ಭಾನುವಾರ, ಸೆಪ್ಟೆಂಬರ್ 27, 2020
24 °C

ಊರೊಳಿದೆ ನನ್ನ ಮನಸು...

ಪ್ರಕಾಶ್ ರೈ Updated:

ಅಕ್ಷರ ಗಾತ್ರ : | |

ಊರೊಳಿದೆ ನನ್ನ ಮನಸು...

ಹೆಂಡತಿಯು ಮಕ್ಕಳೊಂದಿಗೆ ತವರಿಗೆ ಹೋಗಿದ್ದಾಳೆ. ‘ಎಂದೂ ನಿನ್ನಿಂದ ಅಗಲಿರಲಾರೆ’ ಎಂದು ಹೇಳಿದವಳು ಈಗ ಅವಳ ಮನಸ್ಸಿಗೆ ಹಿಡಿಸಿದ ತನ್ನ ಊರಿಗೆ ಹೋಗಿ ನನ್ನನ್ನು ಮರೆತಳೇ? ಬೇರನ್ನು ಹುಡುಕಿಕೊಂಡು ಹೊರಟಂತೆ ತನ್ನ ಊರನ್ನು ಅರಸಿಕೊಂಡು ಹೋದ ಹೆಂಡತಿಗೆ ಪತ್ರ ಬರೆಯುತ್ತಾನೆ ಗಂಡ.

‘ಹೊಸಿಲ ಬಳಿ ಬಂದೊಡನೆ ಬಾಗಿಲನು ತೆರೆವಾಕೆ,

‘ಹೆಸರೇನು?’ ಎನುವಾಕೆ ಮನೆಯೊಳಿಲ್ಲ

ಬಿಸಿಲೊಳಗೆ, ನೆಳಲೊಳಗೆ ಪಕ್ಕದಲಿ ನಗುವಾಕೆ,

ಹಸುರು ಕುಪ್ಪಸದಾಕೆ ಮನೆಯೊಳಿಲ್ಲ

ಎಂದು ಬರುವಳೋ ಕಾಣೆ ನನ್ನೆದೆಯನಾಳುವಾಕೆ’

‘ಹೂವಕ್ಕಾ... ಹೂ...’ ಎಂದು ಹೂವು ಮಾರುವ ಹುಡುಗಿ ಹೊಸ್ತಿಲಲಿ ಕೂಗುತ್ತ ನಿಂತಿದ್ದಾಳೆ. ಅವಳ ಹೂಬುಟ್ಟಿಯಲ್ಲಿಯ ಮಲ್ಲಿಗೆಯೂ ನಮ್ಮ ಮನೆಯ ಬಾಗಿಲಿಗೆ ನಗುತ್ತಲೇ ಬಂದಿದೆ. ಪಕ್ಕದಲ್ಲಿಯೇ ಸಂಪಿಗೆ, ಸೇವಂತಿಗೆ, ಕನಕಾಂಬರ ಹೀಗೆ ಹಲವು ಹೂವುಗಳಿದ್ದರೂ ಮಲ್ಲಿಗೆ ಮಾತ್ರವೇ ಹೆಚ್ಚು ಖುಷಿಯಿಂದಿದೆ. ‘ಅಕ್ಕಂಗೆ ಮಲ್ಲಿಗೆ ಅಂದ್ರೆ ತುಂಬಾ ಇಷ್ಟ. ಅಕ್ಕ ಊರಿಂದ ಬಂದ್ರಾ ಅಯ್ಯಾ?’ ಎಂದು ಮನೆಯೊಳಗೆ ಬಗ್ಗಿ ನೋಡುತ್ತ ಕೇಳುತ್ತಿದ್ದಾಳೆ ಹೂ ಮಾರುವ ಹುಡುಗಿ. ಅವಳಿಗಿಂತ ಮುಂಚೆ ನಿನ್ನನ್ನು ತಾನು ಕಾಣಬೇಕು ಎಂಬ ಕಾತರದಿಂದ ಬಗ್ಗಿ ನೋಡುತ್ತಿದೆ ಮಲ್ಲಿಗೆ. ಹೂವಿನ ಹುಡುಗಿಯ ಪ್ರಶ್ನೆಗೆ ‘ನೀನಿಲ್ಲ’ ಎಂದು ತಲೆಯಾಡಿಸುತ್ತಿದ್ದಂತೆ ಅವಳ ಮುಖ ಬಾಡಿಹೋಯಿತು. ಅವಳು ಬಾಡುವುದಕ್ಕೆ ಮುಂಚೆಯೇ ಅವಳ ಹೂಬುಟ್ಟಿಯಿಂದ ನನ್ನ ಕಂಡು ನಗುತ್ತಿದ್ದ ಮಲ್ಲಿಗೆಯೂ ಬಾಡಿತ್ತು.

ಹೀಗೆ ಪ್ರತಿದಿನ ಬಂದು ಹೋಗುವವರೆಲ್ಲ ನೀನಿಲ್ಲದ ನನ್ನ ಬದುಕನ್ನು ನೆನಪಿಸುತ್ತಲೇ ಇದ್ದಾರೆ. ನೀನು ಹುಟ್ಟಿದ ಊರನ್ನು ಕಂಡೊಡನೆ ನನ್ನನ್ನು ಮರೆಯುವುದು ನ್ಯಾಯವೇ?

***

ಇದಕ್ಕೆ ಹೆಂಡತಿಯ ಉತ್ತರವೋ... ಶಹಬಾಶ್‌!

‘ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ

ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು

ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ

ಇರುಳಿನಲಿ ಕಾಣುವುದು ನಿಮ್ಮ ಕನಸು’

‘ಯಾಕೆ ಹೀಗೆ ಸುಮ್ಮನೇ ಮಾತನಾಡುತ್ತೀರಿ? ಪ್ರತಿದಿನ ನಿಮ್ಮ ನೆನಪುಗಳಿಂದ ಏಕಾಂತವೂ ವಿರಹವೂ ನನ್ನನ್ನು ಹಿಂಡುತ್ತಿದೆ. ಅದು ಯಾರಿಗೂ ತಿಳಿಯದಂತೆ ಇರಲು ನಾನು ಪಡುವ ಪಾಡು ಯಾರಿಗೆ ಹೇಳಲಿ? ಪ್ರತಿದಿನ ಕನಸಿನ ತುಂಬ ನೀವೇ. ಅದು ನಿಜವೆಂದು ರಾತ್ರಿ ನಿದ್ದೆ ಕಳೆದು ಎದ್ದು ಕೂರುತ್ತೇನೆ. ಊರೇ ಮಲಗಿರುವಾಗ ಬಂದ ಎಚ್ಚರದಲ್ಲಿ ಆ ರಾತ್ರಿ ಭಯಾನಕವಾಗಿ ತೋರುತ್ತದೆ. ಆಗೆಲ್ಲ ಮತ್ತೆ ನಿಮ್ಮ ನೆನಪುಗಳೇ ನನ್ನನ್ನು ಸಂತೈಸುತ್ತಿವೆ. ನಿನ್ನೆ ಹಾಗೆ ಎಚ್ಚರವಾದಾಗ ಹಿತ್ತಿಲ ಚಪ್ಪರದ ಮೇಲೆ ಚಂದಿರ ನಗುತ್ತಿದ್ದ. ತುಳಸಿ ಎಲೆಗಳ ನೆರಳು ಅಂಗಳದಲ್ಲಿ ಹರಡಿದ್ದ ಆ ರಾತ್ರಿ ಆಕಾಶದಲ್ಲಿ ಹರಡಿದ್ದ ನಕ್ಷತ್ರಗಳೆಲ್ಲ ನನ್ನನ್ನು ಗಮನಿಸಿ ಗೇಲಿ ಮಾಡುತ್ತಿದ್ದಂತೆನಿಸಿತು.

‘ಬಾಲ್ಯದಿಂದ ನನ್ನ ರುಚಿಯರಿತ ಅಮ್ಮನ ಅಡುಗೆಗೆ ಮೋಡಿಗೊಂಡು ನಾನಿಲ್ಲಿದ್ದೇನೆಂದು ನೆನೆಯಬೇಡಿ. ಅಷ್ಟು ರುಚಿಯಾಗಿ ಊಟ ಮಾಡುವಾಗಲೂ ನೀವು ರುಚಿಯಿಲ್ಲದೇ ಪಡುವ ಪಾಡೇನೆಂದು ನಾನು ಬಲ್ಲೆ. ತಾಯ ಮನೆಯಲ್ಲಿ ಸೆರೆಯಾದ ಗಿಳಿಯಲ್ಲ ನಾನು, ನಿಮ್ಮನ್ನು ಮರೆತು ತೂರಿ ಬರುವ ಕೆಲವು ತೆನೆಗಳಿಗೆ ಸಂತೋಷ ಪಡಲು. ನಮ್ಮ ಪ್ರೀತಿಯ ಕುರುಹಾಗಿ ನಮ್ಮ ಮಕ್ಕಳು ಕಣ್ಣಮುಂದೆ ಆಡುತ್ತಿದ್ದಾರೆ. ನಿಮ್ಮ ಮಡಿಲಲ್ಲಿ ಮಲಗಿ ಕಥೆ ಕೇಳಲಾಗದಿದ್ದರೂ ನಿಮ್ಮ ಮಕ್ಕಳನ್ನು ನನ್ನ ಮಡಿಯಲ್ಲಿ ತೂಗುತ್ತ ಕಥೆ ಹೇಳುತ್ತಲೇ ಇದ್ದೇನೆ. ನಿಮ್ಮೊಂದಿಗಿರುವಾಗ ಹಾಲ್ಗಡಲಂತೆ ಉಕ್ಕುವ ಪ್ರೀತಿ, ನಾನು ಈಗ ದೂರವಾದಾಗ ಏಕೆ ಉರಿವ ಬಾಣಗಳಾಗಿ ಚುಚ್ಚುತ್ತಿದೆ? ನೀವು ನೋಡದ ಆ ತೋಟದಲ್ಲಿ ಮಲ್ಲಿಗೆ ಹೂವಿನಂತೆಯೇ ಇದ್ದೇನೆ. ಮುಳ್ಳಿನಂತೆ ಚುಚ್ಚುವ ಮಾತುಗಳಿಂದ ಗಾಸಿಗೊಳಿಸಬೇಡಿ.

‘ನಾಳೆ ಮಂಗಳವಾರ, ಮಾರನೆಯ ದಿನ ನವಮಿ

ಆಮೇಲೆ ನಿಲ್ಲುವೆನೆ ನಾನು ಇಲ್ಲೇ’

***

ಹೀಗೆ ಮಧ್ಯಮವರ್ಗದ ಕುಟುಂಬದ ಪತಿ ಪತ್ನಿಯರ ಪ್ರೇಮವನ್ನೂ ವಿರಹವನ್ನೂ ಆಸೆಗಳನ್ನೂ ಸುಂದರ ಕವಿತೆಗಳನ್ನಾಗಿಸಿ ನಮ್ಮನ್ನು ಭಾವಪ್ರಪಂಚದಲ್ಲಿ ತೂಗುಯ್ಯಾಲೆಯಾಡಿಸಿದವರು ಕವಿ ಕೆ.ಎಸ್. ನರಸಿಂಹಸ್ವಾಮಿ. ಬದುಕನ್ನು ಕವಿತೆಯಾಗಿಸಿದ ನಮ್ಮ ಕವಿ. ಉತ್ಸಾಹದಲ್ಲಿದ್ದರೂ ಬೇಸರದಿಂದ ಕುಗ್ಗಿ ಹೋಗಿದ್ದರೂ ಓದಿದೊಡನೆ ನಾವು ಬಾಳಲು ಮರೆತ ಅದ್ಭುತ ಲೋಕವೊಂದರಲ್ಲಿ ನಮ್ಮನ್ನು ತೊಡಗಿಸುವ ಮಹಾನ್ ಚೇತನ.

ಮೊನ್ನೆ ಹೀಗೆ ಅವರ ಕವಿತೆಗಳನ್ನು ಓದುತ್ತಿದ್ದಂತೆಯೇ ಬಾಲ್ಯದಲ್ಲಿ ಬೇಸಿಗೆಯ ರಜೆಗೆ ಅಜ್ಜ– ಅಜ್ಜಿಯರ ಊರಿಗೆ ನಗರದ ಹುಡುಗನಾಗಿ ಹೋಗುತ್ತಿದ್ದ ನೆನಪುಗಳು ಮರುಕಳಿಸಿದವು. ನಗರದಲ್ಲಿ ನಾನು ಕಲಿಯಲು ಮರೆತ, ಕಲಿಯಲಾಗದ ಹಲವು ವಿಷಯಗಳನ್ನು ನನ್ನ ತಂದೆ, ತಾಯಿ ಹುಟ್ಟಿದ ಗ್ರಾಮಗಳು ನನಗೆ ಕಲಿಸಿದವು. ಪ್ರತಿಯೊಂದು ರಜೆಯೂ ಜಾತ್ರೆಯಂತಿರುತ್ತಿತ್ತು.

ಅಮ್ಮ ತನ್ನ ಊರಿಗೆ ನನ್ನನ್ನು ಕರೆದುಕೊಂಡು ಹೋದಾಗಲೆಲ್ಲ ಅವಳು ನನಗಿಂತ ಸಣ್ಣ ಮಗುವಿನಂತಾಗಿಬಿಡುತ್ತಿದ್ದದ್ದು ನನಗಿನ್ನೂ ನೆನಪಿದೆ.

ಒಬ್ಬಳು ತಾಯಿ ತಾನು ಸಣ್ಣ ಹುಡುಗಿಯಾಗಿದ್ದಾಗ ಕೊಂಬೆಯನ್ನೇರಿ ಕುಲುಕುತ್ತಿದ್ದ ಹುಳಿಯ ಮಾವಿನ ಮರ, ದಶಕಗಳ ನಂತರವೂ ಹಣ್ಣು ಕೊಡುತ್ತಲೇ ಇರುತ್ತದೆ. ತಾಯಿ ವರ್ಷಗಳ ನಂತರ ಮತ್ತೆ ಕುಲುಕುತ್ತಿದ್ದರೂ, ಅವರ ಮಕ್ಕಳು ಆ ಕೊಂಬೆಯನ್ನೇರಿ ಕುಲುಕುತ್ತಿದ್ದರೂ ಅವಳ ಮೊಮ್ಮಕ್ಕಳು ಆ ಕೊಂಬೆಯನ್ನೇರಿ ಕುಲುಕುತ್ತಿದ್ದರೂ ಕೆಳಗೆ ಉದುರುತ್ತಲೇ ಇರುವ ಮಾವಿನ ಹಣ್ಣುಗಳನ್ನು ಹೆಕ್ಕಿ ಸವಿಯುವ ಸವಿ ಮೂರು ತಲೆಮಾರಿನ ಸವಿ ಇದ್ದಂತೆ.

ಊರ ಹೊರಗಿನ ಕಾಯುವ ದೇವರುಗಳು ಇನ್ನೂ ಕಾಯುತ್ತಲೇ ಇರುತ್ತಾರೆ. ಆಂಟೆನಾದಿಂದ ಹಿಡಿದು ಸೆಲ್‌ಫೋನ್ ಟವರ್‌ವರೆಗೆ ಎಷ್ಟೇ ಬದಲಾಗಿದ್ದರೂ ಊರ ಜಾತ್ರೆಯ ಸಂಭ್ರಮಗಳಿಗೆ ಕೊರತೆಯಿಲ್ಲ. ಆ ಜಾತ್ರೆಗಳಲ್ಲಿ ಮಾರಾಟಕ್ಕಿಟ್ಟಿರುವ ಸಣ್ಣ ಸಣ್ಣ ವಸ್ತುಗಳಲ್ಲಿ ಎಲ್ಲಿಂದ, ಹೇಗೆ ಜೀವತುಂಬಿ ಬರುತ್ತದೋ ಯಾರಿಗೆ ಗೊತ್ತು?

ತಾಯಿ ಮನೆಯನ್ನು ಅರಸಿ ತವರಿಗೆ ಹೋಗುವ, ತಾಯಾದ ಮಗಳಿಗೆ ಅದುವೇ ರೆಸ್ಟ್‌ ಹೌಸ್‌. ರಜೆ ಮುಗಿದು ಮತ್ತೆ ಮಕ್ಕಳೊಡನೆ ತನ್ನ ಮನೆಗೆ ತೆರಳುವ ತಾಯಾದ ಮಗಳಿಗೆ ಸಂಡಿಗೆ, ಉಪ್ಪಿನ ಕಾಯಿ, ಸಿಹಿತಿನಿಸುಗಳು, ಅಕ್ಕಿ, ಬೇಳೆ ಎಲ್ಲವನ್ನೂ ಮೂಟೆ ಕಟ್ಟಿ ಕಳಿಸಿಕೊಡುವಳು ತಾಯಂದಿರ ತಾಯಿ.

ಈಗಲೂ ಬೇರನ್ನು ಹುಡುಕಿಕೊಂಡು ಹೋಗುವವರಂತೆ ಪ್ರತಿಯೊಬ್ಬರೂ ಸ್ವಂತ ಊರನ್ನು ಹುಡುಕಿಕೊಂಡು ಹೋಗಬೇಕೆನಿಸುತ್ತದೆ. ಭವಿಷ್ಯವನ್ನು ಹುಡುಕುತ್ತ ಓಡುತ್ತಿರುವ ಒಂದು ತಲೆಮಾರು, ಯಾವ ಕ್ಷಣದಲ್ಲಿ ಬೇಕಾದರೂ ಯಮ, ತಮ್ಮನ್ನರಸಿ ತಮ್ಮ ಬದುಕಿನ ಹೊಸ್ತಿಲಿಗೆ ಬಂದು ನಿಲ್ಲುವನೆಂಬ ಭಯದಲ್ಲಿ ಬದುಕುತ್ತಿರುವ ಇನ್ನೊಂದು ತಲೆಮಾರು ಸಂಧಿಸುವ ತರುಣವದು.

ನಾಳೆಯ ತಲೆಮಾರಾಗಿ ಬಾಳುವ ಮಕ್ಕಳಿಗೆ ಕಲಿಯಲೇಬೇಕಾದ ಪಾಠಗಳನ್ನು ಅರಿಯಲು ಕಳೆದು ಹೋಗುವ ನಿನ್ನೆಯ ತಲೆಮಾರಾಗಿ ಬದುಕುತ್ತಿರುವವರು ಹಲವು ಪಾಠಗಳನ್ನು ಕಲಿಸಲು ಸಾಧ್ಯತೆ ಇರುವ ಕಾಲವೇ ಬೇಸಿಗೆ ರಜೆಗಳು. ಇಂಥ ಕ್ಷಣಗಳನ್ನು ಬದುಕಲು ಸಾಧ್ಯವಾದ ಮಕ್ಕಳನ್ನೂ ಹಿರಿಯರನ್ನೂ ನೋಡಿದಾಗಲೆಲ್ಲ ಮನಸ್ಸು ಅಳುತ್ತದೆ. ‘ಯಾಕೋ? ಅಜ್ಜ–ಅಜ್ಜಿ ನೋಡಲು ಊರಿಗೆ ಹೋಗಲಿಲ್ವೇ?’ ಎಂದು ಕೇಳಿದರೆ ‘ಅಬಾಕಸ್ ಕ್ಲಾಸ್‌ಗೆ ಸೇರಿಸಿದ್ದಾರೆ ಅಂಕಲ್’ ಎಂದು ಮಗುವೊಂದು ಹೇಳುತ್ತಿದೆ.

ನಮ್ಮ ಮಕ್ಕಳು ವಿಧವಿಧವಾದ ಮನುಷ್ಯರನ್ನೂ, ಅವರ ಬದುಕನ್ನೂ ನೋಡುವುದು ಬೇಕಿಲ್ಲ, ಲೆಕ್ಕ ಹಾಕಲು ಕಲಿತರೆ ಸಾಕು ಎನ್ನುವ ಹೆತ್ತವರ ಮನಸ್ಥಿತಿ ಬದಲಾಗಬೇಕು. ಇದು ಅಡ್ವೈಸ್‌ ಅಲ್ಲ, ನನ್ನ ಬಾಲ್ಯದ ಅನುಭವ. ಬದುಕುವುದನ್ನು ಕಲಿಸಿಕೊಡಲು ಹೆತ್ತವರು ಸಾಕು. ಆದರೆ ಬಾಳಲು ಕಲಿಸುವುದಕ್ಕೆ ಹಿರಿಯರು ಬೇಕು.

ಸೂರ್ಯ ಮೂಡುವ ಮುನ್ನ ಅಂಗಳವನ್ನು ಸಾರಿಸಿ ರಂಗೋಲಿಯಿಟ್ಟು ದಿನವನ್ನು ಸ್ವಾಗತಿಸುವ ಪ್ರಪಂಚವದು. ಯಾವಾಗ ದುಡಿಯಬೇಕು, ಎಷ್ಟು ದುಡಿಯಬೇಕು ಎನ್ನುವುದಕ್ಕೆ ಮಾದರಿ ಮನುಷ್ಯರಾದ ಅವರು ಬಹಳ ಸರಳವಾಗಿ ನಮ್ಮ ಮುಂದೆಯೇ ಕುಳಿತಿರುತ್ತಾರೆ. ಮಕ್ಕಳು ಆಡಿ ಬೆಳೆಯುವ ಮನೆಯಲ್ಲಿಯೇ ನಾಯಿ, ಬೆಕ್ಕು, ಕೋಳಿ, ಹಸುಗಳಂಥ ಜೀವಂತ ಪ್ರಾಣಿಗಳು ಕುಟುಂಬದ ಒಡನಾಡಿಗಳಂತೆ ನಮ್ಮ ಸುತ್ತಲೂ ಸುತ್ತುತ್ತಿರುತ್ತವೆ. ಮನೆಯಿಂದ ಹೊರಬಂದರೆ ಆಟವಾಡಲು ಬಯಲು. ಈಜಲು ಬಾವಿಗಳು, ಸಣ್ಣ ನದಿಗಳು, ಕೊಳಗಳು, ಜೋಕಾಲಿ ಕಟ್ಟಿ ತೂಗಲು, ನೆರಳು ತರಲು ಮರಗಳು...

ಆಡಿ ಆಡಿ ಆಯಾಸಗೊಂಡ ಮಕ್ಕಳಿಗೆ ಚಂದ್ರನನ್ನು ಕಂಡೊಡನೆ ಅಮ್ಮಂದಿರು ಊಟವನ್ನು ಬಡಿಸಿ ಮಲಗಿಸುತ್ತ ಕಥೆ ಹೇಳಲು ಪ್ರಾರಂಭಿಸುತ್ತಾರೆ. ಆ ಕಥೆಗಳ ಪ್ರಪಂಚದಲ್ಲಿ ಕಾಣೆಯಾಗುತ್ತ, ನಮ್ಮನ್ನು ನಾವೇ ಕಂಡುಕೊಳ್ಳುವ ಅದ್ಭುತ ಪ್ರಪಂಚದಿಂದ ನಾವೆಲ್ಲ ಎಷ್ಟು ದೂರದಲ್ಲಿದ್ದೇವೆ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.