಎಂ.ಜಿ.ರಸ್ತೆಯಲ್ಲಿರುವ ಜೈಭೀಮ್ ಬಾಲಕರ ಪದವಿ ನಿಲಯದ ಆವರಣದಲ್ಲಿ ಹಸು ಹಾಲು ಕರೆಯುವ ಸ್ಪರ್ಧೆ

ಬೆಳಿಗ್ಗೆ 11: ನಗರದ ಎಂ.ಜಿ.ರಸ್ತೆಯಲ್ಲಿರುವ ಜೈಭೀಮ್ ಬಾಲಕರ ಪದವಿ ನಿಲಯದ ಆವರಣದಲ್ಲಿ ಉತ್ತಮ ತಳಿ ರಾಸುಗಳ ಪ್ರದರ್ಶನ

ಬೆಳಿಗ್ಗೆ 11: ಅಂಬೇಡ್ಕರ್ ಭವನದಲ್ಲಿ ‘ಮಹಿಳಾ ಸಬಲೀಕರಣ ಮತ್ತು ಆರೋಗ್ಯ’ ವಿಚಾರ ಗೋಷ್ಠಿ.

ಮಧ್ಯಾಹ್ನ 12: ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಪುರುಷರ ಜಿಲ್ಲಾ ಮಟ್ಟದ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿ, ಮಹಿಳೆಯರ ಕೋಕೋ ಮತ್ತು ಥ್ರೋಬಾಲ್ ಪಂದ್ಯಾವಳಿ

ಮಧ್ಯಾಹ್ನ 4: ನಿಹಾರಿಕಾ ಮತ್ತು ಭಾವಿಕರೆಡ್ಡಿ ಅವರಿಂದ ಭರತನಾಟ್ಯ

ಸಂಜೆ 5: ನಗರದ ಎಂ.ಜಿ.ರಸ್ತೆಯಲ್ಲಿರುವ ಜೈಭೀಮ್ ಬಾಲಕರ ಪದವಿ ನಿಲಯದ ಆವರಣದಲ್ಲಿ ಹಸು ಹಾಲು ಕರೆಯುವ ಸ್ಪರ್ಧೆಯ ಫಲಿತಾಂಶ ಘೋಷಣೆ

ಸಂಜೆ 5.30: ಚಿಂತಲಪಲ್ಲಿ ಪರಂಪರಾ ಟ್ರಸ್ಟ್‌ನ ನಾಗೇಂದ್ರಂ ಶ್ರೀಕಾಂತಶಾಸ್ತ್ರಿ ಅವರಿಂದ ಶಾಸ್ತ್ರೀಯ ಸಂಗೀತ

ಸಂಜೆ 6.30: ‘ಅಭಿನವ್’ ಡ್ಯಾನ್ಸ್ ಕಂಪನಿ ತಂಡದಿಂದ ನೃತ್ಯ ಪ್ರದರ್ಶನ

ರಾತ್ರಿ 8: ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ರಸ ಸಂಜೆ

ರಾತ್ರಿ 9: ರಘು ದೀಕ್ಷಿತ್ ತಂಡದವರಿಂದ ಸಂಗೀತದೌತಣ

* * 

ಅಭಿವೃದ್ಧಿ ವಿಚಾರ ಪಕ್ಷ, ಜಾತಿ, ಧರ್ಮದ ರಾಜಕಾರಣ ಮೀರಿದಾಗಲೇ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.

ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.