ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಹ್ಯಾಟ್ರಿಕ್‌ ನಿರೀಕ್ಷೆಗೆ ಕಾಂಗ್ರೆಸ್‌– ಜೆಡಿಎಸ್‌ ತಡೆಯೊಡ್ಡಬಲ್ಲವೇ?

ಬಸವನಗುಡಿ ವಿಧಾನಸಭಾ ಕ್ಷೇತ್ರ
Last Updated 11 ಏಪ್ರಿಲ್ 2018, 20:29 IST
ಅಕ್ಷರ ಗಾತ್ರ

ಮೂಲ ಬೆಂಗಳೂರಿನ ಸೊಗಡು ಉಳಿಸಿಕೊಂಡಿರುವ ನಗರದ ಕೆಲವೇ ಬಡಾವಣೆಗಳಲ್ಲಿ ಬಸವನಗುಡಿ ಪ್ರಮುಖವಾದುದು. ಇಲ್ಲಿನ ಬೀದಿ, ದೇವಸ್ಥಾನ, ಮಾರುಕಟ್ಟೆ, ಉದ್ಯಾನ ಮತ್ತು ಮನೆಗಳು ಹಳೆ ಸೊಬಗನ್ನು ನೆನಪಿಸುತ್ತವೆ. ಬಸವನಗುಡಿ ವಿಧಾನಸಭಾ ಕ್ಷೇತ್ರ ರಾಜಕೀಯ
ವಾಗಿ ಮಹತ್ವ ಪಡೆದಿರುವ ಕ್ಷೇತ್ರ. ಹೆಚ್ಚು ಸುಶಿಕ್ಷಿತರು, ರಾಜಕೀಯ ಪ್ರಜ್ಞಾವಂತಿಕೆ ಬೆಳೆಸಿಕೊಂಡಿರುವವರೇ ಇಲ್ಲಿ ಹೆಚ್ಚು. ಬ್ರಾಹ್ಮಣ ಕ್ಷೇತ್ರ ಎನಿಸಿಕೊಂಡರೂ ಇತರ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಗಳೇ ಇಲ್ಲಿ ಹೆಚ್ಚು ಗೆಲುವು ಸಾಧಿಸಿದ್ದಾರೆ.

ಇದು ಕಾಂಗ್ರೆಸ್‌ ವಿರೋಧಿ ಮತಗಳ ಭದ್ರ ಕೋಟೆ. ಹಿಂದೆ ಜನತಾ ಪರಿವಾರದ ಕೈಯಲ್ಲಿದ್ದ ಕ್ಷೇತ್ರವನ್ನು 1994 ರ ಬಳಿಕ ಕಮಲ ಪಕ್ಷ ಕಸಿದು
ಕೊಂಡಿತು. ಅಚ್ಚರಿ ಎಂದರೆ, 1972ರಲ್ಲಿ ಈ ಕ್ಷೇತ್ರದ ಹಿಡಿತವನ್ನು ಕಳೆದುಕೊಂಡ ಕಾಂಗ್ರೆಸ್‌ ಆ ಬಳಿಕ ಗೆದ್ದಿದ್ದು  2004 ರಲ್ಲಿ ಮಾತ್ರ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ 1985 ಮತ್ತು 1989 ರಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1994 ರಲ್ಲಿ ಎಚ್‌.ಎನ್‌.ನಂಜೇಗೌಡ ಸ್ಪರ್ಧಿಸಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವು ತಂದುಕೊಟ್ಟರು. 1999 ರಲ್ಲಿ ಅದೇ ಪಕ್ಷದ ಕೆ.ಎನ್‌.ಸುಬ್ಬಾರೆಡ್ಡಿ, 2004 ರಲ್ಲಿ ಕಾಂಗ್ರೆಸ್‌ನ ಕೆ.ಚಂದ್ರ
ಶೇಖರ್‌, 2008 ಮತ್ತು 2013 ರಲ್ಲಿ ಬಿಜೆಪಿಯ ರವಿಸುಬ್ರಹ್ಮಣ್ಯ ನಿರಂತರವಾಗಿ ಎರಡು ಬಾರಿ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ
ದ್ದಾರೆ. ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿಗಳ ಕೊರತೆಯಿಂದಾಗಿ ಬಸವನಗುಡಿ ಬಿಜೆಪಿಗೆ ಸುಲಭದ ತುತ್ತಾಗಬಹುದು. ಒಂದು ವೇಳೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿ ಸ್ಪರ್ಧಿಸಿದರೆ ಕಮಲ ಪಕ್ಷಕ್ಕೆ ಗೆಲುವು ಸುಲಭವಲ್ಲ.

ಈ ಕ್ಷೇತ್ರ ಬಸವನಗುಡಿ, ಹನುಮಂತನಗರ, ಶ್ರೀನಗರ, ಗಿರಿನಗರ, ಕತ್ರಿಗುಪ್ಪೆ, ವಿದ್ಯಾಪೀಠ ಬಡಾವಣೆಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಅಭ್ಯರ್ಥಿಯ ಜಾತಿಗಿಂತ ಆತನ ಕ್ಷಮತೆ ನೋಡಿ ಮತ ಹಾಕುತ್ತಾರೆ. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೇ ಇದ್ದರೆ, ಸೋಲಿಸುತ್ತಾರೆ ಎಂಬುದು ಇಲ್ಲಿನ ಮತದಾರರ ಅನಿಸಿಕೆ. ಇದಕ್ಕೆ ಅವರು ನೀಡುವ ಉದಾಹರಣೆ ಹೀಗಿದೆ, ಬಿಜೆಪಿಯ ಕೆ.ಎನ್‌.ಸುಬ್ಬಾರೆಡ್ಡಿ ತೃಪ್ತಿಕರವಾಗಿ ಕೆಲಸ ಮಾಡದಿದ್ದಾಗ ಅವರನ್ನು ಸೋಲಿಸಿದ ಮತದಾರರು ಕಾಂಗ್ರೆಸ್‌ನ ಕೆ.ಚಂದ್ರಶೇಖರ್ ಅವರನ್ನು ಗೆಲ್ಲಿಸಿದರು. ಚಂದ್ರಶೇಖರ್‌ ಬಗ್ಗೆ
ಭ್ರಮನಿರಸನಗೊಂಡಾಗ 2008 ರಲ್ಲಿ ರವಿಸುಬ್ರಹ್ಮಣ್ಯ ಅವರ ಕೈಹಿಡಿದರು. 2013 ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಬಿ.ಕೆ.ಚಂದ್ರಶೇಖರ್‌ ವಿರುದ್ಧ ಕೆ. ಚಂದ್ರಶೇಖರ್‌ ಬಂಡಾಯ ಬಾವುಟ ಹಾರಿಸಿದ್ದರಿಂದ ಬಿಕೆಸಿಗೆ ಹಿನ್ನಡೆ ಆಯಿತು.

2008 ರಲ್ಲಿ ಶೇ 52.11 ರಷ್ಟು ಮತಗಳಿಸಿದ್ದ ರವಿಸುಬ್ರಹ್ಮಣ್ಯ 2013 ರಲ್ಲಿ ಮತಗಳಿಕೆ ಪ್ರಮಾಣ ಕುಸಿದಿತ್ತು. ಈ ಅವಧಿಯಲ್ಲಿ ಜೆಡಿಎಸ್‌ ಮತಗಳಿಕೆ ಹೆಚ್ಚಾಗಿತ್ತು. ಆದ್ದರಿಂದ ಇಲ್ಲಿ ಕೇವಲ ಜಾತಿ ನೋಡಿ ಪಕ್ಷ ನೋಡಿ ಮತ ಹಾಕುತ್ತಾರೆ ಎನ್ನಲು ಸಾಧ್ಯವಿಲ್ಲ. ಎಮರ್ಜೆನ್ಸಿ ಬಳಿಕ ಇದು ಕಾಂಗ್ರೆಸ್‌ ವಿರೋಧಿ ಕ್ಷೇತ್ರ ಎನಿಸಿಕೊಂಡಿತು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ವಹಣೆಯನ್ನು ಅಳತೆಗೋಲಾಗಿ ಇಟ್ಟುಕೊಂಡು ಮತದಾರ ತನ್ನ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂಬುದು ಮತದಾರರ ಅನಿಸಿಕೆ. ‘ಮತದಾನದ ಪ್ರಮಾಣ ಕಡಿಮೆ ಆಗಿದ್ದರಿಂದ ಒಟ್ಟು ಗಳಿಸಿದ ಮತ ಕಡಿಮೆ ಆಯಿತು. ಆದರೆ, 2013 ರಲ್ಲಿ ಮತಗಳಿಕೆಯ ಅಂತರ ಹೆಚ್ಚಾಗಿತ್ತು’ ಎಂದು ರವಿಸುಬ್ರಹ್ಮಣ್ಯ ಸಮಜಾಯಿಷಿ ನೀಡಿದರು.

ಬಿಜೆಪಿಯಿಂದ ರವಿಸುಬ್ರಹ್ಮಣ್ಯ ಅವರಿಗೆ ಟಿಕೆಟ್‌ ಘೋಷಣೆಯಾಗಿದೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್‌, ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಧೀಂದ್ರ, ಪಕ್ಷದ ಐಟಿ ಸೆಲ್‌ನ ಪದಾಧಿಕಾರಿ ನಿರಂಜನರಾವ್‌ ಮತ್ತು ಮಾಜಿ ಮೇಯರ್‌ ಕೆ.ಚಂದ್ರಶೇಖರ್‌ ಹೆಸರು ಕೇಳಿಬಂದಿವೆ. ತಾವು ಈ ಬಾರಿ ಟಿಕೆಟ್‌ಗಾಗಿ ಅರ್ಜಿ ಹಾಕಿಲ್ಲ. ಹಿಂದಿನ ಬಾರಿ ಸ್ಪರ್ಧಿಸಿದಾಗ ಕೆ.ಚಂದ್ರಶೇಖರ್‌ ಬಂಡಾಯ ಬಾವುಟ ಹಾರಿಸುವ ಮೂಲಕ ಸೋಲಿಗೆ ಕಾರಣರಾದರು. ಇದಕ್ಕೆ ಸಂಬಂಧಿಸಿದಂತೆ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಮತ್ತು ಪತ್ರಕ್ಕೆ ಪ್ರತಿಕ್ರಿಯೆಯೂ ಬರಲಿಲ್ಲ ಎಂದು ಪ್ರೊ.ಬಿ.ಕೆ.ಚಂದ್ರಶೇಖರ್‌ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ನಿಂದ ಈ ಬಾರಿ ಬಾಗೇಗೌಡ ಅವರೇ ಕಣಕ್ಕಿಳಿಯಲಿದ್ದಾರೆ.

ನಮ್ಮ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಸಮಸ್ಯೆಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಇತ್ಯಾದಿ ಮೂಲ ಸೌಕರ್ಯ ಉತ್ತಮವಾಗಿಯೇ ಇವೆ. ಭವಿಷ್ಯಕ್ಕಾಗಿ ಅಂತರ್ಜಲವನ್ನು ಭವಿಷ್ಯಕ್ಕೆ ರಕ್ಷಿಸುವ ಕೆಲಸ ಆಗಬೇಕು. ಅದಕ್ಕಾಗಿ ನೀರಿನಾಸರೆಗಳನ್ನು ಸೃಷ್ಟಿಸಿ, ಸಾಧ್ಯವಿರುವ ಎಲ್ಲೆಡೆ ಇಂಗುಗುಂಡಿಗಳನ್ನು ನಿರ್ಮಿಸಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಕೆ.ಎಸ್‌.ನವೀನ್‌.

ಪ್ರಮುಖ ರಸ್ತೆಗಳು ಚೆನ್ನಾಗಿಯೇ ಇದ್ದರೂ ಗಲ್ಲಿ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ. ಇವುಗಳ ಸುಧಾರಣೆ ಆಗಬೇಕು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಓಡಾಡುವ  ವೃದ್ಧರು ಮತ್ತು ಪಾದಾಚಾರಿಗಳಿಗೆ  ಸೌಲಭ್ಯ ಕಲ್ಪಿಸಿಕೊಡಬೇಕು. ಹಿಂದೆ ಡಾ.ಎಚ್. ನರಸಿಂಹಯ್ಯನವರು ನಮ್ಮ ಕಾಲೇಜಿನ ಹತ್ತಿರದ ಗಾಂಧೀ ಬಜಾರ್ ಸೇಂದಿ ಬಜಾರ್ ಆಗಿದೆ ಮಾರ್ಮಿಕವಾಗಿ ಹೇಳುತ್ತಿದ್ದರು. ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಸುರಕ್ಷತೆ ಒದಗಿಸುವ ಕೆಲಸ ಹೆಚ್ಚಿಸುವುದು ಅನಿವಾರ್ಯ ಎಂಬುದು ಅವರ ಅಭಿಪ್ರಾಯ.

ಈ ಕ್ಷೇತ್ರ ಒಟ್ಟಾರೆ ಪರವಾಗಿಲ್ಲ. ಒಂದೆರಡು ಕಡೆಗಳಲ್ಲಿ ಪಾರ್ಕ್‌ ಸಮಸ್ಯೆ ಬಿಟ್ಟರೆ ಉಳಿದಂತೆ ಸಮಸ್ಯೆ ಇಲ್ಲ. ಇಂದಿರಾ ಕ್ಯಾಂಟೀನ್‌ನಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ನಿವಾಸಿ ವಿ.ರಘು ಹೇಳಿದರು.

