ಬುಧವಾರ, ಆಗಸ್ಟ್ 5, 2020
21 °C
ನಗರಳ್ಳಿ ಗ್ರಾಮ: 400 ವರ್ಷಗಳ ಇತಿಹಾಸವುಳ್ಳ ಕೂತಿನಾಡು ಸುಗ್ಗಿಗೆ ಹರಿದುಬಂದ ಭಕ್ತ ಸಾಗರ

ಹಗಲು ಸುಗ್ಗಿ ಕಂಡು ಸಂತಸಗೊಂಡ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗಲು ಸುಗ್ಗಿ ಕಂಡು ಸಂತಸಗೊಂಡ ಭಕ್ತರು

ಸೋಮವಾರಪೇಟೆ: ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ನಗರಳ್ಳಿ ಗ್ರಾಮದಲ್ಲಿ 12 ದಿನಗಳ ಕಾಲ ನಡೆದ ಐತಿಹಾಸಿಕ ಕೂತಿನಾಡು ಸುಗ್ಗಿಗೆ ಸೋಮವಾರ ಹಗಲು ಸುಗ್ಗಿಯೊಂದಿಗೆ ತೆರೆ ಎಳೆಯಲಾಯಿತು.

ಕೊನೆಯ ದಿನವಾದ ಸೋಮವಾರ ಕೂತಿನಾಡಿಗೆ ಸೇರಿದ 18 ಗ್ರಾಮಗಳ ನಿವಾಸಿಗಳು ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಬೆಳಿಗ್ಗೆ ಸುಗ್ಗಿ ಬನದ ಸಮೀಪ ಇರುವ ಬಿಲ್ಲ ರಂಗದಲ್ಲಿ ಪೂರ್ವಜರ ಜೀವನ ಪದ್ಧತಿಯನ್ನು ಬಿಂಬಿಸುವ ನೃತ್ಯ ಪ್ರಕಾರ, ಕಡವೆ ಬೇಟೆಯಾಡುವ ಪ್ರಸಂಗ, ಬೇಟೆಗಾರರ ತಂಡದ ಸದಸ್ಯರಿಗೆ ಕಡವೆ ಒದೆಯುವುದು. ಕೊನೆಯಲ್ಲಿ ಕಡವೆ ಕಾಡು ಸೇರುವ ಮೂಲಕ, ಬೇಟೆಗಾರರಿಂದ ಬಚಾವಾಗುವ ಪರಿ. ನಂತರ ಸುಗ್ಗಿ ಕುಣಿತ, ಸುಗ್ಗಿಹಾಡು, ಬಿಲ್ಲು ತೂಗುವುದು ಸೇರಿದಂತೆ ವಿವಿಧ ಜಾನಪದ ನೃತ್ಯಗಳು ಗಮನ ಸೆಳೆಯುತ್ತವೆ.

18 ಗ್ರಾಮಗಳ ನವದಂಪತಿ ಮದುವೆ ಕಾಣಿಕೆ ಸಲ್ಲಿಸಿದರು. ಹರಕೆ ತೀರಿಸುವುದು ಮತ್ತು ಹರಕೆ ಮಾಡಿಕೊಳ್ಳುವ ಕಾರ್ಯಗಳು ನಡೆದವು. ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಓಡಳ್ಳಿ ಗ್ರಾಮಗಳ ಮುಖ್ಯಸ್ಥರು ಗ್ರಾಮದೇವತೆಗೆ ಪಟ್ಟ ಒಪ್ಪಿಸಿ, ಸಾಮೂಹಿಕ ಪೂಜೆ ನೆರವೇರಿಸಿದರು.

ಕೂತಿನಾಡು ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಟಿ.ಜೋಯಪ್ಪ ಸುಗ್ಗಿ ಕಟ್ಟೆಯ ಮುಖ್ಯರಂಗದಲ್ಲಿ ಈಡುಗಾಯಿ ಒಡೆದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಶಾಸಕ ಅಪ್ಪಚ್ಚು ರಂಜನ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮುಖಂಡರಾದ ಪರಮೇಶ್, ಎನ್.ಕೆ.ಪ್ರಕಾಶ್, ಕಾರ್ಯದರ್ಶಿ ಎನ್.ಬಿ.ಧರ್ಮಪ್ಪ, ಖಜಾಂಚಿ ಎಲ್.ಪಿ.ಈರಪ್ಪ, ಪ್ರಮುಖರಾದ ಎಚ್.ಪಿ.ಗೋಪಾಲ ಸುಗ್ಗಿಯ ಉಸ್ತುವಾರಿ ವಹಿಸಿದ್ದರು.

ಸುಗ್ಗಿ ಉತ್ಸವಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಕುಟುಂಬ ಸಮೇತ ತವರಿನ ಸುಗ್ಗಿಯಲ್ಲಿ ಭಾಗವಹಿಸುತ್ತಾರೆ, ಅದರಲ್ಲೂ ಹೆಣ್ಣು ಮಕ್ಕಳಿಗೆ ವಿಶೇಷ ಹಬ್ಬ.

ಕೊನೆ ದಿನ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಮೂಲಕ ಸುಗ್ಗಿ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.