ಬುಧವಾರ, ಮಾರ್ಚ್ 3, 2021
30 °C
ಶಾಂತಿನಗರ ವಿಧಾನಸಭಾ ಕ್ಷೇತ್ರ ಸಮೀಕ್ಷೆ

‘ಕೂಲಿ ₹300, ₹500 ಕೊಟ್ಟರೆ ಬೇಡವೆನ್ನಲ್ಲ’

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

‘ಕೂಲಿ ₹300, ₹500 ಕೊಟ್ಟರೆ ಬೇಡವೆನ್ನಲ್ಲ’

ಬೆಂಗಳೂರು: ಈ ಕ್ಷೇತ್ರ ರಾಜಧಾನಿಯ ಹೃದಯವಿದ್ದಂತೆ. ಒಂದು ಪಾರ್ಶ್ವದಲ್ಲಿ ಪ್ರತಿಷ್ಠಿತ ಬಡಾವಣೆಗಳಿದ್ದರೆ, ಮತ್ತೊಂದು ಭಾಗವು ಕೊಳೆಗೇರಿ ಪ್ರದೇಶಗಳಿಂದ ಕೂಡಿದೆ. ಚುನಾವಣೆ ಹಾಗೂ ಅಭ್ಯರ್ಥಿಗಳ ಬಗ್ಗೆ ಒಂದೊಂದು ಪ್ರದೇಶದಲ್ಲೂ ಭಿನ್ನ ಅಭಿಪ್ರಾಯವಿದೆ. ಹಲವು ಮತದಾರರು, ‘ಅಭಿವೃದ್ಧಿಗೆ ನಮ್ಮ ಮತ’ ಎನ್ನುತ್ತಿದ್ದಾರೆ. ಕೆಲವರದ್ದು, ‘ಅಭ್ಯರ್ಥಿಗಿಂತ ಪಕ್ಷ ಮುಖ್ಯ’ ಎಂಬ ನಿಯಮ.

ಇದು ಶಾಂತಿನಗರ ವಿಧಾನಸಭಾ ಕ್ಷೇತ್ರದ ಚಿತ್ರಣ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಅಶೋಕನಗರದಂಥ ಅಭಿವೃದ್ಧಿ ಹೊಂದಿದ ಹಾಗೂ ಜೋಗುಪಾಳ್ಯ, ವನ್ನಾರ್‌ಪೇಟೆ, ನೀಲಸಂದ್ರದತ್ತ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳು ಇಲ್ಲಿವೆ. ಇಲ್ಲಿಯ ಮತದಾರರ ಒಳಗುಟ್ಟು ಅಷ್ಟು ಬೇಗ ಅರ್ಥವಾಗುವುದಿಲ್ಲ. ಚುನಾವಣೆ ಬಗ್ಗೆ ತಿಳಿದುಕೊಳ್ಳಲು ಕ್ಷೇತ್ರದಲ್ಲಿ ಸುತ್ತಾಡಿದಾಗ ಯಾರೊಬ್ಬರೂ, ಫಲಿತಾಂಶದ ಗುಟ್ಟು ಬಿಟ್ಟು ಕೊಡಲಿಲ್ಲ. ‘ಬಿಜೆಪಿ, ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ. ಆ ಎರಡೂ ಪಕ್ಷಗಳಿಗೂ ಪೈಪೋಟಿ ನೀಡಲು ಜೆಡಿಎಸ್‌ ಹಾಗೂ ಆಪ್‌ ಪ್ರಯತ್ನಿಸುತ್ತಿದೆ’ ಎಂದಷ್ಟೇ ಹೇಳಿದರು.

ಎರಡು ಬಾರಿ ಶಾಸಕರಾಗಿರುವ ಎನ್‌.ಎ.ಹ್ಯಾರಿಸ್‌, ಮೂರನೇ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಉಪಮೇಯರ್‌ ವಾಸುದೇವಮೂರ್ತಿ, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಆನಂದ್‌ ರೆಡ್ಡಿ ಜೆಡಿಎಸ್‌ನ ಹುರಿಯಾಳು ಆಗಿದ್ದು, ನಿವೃತ್ತ ಐಎಎಸ್‌ ಅಧಿಕಾರಿ ರೇಣುಕಾ ವಿಶ್ವನಾಥನ್‌ ಆಪ್‌ನಿಂದ ಸ್ಪರ್ಧಿಸಿದ್ದಾರೆ.

ಅತೀ ಹೆಚ್ಚು ಓದಿದವರು, ಉದ್ಯೋಗಸ್ಥರು ಇಲ್ಲಿದ್ದಾರೆ. ಅವಿದ್ಯಾವಂತರ ಸಂಖ್ಯೆಯೂ ಶೇಕಡ 35ರಷ್ಟಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಭಾಷಿಗರು ಕಾಣಸಿಗುತ್ತಾರೆ. ಉದ್ಯೋಗ ಅರಸಿ ಹೊರ ರಾಜ್ಯ (ಮಾರ್ವಾಡಿಗಳು ಹೆಚ್ಚು), ಹೊರ ಜಿಲ್ಲೆಯಿಂದ ಬಂದವರು ಇಲ್ಲಿ ಹೆಚ್ಚಿದ್ದಾರೆ. ಅವರವರ ಭಾಷೆಯಲ್ಲೇ ಮಾತನಾಡಿ, ಮತ ಸೆಳೆಯುವ ಪ್ರಯತ್ನವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ.

ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವವರು ಇಲ್ಲಿ ಹೆಚ್ಚಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದ ಯುವಕರು, ಈಗ ಬಿಜೆಪಿಯತ್ತ ವಾಲಿದ್ದಾರೆ. ಬಿಜೆಪಿಯವರು ಕಾಂಗ್ರೆಸ್‌ನತ್ತ ಹೋಗಿದ್ದಾರೆ. ಇದು ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ.

ಕೊಳೆಗೇರಿಯಲ್ಲಿ ವಾಸವಿರುವ ಮಹಿಳೆಯೊಬ್ಬರು, ‘ಕೆಲ ಅಭ್ಯರ್ಥಿಗಳು ಮನೆಗೆ ಬಂದು ಹೋಗುತ್ತಿದ್ದಾರೆ. ಪ್ರತಿ ಮತಕ್ಕೆ ₹500 ಕೊಡುತ್ತಿದ್ದಾರೆ. ಅವರಿಂದ ಹಣ ಪಡೆದ ಮಾತ್ರಕ್ಕೆ ಅವರಿಗೇ ಮತ ಹಾಕಬೇಕೆಂಬ ನಿಯಮವೇನಿಲ್ಲ’ ಎಂದರು.

‘ನಾನು ನಿತ್ಯವೂ ಬೆಳಿಗ್ಗೆ ಕೆಲಸಕ್ಕೆ ಹೋದರೆ, ರಾತ್ರಿಯೇ ವಾಪಸ್‌ ಬರೋದು. ಅಬ್ಬಬ್ಬಾ ಅಂದ್ರೆ, ದಿನಕ್ಕೆ ₹300 ಸಿಕ್ಕರೆ ಹೆಚ್ಚು. ಹೀಗಾಗಿ, ಯಾವುದೇ ಪಕ್ಷದ ಅಭ್ಯರ್ಥಿಯು ಹಣ ಕೊಟ್ಟರೆ ಬೇಡ ಎನ್ನಲ್ಲ. ನಮ್ಮ ಏರಿಯಾದ ಎಲ್ಲ ಜನರೂ ಇದನ್ನೇ ಮಾಡುತ್ತಿದ್ದಾರೆ’ ಎಂದರು.

ಗೃಹಿಣಿಯೊಬ್ಬರು, ‘ನೋಡಪ್ಪ. ಕೆಲಸ ಯಾರು ಮಾಡುತ್ತಾರೋ ಅವರಿಗೆ ನಮ್ಮ ಮತ. ನಮ್ಮ ಏರಿಯಾದ ಜನರೆಲ್ಲರೂ ಅದನ್ನೇ ಪಾಲಿಸುತ್ತಾರೆ’ ಎಂದರು.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರಿಚಯವಿದೆಯಾ? ಎಂದು 50 ವರ್ಷದ ಮತದಾರರೊಬ್ಬರನ್ನು ಕೇಳಲಾಯಿತು. ಉತ್ತರಿಸಲು ತಡವರಿಸಿದ (ತಲೆ ಕೆದರಿಕೊಳ್ಳುತ್ತ) ಅವರು, ’ಯಾರೂ’ ಎಂದು ಯೋಚಿಸಲಾರಂಭಿಸಿದರು. ಪಕ್ಕದಲ್ಲಿ ಕುಳಿತಿದ್ದವರತ್ತ ನೋಟ ಬೀರಿ, ‘ಯಾರೂ ಅದು?...’ ಎಂದು ವಿಚಾರಿಸಿದರು. ಅವರಿಂದಲೂ ಉತ್ತರ ಸಿಗದಿದ್ದಾಗ, ‘ನೋಡಪ್ಪ ಮತ ಕೇಳಲು ಇದುವರೆಗೂ ನಮ್ಮ ಬಳಿ ಯಾರೂ ಬಂದಿಲ್ಲ. ಪಕ್ಷಗಳ ಹೆಸರಷ್ಟೇ ಗೊತ್ತು. ಅಭ್ಯರ್ಥಿಗಳ ಹೆಸರು ಗೊತ್ತಿಲ್ಲ’ ಎಂದು ಹೇಳಿದರು.

ಬೀಡಾ ಅಂಗಡಿ ಇಟ್ಟುಕೊಂಡಿರುವ ಯುವಕನೊಬ್ಬನ ಬಳಿ, ‘ಚುನಾವಣೆ ಯಾವಾಗ’ ಎಂದು ಕೇಳಲಾಯಿತು. ಆಗ, ‘ಅದು....’ ಎಂದು ತಡವರಿಸಿದ ಅವರು, ‘ಮೇ 15 ಅಲ್ವಾ, ಇಲ್ಲ ಮೇ 13’ ಎಂದು ಮರುಪ್ರಶ್ನಿಸಿದರು. ನಂತರ, ‘ಆ ಬಗ್ಗೆ ತಿಳಿದುಕೊಂಡು ಏನು ಮಾಡೋದು ಗುರು. ದುಡಿದು ತಿನ್ನುವ ನಮಗೆ ಕೆಲಸ ಮೊದಲು. ಆ ನಂತರ ಎಲ್ಲ’ ಎಂದರು.

‘ದೊಡ್ಡ ಮಂದಿ ಮತ ಹಾಕಲ್ಲ’

‘ಕ್ಷೇತ್ರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಶೇ 90ರಷ್ಟು ಮನೆಗಳ ಬಾಗಿಲುಗಳು ಸದಾ ಮುಚ್ಚಿರುತ್ತವೆ. ಮತದಾನ ದಿನದಂದು ಅವರೆಲ್ಲ ಹೊರಗೆ ಬರುವುದೇ ಅನುಮಾನ’ ಎನ್ನುತ್ತಾರೆ ಕೆಲವು ಮತದಾರರು.

‘ಅಂಥ ಬಡಾವಣೆ ರಸ್ತೆಗಳು ಸುಧಾರಿಸಿವೆ. ಸಕಲ ಸೌಲಭ್ಯವೂ ಅವರಿಗಿದೆ. ಆದರೆ, ಮತದಾನವೆಂದರೆ ನಿರ್ಲಕ್ಷಿಸುತ್ತಾರೆ. ಅವರಲ್ಲೂ ಕೆಲವರು, ಮತ ಚಲಾಯಿಸುವುದಲ್ಲಿ ಮುಂದಿದ್ದಾರೆ. ಹಲವು ಸೌಲಭ್ಯಗಳಿಂದ ವಂಚಿತವಾದ ಕೊಳೆಗೇರಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶದ ಜನರೇ ಹೆಚ್ಚು ಮತದಾನ ಮಾಡುವುದು’ ಎಂದರು.

’2.18 ಲಕ್ಷ ಮತದಾರರು ಇಲ್ಲಿದ್ದಾರೆ. 2013ರಲ್ಲಿ ನಡೆದ ಚುನಾವಣೆ ವೇಳೆ ಶೇ.42ರಷ್ಟು ಮತದಾನ ಆಗಿತ್ತು. ಈ ಸಂಖ್ಯೆಯೇ ಮತದಾರರ ಆಸಕ್ತಿಯಲ್ಲಿ ತೋರಿಸುತ್ತದೆ. ಈ ಬಾರಿ ಏನಾಗುತ್ತದೆ ಎಂಬುದನ್ನು ಹೇಳಲಾಗದು’ ಎಂದರು.

ಮುಖ್ಯಾಂಶಗಳು

* 2008ರ ಚುನಾವಣೆ ಫಲಿತಾಂಶ: ಎನ್.ಎ.ಹ್ಯಾರಿಸ್ (ಕಾಂಗ್ರೆಸ್‌) – 42,423,  ಡಿ.ಯು.ಮಲ್ಲಿಕಾರ್ಜುನ (ಬಿಜೆಪಿ) – 28,626

* 2013ರ ಫಲಿತಾಂಶ: ಹ್ಯಾರಿಸ್ (ಕಾಂಗ್ರೆಸ್‌) – 54,342, ವಾಸುದೇವಮೂರ್ತಿ (ಜೆಡಿಎಸ್) – 34,137

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.