ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರಧಾಯಿಕ ಅಭ್ಯರ್ಥಿಗಳ ಮಧ್ಯ ಪ್ರಬಲ ಪೈಪೊಟಿ

Last Updated 9 ಫೆಬ್ರುವರಿ 2018, 10:20 IST
ಅಕ್ಷರ ಗಾತ್ರ

ಹಾನಗಲ್: ನಿರಂತರ 40 ವರ್ಷದ ರಾಜಕಾರಣದಿಂದಾಗಿ ಪಕ್ಷ ಮತ್ತು ಕ್ಷೇತ್ರದಲ್ಲಿ ಹಿರಿತನ ಹೊಂದಿದ ಶಾಸಕ ಮನೋಹರ ತಹಸೀಲ್ದಾರ್‌ ಮತ್ತು ಮಾಜಿ ಸಚಿವ ಸಿ.ಎಂ.ಉದಾಸಿ ನಡುವಿನ ಸ್ಪರ್ಧೆಯಿಂದಾಗಿ ಹಾನಗಲ್‌ ವಿಧಾನಸಭಾ ಕ್ಷೇತ್ರವು ಗಮನ ಸೆಳೆಯುತ್ತಿದೆ.

ಈ ಇಬ್ಬರು ಒಟ್ಟು 8 ಬಾರಿ ಮುಖಾಮುಖಿ ಆಗಿದ್ದು, ಸಿ.ಎಂ.ಉದಾಸಿ 5 ಬಾರಿ ಮತ್ತು ಮನೋಹರ ತಹಸೀಲ್ದಾರ್‌ 4 ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಕ್ಷೇತ್ರವನ್ನು ಹೆಚ್ಚು ಬಾರಿ ಪ್ರತಿನಿಧಿಸಿದ ಕೀರ್ತಿಗೆ ಸಿ.ಎಂ.ಉದಾಸಿ ಪಾತ್ರರಾಗಿದ್ದರೆ, ಮನೋಹರ ತಹಸೀಲ್ದಾರ್‌ ಪಕ್ಷ ನಿಷ್ಠೆಗೆ ಹೆಸರಾಗಿದ್ದಾರೆ.

ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಪಕ್ಷವೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುತ್ತಿರುವುದು ಕಾಕತಾಳೀಯ ಆಗಿದ್ದರೂ, ಈ ಕ್ಷೇತ್ರದ ವಿಶೇಷವಾಗಿ ಪರಿಣಮಿಸಿದೆ. ಹೀಗಾಗಿ ಸಿ.ಎಂ.ಉದಾಸಿ ಗೆದ್ದಾಗಲೆಲ್ಲ ಸಚಿವ ಸ್ಥಾನ ಅಲಂಕರಿಸಿದವರು, ಈ ಬಾರಿಯ ಸರ್ಕಾರದಲ್ಲಿ ಕೆಲವು ತಿಂಗಳು ಮನೋಹರ ತಹಸೀಲ್ದಾರ್‌ ಸಚಿವರಾಗಿದ್ದರು.

ಅಧಿಕಾರ ಇರಲಿ ಇಲ್ಲದಿರಲಿ ಸಿ.ಎಂ.ಉದಾಸಿ ತಮ್ಮ ಹಿರಿತನ, ರಾಜಕೀಯ ಜಾಣ್ಮೆಯ ಮೂಲಕ ಜಿಲ್ಲೆಯ ರಾಜಕಾರಣದ ಮೇಲೆ ಹಿಡಿತ ಸಾಧಿಸುವ ವ್ಯಕ್ತಿತ್ವ. ಇನ್ನು ಮನೋಹರ ತಹಸೀಲ್ದಾರ್‌ ಹಲವು ಬಾರಿ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ಜಿಲ್ಲೆಯಲ್ಲಿ ಸದೃಢಗೊಳಿಸಿದ ನಾಯಕ.

9ನೇ ಮುಖಾಮುಖಿ: ಈ ಬಾರಿಯೂ ಮನೋಹರ ತಹಸೀಲ್ದಾರ್‌ ಕಾಂಗ್ರೆಸ್‌ನಿಂದ ಮತ್ತು ಸಿ.ಎಂ.ಉದಾಸಿ ಬಿಜೆಪಿಯಿಂದ ಸ್ಪರ್ಧಿಸುವ ಲಕ್ಷಣಗಳು ದಟ್ಟವಾಗಿವೆ. ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಹಾನಗಲ್‌ಗೆ ಬಂದಿದ್ದ ಸಿ.ಎಂ.ಸಿದ್ದರಾಮಯ್ಯ ಬಹಿರಂಗವಾಗಿ ಮನೋಹರ ತಹಸೀಲ್ದಾರ್‌ ಪರ ಒಲವು ತೋರಿದ್ದರು.

ಇನ್ನು, ಪರಿವರ್ತನಾ ಯಾತ್ರೆಯ ಹಾನಗಲ್‌ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ಸಿ.ಎಂ.ಉದಾಸಿ ಅವರನ್ನು ಬಿಎಸ್‌ವೈ ಘೋಷಿಸಿದ್ದಾರೆ. ಹೀಗಾಗಿ ಈ ನಾಯಕರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಆಕಾಂಕ್ಷಿಗಳ ಸಂಖ್ಯೆಗೆನೂ ಕಡಿಮೆ ಇಲ್ಲ. ಈಗಾಗಲೇ ಎರಡೂ ಪಕ್ಷಗಳ ವರಿಷ್ಠರು ಘೋಷಿಸಿರುವ ಅಭ್ಯರ್ಥಿ ಆಯ್ಕೆಯನ್ನು ತಮ್ಮದೆ ಅರ್ಥದಲ್ಲಿ ಆಕಾಂಕ್ಷಿಗಳು ಅಲ್ಲಗಳೆಯುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡು: ಹಾನಗಲ್‌ ಮತ್ತು ಹಾವೇರಿ ಸಾಧನಾ ಸಮಾವೇಶದಲ್ಲಿ ಸಿ.ಎಂ.ಸಿದ್ದರಾಮಯ್ಯ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೆ ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಅವರನ್ನು ಮುತ್ತಿಕೊಂಡ ಇಲ್ಲಿನ ಟಿಕೆಟ್ ಆಕಾಂಕ್ಷಿಗಳು ಅಭ್ಯರ್ಥಿ ಬದಲಾವಣೆಯ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಸಮೀಕ್ಷೆ ನಡೆಸಿ ಅಭ್ಯರ್ಥಿ ಅಂತಿಮಗೊಳಿಸುವ ಸಿದ್ದರಾಮಯ್ಯವರ ಹೇಳಿಕೆ ಆಕಾಂಕ್ಷಿಗಳಲ್ಲಿ ಆಶಯ ಮೂಡಿಸಿದೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಪಕ್ಷವನ್ನು ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡ ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ, ನಿರಂತರ ಚಟುವಟಿಕೆಯಲ್ಲಿದ್ದಾರೆ. ಪಕ್ಷದ ಹುದ್ದೆ, ಅಧಿಕಾರಕ್ಕೆ ಈತನಕ ಲಾಬಿ ನಡೆಸದ ಬಿ.ಶಿವಪ್ಪ ಶಾಸಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ವರಿಷ್ಠರೊಡನೆ ಉತ್ತಮ ಸಂಪರ್ಕ, ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಪಕ್ಷದಲ್ಲಿನ 20 ವರ್ಷದ ಸೇವಾ ಜೇಷ್ಠತೆ ಆಧಾರದ ಮೇಲಿಂದ ಟಿಕೆಟ್‌ ಗಿಟ್ಟಿಸುವ ಉಮೇದಿಯಲ್ಲಿದ್ದಾರೆ.

ರಾಜಕೀಯ ಹಿನ್ನೆಲೆಯುಳ್ಳ ಎ.ಎಂ.ಪಠಾಣ ಮತ್ತು ಯಾಸೀರ್‌ಖಾನ್‌ ಪಠಾಣ ಈ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಪಕ್ಷ ಮನ್ನಣೆ ನೀಡಲಿದೆ ಎಂಬ ಆಶಯದೊಂದಿಗೆ ತಾವೂ ಪ್ರಬಲ ಆಕಾಂಕ್ಷಿ ಎಂದು ಘೋಷಿಸಿಕೊಂಡಿದ್ದಾರೆ.

ಅಕ್ಕಿಆಲೂರ ಬ್ಲಾಕ್‌ ಕಾಂಗ್ರೆಸ್‌ನಲ್ಲಿ ಸಂಘಟನೆ ಮಾಡಿ ತೋರಿಸಿರುವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಯೋಗಿ ಹಿರೇಮಠ ಟಿಕೆಟ್‌ ಗಿಟ್ಟಿಸುವ ನಿಟ್ಟಿನಲ್ಲಿ ವರಿಷ್ಠರ ಗಮನ ಸೆಳೆದಿದ್ದಾರೆ. ಸರ್ಕಾರಿ ನೌಕರಿಗೆ ಸ್ವಯಂ ನಿವೃತ್ತಿ ಘೋಷಿಸಿಕೊಂಡು ಚುನಾವಣಾ ಅಖಾಡಕ್ಕೆ ಇಳಿಯುವ ಪೂರ್ವ ತಯಾರಿಗಾಗಿ ಸಮಾಜ ಸಂಘಟನೆಯಲ್ಲಿ ತೊಡಗಿರುವ ಚಂದ್ರಪ್ಪ ಜಾಲಗಾರ ಒಂದು ಸುತ್ತಿನ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಬಿಜೆಪಿಯಲ್ಲೂ ಆಕಾಂಕ್ಷಿಗಳು: ಕಳೆದ ಬಾರಿ ಬಿಜೆಪಿ–ಕೆಜೆಪಿ ಬೇರ್ಪಟ್ಟಾಗ ಬಿಜೆಪಿ ಅಭ್ಯರ್ಥಿಯಾಗಿ ಕೆಜೆಪಿ ಸೋಲಿಗೆ ಕಾರಣವಾಗುವಷ್ಟು ಮತಗಳನ್ನು ಸೆಳೆದಿದ್ದ ಅನುಭವಿ ರಾಜಕಾರಣಿ ಬಸವರಾಜ ಹಾದಿಮನಿ ‘ಈ ಬಾರಿಯೂ ನಾನೇ ಅಭ್ಯರ್ಥಿ’ ಎಂದು ಹೇಳಿಕೊಂಡಿದ್ದಾರೆ. ಪಕ್ಷದ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ. ವರಿಷ್ಠರ ಜೊತೆಗಿನ ಬಾಂಧವ್ಯ, ಸಂಘದಲ್ಲಿನ ನಿಷ್ಠೆ ಟಿಕೆಟ್‌ಗೆ ದಾರಿ ಮಾಡಿಕೊಡಲಿದೆ ಎಂಬ ನಂಬಿಕೆಯಲ್ಲಿದ್ದಾರೆ.

ಜೆಡಿಎಸ್‌ನಲ್ಲೂ ಆಕಾಂಕ್ಷಿಗಳ ಪಟ್ಟಿ ಗರಿಗೆದರಿದೆ. ಗ್ರಾಮೀಣ ಭಾಗದಲ್ಲಿ ಬೂತ್‌ ಸಮಿತಿ ರಚನೆ ಮೂಲಕ ಪಕ್ಷ ಸಂಘಟನೆಗೆ ತಾಲ್ಲೂಕು ಘಟಕದ ಅಧ್ಯಕ್ಷ ಎನ್‌.ಎಸ್‌.ಪಡೆಪ್ಪನವರ ಮುಂದಾಗಿದ್ದಾರೆ. ಕಾರ್ಯಾಧ್ಯಕ್ಷ ಖ್ವಾಜಾಮೊದ್ಧಿನ್‌ ಅಣ್ಣಿಗೇರಿ ಪ್ರಬಲ ಆಕಾಂಕ್ಷಿಯಾಗಿ ಮುಂಚೂಣಿಯಲ್ಲಿದ್ದಾರೆ.

ಮುಂದುವರಿದ ಆಕಾಂಕ್ಷಿಗಳ ಆಂತರಿಕ ಪ್ರಯತ್ನ

1978 ರಿಂದ ಸತತ 9 ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾದ ಮನೋಹರ ತಹಸೀಲ್ದಾರ್‌ ಅವರನ್ನು ಬದಲಾಯಿಸಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದ ಆಕಾಂಕ್ಷಿಗಳು ಮತ್ತು ಶಾಸಕ ತಹಸೀಲ್ದಾರ್ ಈಚೆಗೆ ಜೊತೆಗೂಡಿ ಸಂಧಾನ ಸಭೆ ನಡೆಸಿದ್ದಾರೆ. ಪಕ್ಷದ ವರ್ಚಸ್ಸಿಗೆ ಹಾನಿಯಾಗದಂತೆ ವರ್ತಿಸುವ ಕುರಿತು ನಿರ್ಧರಿಸಿದ್ದಾರೆ. ಆಕಾಂಕ್ಷಿಗಳ ಪ್ರಯತ್ನ ಆಂತರಿಕವಾಗಿ ಮುಂದುವರಿದಿದೆ. ಇತ್ತ ಕೆಜೆಪಿ,- ಬಿಜೆಪಿ ಎಂಬ ಒಳ ಬೇಗುದಿಯು, ಗುಪ್ತಗಾಮಿನಿಯಂತಿದೆ.

2013ರ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಗಳು ಪಡೆದ ಮತ ಪ್ರಮಾಣ
ಮನೋಹರ ತಹಸೀಲ್ದಾರ್‌ (ಕಾಂಗ್ರೆಸ್‌)– 66,324
ಸಿ.ಎಂ.ಉದಾಸಿ (ಕೆಜೆಪಿ)–60,638
ಬಸವರಾಜ ಹಾದಿಮನಿ (ಬಿಜೆಪಿ)–7,052
ಮೋಹನಕುಮಾರ ಬಿ.ಕೆ. (ಜೆಡಿಎಸ್‌)–4,723
ಚಲಾವಣೆಯಾದ ಮತಗಳು–1,44,395

ಮತದಾರರ ವಿವರಗಳು (ಈ ಪೈಕಿ ಮಹಿಳಾ ಮತದಾರರು)
2013ರಲ್ಲಿ ಮತದಾರರು–1,67,845 (78,376)
2018ರಲ್ಲಿ ಮತದಾರರು–1,87,130 (88,758)
ಒಟ್ಟು ಮತದಾರರ ಹೆಚ್ಚಳ–19,285 (10,382)

ಅಂಕಿ–ಅಂಶ:
ಮತಗಟ್ಟೆಗಳು–239
ಗ್ರಾಮ ಪಂಚಾಯ್ತಿಗಳು–42
ಗ್ರಾಮಗಳು–153
ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು–6
ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳು–23
ಎಪಿಎಂಸಿ–17
ಪುರಸಭೆ–1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT