ಮಂಗಳವಾರ, ಜೂನ್ 22, 2021
21 °C

ಕರ್ನಲ್‌ಗೆ ಕುತ್ತು ತಂದ ಪತ್ನಿಯ ಚೆಲುವು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಲ್‌ಗೆ ಕುತ್ತು ತಂದ ಪತ್ನಿಯ ಚೆಲುವು !

ಟಿ.ರಾಜಾರಾಂ

ಕರ್ನಾಟಕವನ್ನು ಚಿನ್ನದ ನಾಡು ಎಂದು ಕರೆಯುವುದಕ್ಕೆ ಕಾರಣ ಕೋಲಾರ ಗೋಲ್ಡ್‌ ಫೀಲ್ಡ್‌ನಲ್ಲಿದ್ದ (ಕೆಜಿಎಫ್‌) ಚಿನ್ನದ ಗಣಿಗಳು. ಇಲ್ಲಿ ಚಿನ್ನ ಸಿಗುವ ಕುರುಹುಗಳನ್ನು ಪತ್ತೆಹಚ್ಚಿ ಗಣಿಗಾರಿಕೆ ಶುರು ಮಾಡಿದವರು ಬ್ರಿಟಿಷರು. 1890ಕ್ಕೂ ಮೊದಲೇ ಈ ಪ್ರದೇಶದಲ್ಲಿ ಚಿನ್ನ ಸಿಗುವ ಸುಳಿವು ಗೊತ್ತಿದ್ದರೂ ಅದಕ್ಕೊಂದು ಕಾರ್ಖಾನೆಯ ಸ್ವರೂಪ ಕೊಟ್ಟು, ಆಳದ ಗಣಿಗಳಿಂದ ಚಿನ್ನ ಹೊರತೆಗೆದು ಇಂಗ್ಲೆಂಡಿಗೆ ಸಾಗಿಸಿದವರು ಈ ಫರಂಗಿಗಳು. ಜಾನ್‌ ಟೇಲರ್‌ ಎಂಬ ಗಣಿ ಎಂಜಿನಿಯರ್‌ ಪ್ರಥಮ ಬಾರಿಗೆ ಅತ್ಯಂತ ಆಳಕ್ಕೆ ಗಣಿ ಕೊರೆದು ಸರಿಸುಮಾರು 800 ಟನ್‌ಗಳಷ್ಟು ಬಂಗಾರವನ್ನು ಬಗೆದು ಬ್ರಿಟಿಷ್‌ ರಾಣಿಯ ಖಜಾನೆಗೆ ರವಾನಿಸಿದ್ದ!

ನಾವೀಗ ಕೆಜಿಎಫ್‌ ಅನ್ನು ಹೊಕ್ಕರೆ ಕಾಣಸಿಗುವುದು ಗತವೈಭವದ ಕುರುಹುಗಳು, ಟೌನ್‌ಶಿಪ್‌ನ ದಶದಿಕ್ಕುಗಳಲ್ಲಿ ಪಾಳುಬಿದ್ದ ಮನೆಗಳು ಮತ್ತು ಮುರಿದು ಬಿದ್ದಿರುವ ಮುದಿ ಮನಸ್ಸುಗಳು!.

ಈ ಮೊದಲು ಇಲ್ಲೆಲ್ಲಾ ಚಾಂಪಿಯನ್‌ ರೀಫ್ಸ್‌ ಮೈನ್ಸ್, ಗೋಲ್ಕಂಡಾ ಮೈನ್ಸ್‌, ಜಿಫರ್ಡ್‌ ಶಾಫ್ಟ್‌ ಮೈನ್ಸ್, ಊರಿಗಾಂವ್‌ ಮೈನ್ಸ್‌, ನಂದಿದುರ್ಗ ಮೈನ್ಸ್‌, ಬಿಸಾನತ್ತಮ್‌ ಮೈನ್ಸ್‌, ಯಪ್ಪಮಾನ ಮೈನ್ಸ್‌, ಮೈಸೂರು ಮೈನ್ಸ್‌ ಮೊದಲಾದ ಹೆಸರಿನ ಅನೇಕ ಗಣಿ ಪ್ರದೇಶಗಳಿದ್ದವು. ಚಿನ್ನದ ದುರ್ಲಭತೆ ಹಾಗೂ ನಷ್ಟದಿಂದಾಗಿ ಇವುಗಳನ್ನೆಲ್ಲಾ 2001ರ ಮಾರ್ಚ್‌ 1ರಂದು ಮುಚ್ಚಲಾಯಿತು.

ಈ ಎಲ್ಲಾ ಗಣಿಗಳಲ್ಲಿ ಜಿಫರ್ಡ್‌ ಶಾಫ್ಟ್‌ ಫಲವತ್ತಾದ ಗಣಿ. ಪ್ರಪಂಚದಲ್ಲೇ ಅತ್ಯಂತ ಆಳವಾದ ಚಿನ್ನದ ಗಣಿ ಎಂಬ ಹೆಸರೂ ಇದಕ್ಕಿತ್ತು. ಇಲ್ಲಿ ಏನಿಲ್ಲವೆಂದರೂ 15,000 ಅಡಿಗಳಷ್ಟು ಆಳಕ್ಕೆ ಇಳಿದು ಗಣಿಗಾರಿಕೆ ನಡೆಸಲಾಗುತ್ತಿತ್ತು. ಗಣಿಯನ್ನೇ ನಂಬಿ ಜೀವನ ಮಾಡಿದವರ ಸಂಖ್ಯೆ ಹತ್ತಿರತ್ತಿರ 35 ಸಾವಿರ. ಈಗ ಇವರಲ್ಲಿ ಬಹುತೇಕರು ಅಲ್ಲಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬದುಕಿನ ಬಂಡಿ ನೂಕುತ್ತಿದ್ದಾರೆ.

ಸರಿಸುಮಾರು ಒಂದು ಶತಮಾನದ ಕಾಲ ಗಣಿ ಸಾಮ್ರಾಜ್ಯದ ಅನಭಿಷಿಕ್ತ ದೊರೆಯಾಗಿ ಮೆರೆದ ಭಾರತ್ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ ಕಂಪನಿ (ಬಿಜಿಎಮ್‌ಎಲ್‌) ತನ್ನ ಒಡಲಲ್ಲಿ ಅನೇಕ ಕುತೂಹಲಕಾರಿ ಸಂಗತಿಗಳನ್ನು ಹುದುಗಿಸಿಕೊಂಡಿದೆ. 1980ರ ದಶಕದಲ್ಲಿ ನಡೆದ ಅಂತಹ ಒಂದು ತುಣಕು ಇಲ್ಲಿದೆ.

ಕರ್ನಲ್‌ ಜೋಸೆಫ್‌ ನಿವೃತ್ತ ಸೇನಾಧಿಕಾರಿ. 1971ರಲ್ಲಿ ಭಾರತ ಪಾಕಿಸ್ತಾನಗಳ ನಡುವೆ ನಡೆದ ಯುದ್ಧದಲ್ಲಿ ಕಾದಾಡಿ ಪಾಕಿಸ್ತಾನದ ಸೈನ್ಯ ಮತ್ತು ಟ್ಯಾಂಕರ್‌ಗಳನ್ನು ಪುಡಿಗಟ್ಟಿದ ಪರಾಕ್ರಮಿ. ಶತ್ರುಗಳಿಗೆ ಮಣ್ಣುಮುಕ್ಕಿಸಿದ ಭಾರತೀಯ ಸೇನಾಪಡೆಯ ಮುಂಚೂಣಿಯಲ್ಲಿ ಇದ್ದವರು. ಇವರ ಸಾಹಸಕ್ಕೆ ಭಾರತ ಸರ್ಕಾರ ‘ಯುದ್ಧ ಸೇವಾ ಪದಕ’ ಪ್ರಶಸ್ತಿಯನ್ನೂ ನೀಡಿತ್ತು. ಕರ್ನಲ್‌ ಜೋಸೆಫ್‌ ಸೇನೆಯಿಂದ ನಿವೃತ್ತರಾದ ಮೇಲೆ ಕೆಜಿಎಫ್‌ನಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ನೇಮಕಗೊಂಡರು. ಗಡಿಯನ್ನು ಕಾಯ್ದ ವೀರಯೋಧ ಚಿನ್ನದ ಗಣಿ ರಕ್ಷಣೆಗೆ ಬಂದು ನಿಂತಿದ್ದರು!.

ಸಮೃದ್ಧವಾದ ಚಿನ್ನ ಸಿಕ್ಕುವ ಸ್ಥಳದಲ್ಲಿ ಕಳ್ಳಕಾಕರಿಗೇನೂ ಕಡಿಮೆ ಇರಲಿಲ್ಲ. ಕಾರ್ಮಿಕರು ಸಣ್ಣಪುಟ್ಟ ಚಿನ್ನದ ಚೂರುಗಳನ್ನು ತಮ್ಮ ಬೂಟುಗಳಲ್ಲೊ, ಸಾಕ್ಸಿನಲ್ಲೊ ಅಥವಾ ಒಳ ಉಡುಪಿನಲ್ಲೊ ಹುದುಗಿಸಿಟ್ಟುಕೊಂಡು ಹೊರಗೆ ಸಾಗಿಸುತ್ತಿದ್ದರು. ಇವರಿಗೆಲ್ಲಾ ಅಂದಂದಿನ ಕುಡಿತದ ಮೋಜಿಗೆ ಒಂದು ಚಿನ್ನದ ಚೂರು ಸಿಕ್ಕರೆ ಸಾಕಿತ್ತು. ಅದನ್ನು ಸರಾಫರ ಅಂಗಡಿಯಲ್ಲಿ ಮಾರಿ, ಬಂದ ಹಣದಲ್ಲಿ ಕಂಠಪೂರ್ತಿ ಕುಡಿದು ತೂರಾಡುತ್ತಿದ್ದರು. ಕದ್ದ ಚಿನ್ನದಲ್ಲಿ ಅವರೆಂದೂ ಶ್ರೀಮಂತರಾಗಲಿಲ್ಲ. ಬದಲಿಗೆ ಕೆಜಿಎಫ್‌ ಸುತ್ತಮುತ್ತ ಬಂದು

ನೆಲೆಸಿದ್ದ ಮಾರ್ವಾಡಿಗಳು ಮೈತುಂಬಿಕೊಂಡಿದ್ದರು.

ಗಣಿಯಲ್ಲಿ ನಡೆಯುವ ಅಕ್ರಮಗಳಿಗೆ ಜೋಸೆಫ್‌ ಸಿಂಹಸ್ವಪ್ನವಾಗಿದ್ದರು. ಬಂಗಾರದ ಚೂರುಗಳನ್ನು ಸಾಗಿಸುವಾಗ ಸಿಕ್ಕಿ ಹಾಕಿಕೊಂಡ ಕಾರ್ಮಿಕರಿಗೆ ಯಾವುದೇ ದಾಕ್ಷಿಣ್ಯ ತೋರದೆ ಅವರ ವಿರುದ್ಧ ಕೇಸು ದಾಖಲಿಸುತ್ತಿದ್ದರು. ಅವರನ್ನು ಕೆಲಸದಿಂದ ತೆಗೆಯುವವರೆಗೂ ಬಿಡುತ್ತಿರಲಿಲ್ಲ. ಇವರ ಕಠಿಣ ಕ್ರಮಗಳಿಂದಾಗಿ ಕಂಪನಿಯಲ್ಲಿ ಶಿಸ್ತು ತಾನೇತಾನಾಗಿ ನೆಲೆಗೊಂಡಿತ್ತು.

ದಿನದಿಂದ ದಿನಕ್ಕೆ ಗಣಿಯಲ್ಲಿ ಕಾರ್ಮಿಕರ ಸಂಖ್ಯೆಯೂ ಹೆಚ್ಚುತ್ತಿತ್ತು. ಹೀಗಾಗಿ ಈ ಸಂಖ್ಯೆಗೆ ಅನುಗುಣವಾಗಿ ಮತ್ತೊಬ್ಬ ಅಧಿಕಾರಿಯನ್ನು ಗಣಿ ಸಂರಕ್ಷಣೆಗೆ ನಿಯೋಜಿಸಲಾಯಿತು. ಅವರೂ ನಿವೃತ್ತ ಕರ್ನಲ್‌. ಹೆಸರು ಮುರುಗನ್‌. ಮುರುಗನ್‌ ಆಗಮನದಿಂದಾಗಿ ಜೋಸೆಫ್‌ ಅವರಿಗೆ ಸ್ವಲ್ಪ ವಿಶ್ರಾಂತಿ ದೊರೆಯುವಂತಾಯಿತು. ಇದ್ದ ಕೆಲಸವನ್ನು ಇಬ್ಬರೂ ಹಂಚಿಕೊಂಡು ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದರು. ಇವರಿಬ್ಬರ ಕಾರ್ಯ ವೈಖರಿಯಿಂದ ಕಳ್ಳಕಾಕರ ಉಪಟಳ, ಅಕ್ರಮ ಚಟುವಟಿಕೆ ಬಹುತೇಕ ಸ್ಥಗಿತಗೊಂಡವು.

ಕರ್ನಲ್‌ ಜೋಸೆಫ್‌ರ ಪತ್ನಿ ಮಾರ್ಗರೆಟ್‌ ಅಪ್ರತಿಮ ಚೆಲುವೆ. ಆಕೆಗಾಗ ನಲವತ್ತೈದರ ಆಜುಬಾಜಿನ ಪ್ರಾಯ. ಕಪ್ಪು ಕೂದಲಿನ ಮಧ್ಯೆ ತೆಗೆದ ಬೈತಲೆ. ನೀಲಿ ಕಂಗಳು. ಸದಾ ತೇವಗೊಂಡಂತಿರುತ್ತಿದ್ದ ಮಾದಕ ತುಟಿಗಳು. ದಾಳಿಂಬೆ ಕಾಳು ಪೋಣಿಸಿದಂತಹ ದಂತಪಂಕ್ತಿ. ಇಬ್ಬನಿಯಲ್ಲಿ ಮಿಂದ ಗುಲಾಬಿಯಂತಹ ಮುಖ. ಎತ್ತರದ ನಿಲುವು. ಶಿಲೆಯಲ್ಲಿ ಕಡೆದಂತಹ ಮೈಮಾಟ! ಇಷ್ಟೆಲ್ಲಾ ಅಪರೂಪದ ಚೆಲುವೆ ಮಾರ್ಗರೆಟ್‌ ನಡೆನುಡಿಯಲ್ಲೂ ಕಟ್ಟುನಿಟ್ಟು.

ಕರ್ನಲ್‌ ಮುರುಗನ್‌ ಕೂಡಾ ಶಿಸ್ತುಗಾರನೇ. ಆದರೆ, ಸ್ತ್ರೀ ದೌರ್ಬಲ್ಯದ ಪ್ರಾಣಿ!. ಅದೊಂದು ದಿನ ಮಾರ್ಗರೆಟ್‌ ಅವರನ್ನು ನೋಡಿದ ಕೂಡಲೇ ಮುರುಗನ್‌ ಮೂಕವಿಸ್ಮಿತನಾದ. ಅವನ ಹೊಕ್ಕುಳಿನ ಆಳದಲ್ಲಿ ಬಯಕೆಯ ಚಿಗುರೊಡೆಯಿತು. ಹೇಗಾದರೂ ಸರಿ ಒಮ್ಮೆ ಮಾರ್ಗರೆಟ್‌ ಅವರನ್ನು ಏಕಾಂತದಲ್ಲಿ ಸಂಧಿಸಿ ಪ್ರೇಮ ನಿವೇದನೆ ಮಾಡಲೇಬೇಕೆಂದು ಮೊದಲ ನೋಟದಲ್ಲೇ ನಿರ್ಧರಿಸಿಬಿಟ್ಟ.

‘ರೂಪವತಿಯಾದ ಹೆಂಡತಿ ಶತ್ರುತ್ವಕ್ಕೆ ಕಾರಣಳಾಗುತ್ತಾಳೆ’ ಎಂಬ ಸಂಸ್ಕೃತ ಮಾತೊಂದಿದೆ. ಮುರುಗನ್‌ ಆಕೆಯನ್ನು ನೋಡಿದ ಕೂಡಲೇ ಈ ಮಾತಿಗೆ ಮುನ್ನುಡಿ ಬರೆದಿದ್ದ...!!

ಈ ಇಬ್ಬರೂ ಅಧಿಕಾರಿಗಳ ವಾಸಕ್ಕೆ ಕಂಪನಿ ದೊಡ್ಡ ಬಂಗಲೆಗಳನ್ನು ಕೊಟ್ಟಿತ್ತು. ಅದೊಂದು ದಿನ ಕರ್ನಲ್‌ ಜೋಸೆಫ್‌ ಗಣಿಗಳ ಗಸ್ತಿಗೆಂದು ತಮ್ಮ ಸಿಪಾಯಿಗಳ ಜೊತೆ ಹೊರ ಹೋಗಿದ್ದರು. ಇದೇ ಸಮಯ ಕಾಯುತ್ತಿದ್ದ ಮುರುಗನ್‌, ಜೋಸೆಫ್‌ರ ಬಂಗಲೆ ಪ್ರವೇಶಿಸಿದ. ಮಾರ್ಗರೆಟ್‌ ಬಾಗಿಲು ತೆಗೆಯುತ್ತಿದ್ದಂತೆಯೇ ಒಳ ಬಂದ ಮುರುಗನ್‌ ಅದುಮಿಟ್ಟುಕೊಂಡಿದ್ದ ತನ್ನ ಪ್ರೇಮವನ್ನು ಬಿನ್ನವಿಸಿದ.

ಕೆಲ ಕ್ಷಣ ಮಾರ್ಗರೆಟ್‌ಗೆ ಏನು ಹೇಳಬೇಕೆಂಬುದೇ ತೋಚಲಿಲ್ಲ. ಗರಬಡಿದವಳಂತೆ ನಿಂತುಬಿಟ್ಟಳು. ಈ ಕ್ಷಣಕಾಲದ ಮೌನವನ್ನೇ ಸಮ್ಮತಿ ಎಂಬಂತೆ ಭಾವಿಸಿದ ಮುರುಗನ್‌ ಮಾರ್ಗರೇಟರ ಹಸ್ತಗಳನ್ನು ತನ್ನ ಮುಷ್ಟಿಯಿಂದ ಬಿಗಿಯಾಗಿ ಹಿಡಿದುಕೊಂಡ. ಕಣ್ಣರೆಪ್ಪೆ ಬಡಿಯುವಷ್ಟರಲ್ಲಿ ಹಿಡಿದ ಕೈಯನ್ನು ಝಾಡಿಸಿದ ಮಾರ್ಗರೆಟ್‌ ರಣಚಂಡಿಯಾದಳು. ಅಲ್ಲಿಯೇ ಇದ್ದ ಚಪ್ಪಲಿಯನ್ನು ತೆಗೆದು ಮುರುಗನ್‌ನ ಮುಖಮೂತಿ ನೋಡದೆ ಬಾರಿಸಿಬಿಟ್ಟಳು. ಇದರಿಂದ ವಿಚಲಿತನಾದ ಮುರುಗನ್‌ ಕ್ಷಣಾರ್ಧದಲ್ಲಿ ಸ್ಥಳದಿಂದ ಕಳ್ಳಬೆಕ್ಕಿನಂತೆ ಕಾಲ್ಕಿತ್ತ.

ಗಂಡ ಮನಗೆ ಬರುತ್ತಿದ್ದಂತೆಯೇ ಮಾರ್ಗರೆಟ್‌ ನಡೆದ ಘಟನೆಯನ್ನು ಇಂಚಿಂಚೂ ಅರುಹಿದಳು. ಪತ್ನಿಯ ಮೇಲೆ ಬೆಟ್ಟದಷ್ಟು ನಂಬಿಕೆ ಇರಿಸಿದ್ದ ಜೋಸೆಫ್‌ ಆಕೆಯನ್ನು ತಲೆದಡವಿ ಸಂತೈಸಿ ಮುತ್ತಿಕ್ಕಿದರು. ಆ ದಿನ ಸಂಜೆ ಚರ್ಚ್‌ಗೆ ಹೋಗಿ ನಡೆದ ಘಟನೆಯನ್ನು ಫಾದರ್‌ ಜಾರ್ಜ್‌ ಅವರಿಗೆ ವಿವರಿಸಿದರು. ಫಾದರ್‌ ಕೂಡಾ ಮಾರ್ಗರೆಟ್‌ ಅವರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿದರು.

ಏಟು ತಿಂದ ನಾಗರನಂತಾಗಿದ್ದ ಮುರುಗನ್‌ ನಾಚಿಕೆ ಮತ್ತು ಅಪಮಾನದಿಂದ ಕುದಿಯುತ್ತಿದ್ದ. ಕರ್ನಲ್‌ ಜೋಸೆಫ್ ಅವರಿಗೆ ಮುಖ ತೋರಿಸುವ ಸ್ಥಿತಿಯಲ್ಲಿ ಇರಲಿಲ್ಲ. ದಿಕ್ಕುಗಾಣದೆ 15 ದಿನ ರಜೆ ಪಡೆದು ಊರಿಗೆ ಹೊರಟು ಹೋದ. ಪುನಃ ಕೆಲಸಕ್ಕೆ ಹಾಜರಾದಾಗ ಏನೂ ಆಗಿಯೇ ಇಲ್ಲವೇನೋ ಎಂಬಂತೆ ತನ್ನ ಪಾಡಿಗೆ ತಾನಿದ್ದ. ಜೋಸೆಫ್‌ ಅವರಿಂದ ತಲೆ ತಪ್ಪಿಸಿಕೊಂಡು ಓಡಾಡಲು ಪ್ರಾರಂಭಿಸಿದ. ಇಬ್ಬರ ಮಧ್ಯೆ ಮಾತುಕತೆ ನಿಂತು ಹೋಗಿತ್ತು.

ಹೇಗಾದರೂ ಸರಿಯೇ ಜೋಸೆಫ್ ಮತ್ತು ಮಾರ್ಗರೆಟ್‌ಗೆ ತಕ್ಕಪಾಠ ಕಲಿಸಬೇಕೆಂದು ನಿರ್ಧರಿಸಿ ಅದಕ್ಕಾಗಿ ಹೊಂಚು ಹಾಕುತ್ತಿದ್ದ. ಅವರಿಬ್ಬರೂ ಬಂಗಲೆಯಲ್ಲಿ ಇಲ್ಲದ ಒಂದು ರಾತ್ರಿ ಅವರ ಮನೆಯ ಕಾಂಪೌಂಡಿನಲ್ಲಿ ಜಿಬಿಕ್ಯೂಗಳನ್ನು (Gold bearing Quarts–ಚಿನ್ನದ ಗಟ್ಟಿಗಳು) ಹೂತಿಟ್ಟ. ಮನೆಯ ಚಿಮಣಿಯಲ್ಲೂ ಜಿಬಿಕ್ಯೂ ತುಂಬಿದ ಒಂದು ಬ್ಯಾಗನ್ನು ಇಳಿಬಿಟ್ಟ.

ಮರುದಿನ ಬೆಳಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ದೂರು ನೀಡಿದ. ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ತಕ್ಷಣವೇ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌.ಪಿ) ನೇತೃತ್ವದಲ್ಲಿ ಮನೆಯ ಮೇಲೆ ದಾಳಿ ನಡೆಸಲಾಯಿತು. ಜೋಸೆಫ್ ದಂಪತಿಗೆ ಆಶ್ಚರ್ಯ. ಏನಾಗುತ್ತಿದೆ ಎಂಬುದು ಅವರ ಅರಿವಿಗೆ ಬರುವ ಮುನ್ನವೇ ಮನೆಯನ್ನು ಜಾಲಾಡಿದ ಪೊಲೀಸರು ಕಾಂಪೌಂಡ್ ಮತ್ತು ಚಿಮಣಿ ಪೈಪಿನಲ್ಲಿ ಬಚ್ಚಿಟ್ಟಿದ್ದ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಿದರು. ಪಂಚರ ಸಮಕ್ಷಮ ಅಮಾನತುಪಡಿಸಿಕೊಂಡರು. ಮೈಸೂರು ಗಣಿ ಕಾಯ್ದೆ–1905 ಕಲಂ 5ರ ಅನುಸಾರ ಜಿಬಿಕ್ಯೂ ಗಟ್ಟಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪರಾಧ ಮತ್ತು ಅವುಗಳನ್ನು ಹೊಂದಿದವರು ಶಿಕ್ಷಾರ್ಹರು ಎಂಬ ನಿಯಮದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಜೋಸೆಫ್‌ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಇಲಾಖಾ ವಿಚಾರಣೆಗೂ ಆದೇಶಿಸಲಾಯಿತು.

ದಿನ ಬೆಳಗಾಗುವುದರೊಳಗೆ ಈ ಸುದ್ದಿ ಕೆಜಿಎಫ್ ಸುತ್ತಮುತ್ತ ಕಾಳ್ಗಿಚ್ಚಿನಂತೆ ಹರಡಿತು. ದಿನಪತ್ರಿಕೆಗಳ ಮುಖಪುಟದಲ್ಲೂ ರಾರಾಜಿಸಿತು. ಜನ ಹುಬ್ಬೇರಿಸಿದರು. ಮುರುಗನ್ ಕಡೆಗೂ ತನ್ನ ಸೇಡು ತೀರಿಸಿಕೊಂಡಿದ್ದ.

ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯ, ‘ಯಾವುದೇ ಕೋನದಿಂದ ನೋಡಿದರೂ ಜೋಸೆಫ್ ನಿರಪರಾಧಿ. ಅಪರಾಧವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ’ ಎಂದು ಅವರನ್ನು ಆರೋಪದಿಂದ ಖುಲಾಸೆಗೊಳಿಸಿತು. ಆದರೆ, ಕಂಪನಿ ಕಡೆಯಿಂದ ನಡೆದ ಇಲಾಖಾ ವಿಚಾರಣೆಯಲ್ಲಿ ತಪ್ಪಿತಸ್ಥರೆಂದು ನಿರ್ಧರಿಸಿ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು.

ಆಗ ಸಿಡಿದರು ನೋಡಿ ಬ್ರಿಗೇಡಿಯರ್ ಸ್ಟೀಫನ್. ಬ್ರಿಗೇಡಿಯರ್ ಸ್ಟೀಫನ್‌ ಅವರ ಮಗನೇ ಕರ್ನಲ್ ಜೋಸೆಫ್. ಎಲ್ಲಾ ಘಟನೆಗಳನ್ನು ವಿವರಿಸಿ ಸ್ಟೀಫನ್‌ ಕಂಪನಿಗೆ ಒಂದು ಖಾರವಾದ ಪತ್ರ ಬರೆದರು; ‘ನಾನೊಬ್ಬ ನಿವೃತ್ತ ಬ್ರಿಗೇಡಿಯರ್‌, ನನ್ನ ಮಗನೂ ಕರ್ನಲ್‌ ಆಗಿ ನಿವೃತ್ತನಾದವನು. ಶೂರ, ಧೀರ ಸಾಹಸಿ. ನಾವಿಬ್ಬರೂ ದೇಶಕ್ಕಾಗಿ ಹೋರಾಡಿದವರು. ನಮ್ಮ ಮೈಯ್ಯ ನರನಾಡಿಗಳಲ್ಲಿ ಪ್ರಾಮಾಣಿಕತೆಯ ಪವಿತ್ರ ರಕ್ತ ಹರಿಯುತ್ತಿದೆ. ನೀವು ನನ್ನ ಮಗನ ಮೇಲೆ ಕಳ್ಳತನದ ಆರೋಪ ಹೊರಿಸಿದ್ದೀರಿ. ಇದಕ್ಕೆ ಕಾರಣ ಮುರುಗನ್‌.

ಮುರುಗನ್‌ ನನ್ನ ಸೊಸೆಯನ್ನು ಬಯಸಿದ್ದ. ಇದನ್ನು ಆಕೆ ಪ್ರತಿಭಟಿಸಿ ಅವನಿಗೆ ಚಪ್ಪಲಿಯಿಂದ ಹೊಡೆದು ಅವಮಾನಿಸಿದ್ದಳು. ಇದರ ಸೇಡು ತೀರಿಸಿಕೊಳ್ಳಲು ಮುರುಗನ್‌ ಚಿನ್ನದ ಗಟ್ಟಿಗಳನ್ನು ಅವರ ಬಂಗಲೆಯಲ್ಲಿ ಹುದುಗಿಸಿಟ್ಟಿದ್ದಾನೆ. ಇದು ನಿಮಗೆ ಮನದಟ್ಟಾದರೂ ಅವನ ಕುಕೃತ್ಯ ಮುಚ್ಚಿಹೋಗಿದೆ. ನನ್ನ ಮಗ ನಿರಪರಾಧಿ ಎಂಬುದನ್ನು ಒಂದು ದಿನ ಸಾಬೀತು ಮಾಡಿಯೇ ತೋರಿಸುತ್ತಾನೆ. ನೆನಪಿರಲಿ’ ಎಂದು ಎಚ್ಚರಿಸಿದ್ದರು. ಪತ್ರವನ್ನು ನೋಡಿದ ಕಂಪನಿಯ ಅಧಿಕಾರಿಗಳು ದಂಗು ಬಡಿದು ಹೋಗಿದ್ದರು.

ಇದೇ ವೇಳೆ ಜೋಸೆಫ್‌ ತಮ್ಮನ್ನು ಕೆಲಸದಿಂದ ವಜಾ ಮಾಡಿದ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದರು. ಏಕಸದಸ್ಯ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಾಗ ನಾನು, ‘ನನ್ನ ಕಕ್ಷಿದಾರರ ವಿರುದ್ಧ ಹೊರಿಸಲಾಗಿರುವ ಆರೋಪಗಳೆಲ್ಲಾ ಸುಳ್ಳು. ಕಂಪನಿ ನಡೆಸಿದಂತಹ ಇಲಾಖಾ ವಿಚಾರಣೆಯಲ್ಲಿ ಅವರಿಗೆ ಭಾಗವಹಿಸಲು ಆಗಿಲ್ಲ. ಕಾರಣವೇನೆಂದರೆ, ವಜಾ ಆದೇಶ ಹೊರಡಿಸಿದ ಮೇಲೆ ಕಂಪನಿ ಅವರಿಗೆ ಕಾನೂನು ಪ್ರಕಾರ ನೀಡಬೇಕಾದ ಭತ್ಯೆ ಕೊಟ್ಟಿಲ್ಲ. ಆದ್ದರಿಂದ ಇಲಾಖಾ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಕ್ರಿಮಿನಲ್ ಮೊಕದ್ದಮೆಯಲ್ಲಿ ಮಾಡಿರುವಂತಹ ಆರೋಪಗಳಿಗೂ ಮತ್ತು ಇಲಾಖಾ ವಿಚಾರಣೆಯಲ್ಲಿ ಮಾಡಿರುವಂತಹ ಆರೋಪಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಈಗಾಗಲೇ ಕ್ರಿಮಿನಲ್ ಮೊಕದ್ದಮೆಯಲ್ಲಿ ಖುಲಾಸೆಯಾಗಿರುವ ಕಾರಣ ಇಲಾಖಾ ವಿಚಾರಣೆಗೆ ಯಾವುದೇ ಮಹತ್ವವಿಲ್ಲ’ ಎಂದು ಮನವರಿಕೆ ಮಾಡಿಕೊಟ್ಟೆ.

ಈ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳು ಜೋಸೆಫ್‌ ಅವರ ವಜಾ ಆದೇಶ ರದ್ದುಗೊಳಿಸಿದರು. ‘ಕರ್ನಲ್ ಜೋಸೆಫ್‌ ದೇಶಕ್ಕೆ ಮಾಡಿರುವ ಸೇವೆ ಶ್ಲಾಘನೀಯ. ಇಂತಹವರ ವಿರುದ್ಧ ಹುರುಳಿಲ್ಲದ ಆರೋಪ ಹೊರಿಸಲಾಗಿದೆ. ಕಂಪನಿಯು ಇವರನ್ನು ಮರು ನೇಮಕ ಮಾಡಿಕೊಂಡು ತಡೆಹಿಡಿದಿರುವ ಸಂಬಳ, ಭತ್ಯೆ ಮತ್ತು ಬಾಕಿಯನ್ನು ಶೇ 18ರ ಬಡ್ಡಿ ಸಮೇತ ಹಿಂದಿರುಗಿಸಬೇಕು’ ಎಂದು ಆದೇಶಿಸಿದರು.

ಈ ಆದೇಶವನ್ನು ಪ್ರಶ್ನಿಸಿ ಕಂಪನಿ ಮೇಲ್ಮನವಿ ಸಲ್ಲಿಸಿತು. ಆದರೆ, ವಿಭಾಗೀಯ ನ್ಯಾಯಪೀಠ ಏಕಸದಸ್ಯ ನ್ಯಾಯಪೀಠದ ಆದೇಶವನ್ನೇ ಎತ್ತಿಹಿಡಿಯಿತು. ವಿಭಾಗೀಯ ನ್ಯಾಯಪೀಠದ ಈ ಆದೇಶವನ್ನು ಕಂಪನಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌, ‘ಈ ಪ್ರಕರಣದಲ್ಲಿ ಯಾರದೊ ಕೈವಾಡವಿದ್ದಂತಿದೆ. ಕಂಪನಿಯವರು ಯಾವುದೊ ದುರುದ್ದೇಶ ಇಟ್ಟುಕೊಂಡು ಹಗೆ ಸಾಧಿಸಿರುವುದು ಮೇಲ್ನೋಟಕ್ಕೇ ಕಂಡು ಬರುತ್ತಿದೆ’ ಎಂದು ಸಾರಾಸಗಟಾಗಿ ಈ ಮೇಲ್ಮನವಿಯನ್ನೂ ತಿರಸ್ಕರಿಸಿತು.

ತಮ್ಮನ್ನು ಮಾನಸಿಕ ಕ್ಷೋಭೆಗೆ ದೂಡಿದ್ದ ಕಂಪನಿ ವಿರುದ್ಧ ಜೋಸೆಫ್‌ ತಿರುಗಿಬೀಳಲಿಲ್ಲ. ಯಾವುದೇ ಪರಿಹಾರ ಕೇಳದೆ ಕ್ಷಮಿಸಿಬಿಟ್ಟರು. ಸುಪ್ರೀಂ ಕೋರ್ಟ್‌ ತೀರ್ಪು ಹೊರಬರುತ್ತಿದ್ದಂತೆಯೇ ಬ್ರಿಗೇಡಿಯರ್‌ ಸ್ಟೀಫನ್‌ ಹೇಳಿದ್ದು;

‘God Sees the truth but waits’. (ದೇವರಿಗೆ ಸತ್ಯ ಗೊತ್ತಿರುತ್ತದೆ. ಆದರೆ ಕಾಯುತ್ತಾನೆ)

​ಹೆಸರುಗಳನ್ನು ಬದಲಾಯಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.