‘ಬೇಸರದಿಂದ ಹೇಳಬೇಕಾದ ಸಂಗತಿ ಎಂದರೆ, ಆಟದ ಮೈದಾನದ ಕಬಳಿಕೆ ಆಗದೆ. ಚನ್ನಮ್ಮನ ಕೆರೆ ಅಚ್ಚಕಟ್ಟು ಪ್ರದೇಶಕ್ಕೆ ಹೋಗುವಾಗ ಸಿಗುವ ದೇವಸ್ಥಾನವೊಂದರ ಪಕ್ಕದಲ್ಲೇ ಇರುವ ಆಟದ ಮೈದಾನವನ್ನು ದೇವಸ್ಥಾನದ ಆಟದ ಮಂಡಳಿಯವರೇ ಕಬಳಿಸಿದ್ದಾರೆ. ನಾವು ಚಿಕ್ಕವರಿದ್ದಾಗ ಆ ದೊಡ್ಡ ಮೈದಾನದಲ್ಲಿ ಆಟ ಆಡುತ್ತಿದ್ದೆವು. ನೋಡ ನೋಡುತ್ತಿದ್ದಂತೆ ಅದರ ವ್ಯಾಪ್ತಿ ಕಡಿಮೆ ಆಗುತ್ತಾ ಬಂದಿತ್ತು. ಅಂದರೆ, ಅದರ ಕಬಳಿಕೆ ನಡೆಯಿತು. ಇದನ್ನು ತಡೆಯುವ ಪ್ರಯತ್ನ ಆಗಲಿಲ್ಲ. ಇದರಲ್ಲಿ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ’ ಎಂದರು.

ಜೆಡಿಎಸ್‌  ಮತ್ತು ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಗಳು ಇಲ್ಲ. ಹಿಂದೆ ಕೆ.ಚಂದ್ರಶೇಖರ್‌ ಬೆಂಬಲಿಗರ ಹಾವಳಿಯಿಂದ ಹೆಸರು ಕೆಡಿಸಿಕೊಂಡರು. ಕಾಂಗ್ರೆಸ್‌ ಅಥವಾ ಜೆಡಿಎಸ್‌ ಹೆಚ್ಚು ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ, ಬಿಜೆಪಿಗೆ ಪೈಪೋಟಿ ನೀಡಬಹುದು ಎಂಬುದು ರಘು ಅವರ ಅಭಿಪ್ರಾಯ.

‘ಜನರ ಅಪೇಕ್ಷೆಗೆ ತಕ್ಕಂತೆ ಕೆಲಸ’

ಜನರ ಅಪೇಕ್ಷೆಗೆ ತಕ್ಕಂತೆ ನಾವು ಕೆಲಸ ಮಾಡಿದ್ದೇವೆ. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದ್ದೇವೆ. 500 ಕಡೆಗಳಲ್ಲಿ ಸಿಸಿ ಕ್ಯಾಮರಾ ಹಾಕಿಸಿದ್ದೇವೆ. ಹೊಸ ಪಾರ್ಕ್‌ಗಳು ಮತ್ತು ಬಸ್‌ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ಮಳೆ ನೀರು ಹರಿಯುವ ಮೋರಿಗಳಲ್ಲಿ ಶೇ 90 ರಷ್ಟು ಭಾಗ ಸ್ವಚ್ಛತೆ ಮಾಡಲಾಗಿದೆ. ಆದ್ದರಿಂದ ಜನತೆ ಮತ್ತೆ ನನ್ನನ್ನೇ ಆಯ್ಕೆ ಮಾಡುತ್ತಾರೆ ಎಂದು ಶಾಸಕ ರವಿಸುಬ್ರಹ್ಮಣ್ಯ ಹೇಳಿದರು.

* ಕಣಕ್ಕೆ ಇಳಿಯಬೇಕು ಎಂಬ ಒತ್ತಡ ಕಾರ್ಯಕರ್ತರಿಂದ ಇದೆ. ನಾನಾಗಿ ಟಿಕೆಟ್‌ಗೆ ಅರ್ಜಿ ಹಾಕಿಲ್ಲ. ಕೊಟ್ಟರೆ ಸ್ಪರ್ಧಿಸುತ್ತೇನೆ.

-ಪ್ರೊ.ಬಿ.ಕೆ.ಚಂದ್ರಶೇಖರ್‌, ಮಾಜಿ ಸಚಿವ, ಕಾಂಗ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT