ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧೂತಾಯಿ ಕೈತುತ್ತಿನ ರುಚಿ ಸವಿದ ಚಿಣ್ಣರು

ರಂಗಾಯಣದ ಚಿಣ್ಣರ ಮೇಳದಲ್ಲಿ ಕಂಡು ಬಂದ ದೃಶ್ಯ
Last Updated 7 ಮೇ 2018, 13:18 IST
ಅಕ್ಷರ ಗಾತ್ರ

ಮೈಸೂರು: ಸಾವಿರಾರು ಅನಾಥ ಮಕ್ಕಳಿಗೆ ಆಶ್ರಯ ಕಲ್ಪಿಸಿದ ಮಹಾಮಾತೆ ಮಹಾರಾಷ್ಟ್ರದ ಸಿಂಧೂತಾಯಿ ಅವರ ಕೈತುತ್ತಿನ ರುಚಿ ಸವಿಯಲು ಚಿಣ್ಣರು ಮುಗಿಬಿದ್ದರು. ಸಿಂಧೂತಾಯಿ ಕೆಲ ಮಕ್ಕಳಿಗೆ ಕೈತುತ್ತು ತಿನ್ನಿಸಿದರು. ತುತ್ತು ಸಿಕ್ಕ ಮಕ್ಕಳಿಗೆ ಪುಳಕ. ಉಳಿದ ಮಕ್ಕಳಿಗೆ ಅವರ ತಾಯಂದಿರು ತಿನ್ನಿಸಿದರು.

ರಂಗಾಯಣದಲ್ಲಿ ನಡೆಯುತ್ತಿರುವ ಚಿಣ್ಣರ ಮೇಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಿಂಧೂತಾಯಿ ಮುಖಾಮುಖಿ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು.

ಸಿಂಧೂತಾಯಿ ತಮ್ಮ ಜೀವನದ ಏಳುಬೀಳುಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು. ಚಿಣ್ಣರ ಪ್ರಶ್ನೆಗಳಿಗೆ ಖುಷಿಯಿಂದಲೇ ಉತ್ತರಿಸಿದರು.

‘ನನಗೆ ಓದುವುದು ಎಂದರೆ ಬಹಳ ಇಷ್ಟ. ಆದರೆ, ಶಾಲೆಗೆ ಹೋಗುವುದನ್ನು ತಾಯಿ ಇಷ್ಟಪಡುತ್ತಿರಲಿಲ್ಲ. ದನ ಮೇಯಿಸಲು ಕಳುಹಿಸುತ್ತಿದ್ದಳು. ದನಗಳನ್ನು ಬಿಟ್ಟು ಶಾಲೆಗೆ ಹೋಗುತ್ತಿದ್ದೆ. ಅವು ಬೇರೆಯವರ ಹೊಲಗಳಿಗೆ ಹೋಗುತ್ತಿದ್ದವು. ಹೊಲದ ಮಾಲೀಕರು ನನಗೆ ಹೊಡೆಯುತ್ತಿದ್ದರು. ಇತ್ತ ಶಾಲೆಗೆ ತಡವಾಗಿ ಹೋದರೆ ಗುರುಗಳು ಹೊಡೆಯುತ್ತಿದ್ದರು. ಇಬ್ಬರ ಹೊಡೆತ ತಿಂದು ಕೊನೆಗೂ ನಾಲ್ಕನೇ ತರಗತಿವರೆಗೂ ಓದಿದೆ’ ಎಂದು ನೆನಪು ಮಾಡಿಕೊಂಡರು.‌

‘10ನೇ ವಯಸ್ಸಿಗೆ ಮದುವೆ ಆಯ್ತು. ಆಗ ಗಂಡನಿಗೆ 30 ವರ್ಷ ವಯಸ್ಸು. ನಾನು ಓದುತ್ತಿದ್ದುದನ್ನು ಗಂಡ ಸಹಿಸುತ್ತಿರಲಿಲ್ಲ. ಈ ಕಾರಣಕ್ಕೆ ಹೊಡೆಯುತ್ತಿದ್ದರು. ಪುಸ್ತಕಗಳನ್ನು ಸುಟ್ಟು ಹಾಕುತ್ತಿದ್ದರು. ಬೀದಿಯಲ್ಲಿ ಯಾವುದಾದರೂ ಕಾಗದ ಸಿಕ್ಕರೆ ಅದನ್ನು ತಂದು ಓದುತ್ತಿದ್ದೆ. ಗಂಡ ಅದನ್ನೂ ಸುಟ್ಟು ಹಾಕುತ್ತಾರೆ ಎಂಬ ಕಾರಣಕ್ಕೆ ಅದನ್ನು ಅಗಿದು ನುಂಗಿಬಿಡುತ್ತಿದ್ದೆ’ ಎಂದರು.

‘ನಾನು ರೈಲಿನಲ್ಲಿ ಭಿಕ್ಷೆ ಬೇಡುತ್ತಾ ಕರ್ನಾಟಕ, ಆಂಧ್ರಪ್ರದೇಶದ ಕಡೆಗೂ ಹೋಗುತ್ತಿದ್ದೆ. ಕರ್ನಾಟಕದ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ನಾನು 20 ವರ್ಷಗಳ ಹಿಂದೆ ಬರೆದ ಪುಸ್ತಕವು ಇಲ್ಲಿ ಪಠ್ಯಪುಸ್ತಕವಾಗಿದೆ. ನನಗೆ ಮಹಾರಾಷ್ಟ್ರಕ್ಕಿಂತ ಕರ್ನಾಟಕದಲ್ಲಿ ಹೆಚ್ಚಿನ ಮನ್ನಣೆ ಸಿಕ್ಕಿದೆ. ಹೀಗಾಗಿ, ನಾನು ಅರ್ಧ ಮಹಾರಾಷ್ಟ್ರ, ಇನ್ನರ್ಧ ಕರ್ನಾಟಕಕ್ಕೆ ಸೇರಿದವಳು’ ಎಂದು ಹೇಳಿದರು.

‘ನನ್ನನ್ನು ನೋಡಿಕೊಳ್ಳುವುದೇ ತಂದೆ–ತಾಯಿಗೆ ಕಷ್ಟ. ನೀವು 1,500 ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತೀರಿ’ ಎಂದು ಬಾಲಕ ವರುಣ್‌ ಪ್ರಶ್ನಿಸಿದ.

ಇದಕ್ಕೆ ಉತ್ತರಿಸಿದ ಸಿಂಧೂತಾಯಿ, ‘ಮಕ್ಕಳಿಗೆ ಒಂದು ಪೆಟ್ಟು ಕೊಟ್ಟು ಸುಮ್ಮನೆ ಕೂರಿಸುತ್ತೇನೆ. ತಾಯಿಯ ಪೆಟ್ಟು ರೊಟ್ಟಿಥರ ರುಚಿಯಾಗಿರುತ್ತದೆ. ತಾಯಿ ಇದ್ದರೆ ಮಾತ್ರ ಜೀವನ. ಅವಳಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬೇಡಿ’ ಎಂದು ಕಿವಿಮಾತು ಹೇಳಿದರು.

‘ಅನಾಥ ಮಕ್ಕಳಿಗೆ ಆಶ್ರಯ ಕೊಡುವ ಮುನ್ನ ಅವರಿಗೆ ಷರತ್ತು ಹಾಕುತ್ತೀರಾ’ ಎಂದು ಮತ್ತೊಬ್ಬ ಬಾಲಕ ಶ್ರೇಯಸ್‌ ಪ್ರಶ್ನಿಸಿದ.

‘ಒಂದು ಕಾಲದಲ್ಲಿ ನಾನೂ ಅನಾಥಳಾಗಿದ್ದವಳು. ರಾತ್ರಿ ವೇಳೆ ತುಂಬಾ ಹೆದರುತ್ತಿದ್ದೆ. ಆಗ ನನಗೆ 20 ವರ್ಷ ವಯಸ್ಸು. ಗಂಡಸರ ಭಯದಿಂದ ಸ್ಮಶಾನದಲ್ಲಿ ಮಲಗುತ್ತಿದ್ದೆ. ಎಲ್ಲರೂ ಸತ್ತ ಮೇಲೆ ಸ್ಮಶಾನಕ್ಕೆ ಹೋಗುತ್ತಾರೆ. ಹೀಗಾಗಿ, ಸ್ಮಶಾನ ಕಂಡರೆ ನನಗೆ ಯಾವುದೇ ಭಯ ಇರಲಿಲ್ಲ. ಹಸಿವಾದಾಗ ಕಲ್ಲು ತಿನ್ನಬೇಕು ಅನಿಸುತ್ತಿತ್ತು. ಆದರೆ, ಕಲ್ಲನ್ನು ಕಡಿದು ತಿನ್ನಲು ಆಗುತ್ತಿರಲಿಲ್ಲ. ಬಹಳಷ್ಟು ಜನರಿಗೆ ಇದೇ ಪರಿಸ್ಥಿತಿ ಇರಬಹುದು. ಹಸಿವಿನಿಂದ ಬಳಲುತ್ತಿರಬಹುದು. ಅವರ ಹಸಿವನ್ನು ಏಕೆ ನೀಗಿಸಬಾರದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತು’ ಎಂದು ಸಿಂಧೂತಾಯಿ ಹೇಳಿದರು.

‘ನಿಮಗೆ ಸಿಕ್ಕ ಮಕ್ಕಳನ್ನು ಅವರ ಪೋಷಕರ ಬಳಿಗೆ ತಲುಪಿಸುವ ಕೆಲಸ ಮಾಡಿದ್ದೀರಾ’ ಎಂದು ಯಜಸ್‌ ಪ್ರಶ್ನಿಸಿದ. ‘ಮೊದಲ ಮಗು ಸಿಕ್ಕಾಗ, ಪೋಷಕರನ್ನು ಹುಡುಕಿ, ಅವರ ಸುಪರ್ದಿಗೆ ಒಪ್ಪಿಸಲು ಪ್ರಯತ್ನಿಸಿದ್ದೆ. ಆದರೆ, ಆ ಹುಡುಗ ಇದಕ್ಕೆ ಒಪ್ಪಲಿಲ್ಲ. ತಾಯಿಗೆ ಬೇಡವಾದ ನಾನು ಮತ್ತೆ ಅವರ ಬಳಿಗೆ ಹೋಗುವುದಿಲ್ಲ. ನೀವೇ ನನ್ನ ನಿಜವಾದ ತಾಯಿ ಎಂದ. ಹೀಗಾಗಿ, ಆತನನ್ನು ನನ್ನಲ್ಲೇ ಇರಿಸಿಕೊಂಡೆ. ಅನಾಥ ಮಕ್ಕಳಿಗಿಂತ ಸ್ವಂತ ಮಗಳಿಗೆ ಒಂದು ತುತ್ತು ಹೆಚ್ಚಿಗೆ ಕೊಡಬಹುದು ಎಂಬ ಕಾರಣಕ್ಕೆ, ಮಗಳನ್ನು ಮಹಿಳೆಯೊಬ್ಬರಿಗೆ ಕೊಟ್ಟುಬಿಟ್ಟೆ’ ಎಂದು ಸಿಂಧೂತಾಯಿ ಹೇಳಿದಾಗ, ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದರು.

ತಾಯಿಗೆ ತಾಯಿ ಆಗಬೇಕು...

ಪದ್ಮಾವತಿ: ನಿಮಗೆ ಸಾವಿರಾರು ಮಕ್ಕಳಿದ್ದಾರೆ. ಆದರೆ, ನಿಮ್ಮ ಸ್ವಂತ ಮಕ್ಕಳನ್ನು ನೋಡಲು ಹೋಗಲಿಲ್ಲವೇ?

ಸಿಂಧೂತಾಯಿ: ನನಗೆ ನಾಲ್ವರು ಮಕ್ಕಳು. ಮೂವರು ಮಕ್ಕಳನ್ನು ಗಂಡನೇ ಇರಿಸಿಕೊಂಡಿದ್ದ. ಒಬ್ಬ ಮಗಳನ್ನು ಮಹಿಳೆಯೊಬ್ಬರಿಗೆ ಕೊಟ್ಟಿದ್ದೆ. ಮಗಳು ಸ್ನಾತಕೋತ್ತರ ಪದವಿ ಓದಿದ್ದಾಳೆ. ‘ನೀನು ಸಾವಿರಾರು ಮಕ್ಕಳಿಗೆ ಒಳ್ಳೆಯ ತಾಯಿ ಆಗಿರಬಹುದು. ಆದರೆ, ನನಗೆ ಏಕೆ ಒಳ್ಳೆಯ ತಾಯಿ ಆಗಲಿಲ್ಲ’ ಎಂದು ಮಗಳು ಪ್ರಶ್ನಿಸಬಹುದು ಎನ್ನುವ ಆತಂಕ ನನ್ನನ್ನು ಕಾಡಿತ್ತು. ಆದರೆ, ಅವಳು ಸಂದರ್ಶನವೊಂದರಲ್ಲಿ, ‘ನನ್ನ ತಾಯಿಗೆ ತಾಯಿ ಆಗಬೇಕು ಎನಿಸುತ್ತಿದೆ’ ಎಂದು ಉತ್ತರಿಸಿದ್ದಳು. ಆಗ ನನ್ನಲ್ಲಿದ್ದ ಆತಂಕ ದೂರ ಆಯ್ತು.

ಗಂಡನನ್ನು ನಿಮ್ಮ ಬಳಿಗೆ ಮತ್ತೆ ಏಕೆ ಸೇರಿಸಿಕೊಂಡಿರಿ?

ಸಿಂಧೂತಾಯಿ: ಗಂಡ ನನ್ನನ್ನು ಬಿಟ್ಟ ಬಳಿಕ ನಾನು 17 ದೇಶಗಳನ್ನು ಸುತ್ತಿದ್ದೇನೆ. 700 ಪ್ರಶಸ್ತಿಗಳು ಬಂದಿವೆ. 250 ಅಳಿಯಂದಿರು, 50 ಸೊಸೆಯರು ಸಿಕ್ಕಿದ್ದಾರೆ. ನಾನು ಗಂಡನನ್ನು ಬಿಡಲಿಲ್ಲ. ಅವರು ನನ್ನನ್ನು ಬಿಟ್ಟು ಹೋದರು. ಆಗ ನನ್ನ ಬಳಿ 10 ದಿನಗಳ ಕೂಸು ಇತ್ತು. ಗಂಡನ ಮನೆಯವರು ಕಲ್ಲಿನಿಂದ ಹೊಡೆದರು. ಗಂಡ ಬಿಟ್ಟು ಹೋದಾಗ ನಾನು ಅಳುತ್ತಿದ್ದೆ. ಆ ಬಳಿಕ ನನ್ನನ್ನು ಅತ್ತೆ ಮನೆಯವರು ಹೂವುಗಳಿಂದ ಸತ್ಕರಿಸಿದರು. ಆಗ ಗಂಡ ಅಳುತ್ತಿದ್ದರು. ಇದನ್ನು ನೋಡಿ ಖುಷಿಪಟ್ಟೆ. ನಾನು ಹೆಂಡತಿಯಾಗಿ ಇರಲಾರೆ. ಆದರೆ, ನನ್ನ ಮಗುವಾಗಿ ನೀನು ಇರಬೇಕು ಎಂದು ಗಂಡನಿಗೆ ಷರತ್ತು ವಿಧಿಸಿದ್ದೆ. ಅದಕ್ಕೆ ಅವರು ಒಪ್ಪಿದರು.

ಭಿಕ್ಷೆ ಬೇಡುವುದು ಕಾನೂನು ಪ್ರಕಾರ ಅಪರಾಧ. ಆ ವೃತ್ತಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ?

ಸಿಂಧೂತಾಯಿ: ಹಸಿವಾದಾಗ ಯಾವ ಅಪರಾಧವೂ ಕಾಣುವುದಿಲ್ಲ. ಹೊಟ್ಟೆ ತುಂಬಿದಾಗ ಮಾತ್ರ ಅಪರಾಧದ ಬಗ್ಗೆ ಮಾತನಾಡಬೇಕು.

ನಿಮ್ಮ ಸಮಾಜ ಸೇವೆ ತೃಪ್ತಿ ನೀಡಿದೆಯೇ?

ಸಿಂಧೂತಾಯಿ: ನನಗಾಗಿ ಬದುಕಿದ್ದರೆ ತೃಪ್ತಿ ಸಿಗುತ್ತಿರಲಿಲ್ಲ. ಬೇರೆಯವರಿಗಾಗಿ ದುಡಿಯುತ್ತಿರುವುದರಿಂದ ನನಗೆ ತೃಪ್ತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT