ಸೋಮವಾರ, ಜೂಲೈ 13, 2020
22 °C

ಹೆಡ್‌ ಆನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಡ್‌ ಆನ್‌

ಕೆಹಿಟ್‌ ಟೊರ್ಮುಕ್‌ ನಲ್ವತ್ತರ ಆಸುಪಾಸಿನ ವ್ಯಕ್ತಿ. ಮಾದಕ ವ್ಯಸನ, ಮದ್ಯಪಾನಗಳಿಂದ ಜಗತ್ತನ್ನೇ ಮರೆವ ಅಮಲಿನಲ್ಲಿ ಸದಾ ಮುಳುಗಿರುವಾತ. ಒಂದು ರಾತ್ರಿ ಕಾರನ್ನು ಗೋಡೆಗೆ ಗುದ್ದಿ ಸಾಯಲಿಕ್ಕೂ ಪ್ರಯತ್ನಿಸುತ್ತಾನೆ. ಅಲ್ಲಿ ಜರ್ಜರಿತನಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಅವನಿಗೆ ಸಿಬೆಲ್‌ ಎಂಬ ಹುಡುಗಿ ಸಿಗುತ್ತಾಳೆ. ಸಿಗುತ್ತಾಳೆ ಎಂದರೆ ಸುಮ್ಮನೆ ಸಿಗುವುದಲ್ಲ. ಮೊದಲ ಭೇಟಿಯ ಮೊದಲ ಮಾತೇ ‘ನೀನು ಟರ್ಕಿಷ್‌ ಅಲ್ವಾ? ನನ್ನನ್ನು ಮದುವೆ ಆಗ್ತೀಯಾ?’ ಎಂದು ಕೇಳುತ್ತಾಳೆ.

ಹಾಗಂತ ಅವಳಿಗೇನೂ ಅವನ ಮೇಲೆ ಪ್ರೇಮವಿಲ್ಲ. ಹದಿಹರೆಯದ ಹುಡುಗಿಯನ್ನು ಆಕರ್ಷಿಸುವ ರೂಪು, ವ್ಯಕ್ತಿತ್ವವೂ ಆತನದಲ್ಲ. ಅವಳಿಗೆ ಸ್ವಾತಂತ್ರ್ಯದ ಬದುಕು ಬೇಕು. ಮದುವೆಯಾಗಿ ಒಬ್ಬನೇ ಪುರುಷನೊಂದಿಗೆ ಬದುಕಲು ಇಷ್ಟವಿಲ್ಲ. ಆಯಾ ಕ್ಷಣಕ್ಕೆ ಇಷ್ಟವಾಗುವ ಪುರುಷನೊಂದಿಗೆ ಮಲಗಿ ಎದ್ದು ಹೋಗುತ್ತೇನೆ. ಯಾರಿಗೂ ಅಂಟಿಕೊಳ್ಳಲಾರೆ ಎಂಬ ಮನಸ್ಥಿತಿ ಅವಳದು. ಆದರೆ ಮನೆಯಲ್ಲಿ ಮದುವೆಗೆ ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಈ ವ್ಯಕ್ತಿಗೆ ‘ನಾವಿಬ್ಬರೂ ಮದುವೆಯಾಗೋಣ. ಲೋಕದ ಕಣ್ಣಿಗೆ ಗಂಡ ಹೆಂಡತಿ. ಆದರೆ ನಾವಿಬ್ಬರೂ ರೂಮ್‌ಮೇಟ್ ಥರ ಇರೋಣ’ ಎನ್ನುತ್ತಾಳೆ. ಅವನೂ ಒಪ್ಪುತ್ತಾನೆ.

ಹೀಗೆ ಗಂಡು–ಹೆಣ್ಣಿನ ವಿಚಿತ್ರ ಸಂಬಂಧವನ್ನೇ ಕಥನದ ಎಳೆಯಾಗಿರಿಸಿಕೊಂಡು ಎಲ್ಲವನ್ನೂ ಅತಿರೇಕ ದಲ್ಲಿ ಕಟ್ಟುತ್ತ ಹೋಗುವ ಸಿನಿಮಾ ಹೆಡ್‌ ಆನ್‌. ಜರ್ಮನಿಯ ಖ್ಯಾತ ನಿರ್ದೇಶಕ ಫಾತಿಹ್‌ ಅಕಿನ್‌ ನಿರ್ದೇಶ ನದ ಈ ಸಿನಿಮಾ ಹಲವು ದೃಶ್ಯಗಳಲ್ಲಿ ಭಾರತೀಯ ಸಿನಿಮಾಗಳ ಜನಪ್ರಿಯ ಮಾದರಿಗಳನ್ನು ನೆನಪಿಸುತ್ತದೆ.

ಕುಟುಂಬ ವ್ಯವಸ್ಥೆಯನ್ನು ಅದರ ಸೆರಗೊಳಗಿದ್ದು ಕೊಂಡೇ ಧಿಕ್ಕರಿಸುವ, ಗಂಡುಹೆಣ್ಣಿನ ಸಂಬಂಧಗಳನ್ನು ನೈತಿಕತೆಯ ಚೌಕಟ್ಟಿನ ಕಟ್ಟಳೆಯ ಆಚೆಯ ಬೆಳಕಲ್ಲಿ ನೋಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ‘ನಾವು ಸಹವಾಸಿಗಳಷ್ಟೇ’ ಎಂದು ಒಂದೇ ಮನೆಯಲ್ಲಿ ಇರಲು ಆರಂಭಿಸಿದ ನಾಯಕ ನಾಯಕಿ ನಡುವೆ ಗೊತ್ತಿಲ್ಲದೇ ಪ್ರೇಮದ ಮೊಗ್ಗು ಅರಳತೊಡಗುತ್ತದೆ. ಅದು ಹೂವಾಗಿ ಅರಳಬೇಕೆನ್ನುವಷ್ಟರಲ್ಲಿ ನಾಯಕ ಜಗಳ ದಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು ಜೈಲಿಗೆ ಹೋಗುತ್ತಾನೆ.

‘ನಾನು ನಿನಗೋಸ್ಕರ ಕಾಯುತ್ತೇನೆ’ ಎಂದ ಸೆಬಿಲ್‌, ಬದುಕಿನ ಅನಿವಾರ್ಯತೆಯಲ್ಲಿ ಮತ್ತೊಬ್ಬ ನೊಂದಿಗೆ ಸಂಸಾರ ಹೂಡುತ್ತಾಳೆ. ಜೈಲಿನಿಂದ ಹೊರ ಬಂದ ಕೆಹಿಟ್‌, ಸೆಬಿಲ್‌ಳನ್ನು ಹುಡುಕಿಕೊಂಡು ಬರು ತ್ತಾನೆ. ಈಗ ಅವಳಿಗೆ ಮತ್ತೊಂದು ಮಗುವೂ ಇದೆ. ಕುಟುಂಬದ ಚೌಕಟ್ಟನ್ನು ಮುರಿದು, ಸಂಬಂಧದ ಹೊಸ ವಿನ್ಯಾಸಗಳನ್ನು ಹುಡುಕುವ ನಿರ್ದೇಶಕರು ಮತ್ತೆ ಕೌಟುಂಬಿಕ ಮೌಲ್ಯಗಳನ್ನೇ ಎತ್ತಿಹಿಡಿಯುತ್ತಾರೆ.

ರಕ್ತಸಿಕ್ತ ದೃಶ್ಯ, ಪಾತ್ರಗಳ ವರ್ತನೆ, ಹಿನ್ನೆಲೆ ಸಂಗೀತ ಎಲ್ಲವನ್ನೂ ಕೊಂಚ ಅತಿರೇಕದಲ್ಲಿಯೇ ಹೆಣೆದಿದ್ದಾರೆ ನಿರ್ದೇಶಕರು. ಪ್ರೇಮವೈಫಲ್ಯ, ಕೌಟುಂಬಿಕ ಮೌಲ್ಯಗಳ ಪ್ರತಿಪಾದನೆ, ಸಂಬಂಧಗಳ ಭಾವುಕ ಪಾತಳಿ ಹೀಗೆ ಹಲವು ದೃಷ್ಟಿಯಿಂದ ಭಾರತೀಯ ಸಿನಿಮಾಗಳ ಜನಪ್ರಿಯ ಸೂತ್ರಗಳನ್ನು ನೆನಪಿಸಿದರೂ ಅವುಗಳನ್ನು ಹೆಣೆದ ಕೌಶಲ ಚಿತ್ರವನ್ನು ಭಿನ್ನವಾಗಿಸುತ್ತದೆ. ಈ ಚಿತ್ರ ವನ್ನು https://goo.gl/wzr8Br ಕೊಂಡಿ ಬಳಸಿ ನೋಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.