ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ

ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ವೈದ್ಯರ ಸಾಧನೆ
Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ರಾಯಚೂರಿನ 44 ವರ್ಷದ ಮಹಿಳೆಯೊಬ್ಬರಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.

ಮಹಿಳೆಯು ಎರಡು ವರ್ಷಗಳಿಂದ ಡಿಲೇಟೆಡ್‌ ಕಾರ್ಡಿಯೋಮಿಯೋಪಥಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೃದಯ ಕಸಿ ಮಾಡಿಸಿಕೊಳ್ಳುವಂತೆ ಹೈದರಾಬಾದ್‌ನ ಅಪೋಲೊ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದರು. ಆದರೆ, ಅವರ ಗಂಡ ಕೃಷಿಕರಾಗಿದ್ದು, ಇಬ್ಬರು ಮಕ್ಕಳು ಓದುತ್ತಿದ್ದಾರೆ. ಹೈದರಾಬಾದ್‌ನ ಕಾರ್ಪೊರೇಟ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿಯಾಗಿದ್ದರಿಂದ ಜಯದೇವ ಆಸ್ಪತ್ರೆಗೆ ಬಂದಿದ್ದರು. ರಾಜ್ಯ ಸರ್ಕಾರದ ‘ಜೀವ ಸಾರ್ಥಕತೆ’ ಯೋಜನೆಯಡಿ ಹೆಸರು ನೋಂದಾಯಿಸಿದ್ದರು. ಮೂರು ತಿಂಗಳ ಬಳಿಕ ಹೃದಯ ಕಸಿಗೆ ಅವಕಾಶ ಸಿಕ್ಕಿತ್ತು.

ಹೆಬ್ಬಾಳದ ಆಸ್ಟರ್‌ ಸಿಎಂಐ ಆಸ್ಪತ್ರೆಯಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯವನ್ನು ಮಾರ್ಚ್‌ 29ರಂದು ಜಯದೇವ ಆಸ್ಪತ್ರೆಗೆ ರವಾನಿಸಲಾಗಿತ್ತು.

ಆಸ್ಪತ್ರೆಯ ಪ್ರೊ.ಸೀರಾರಾಮ ಭಟ್‌ ನೇತೃತ್ವದ ತಂಡವು ನಾಲ್ಕು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಹೃದಯ ಕಸಿ ಮಾಡಿತ್ತು. ತಂಡದಲ್ಲಿ ಅರಿವಳಿಕೆ ತಜ್ಞ ಡಾ.ಎನ್‌.ಮಂಜುನಾಥ್‌, ಸರ್ಜನ್‌ ಡಾ.ಗಿರೀಶ್‌ ಗೌಡ, ಡಾ.ಚಂದನಾ, ಡಾ.ಎಂ.ದಿವ್ಯಾ, ಹೃದ್ರೋಗ ತಜ್ಞರಾದ ಡಾ.ಎಲ್‌.ಶ್ರೀಧರ್‌ ಹಾಗೂ ಡಾ.ರವಿಮಠ ಇದ್ದರು.

ಈಗ ಮಹಿಳೆಯು ಗುಣಮುಖರಾಗಿದ್ದು, ಮಂಗಳವಾರ ಮನೆಗೆ ತೆರಳಿದರು. ಹಾಸನದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಗಂಗಾಧರ್‌ ಎಂಬುವರಿಗೆ ಒಂದೂವರೆ ವರ್ಷದ ಹಿಂದೆ ಹೃದಯ ಕಸಿ ಮಾಡಲಾಗಿತ್ತು.

ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ಕೈಗೆಟುಕುವ ದರಗಳಲ್ಲಿ ನೀಡಲಾಗುತ್ತಿದೆ. ಮಿದುಳು ನಿಷ್ಕ್ರಿಯಗೊಳ್ಳುವ ವ್ಯಕ್ತಿಯ ಪೋಷಕರ ಸಹಕಾರದಿಂದ ಹೃದಯ ಕಸಿ ಮಾಡಲು ಸಾಧ್ಯವಾಗುತ್ತದೆ. ಹೃದಯವನ್ನು ತ್ವರಿತಗತಿಯಲ್ಲಿ ಸಾಗಿಸಲು ಸಂಚಾರ ಪೊಲೀಸರು ಸಹಕರಿಸಿದ್ದರು ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT